ನವದೆಹಲಿ (ಸೆ.26): ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ಸಂಸದ ತೇಜಸ್ವಿ ಸೂರ್ಯ ನೇಮಕಗೊಂಡಿದ್ದಾರೆ. ಇದರ ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿಟಿ ರವಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ರನ್ನು ರಾಷ್ಟ್ರೀಯ ವಕ್ತಾರರನ್ನಾಗಿ ಪಕ್ಷ ನೇಮಕ ಮಾಡಲಾಗಿದೆ. ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ಪಕ್ಷದ ಹೊಸ ಪದಾಧಿಕಾರಗಳ ನೇಮಕಾತಿ ನಡೆಸಲಾಗಿದೆ. ಇದೇ ವೇಳೆ ಪಕ್ಷದ ಅನೇಕ ಹಿರಿಯ ನಾಯಕರಿಗೆ ಕೈ ಬಿಡಲಾಗಿದ್ದು, ಹೊಸಬರಿಗೆ ಮನ್ನಣೆ ನೀಡಲಾಗಿದೆ. ಪಕ್ಷದ ಹಿರಿಯ ನಾಯಕರಾಗಿದ್ದ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಮ್ ಮಾಧವ್, ಪಿ ಮುರಳಿಧರ್ ರಾವ್, ಅನಿಲ್ ಜೈನ್, ಸರೋಜ್ ಪಾಂಡೆ ಜಾಗಕ್ಕೆ ಹೊಸಬರ ನೇಮಕವಾಗಿದೆ.
ಈ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ವಕ್ತಾರ ಹುದ್ದೆ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಅನಿಲ್ ಬಲೂಲಿ ಅವರನ್ನು ಮಾಧ್ಯಮ ಉಸ್ತುವಾರಿ ಸ್ಥಾನದಿಂದ ಮುಖ್ಯ ವಕ್ತಾರರಾಗಿ ಬಡ್ತಿ ನೀಡಲಾಗಿದೆ.
ಇದೇ ವೇಳೆ ಎನ್ಟಿಆರ್ ಮಗಳು ಪುರಂದೇಶ್ವರಿಯವರು ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಬಿಹಾರ ಚುನಾವಣೆ ಎದುರಾಗುತ್ತಿರುವ ಹಿನ್ನಲೆ ಪಕ್ಷ ಬಲಗೊಳಿಸಲು ಈ ಪದಾಧಿಕಾರ ನೇಮಕಾತಿಗೆ ಜೆಪಿ ನಡ್ಡಾ ಮುಂದಾಗಿದ್ದಾರೆ.
ಕೃಷಿ ಮಸೂದೆಗೆ ವಿರೋಧಿಸಿ ಸರ್ಕಾರದ ನಿರ್ಧಾರದಿಂದ ಹಿಂದೆ ಸರಿದಿದ್ದ ಅಕಾಲಿಕ ದಳದ ತರುಣ್ ಚುಕ್ ಅವರನ್ನು ಪಕ್ಷ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೈಬಿಡಲಾಗಿದೆ.
ಇದನ್ನು ಓದಿ: ಮಥುರಾ ಶ್ರೀಕೃಷ್ಣ ದೇವಾಲಯದ ಸಂಕೀರ್ಣದಲ್ಲಿರುವ ಮಸೀದಿಯ ಕೆಳಗೆ ಕೃಷ್ಣನ ಜನ್ಮಸ್ಥಾನವಿದೆ; ಮೊಕದ್ದಮೆ ದಾಖಲು
ಕರ್ನಾಟಕದ ನಾಯಕರು ಸೇರಿದಂತೆ ನೆರೆಯ ಮಹಾರಾಷ್ಟ್ರ ಪ್ರಮುಖ ನಾಯಕರಾದ ವಿನೋದ್ ತವಾಡೆ, ಪಂಕಜಾ ಮುಂಡೆ, ಉತ್ತರ ಪ್ರದೇಶದ ವಿನೋದ್ ಸೋಂಕರ್ ರಾಷ್ಟ್ರೀಯ ಕಾರ್ಯದರ್ಶಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಕೇಂದ್ರದ ಮಾಜಿ ಸಚಿವ ಗೋಪಿನಾಥ್ ಮುಂಡೆ ಮಗಳು ಪಂಕಜಾ ಮುಂಡೆಯನ್ನು ರಾಷ್ಟ್ರೀಯ ಕಾರ್ಯದರ್ಶಿಯಾಗಿ, ರಾಜಸ್ಥಾನ ಮಾಜಿ ಸಿಎಂ ವಸುಂಧರಾ ರಾಜೆಯನ್ನು ಪಕ್ಷದ ಉಪಾಧ್ಯಕ್ಷರಾಗಿ ನೇಮಕಮಾಡಲಾಗಿದೆ.
ಪಕ್ಷದ ನಾಯಕತ್ವವನ್ನು ಅಭಿವೃದ್ಧಿ ಪಡಿಸಲು ರಾಜ್ಯದ ಕೆಲವು ನಾಯಕರು, ಯುವಕರು ಮತ್ತು ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ