ಬೆಂಗಳೂರು (ನ.27): ಕೊರೋನಾ ಸೋಂಕು ದೇಶದ ಆರ್ಥಿಕತೆ ಜೊತೆಗೆ ಅನೇಕರ ಕೆಲಸವನ್ನು ಕಿತ್ತುಕೊಂಡಿದೆ. ಲಾಕ್ಡೌನ್ನಿಂದಾಗಿ ಅನೇಕ ಯುವಕರು ಉದ್ಯೋಗದಿಂದ ವಂಚಿತರಾಗಿದ್ದಾರೆ. ಕಾಲೇಜು ಮುಗಿಸಿ ಇನ್ನೇನು ಉದ್ಯೋಗದ ಮೂಲಕ ಬದುಕು ಕಟ್ಟಿಕೊಳ್ಳಬೇಕು ಎಂಬ ಅನೇಕರ ಕನಸು ಕಮರಿದೆ. ಈ ಎಲ್ಲಾ ಕನಸಿಗೆ ಈಗ ಯುವ ಸಂಸದ ತೇಜಸ್ವಿ ಸೂರ್ಯ ಆಸರೆಯಾಗಿದ್ದಾರೆ. ಯುವಕರಾಗಿರುವ ಸಂಸದರಿಗೆ ಯುವಕರ ಸಮಸ್ಯೆಗಳನ್ನು ಅರಿತು ಅದಕ್ಕಾಗಿ ಉದ್ಯೋಗ ಕಲ್ಪಿಸುವ ವೇದಿಕೆ ಸೃಷ್ಟಿಸಿದ್ದಾರೆ. ಈ ಮೂಲಕ ಅವರ ಸಮಸ್ಯೆಗೆ ಧ್ವನಿಯಾಗಿದ್ದಾರೆ. 'ಸಂಸದ್ ಉದ್ಯೋಗ ಮಿತ್ರ' ಎಂಬ ಹೆಸರಿನಲ್ಲಿ ಅನೇಕರಿಗೆ ಉದ್ಯೋಗ ಕಲ್ಪಿಸಲು ಮುಂದಾಗಿದ್ದರೆ. ಈ ಮೂಲಕ ಅನೇಕರಿಗೆ ಆಸರೆಯಾಗಲು ಮುಂದಾಗಿದ್ದಾರೆ. ಇನ್ನು ಕಳೆದ ಸೆಪ್ಟೆಂಬರ್ನಿಂದ ಈ ಅಭಿಯಾನ ಶುರುಮಾಡಿರುವ ಸಂಸದರು, ಈಗ ಮೂರನೇ ಬಾರಿ ಉದ್ಯೋಗ ವೇದಿಕೆ ಸೃಷ್ಟಿಸಲು ಮುಂದಾಗಿದ್ದಾರೆ. ಅಭ್ಯರ್ಥಿಗಳ ವಿದ್ಯಾರ್ಹತೆಗೆ ತಕ್ಕಂತೆ ಕೆಲಸದ ಅವಕಾಶ ನೀಡಲಾಗುವುದು. ಇನ್ನು ಈ ಉದ್ಯೋಗ ಮೇಳದಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಸಂದರ್ಶನ ನಡೆಯಲಿದೆ. ಇನ್ನು ಮೂರನೇ ಆವೃತ್ತಿ ಉದ್ಯೋಗ ಮೇಳ ನ.28ರಂದು ನಡೆಯಲಿದೆ.
ಯುವ ಜನತೆಗೆ ಉದ್ಯೋಗ ಸಿಗಬೇಕು ಎಂಬ ನಿಟ್ಟಿನಲ್ಲಿ ಸಂಸದ ನೇತೃತ್ವದಲ್ಲಿ ಫಿಡಲಿಟಸ್ ಕಾರ್ಪ್ ಮತ್ತು ಶಿಲ್ಪಾ ಫೌಂಡೇಶನ್ ಸಹಯೋಗದಿಂದ ಈ ಉದ್ಯೋಗ ಮೇಳ ನಡೆಸಲಾಗುತ್ತಿದೆ. ಉದ್ಯೋಗಾಕಾಂಕ್ಷಿಗಳ ಕನಸಿನ ಉದ್ಯೋಗಕ್ಕೆ ಸಹಾಯವಾಗುವಂತೆ ಜಾಬ್ ಪೋರ್ಟಲ್ ಅನ್ನು ಕೂಡ ಪ್ರಾರಂಭಿಸಲಾಗಿದೆ. ಇಲ್ಲಿ ಆಸಕ್ತರು ಅರ್ಜಿ ಸಲ್ಲಿಸಬಹುದು.
ಇನ್ನು ಈ ಕುರಿತು ಈ ಹಿಂದಿನ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಸಂಸದರು, ಇಂದಿನ ಕಾಲಮಾನದಲ್ಲಿ ಉದ್ಯೋಗ ಎಂಬುದು ಬಹುಮುಖ್ಯವಾಗಿದೆ. ವ್ಯಕ್ತಿ ಒಬ್ಬನ ದೃಷ್ಟಿಯಿಂದ ಅಲ್ಲದೇ ಇಡೀ ಕುಟುಂಬದ ದೃಷ್ಟಿಯಿಂದ ಉದ್ಯೋಗ ಬಹು ಅಗತ್ಯ. ಈ ಹಿನ್ನಲೆ ನೂರಾರು ಆಕಾಂಕ್ಷಿಗಳು ಕೆಲಸಕ್ಕಾಗಿ ಹುಡುಕಾಡುತ್ತಾರೆ. ಬಿಪಿಓ, ಎನ್ಜಿಒ ಸೇರಿದಂತೆ ಹಲವು ಕಂಪನಿಗಳಿಗೆ ಉದ್ಯೋಗಕ್ಕಾಗಿ ಅಲೆಡಾಡುತ್ತಾರೆ. ಅಂತಹವರಿಗೆ ಈ ಮೂಲಕ ನೆರವಾಗುವ ಪ್ರಯತ್ನ ನಡೆಸಲಾಗಿದೆ. ಈ ಮೂಲಕ ಯುವಕರು ತಮ್ಮ ಕನಸಿನ ಉದ್ಯೋಗ ಪಡೆಯಲು ನೆರವಾಗುತ್ತಿದ್ದೇವೆ. ಈ ಹಿನ್ನಲೆಯಲ್ಲಿ ಉದ್ಯೋಗ ಮೇಳ ಆಯೋಜಿಸಲು ನಿರ್ಧರಿಸಿದ್ದೇವೆ. ಈ ಮೂಲಕ ಪ್ರತಿಭೆಗಳನ್ನು ಗುರುತಿಸಿ, ಬೆಳೆಸುವ ಪ್ರೋತ್ಸಾಹದ ಕೆಲಸ ನಮ್ಮಿಂದ ಆಗಲಿದೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ