ಮಂಡ್ಯ: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ವರುಣಾ (Varuna) ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಈಗಾಗಲೇ ವರುಣಾದಿಂದ ಸಿದ್ದರಾಮಯ್ಯ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದ್ದು, ಆದರೆ ಕೋಲಾರದಿಂದಲೂ (Kolar) ಟಿಕೆಟ್ ಕೇಳಿರುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಈ ಎಲ್ಲಾ ಬೆಳವಣಿಗಗಳ ನಡುವೆ ಸಿದ್ದರಾಮಯ್ಯ ಅವರ ಚುನಾವಣಾ (Election) ರಾಜಕೀಯ ಕುರಿತಂತೆ, ಮಾಜಿ ಸಿಎಂ ಅವರ ಮನೆ ದೇವರು ಭವಿಷ್ಯ (Future) ನುಡಿದಿದೆ. ಒಂದು ಕಡೆ ನಿಂತರೆ ಅಪಾಯ, ಎರಡೂ ಕಡೆ ನಿಂತರೆ ಗೆಲುವು ಎಂಬ ಭವಿಷ್ಯವನ್ನು ನುಡಿದಿದೆ. ಇದರೊಂದಿಗೆ ಸಿದ್ದರಾಮಯ್ಯ ಅವರು ಮನೆ ದೇವರ ಮಾತಿಗೆ ಕಟ್ಟು ಬೀಳುತ್ತಾರಾ ಎಂಬ ಬಗ್ಗೆ ಚರ್ಚೆ ಜೋರಾಗಿದೆ.
ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದರೆ ಡಬಲ್ ಗೆಲುವು
ಕಳೆದ ಜನವರಿ 07 ರಂದು ಯತೀಂದ್ರ ಸಿದ್ದರಾಮಯ್ಯ ಅವರು ಮಂಡ್ಯದ ಚೊಟ್ಟನಹಳ್ಳಿ ಶ್ರೀ ಆದಿನಾಡು ಚಿಕ್ಕಮ್ಮ ತಾಯಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ದೇವಸ್ಥಾನದ ಅರ್ಚಕ ಲಿಂಗಣ್ಣ ಅವರ ಮೇಲೆ ಆವಾಹನೆಯಾಗಿದ್ದ ದೇವಿ, ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಲ್ಲಿ ನಿಲ್ಲಬೇಕು. ಒಂದು ಕ್ಷೇತ್ರದಲ್ಲಿ ನಿಂತರೆ ಅಪಾಯವಿರುತ್ತದೆ. ಎರಡೂ ಕ್ಷೇತ್ರಗಳಲ್ಲಿ ಡಬಲ್ ಗೆಲುವಿನ ಅವಕಾಶವಿದೆ ಎಂದು ಹೇಳಿತ್ತು.
ಸಿದ್ದರಾಮಯ್ಯ ಅವರ ಮನೆ ದೇವರು ಆದಿನಾಡು ಚಿಕ್ಕಮ್ಮ ತಾಯಿ
ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಿಗೆ ಕಾಲು ಚಾಚಬೇಕು ಎಂದು ಅದೇ ಮಾತನ್ನು ದೇವಿ ಪುನರುಚ್ಚರಿಸಿದೆ. ಅಂದಹಾಗೆ, ಚೊಟ್ಟನಹಳ್ಳಿ ಶ್ರೀ ಆದಿನಾಡು ಚಿಕ್ಕಮ್ಮ ತಾಯಿ ಸಿದ್ದರಾಮಯ್ಯ ಅವರ ಮನೆ ದೇವರಾಗಿದ್ದು, ಹಲವು ಬಾರಿ ಸಿದ್ದರಾಮಯ್ಯ ಅವರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಕಳೆದ ಚುನಾವಣೆಯಲ್ಲೂ ಸಿದ್ದರಾಮಯ್ಯ ಅವರಿಗೆ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವಂತೆ ತಾಯಿಯೇ ಭವಿಷ್ಯ ನುಡಿದಿದ್ದರಂತೆ.
ವರುಣಾದಿಂದ ಸ್ಪರ್ಧೆ ಮಾಡುವುದು ಖಚಿತ
ಇದರಂತೆ ಬಾದಾಮಿ ಕ್ಷೇತ್ರ ಸೇರಿದಂತೆ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಿದ್ದರು. ಚಾಮುಂಡೇಶ್ವರಿಯಲ್ಲಿ ಸೋಲುಂಡರೂ ಬಾದಾಮಿಯಲ್ಲಿ ಗೆಲುವು ಪಡೆದಿದ್ದರು. ಈ ಹಿನ್ನೆಲೆಯಲ್ಲಿ 2023ರ ಸಾರ್ವತ್ರಿಕ ಚುನಾವಣೆಯಲ್ಲೂ ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ.
ಈಗಾಗಲೇ ವರುಣಾ ಕ್ಷೇತ್ರದಲ್ಲಿ ಟಿಕೆಟ್ ಘೋಷಣೆಯಾಗಿದ್ದು, ಎರಡನೇ ಕ್ಷೇತ್ರವಾಗಿ ಕೋಲಾರದಿಂದ ಹೈಕಮಾಂಡ್ಗೆ ಟಿಕೆಟ್ ನೀಡಲು ಸಂದೇಶ ಕಳುಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಸದ್ಯ ಹೈಕಮಾಂಡ್ ಕೂಡ ಸಿದ್ದರಾಮಯ್ಯ ಅವರ ಮನವಿಗೆ ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ.
ನಾಳೆ ಕೋಲಾರಕ್ಕೆ ಸಿದ್ದರಾಮಯ್ಯ ಭೇಟಿ
ವರುಣಾ ಕ್ಷೇತ್ರ ಟಿಕೆಟ್ ಘೋಷಣೆ ಬಳಿಕ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ನಾಳೆ ಕೋಲಾರಕ್ಕೆ ಭೇಟಿ ನೀಡುತ್ತಿದ್ದಾರೆ. ಕ್ಷೇತ್ರ ಆಯ್ಕೆ ಗೊಂದಲ ಬಳಿಕ ಮೊದಲ ಬಾರಿಗೆ ಕೋಲಾರಕ್ಕೆ ಸಿದ್ದರಾಮಯ್ಯ ಆಗಮಿಸುತ್ತಿದ್ದು, ಏಪ್ರಿಲ್ 5ರಂದು ಕೋಲಾರದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ಸತ್ಯಮೇವ ಜಯತೆ ಸಮಾವೇಶದ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.
ಸಮಾವೇಶದ ಸಿದ್ದತೆ ಪರಿಶೀಲನೆ ನಡೆಸಿ, ಜಿಲ್ಲಾ ಕಾಂಗ್ರೆಸ್ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಕೋಲಾರ ನಗರದ ಟಮಕ ಬಳಿ ಕಾಂಗ್ರೆಸ್ ಬೃಹತ್ ಸಮಾವೇಶ ಆಯೋಜನೆ ಮಾಡುತ್ತಿದ್ದು, ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ