ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ನಿರ್ಮಾಣವಾಗಿರುವ ಟರ್ಮಿನಲ್ 2(Terminal 2) ಪ್ರಯಾಣಿಕರ ಸೇವೆಗೆ ಲಭ್ಯವಾಗಲಿದ್ದು, ಜನವರಿ 15 ಭಾನುವಾರದಿಂದ ಕಾರ್ಯಾರಂಭಗೊಳ್ಳಲಿದೆ. ಈ ಟರ್ಮಿನಲ್ ಅನ್ನು ಕಳೆದ ವರ್ಷ ನವೆಂಬರ್ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಉದ್ಘಾಟನೆ ಮಾಡಿದ್ದರು. ಆದರೆ ಇಲ್ಲಿಯವರೆಗೆ ಯಾವುದೇ ವಿಮಾನ ಹಾರಾಟ ನಡೆಸಿರಲಿಲ್ಲ. ಇದೀಗ ಸಂಕ್ರಾಂತಿ (Sankranti) ಹಬ್ಬದ ದಿನದಂದು ವಿಮಾನಯಾನ ಆರಂಭಗೊಳ್ಳಲಿದೆ.
ಉದ್ಘಾಟನೆಗೊಂಡು ಎರಡು ತಿಂಗಳಾದರೂ ಟರ್ಮಿನಲ್ 2 ವೀಕ್ಷಣೆಗ ಕೆಂಪೇಗೌಡ ವಿಮಾನ ನಿಲ್ದಾಣ ಆಡಳಿತ ಮಂಡಳಿ ನಿರ್ಬಂಧ ವಿಧಿಸಿತ್ತು. ಇದೀಗ ಜನವರಿ 15ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್ನ ಟರ್ಮಿನಲ್ 2ನಲ್ಲಿ ಮೊದಲ ಹಾರಾಟ ನಡೆಸಲಿದೆ. ಬೆಳಗ್ಗೆ 8: 40ಕ್ಕೆ ಬೆಂಗಳೂರಿನಿಂದ ಕಲಬುರಗಿಗೆ ಪ್ರಯಾಣ ಆರಂಭಿಸಲಿದೆ. 15ರ ನಂತರ ಟರ್ಮಿನಲ್ ವೀಕ್ಷಣೆಗೆ ಸಾರ್ವಜನಿಕರಿಗೂ ಅವಕಾಶ ಲಭಿಸಲಿದೆ ಎಂದು ತಿಳಿದುಬಂದಿದೆ.
13,000 ಕೋಟಿ ರೂಪಾಯಿ ಹೂಡಿಕೆ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಸ್ತರಣೆಯ ಭಾಗವಾಗಿ ನಿರ್ಮಾಣವಾಗಿರುವ ಟರ್ಮಿನಲ್ 2 ಅನ್ನು ಸುಮಾರು 13000 ಸಾವಿರ ಕೋಟಿ ರೂಪಾಯಿ ಹೂಡಿಕೆಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಟರ್ಮಿನಲ್ 2 ರ ಮೊದಲ ಹಂತವವನ್ನು 5,000 ಕೋಟಿ ರೂಪಾಯಿ ವೆಚ್ಚದಲ್ಲಿ 2,55,000 (63 ಎಕರೆ) ಚದರ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಇದನ್ನು ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದರು.
ಇದನ್ನೂ ಓದಿ: Trending Story: ಪ್ರಯಾಣಿಕರನ್ನು ನಿಲ್ದಾಣದಲ್ಲಿಯೇ ಬಿಟ್ಟು ಟೇಕ್ ಆಫ್ ಆದ ವಿಮಾನ! ಮುಂದೇನಾಯ್ತು ನೋಡಿ
ಕಲಬುರಗಿಗೆ ಹಾರಲಿರುವ ಸ್ಟಾರ್ ಏರ್ ವಿಮಾನ
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ 2 ಕಾರ್ಯಾಚಾರಣೆಗೊಳಿಸುವುದನ್ನು ತಿಳಿಸುವುದಕ್ಕೆ ನಮಗೆ ತುಂಬಾ ಖುಷಿಯಾಗುತ್ತಿದೆ. 2019ರ ಜನವರಿಯಲ್ಲಿ ಈ ಯೋಜನೆ ಪ್ರಾರಂಭವಾದಾಗಿನಿಂದಲೂ ನಮ್ಮ ಪ್ರಯಾಣಿಕರು ಟರ್ಮಿನಲ್ 1 ಬಳಕೆ ಮಾಡುತ್ತಿದ್ದಾರೆ. ನಮ್ಮ 4 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಹೊಸ ಮತ್ತು ಅತ್ಯಾಧುನಿಕ ಟರ್ಮಿನಲ್ಗೆ ಪರಿವರ್ತನೆ ಮಾಡುವ ಮೊದಲ ಏರ್ಲೈನ್ ಆಗಲು ನಾವು ಉತ್ಸುಕರಾಗಿದ್ದೇವೆ. ಎಂದು ಸ್ಟಾರ್ ಏರ್ಸಿಇಒ ಸಿಮ್ರಾನ್ ಸಿಂಗ್ ತಿವಾನಾ ಹೇಳಿದ್ದಾರೆ.
ಶೀಘ್ರದಲ್ಲಿ ಇತರ ವಿಮಾನಯಾನ ಸಂಸ್ಥೆಗಳಿಗೂ ಅನುಮತಿ
"ನಮ್ಮ ಹೊಸದಾಗಿ ಉದ್ಘಾಟನೆಗೊಂಡ ಟರ್ಮಿನಲ್ 2 ನಲ್ಲಿ ಸ್ಟಾರ್ ಏರ್ನ ಗ್ರಾಹಕರನ್ನು ಸ್ವಾಗತಿಸಲು ನಾವು ಸಿದ್ಧರಿದ್ದೇವೆ. ಇದು ಪ್ರಯಾಣಿಕರಿಗೆ ವಿಶಿಷ್ಟವಾದ ಪ್ರಯಾಣದ ಅನುಭವವನ್ನು ನೀಡುತ್ತದೆ. ಹೊಸ ಟರ್ಮಿನಲ್ ಶೀಘ್ರದಲ್ಲೇ ಇತರ ವಿಮಾನಯಾನ ಸಂಸ್ಥೆಗಳ ಪ್ರಯಾಣಿಕರಿಗೆ ಬಾಗಿಲು ತೆರೆಯಲಿದೆ. T1 ನಿಂದ T2ಗೆ ವಿಮಾನಯಾನ ಸಂಸ್ಥೆಗಳ ಸುಗಮ ಪರಿವರ್ತನೆಯ ಸೌಲಭ್ಯಗಳು ಮತ್ತು ಪ್ರಕ್ರಿಯೆಗಳನ್ನು ಹಂತ ಹಂತವಾಗಿ ಮಾಡಲಾಗುತ್ತದೆ ಎಂದು ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (BIAL)ನ MD ಮತ್ತು CEO ಹರಿ ಮರಾರ್ ಮಾಹಿತಿ ನೀಡಿದ್ದಾರೆ.
ಟರ್ಮಿನಲ್ 2 ವಿಶೇಷತೆಗಳೇನು?
ಕೆಂಪೇಗೌಡ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಹಲವು ವಿಶೇಷತೆಗಳನ್ನು ಹೊಂದಿದೆ. 5ಜಿ ಸೇವೆಯನ್ನು ಹೊಂದಿರುವ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಗಮಗಿಸುವ ದೀಪಗಳ ಮಧ್ಯೆ ತಾರಸಿಯಿಂದ ಇಳಿಬಿದ್ದಿರುವ ಕಿರು ಉದ್ಯಾನಗಳಯ ಪ್ರಯಾಣಿಕರನ್ನು ಅಚ್ಚರಿಗೊಳಪಡಿಸುತ್ತವೆ. ಸುಂದರವಾದ ಟರ್ಮಿನಲ್ನಲ್ಲಿ 180 ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಜಾತಿಯ ಗಿಡಗಳು, 800 ವರ್ಷಗಳ ಹಳೆಯದಾದ ಮರಗಳು ಸೇರಿ ಒಟ್ಟು 6 ಲಕ್ಷಕ್ಕೂ ಹೆಚ್ಚು ಸಸ್ಯ ಪ್ರಭೇದಗಳು ವಿಮಾನ ನಿಲ್ದಾಣದ ಆವರಣದಲ್ಲಿವೆ. ಪ್ರತಿ ಗೋಡೆಗಳಲ್ಲೂ ಗಿಡಗಳಿದ್ದು, ಹಸಿರು ಹೊದಿಕೆ ಹಾಕಿದಂತಿದೆ.
ಜೊತೆಗೆ ಸ್ವಯಂಚಾಲಿತ ಫೇಸ್ ಬಯೋಮೆಟ್ರಿಕ್ ಗೇಟ್, ಸೆಲ್ಫ್ ಬ್ಯಾಗೇಜ್-ಡ್ರಾಪ್ ಕೌಂಟರ್, ಬಾಡಿ ಸ್ಕ್ಯಾನರ್ ಹಾಗೂ ಆಟೋಮ್ಯಾಟಿಕ್ ಟ್ರೇ ಮರುಪಡೆಯುವಿಕೆ ಸೇರಿದಂತೆ ಅತ್ಯುತ್ತಮ ತಂತ್ರಜ್ಞಾನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹಾಗಾಗಿ ಈ ವಿಮಾನ ನಿಲ್ದಾಣ ಪ್ರಯಾಣಿಕರಿಗೆ ಹೊಸ ಚೈತನ್ಯ ತುಂಬುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ