Bengaluru: ರಾಜ್ಯಕ್ಕೆ ಬರಲಿದೆ ಇಂಗ್ಲೆಂಡ್​​ನ‌ 20 ಕುಲಪತಿಗಳ ತಂಡ! ಮಹತ್ವದ ಚರ್ಚೆ

ಯುನೈಟೆಡ್ ಕಿಂಗ್ಡಂನ 20 ಕುಲಪತಿಗಳ ತಂಡವು ಜೂನ್ 9 ಮತ್ತು 10ರಂದು ರಾಜ್ಯಕ್ಕೆ ಭೇಟಿ ನೀಡುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ (CN Ashwath Narayan) ಹೇಳಿದ್ದಾರೆ.

ಸಚಿವ ಅಶ್ವತ್ಥ್​ ನಾರಾಯಣ

ಸಚಿವ ಅಶ್ವತ್ಥ್​ ನಾರಾಯಣ

  • Share this:
ಬೆಂಗಳೂರು(ಮೇ.31): ರಾಜ್ಯದಲ್ಲಿರುವ ಉನ್ನತ ಶಿಕ್ಷಣ ಸಂಸ್ಥೆಗಳು (Education Birthday) ಮತ್ತು ವಿಶ್ವವಿದ್ಯಾಲಯಗಳೊಂದಿಗೆ ಶೈಕ್ಷಣಿಕ ಸಹಭಾಗಿತ್ವಕ್ಕೆ ಚಾಲನೆ ನೀಡುವುದು ಮತ್ತು ಒಡಂಬಡಿಕೆಗಳನ್ನು ಮಾಡಿಕೊಳ್ಳುವ ಬಗ್ಗೆ ವಿಚಾರ ವಿನಿಮಯ ನಡೆಸುವ ಉದ್ದೇಶದಿಂದ ಯುನೈಟೆಡ್ ಕಿಂಗ್ಡಂನ 20 ಕುಲಪತಿಗಳ ತಂಡವು ಜೂನ್ 9 ಮತ್ತು 10ರಂದು ರಾಜ್ಯಕ್ಕೆ ಭೇಟಿ ನೀಡುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ (CN Ashwath Narayan) ಹೇಳಿದ್ದಾರೆ. ಆ ದೇಶದಲ್ಲಿ ಇತ್ತೀಚೆಗೆ ನಡೆದ ಕಾಮನ್ವೆಲ್ತ್ ಶೈಕ್ಷಣಿಕ ಸಮಾವೇಶ ಮತ್ತು ವರ್ಲ್ಡ್ ಎಜುಕೇಷನ್ ಫೋರಂ (ಡಬ್ಲ್ಯುಇಎಫ್) ಅಧಿವೇಶನದಲ್ಲಿ ಭಾಗವಹಿಸಲು ತೆರಳಿದ್ದ ಸಚಿವರು, ಅಲ್ಲಿನ ಫಲಶ್ರುತಿ ಬಗ್ಗೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, `ತಮ್ಮ ಇಂಗ್ಲೆಂಡ್ ಪ್ರವಾಸವು ಫಲಪ್ರದವಾಗಿದ್ದು, ರಾಜ್ಯದ ಉನ್ನತ ಶಿಕ್ಷಣ ವಲಯವನ್ನು ಜಾಗತಿಕ ಗುಣಮಟ್ಟಕ್ಕೆ ಕೊಂಡೊಯ್ಯಲು ಅಗತ್ಯವಿರುವ ಹಲವು ಉಪಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.

ಇದಕ್ಕೆ ಕೈ ಜೋಡಿಸಲು ಯುನೈಟೆಡ್ ಕಿಂಗ್ಡಂನ ವಿ.ವಿ.ಗಳು ಕೂಡ ಉತ್ಸುಕವಾಗಿವೆ. ಇದಕ್ಕೆ ಪೂರಕವಾಗಿ ಆ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ಉನ್ನತಾಧಿಕಾರಿಗಳ ತಂಡವು ಈ ವರ್ಷದ ಸೆಪ್ಟೆಂಬರಿನಲ್ಲಿ ಕರ್ನಾಟಕಕ್ಕೆ ಬರಲಿದ್ದು, ಕೌಶಲ್ಯ ಪೂರೈಕೆ ಶಿಕ್ಷಣದ ಬಗ್ಗೆ ಚರ್ಚಿಸಲಿದೆ’ ಎಂದರು.

ಎನ್ಇಪಿ ಮೂಲಕ ಭಾರತೀಯ ಮಾದರಿಯ ಕಲಿಕೆ

ಎನ್ಇಪಿ ಮೂಲಕ ಭಾರತೀಯ ಮಾದರಿಯ ಕಲಿಕೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಇದರ ಜತೆಯಲ್ಲೇ ಜಾಗತಿಕ ಸ್ಪರ್ಧೆಗೂ ನಮ್ಮ ಮಕ್ಕಳನ್ನು ಅಣಿಗೊಳಿಸಬೇಕು. ಇದಕ್ಕಾಗಿ, ರಾಜ್ಯ ಮತ್ತು ಯು.ಕೆ.ಯಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಸರಕಾರಗಳ ನಡುವೆ ಬಹುವಾರ್ಷಿಕ ಯೋಜನೆಗಳಿಗೆ ಮುಂಬರುವ ದಿನಗಳಲ್ಲಿ ಅಂಕಿತ ಹಾಕಲಾಗುವುದು ಎಂದು ಅವರು ತಿಳಿಸಿದರು.

ವಿದೇಶಿ ವಿದ್ಯಾರ್ಥಿಗಳಿಗಾಗಿ ಕರ್ನಾಟಕದಲ್ಲಿ ಅವಕಾಶ

ಪ್ರವಾಸದ ಅವಧಿಯಲ್ಲಿ ತಮ್ಮ ನೇತೃತ್ವದ ರಾಜ್ಯದ ನಿಯೋಗವು ಹಲವು ಚರ್ಚಾಗೋಷ್ಠಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿತ್ತು. ಅಲ್ಲದೆ, ಅಲ್ಲಿನ ಸ್ಕಾಟ್ಲೆಂಡ್ ಮತ್ತು ವೇಲ್ಸ್ ನಲ್ಲಿನ ಅಧಿಕಾರಿಗಳು ಮತ್ತು ಸರಕಾರದೊಂದಿಗೆ ಫಲಪ್ರದ ಮಾತುಕತೆ ನಡೆಸಲಾಗಿದೆ.  ನಿರ್ದಿಷ್ಟವಾಗಿ ಕರ್ನಾಟಕ ಮತ್ತು ಒಟ್ಟಾರೆಯಾಗಿ ಭಾರತವನ್ನು ವಿದೇಶಿ ವಿದ್ಯಾರ್ಥಿಗಳ ಪಾಲಿಗೆ ಆಕರ್ಷಕ ತಾಣವನ್ನಾಗಿ ಮಾಡುವ ಉದ್ದೇಶ ಇದರ ಹಿಂದಿದೆ ಎಂದು ಸಚಿವರು ಮಾಹಿತಿ ನೀಡಿದರು.

ಇದನ್ನೂ ಓದಿ: Chitradurga: ಸಿದ್ದರಾಮಯ್ಯ ಬುದ್ದಿವಂತರು, ಕದ್ದು ತಿಂದರೂ ಯಾರಿಗೂ ಗೊತ್ತಾಗದಂತೆ ತಿನ್ನುತ್ತಾರೆ ಎಂದ ನಳಿನ್ ಕುಮಾರ್

ರಾಜ್ಯ ನಿಯೋಗವು ಅಲ್ಲಿನ ಎಡಿನ್ಬರ್ಗ್ ವಿ.ವಿ.ಯ ರಾಯಲ್ ಸೊಸೈಟಿ, ದಂಡೀ ಯೂನಿವರ್ಸಿಟಿ, ಗ್ಲಾಸ್ಗೋ ಯೂನಿವರ್ಸಿಟಿ ಮತ್ತು ಯೂನಿವರ್ಸಿಟಿ ಆಫ್ ವೆಸ್ಟ್ ಆಫ್ ಸ್ಕಾಟ್ಲೆಂಡ್ ಗಳಿಗೆ ಭೇಟಿ ನೀಡಿತ್ತು. ಇಲ್ಲಿ ಕ್ರಮವಾಗಿ ಬಹುಶಿಸ್ತೀಯ ಅಧ್ಯಯನ ಕೇಂದ್ರ, ಜೀವವಿಜ್ಞಾನ ಸಂಶೋಧನೆ ಮತ್ತು ಸೈಬರ್ ಸೆಕ್ಯುರಿಟಿ, ಸಾಮಾಜಿ ವಿಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆ ಮತ್ತು ನವೀಕರಿಸಬಹುದಾದ ಇಂಧನಗಳು ಹಾಗೂ  ಸೆಮಿಕಂಡಕ್ಟರ್ಸ್ ಕ್ಷೇತ್ರಗಳ ಅಧ್ಯಯನ ಸಂರಚನೆಯ ಬಗ್ಗೆ ತಿಳಿದುಕೊಳ್ಳಲಾಯಿತು ಎಂದು ಅಶ್ವತ್ಥನಾರಾಯಣ ವಿವರಿಸಿದರು.

ಅಂತಾರಾಷ್ಟ್ರೀಕರಣಕ್ಕೆ ಒತ್ತು

ಎನ್ಇಪಿ ಮೂಲಕ ಶಿಕ್ಷಣದ ಅಂತಾರಾಷ್ಟ್ರೀಕರಣಕ್ಕೆ ಒತ್ತು ಕೊಡಲಾಗುತ್ತಿದೆ. ನಮ್ಮ ಶಿಕ್ಷಣವನ್ನು ವಿಶ್ವದರ್ಜೆಯದನ್ನಾಗಿ ಮಾಡಲು ಇದು ಅಗತ್ಯವಾಗಿದೆ. ಇದರ ಭಾಗವಾಗಿ ಪಠ್ಯಕ್ರಮದಲ್ಲೇ ಕೌಶಲ್ಯ ಕಲಿಕೆಗೂ ಆದ್ಯತೆ ಕೊಡಲಾಗುತ್ತಿದೆ. ಇದರಿಂದ ದೇಶದ ಉತ್ಪಾದಕತೆಯೂ ಹೆಚ್ಚುತ್ತದೆ. ಹೀಗಾಗಿ, ಎಡಿನ್ಬರ್ಗ್ ವಿ.ವಿ.ಯ ಒಂದು ಕ್ಯಾಂಪಸ್ಸನ್ನು ಬೆಂಗಳೂರಿನಲ್ಲಿ ತರೆಯುವಂತೆ ಕೋರಲಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: Madikeri: ಜಲಪಾತದಲ್ಲಿ ಮುಳುಗಿ ಮೂವರು ಸಾವು! ಪ್ರವಾಸಿಗರೇ ಎಚ್ಚರವಿರಲಿ

ಸಚಿವರೊಂದಿಗೆ ಯುನೈಟೆಡ್ ಕಿಂಗ್ಡಂಗೆ ತೆರಳಿದ್ದ ರಾಜ್ಯ ನಿಯೋಗದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯಕ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್, ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ನ ಕುಲಪತಿ ಪ್ರೊ.ಭಾನುಮತಿ, ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಗೋಪಾಲಕೃಷ್ಣ ಜೋಶಿ ಮತ್ತು ಆಡಳಿತಾಧಿಕಾರಿ ಡಾ.ಟಿ.ಎನ್. ತಾಂಡವ ಗೌಡ ಇದ್ದರು.ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರನಾಯಕ್, ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲ ಜೋಷಿ ಇದ್ದರು.
Published by:Divya D
First published: