ಬೆಂಗಳೂರು (ಸೆ.30): ರಾಜ್ಯದಲ್ಲಿ ಕೊರೋನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಬಗ್ಗೆ ನಿನ್ನೆ ಮಾತನಾಡಿದ ಸಚಿವ ಸುಧಾಕರ್ ಕಳವಳ ವ್ಯಕ್ತಪಡಿಸಿದರು. ಜನರು ಸಾಮಾಜಿಕ ಅಂತರ ಮರೆಯುತ್ತಿದ್ದು, ಸಭೆ ಸಮಾರಂಭಗಳು ಹೆಚ್ಚಾಗುತ್ತಿರುವುದು ಇದಕ್ಕೆ ಕಾರಣ. ಈ ಹಿನ್ನೆಲೆ ಈ ಕುರಿತು ಕಟ್ಟುನಿಟ್ಟಿನ ಕ್ರಮಕ್ಕೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸುವುದಾಗಿ ತಿಳಿಸಿದ್ದರು. ಈ ಮಧ್ಯೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರೇ ಈ ನಿಯಮಗಳನ್ನು ಗಾಳಿಗೆ ತೂರಿದ್ದು ಸಂಭ್ರಮಾಚಾರಣೆ ನಡೆಸಿದ್ದಾರೆ. ಭಾರೀ ಜನರ ಮೆರವಣಿಗೆಯೊಂದಿಗೆ ಪಕ್ಷದ ಕಚೇರಿಗೆ ಆಗಮಿಸಿದ ತೇಜಸ್ವಿ ಸೂರ್ಯ ಅವರಿಗೆ ಈ ನಿಯಮಗಳು ಅನ್ವಯವಾಗುವುದಿಲ್ಲವಾ ಎಂಬ ಮಾತು ಕೇಳಿ ಬಂದಿದೆ.
ರಾಷ್ಟ್ರೀಯ ಬಿಜೆಪಿ ಯುವ ಮೋರ್ಚ ಅಧ್ಯಕ್ಷರಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಅವರನ್ನು ಪಕ್ಷ ನೇಮಕ ಮಾಡಿದೆ. ಈ ನೇಮಕದ ಬಳಿಕ ಇಂದು ಮೊದಲ ಬಾರಿ ಅವರು ರಾಜ್ಯ ಬಿಜೆಪಿ ಕಚೇರಿಗೆ ಆಗಮಿಸಿದ್ದಾರೆ. ಈ ವೇಳೆ ಡೋಲು, ತಮಟೆ, ವಾದ್ಯಗಳ ಮೆರವಣಿಗೆಯೊಂದಿಗೆ ಆಗಮಿಸಿದ್ದಾರೆ. ನೂರಾರು ಜನರು ಸಾಮಾಜಿಕ ಅಂತರ ಮರೆತು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸೋಂಕು ಹೆಚ್ಚುತ್ತಿರುವ ಈ ಸಮಯದಲ್ಲಿ ಈ ರೀತಿಯ ಸಂಭ್ರಮಾಚಾರಣೆ ನಡೆಸಿರುವ ಸಂಸದರಿಗೆ ಕೋವಿಡ್ ಬಗ್ಗೆ ಜಾಗೃತಿ ಇಲ್ಲವಾ ಎಂಬ ಪ್ರಶ್ನೆ ಜನ ಸಾಮಾನ್ಯರಿಂದ ಕೇಳಿಬಂದಿದೆ.
ಕೊರೋನಾ ತಡೆಗಾಗಿ ಸರ್ಕಾರ ಹೆಚ್ಚಿನ ಮುತುವರ್ಜಿವಹಿಸಿದ್ದು, ಸಾರ್ವಜನಿಕರ ಹಿತಾಸಕ್ತಿ ಕಾಪಾಡುವುದು ನಮ್ಮ ಆದ್ಯತೆ ಎಂದು ತಿಳಿಸಿದೆ. ಈ ನಡುವೆ ಸಾರ್ವಜನಿಕ ಸಮಾರಂಭ ನಡೆಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. ಸಾಮಾಜಿಕ ಅಂತರ ಕಾಪಾಡದೆ, 100ಕ್ಕೂ ಅಧಿಕ ಮಂದಿ ಕಾರ್ಯಕ್ರಮಗಳಲ್ಲಿ ಭಾಗಿಯಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕೂಡ ತಿಳಿಸಿತ್ತು. ಈಗ ಸ್ವತಃ ಬಿಜೆಪಿ ಸಂಸದರೆ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ. ಅವರ ಅಕ್ಕಪಕ್ಕದಲ್ಲಿಯೇ ಜನರು ನಿಂತಿದ್ದು, ಸಾಮಾಜಿಕ ಅಂತರವೇ ಕಾಣದಂತೆ ಆಗಿದೆ. ಈಗ ರಾಜ್ಯ ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಳ್ಳತ್ತದೆಯಾ ಕಾದು ನೋಡಬೇಕಿದೆ.
ಇದನ್ನು ಓದಿ: ಕರ್ನಾಟಕ ಉಪಚುನಾವಣೆ: ಯಡಿಯೂರಪ್ಪ, ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಪ್ರತಿಷ್ಠೆಯ ಪಣ
ಇತ್ತೀಚೆಗೆ ಬೆಂಗಳೂರು ಉಗ್ರರ ತಾಣ ಎನ್ನುವ ಮೂಲಕ ತೇಜಸ್ವಿ ಸೂರ್ಯ ವಿಪಕ್ಷಗಳ ಟೀಕೆಗೆ ಗುರಿಯಾಗಿದ್ದರು. ಬೆಂಗಳೂರಿಗರಾಗಿ ಸಿಲಿಕಾನ್ ಸಿಟಿಯನ್ನು ಈ ರೀತಿ ಕನ್ನಡಿಗರನ್ನು ಅಪಮಾನಿಸುವುದು ಸರಿಯಲ್ಲ. ಐಟಿ/ಬಿಟಿ ಹಬ್ ಆಗಿರುವ ಬೆಂಗಳೂರು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಈ ರೀತಿ ಹೇಳಿಕೆ ನೀಡುವುದರಿಂದ ನಗರಕ್ಕೆ ಬಂಡವಾಳ ಹರಿದು ಬರುವುದೇ, ಜಿಡಿಪಿ ವೃದ್ಧಿ ಹೇಗೆ ಸಾಧ್ಯ ? ಈ ಕುರಿತು ಸಂಸದರು ಕನ್ನಡಿಗರ ಕ್ಷಮೆಯಾಚಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹಿಸಿದ್ದರು. ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ ಕೂಡ ಅವರ ಈ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ