Teacher's Day: ವಿಜಯಪುರದ ಈ ಗ್ರಾಮ ಶಿಕ್ಷಕರ ತವರೂರು; ಪ್ರತಿ ಮನೆಯಲ್ಲೂ ಸಿಗುತ್ತಾರೆ ಗುರುಗಳು

Happy Teacher's Day:ಸುಮಾರು 70 ವರ್ಷಗಳಿಂದ ಇಲ್ಲಿ ಸುಮಾರು 6000 ಜನ ಶಿಕ್ಷಕರಾಗಿ ಹೊರಹೊಮ್ಮಿದ್ದು, ರಾಜ್ಯವಷ್ಟೇ ಅಲ್ಲ ನೆರೆಯ ಮಹಾರಾಷ್ಟ್ರದಲ್ಲಿಯೂ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದಾರೆ. 

ಲಚ್ಯಾಣ ಗ್ರಾಮ

ಲಚ್ಯಾಣ ಗ್ರಾಮ

  • Share this:
ವಿಜಯಪುರ(ಸೆ. 05): ಈ ಗ್ರಾಮ ಶಿಕ್ಷಕರ ತವರೂರು, ಗುರುಗಳ ಕಾಶಿ.  ಧಾರವಾಡದಲ್ಲಿ ಎಲ್ಲಿಯಾದರೂ ನಿಂತು ಒಂದು ಕಲ್ಲೆಸೆದರೆ ಸಾಕು ಆ ಕಲ್ಲು ಕೆರೆಯಲ್ಲಿ ಬೀಳುತ್ತದೆ ಅಥವಾ ಕವಿಯೊಬ್ಬರ ಮನೆಯ ಮೇಲೆ ಬೀಳುತ್ತದೆ ಎಂಬ ಮಾತು ಪ್ರಚಲಿತದಲ್ಲಿದೆ. ಅದೇ ರೀತಿ ಈ ಗ್ರಾಮದಲ್ಲಿ ಒಂದು ಕಲ್ಲು ಎಸೆದರೂ ಸಾಕು ಅದು ಶಿಕ್ಷಕರ ಮನೆಯ ಮೇಲೆ ಬೀಳುತ್ತದೆ.  ಅಷ್ಟೇ ಅಲ್ಲ, ಸರ್ ಎಂದು ಕರೆದರೂ ಸಾಕು ಪ್ರತಿಯೊಂದು ಮನೆಯಿಂದ ಶಿಕ್ಷಕರೊಬ್ಬರು ಹೊರಗೆ ಬಂದು ಇಣುಕು ಹಾಕುತ್ತಾರೆ.  ಅಷ್ಟೊಂದು ಹೆಸರಾಗಿದೆ ಈ ಗ್ರಾಮ. ಇದು ಬಸವನಾಡು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮ.  ಈ ಗ್ರಾಮದ ಪ್ರತಿಯೊಂದು ಮನೆಯಲ್ಲಿ ಕನಿಷ್ಠ ಒಬ್ಬರು ಶಿಕ್ಷಕರು ಸಿಗುತ್ತಾರೆ.  ಹಲವರ ಮನೆಗಳಲ್ಲಿ ಒಂದಕ್ಕಿಂತ ಹೆಚ್ಚು ಅಂದರೆ ಮೂರ್ನಾಲ್ಕು ಜನ ಶಿಕ್ಷಕರೂ ಸಿಗುತ್ತಾರೆ.  ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಹಾಡಿಗೆ ಹೇಳಿ ಮಾಡಿಸಿದಂತಿದೆ ಈ ಗ್ರಾಮ.

ಬೆಂಗಳೂರು ಏರ್​​​ಪೋರ್ಟ್​​​ನಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ಕಲಾವಿದರಿಗೊಂದು ಸುವರ್ಣಾವಕಾಶ

ಈ ಗ್ರಾಮದಿಂದ ನಾಲ್ಕೈದು ಕಿ. ಮೀ. ಸಂಚರಿಸಿದರೆ ಅಲ್ಲಿ ಭೀಮಾ ನದಿ ಮತ್ತು ನಂತರ ಮಹಾರಾಷ್ಟ್ರದ ಗಡಿ ಸಿಗುತ್ತದೆ.  ಸುಮಾರು 12 ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮ ಇಷ್ಟೊಂದು ಹೆಸರು ಮಾಡಲು ಪ್ರಮುಖ ಕಾರಣ ಇಲ್ಲಿರುವ ಶಿಕ್ಷಕರ ಸಂಖ್ಯೆ.  ಇಲ್ಲಿ ಶಿಕ್ಷಕರ ಸಂಖ್ಯೆ ಇಷ್ಟೊಂದು ಪ್ರಮಾಣದಲ್ಲಿ ಇರಲು ಕಾರಣವೂ ಇದೆ.  ಅದೇ ಇಲ್ಲಿರುವ ಶಿಕ್ಷಕರ ತರಬೇತಿ ಕೇಂದ್ರ.  ಈ ಗ್ರಾಮದಲ್ಲಿರುವ ಶ್ರೀ ಸಿದ್ಧಲಿಂಗ ಮಹಾರಾಜರ ಕಮರಿಮಠ ಪ್ರಸಿದ್ಧ ದೇವಸ್ಥಾನವೂ ಆಗಿದೆ.  ಈ ಮಠದಲ್ಲಿ ಸಿದ್ಲಿಂಗ ಮಹಾರಾಜರು ಜೀವಂತ ಸಮಾಧಿಯಾಗಿದ್ದರು.  ಸಂತರಾಗಿದ್ದ ಅವರು, ಸ್ಮಶಾನವೊಂದರ ಬಳಿ ಬಂದು ನೆಲೆಸಿ ತಪಸ್ಸು ಮಾಡಿದರು.  ಅಲ್ಲದೇ, ಅದನ್ನು ಗ್ರಾಮವನ್ನಾಗಿ ಮಾಡಿದರು.  1950 ರಲ್ಲಿ ಬಂಥನಾಳ ಸಂಗನಬಸವ ಶಿವಯೋಗಿಗಳು ಇಲ್ಲಿ ಆರಂಭಿಸಿದ ಶ್ರೀ ಸಿದ್ಧೇಶ್ವರ ಶಿಕ್ಷಕರ ತರಬೇತಿ ಶಾಲೆ ಮತ್ತು ಇತರ ಶಾಲೆಯಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಾರೆ.

ಸುಮಾರು 70 ವರ್ಷಗಳಿಂದ ಇಲ್ಲಿ ಸುಮಾರು 6000 ಜನ ಶಿಕ್ಷಕರಾಗಿ ಹೊರಹೊಮ್ಮಿದ್ದು, ರಾಜ್ಯವಷ್ಟೇ ಅಲ್ಲ ನೆರೆಯ ಮಹಾರಾಷ್ಟ್ರದಲ್ಲಿಯೂ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದಾರೆ.  ರಾಜ್ಯದಲ್ಲಿರುವ ಬಹುತೇಕ ಶಾಲೆಗಳಲ್ಲಿ ಲಚ್ಯಾಣ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಕಲಿತ ಶಿಕ್ಷಕರು ಸಿಗುತ್ತಾರೆ. ಇದು ಉತ್ತರ ಕರ್ನಾಟಕದ ಪ್ರಥಮ ಶಿಕ್ಷಕರ ತರಬೇತಿ ಶಾಲೆಯೂ ಆಗಿದೆ.  ಆರಂಭದಲ್ಲಿ ಮಹಾರಾಷ್ಟ್ರದ ಪುಣೆ ಸರಕಾರದಿಂದ ಮಾನ್ಯತೆ ಪಡೆದ ಈ ಶಾಲೆಗೆ ಅನುದಾನವೂ ಸಿಗುತ್ತಿತ್ತು.  2004ರವರೆಗೆ ಈ ತರಬೇತಿ ಶಾಲೆಯಲ್ಲಿ ಕಲಿಯಲು ವಿದ್ಯಾರ್ಥಿಗಳು ಸರತಿಯಲ್ಲಿ ಕಾಯುತ್ತಿದ್ದರು.  ಆದರೆ, 2004ರ ಬಳಿಕ ರಾಜ್ಯಾದ್ಯಂತ ಡಿಎಡ್ ಮತ್ತು ಬಿಎಡ್ ಕಾಲೇಜುಗಳು ಹೆಚ್ಚಿನ ಸಂಖ್ಯೆಯಲ್ಲಿ ಆರಂಭವಾದ ನಂತರ ಇಲ್ಲಿಯ ಒತ್ತಡ ಸ್ವಲ್ಪ ಕಡಿಮೆಯಾಗಿದೆ.  ಈಗಲೂ ಇಲ್ಲಿ ಓದುವುದು ಬಿಎಡ್ ವಿದ್ಯಾರ್ಥಿಗಳಿಗೆ ಹೆಮ್ಮೆಯ ವಿಷಯವಾಗಿದೆ.
Published by:Latha CG
First published: