ಲಕ್ಷಾಂತರ ರೂ. ಖರ್ಚು ಮಾಡಿ ಕಟ್ಟಿಸಿದ ಮನೆಯಲ್ಲಿ ಹುತ್ತ; ಪರಿಹಾರಕ್ಕಾಗಿ ದಂಪತಿಗಳು ಮಾಡಿದ್ದೇನು ಗೊತ್ತಾ?

news18
Updated:September 1, 2018, 6:06 PM IST
ಲಕ್ಷಾಂತರ ರೂ. ಖರ್ಚು ಮಾಡಿ ಕಟ್ಟಿಸಿದ ಮನೆಯಲ್ಲಿ ಹುತ್ತ; ಪರಿಹಾರಕ್ಕಾಗಿ ದಂಪತಿಗಳು ಮಾಡಿದ್ದೇನು ಗೊತ್ತಾ?
news18
Updated: September 1, 2018, 6:06 PM IST
-ರಾಘವೇಂದ್ರ ಗಂಜಾಮ್ ನ್ಯೂಸ್18 ಕನ್ನಡ

ಮಂಡ್ಯ ,(ಸೆ.01): ಅದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಟ್ಟಿದ್ದ ಅದ್ದೂರಿ ಮನೆ. ಚೆಂದದ ಮನೆ ಕಟ್ಟಿ ಆ ಮನೆಯಲ್ಲಿ ಸಂಸಾರ ಮಾಡಬೇಕೆಂದುಕೊಂಡಿದ್ದ ಆ ಕುಟುಂಬಕ್ಕೆ ಅಲ್ಲಿನ ಒಂದು ಸಮಸ್ಯೆ ಆ ಕುಟುಂಬವನ್ನೇ ಕಂಗೆಡಿಸಿತ್ತು. ಅಲ್ಲಿನ ಸಮಸ್ಯೆಯಿಂದಾಗಿ ಆ ಕುಟುಂಬ ಆರ್ಥಿಕವಾಗಿ ಕುಂಠಿತಗೊಂಡಿತು. ಮನೆಯವರ ಆರೋಗ್ಯದಲ್ಲಿ ಏರುಪೇರು ಉಂಟಾಯಿತು.  ಕೌಟುಂಬಿಕ ಕಲಹಗಳು ಪ್ರಾರಂಭವಾದವು. ತೊಂದರೆಗಳಿಂದ ಬೇಸತ್ತ ಆ ಕುಟುಂಬ, ಕೊನೆಗೆ ಆ ಸಮಸ್ಯೆಗೆ ಇತೀಶ್ರೀ ಹಾಡಲು ನಿರ್ಧರಿಸಿತು. ಪರಿಹಾರಕ್ಕಾಗಿ ಆ ಕುಟುಂಬದವರು ಮನೆಯನ್ನೇ ದೇವಸ್ಥಾನವನ್ನಾಗಿ ಬದಲಾಯಿಸಲು ಮುಂದಾಗಿದ್ದಾರೆ. ಹಾಗಾದರೆ ಏನದು ಸಮಸ್ಯೆ ಅಂತೀರಾ..? ಇಲ್ಲಿದೆ ವರದಿ.ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬಿದರಹೊಸಹಳ್ಳಿ ಗ್ರಾಮದ ರೇಖಾ ಮತ್ತು ಮಹೇಶ್ ಕಳೆದ ಒಂದು ವರ್ಷದ ಹಿಂದೆ​ ಲಕ್ಷಾಂತರ ದುಡ್ಡು ವ್ಯಯಿಸಿ ಒಂದು ಚೆಂದದ ಮನೆ ಕಟ್ಟಿದ್ದರು. ಆದರೆ ದುರಾದೃಷ್ಟವೆಂಬಂತೆ ಮನೆ ಕಟ್ಟಿ ಮುಗಿಸುತ್ತಿದ್ದಂತೆ ಆ ಅದ್ದೂರಿ ಮನೆಯೊಳಗೆ ಹುತ್ತ ಬೆಳೆಯಲು ಶುರುವಾಯಿತು. ಆಗ ದಂಪತಿಗಳಿಗೆ ಮನೆಯಲ್ಲಿ ವಾಸ ಮಾಡುವುದು ಹೇಗೆ ಎಂಬ ಚಿಂತೆ ಪ್ರಾರಂಭವಾಯಿತು. ಸಾಕಷ್ಟು ಆಸೆ-ಕನಸುಗಳನ್ನು ಕಟ್ಟಿಕೊಂಡು ಮನೆ ಕಟ್ಟಿಸಿದ್ದ ದಂಪತಿಗಳ ಆಸೆಗೆ ಆ ಹುತ್ತ ತಣ್ಣೀರೆರಚಿತ್ತು.ಮೊದಮೊದಲು ಈ ಹುತ್ತವನ್ನು ಹಲವು ಬಾರಿ ಅನೇಕ ವಿಧಾನಗಳಿಂದ ತೆರವು ಮಾಡಿದರು. ಹೀಗೆ ಮಾಡಿದಾಗ ಆ ಕುಟುಂಬಕ್ಕೆ ಒಂದಾದ ಮೇಲೆ ಒಂದರಂತೆ ಕಷ್ಟಗಳು ಎದುರಾದವು. ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದರು. ಆರೋಗ್ಯದಲ್ಲಿ ಏರು-ಪೇರು ಉಂಟಾಯಿತು.  ಏನೇ ಪರಿಹಾರ ಮಾಡಿದರೂ ಸಮಸ್ಯೆ ಬಗೆಹರಿಯಲಿಲ್ಲ.


Loading...

ಹೀಗಿರುವಾಗ ಆ ಕುಟುಂಬದ ಯಜಮಾನನಿಗೆ ದೇವಪ್ರೇರಣೆಯಾಗಿ ಈ ಮನೆಯನ್ನು ದೇವಾಲಯ ಮಾಡುವಂತೆ ಆದೇಶ ಮಾಡಿತಂತೆ.  ದೇವರ ಅಪ್ಪಣೆಯನ್ನು ಮೀರದ ಆ ಮನೆಯ ಮಾಲೀಕ ಇದೀಗ ಆ ಮನೆಯನ್ನು ನಾಗ ಸಾನಿಧ್ಯ ಹೆಸರಿನಲ್ಲಿ ದೇವಸ್ಥಾನ ಮಾಡಲು ಮುಂದಾಗಿದ್ದಾನೆ.

ಇನ್ನು ಈ ಮನೆಯನ್ನು ನಾಗ ಸಾನಿಧ್ಯ ಮಾಡಲು ದೈವ ಪ್ರೇರಣೆಯಾಗುತ್ತಿದ್ದಂತೆ, ಈ ಮನೆಯ ದಂಪತಿಗಳು‌ ಶ್ರದ್ದಾ ಭಕ್ತಿಯಿಂದ ಪ್ರತಿದಿನ‌ ನಿರಂತರ ಪೂಜಾ ಕೈಂಕರ್ಯ ನಡೆಸುತ್ತಿದ್ದಾರೆ. ಆ.16 ರಂದು ಗ್ರಾಮಕ್ಕೆ ಮೈಸೂರಿನ ಮಹಾರಾಜರಾಜನ್ನು ಕರೆಸಿ ಸಾಧು- ಸಂತರ ಸಾನಿಧ್ಯದಲ್ಲಿ ದೇವಾಲಯದ ನಿರ್ಮಾಣಕ್ಕೆ ಗುದ್ದಲಿ ಪೂಜೆ ಕೂಡ ಮಾಡಿಸಿದ್ದಾರೆ.ಈ ಮನೆಯಿರುವ ಜಾಗ ದೈವ ಸಂಭೂತ ಜಾಗವೆಂದು ಹೇಳಲಾಗುತ್ತಿದ್ದು, ಇಲ್ಲಿನ ಜಾಗದ ಮಣ್ಣಿನಲ್ಲಿ‌ ಶ್ರೀಗಂಧ ಸುವಾಸನೆ ಬರುತ್ತಿದೆ. ಅಲ್ಲದೇ ವಿಶೇಷ ದಿನಗಳಲ್ಲಿ ಇಲ್ಲಿನ ಹುತ್ತ‌ ಬೆಳೆಯುತ್ತಿರುವುದು ದೈವಶಕ್ತಿಯೇ ಕಾರಣ ಎನ್ನಲಾಗುತ್ತಿದೆ. ಜೊತೆಗೆ ಈ ಮನೆಯಿರುವ ಜಾಗ ಅಕ್ಕ ಪಕ್ಕದ ಯಾಲದಹಳ್ಳಿ, ಬಿದರಹಳ್ಳಿ ಮತ್ತು ಬಿದರಹೊಸಳ್ಳಿ ಗ್ರಾಮಕ್ಕೆ ಸೇರಿದ ಮೂರು ಗ್ರಾಮದ ಗಡಿಯಾಗಿರುವುದು ವಿಶೇಷವಾಗಿದೆ.ಮನೆಯ ಯಜಮಾನ‌ ತನ್ನ ಮನೆಯನ್ನು ದೇವಾಲಯ ಮಾಡಲು ಕೈಗೊಂಡಿರುವ ನಿರ್ಧಾರಕ್ಕೆ ಮನೆಯ ಯಜಮಾನಿ ಕೂಡ ಸಹಮತ ವ್ಯಕ್ತಪಡಿಸಿದ್ದಾಳೆ. ಇದರ ಜೊತೆಗೆ ಗ್ರಾಮಸ್ಥರು ಕೂಡ ತಮ್ಮೂರ ಗ್ರಾಮದಲ್ಲಿ ನಾಗ ಸಾನಿಧ್ಯ ದೇವಾಲಯ ನಿರ್ಮಾಣಕ್ಕೆ ಸಹಕಾರ ಕೊಡುವುದಾಗಿ ಹೇಳುತ್ತಿದ್ದಾರೆ.

ಒಟ್ಟಿನಲ್ಲಿ ಮದ್ದೂರಿನ ಬಿದರಹೊಸಳ್ಳಿ ಗ್ರಾಮದ ಈ ಹುತ್ತದ ಮನೆ ಈಗ ನಾಗ ಸಾನಿಧ್ಯ ದೇವಾಲಯವಾಗುತ್ತಿದ್ದು,  ದೇವರ ಕೃಪೆಯಿಂದಲೇ ಈ ಮನೆ ನಾಗ ದೇವತೆ ದೇವಾಲಯವಾಗುತ್ತಿದೆ ಎಂಬ ಮಾತುಗಳು ಜನರಿಂದ ಕೇಳಿ ಬರುತ್ತಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ.
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ