ಅನುದಾನರಹಿತ ಶಿಕ್ಷಕರಿಗೆ ಟಿಬಿಎಫ್ ಅಜೀವ ಸದಸ್ಯತ್ವ: ಸಚಿವ ಸುರೇಶ್ ಕುಮಾರ್ ಆಶ್ವಾಸನೆ

ಈಗಾಗಲೇ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದ್ದು, ಸದಸ್ಯತ್ವ ನೀಡುವ ಕುರಿತು ರೂಪಿಸಿರುವ ನಿಯಮಗಳನ್ನು ವಿಸ್ತೃತವಾಗಿ ಅವಲೋಕಿಸಿ ಅಂತಿಮಗೊಳಿಸಲಾಗುವುದೆಂದು  ಎಂದು ಸುರೇಶ್ ಕುಮಾರ್ ತಿಳಿಸಿದರು.

ಸಚಿವ ಸುರೇಶ್ ಕುಮಾರ್.

ಸಚಿವ ಸುರೇಶ್ ಕುಮಾರ್.

  • Share this:
ಬೆಂಗಳೂರು: ಖಾಸಗಿ ಅನುದಾನರಹಿತ ಶಾಲಾ ಕಾಲೇಜುಗಳ ಶಿಕ್ಷಕರನ್ನು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಅಜೀವ ಸದಸ್ಯರನ್ನಾಗಿ ನೇಮಕ  ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ, ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಣ  ಸಂಸ್ಥೆಗಳ ಆಡಳಿತ ಮಂಡಳಿಗಳ ಸಂಘ ಹಾಗೂ ವಿವಿಧ  ಶಿಕ್ಷಕ ಸಂಘಟನೆಗಳ ಹೋರಾಟ ಸಮನ್ವಯ ಸಮಿತಿಯ ಬೃಹತ್ ಸಂಖ್ಯೆಯ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು,  ಕೊರೋನಾದಂತಹ ಸಂಕಷ್ಟ ಕಾಲದಲ್ಲಿ ಖಾಸಗಿ ಶಿಕ್ಷಕರು ತೀವ್ರ ಸಂಕಷ್ಟ ಅನುಭವಿಸಿದ್ದರಿಂದಾಗಿ ಎಲ್ಲ ಶಿಕ್ಷಕರಂತೆ ಕಷ್ಟಕಾಲದ ತತ್ಕ್ಷಣದ ನೆರವಿಗೆ ಶಿಕ್ಷಣ ನಿಧಿಯ ಸದಸ್ಯತ್ವ ನೀಡಿ ಆ ಮೂಲಕ ನಿಧಿಯಿಂದ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಕರಿಗೆ ದೊರೆಯುವ ಸೌಲಭ್ಯ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಶಿಕ್ಷಕರೆಂದರೆ ಎಲ್ಲರೂ ಶಿಕ್ಷಕರೇ, ಎಲ್ಲರೂ ನಮ್ಮ ಮಕ್ಕಳ ಹಿತಕ್ಕೆ ದುಡಿಯುತ್ತಾರೆ.  ಅದರಲ್ಲಿ ಎರಡು ಮಾತೇ ಇಲ್ಲ, ಹೀಗಿರುವಾಗ ಶಿಕ್ಷಕರ ಕಲ್ಯಾಣ ನಿಧಿಗೆ ಖಾಸಗಿ ಅನುದಾನ ರಹಿತ ಸಂಸ್ಥೆಗಳ ಶಿಕ್ಷಕರನ್ನು ಯಾವ ರೀತಿಯಲ್ಲಿ ಹಾಗೆಯೇ ಯಾವ ಮಾನದಂಡದ ಮೂಲಕ  ಸದಸ್ಯತ್ವ ನೀಡುವ ಕುರಿತು ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಇದು ಅಧಿಕೃತಗೊಳ್ಳಲಿದೆ ಎಂದು ಸಚಿವರು ಹೇಳಿದರು.

ಈಗಾಗಲೇ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದ್ದು, ಸದಸ್ಯತ್ವ ನೀಡುವ ಕುರಿತು ರೂಪಿಸಿರುವ ನಿಯಮಗಳನ್ನು ವಿಸ್ತೃತವಾಗಿ ಅವಲೋಕಿಸಿ ಅಂತಿಮಗೊಳಿಸಲಾಗುವುದೆಂದು  ಎಂದು ಸುರೇಶ್ ಕುಮಾರ್ ತಿಳಿಸಿದರು.

1995-2000ವರೆಗಿನ ಶಾಲೆಗಳಿಗೆ ಅನುದಾನ:

ಶಿಕ್ಷಣ ಕ್ಷೇತ್ರದ ಪ್ರಮುಖ ಬೇಡಿಕೆಯಾದ ಖಾಸಗಿ ಅನುದಾನರಹಿತ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೊಳಪಡಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ. ಬಜೆಟ್ ಪೂರ್ವಭಾವಿ ಸಭೆಯಲ್ಲಿಯೂ ಈ ಕುರಿತು ಪ್ರಸ್ತಾವನೆ ಸಲ್ಲಿಸಿ ಸಿಎಂ ಅವರಿಗೆ ಪ್ರಮುಖವಾಗಿ ಇದನ್ನು ಪರಿಗಣಿಸಬೇಕೆಂದು ಕೋರಿದ್ದೆ. ಕೋವಿಡ್ ಸಂಕಷ್ಟದ ಸಮಯವಾದ್ದರಿಂದ ಬಜೆಟ್ ನಲ್ಲಿ ಅದಕ್ಕೆ ಅನುದಾನ ಹಂಚಿಕೆಯಾಗಿಲ್ಲ.

ಆ ನಂತರವೂ ನಾನು ಸಿಎಂ ಅವರೊಂದಿಗೆ ಚರ್ಚಿಸಿದ್ದು ಪೂರಕ ಬಜೆಟ್ ನಲ್ಲಿ ಅನುದಾನ ಹಂಚಿಕೆ ಮಾಡಿ ಬಜೆಟ್ ಕುರಿತ ಚರ್ಚೆಯಲ್ಲಿ ಕನಿಷ್ಠ ಐದು ವರ್ಷದ ಅಂದರೆ 1995-2000ವರೆಗಿನ ಶಾಲೆಗಳಿಗೆ ಅನುದಾನ ನೀಡುವ ಘೋಷಣೆ ಮಾಡಬೇಕೆಂದು ಕೋರಿದ್ದೇನೆ.  ಈ ಕುರಿತು ಮತ್ತೊಮ್ಮೆ ನಾನು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಕುರಿತು ಸ್ಪಷ್ಟವಾದ ಭರವಸೆ ಪಡೆಯುವೆ ಎಂದು ಸುರೇಶ್ ಕುಮಾರ್ ತಿಳಿಸಿದರು.

1995 ರಿಂದ 2000 ವರೆಗಿನ 5 ವರ್ಷಗಳ ಅವಧಿಯಲ್ಲಿ 685 ಅನುದಾನ ರಹಿತ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳು ಮತ್ತು 211 ಅನುದಾನ ರಹಿತ ಕನ್ನಡ ಮಾಧ್ಯಮ ಪ್ರೌಢಶಾಲೆಗಳು ಇದ್ದು, ಅವುಗಳನ್ನು ಅನುದಾನಕ್ಕೊಳಡಪಡಿಸುವ ನಿಟ್ಟಿನಲ್ಲಿ 138.39 ಕೋಟಿ ರೂ.ಗಳ ಹಣದ ಅಗತ್ಯವಿರುವುದನ್ನು ಇಲಾಖೆ ಅಂದಾಜಿಸಿದೆ ಎಂದು ಸಚಿವರು ತಿಳಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ನೆರವು:

ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಖಾಸಗಿ ಶಾಲೆಗಳಿಗೆ ನೆರವು  ನೀಡುವ ಮೂಲಕ ಸಾಧ್ಯವಾದಷ್ಟು ಸಹಾಯ ಹಸ್ತ ಚಾಚಬೇಕೆಂಬ ಉದ್ದೇಶವಿದ್ದು, ಈ ಕುರಿತು ಮಂಡಳಿಯ ನಿಯಮಗಳಲ್ಲಿ ಅವಕಾಶ ಕಲ್ಪಿಸುವ ಸಂಬಂಧದಲ್ಲಿ ಯೋಜನಾ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಶೀಘ್ರವೆ ಸಭೆ ನಡೆಸಲಾಗುವುದೆಂದು ಅವರು ಹೇಳಿದರು.

ಇದನ್ನೂ ಓದಿ: Assembly Election2021: ಬಂಗಾಳದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ನಟ ಮಿಥುನ್ ಚಕ್ರವರ್ತಿಗೆ ಟಿಕೆಟ್ ನಿರಾಕರಣೆ!

ಈಗಾಗಲೇ ಕೋವಿಡ್ ಸಂಕಷ್ಟದಲ್ಲಿ ಶಾಲೆಗಳು ತಡವಾಗಿ ಆರಂಭವಾಗಿರುವುದರಿಂದ ಮಕ್ಕಳು ಪರೀಕ್ಷೆಗೆ ಸಿದ್ಧವಾಗುತ್ತಿದ್ದು, ಮಕ್ಕಳ ಹಿತದೃಷ್ಟಿಯಿಂದ ಪರೀಕ್ಷೆ ಮತ್ತು ಮೌಲ್ಯಮಾಪನದಂತಹ ಸಮಯದಲ್ಲಿ ಯಾವುದೇ ಮುಷ್ಕರಗಳಿಗೆ ಎಡೆ ಮಾಡಬಾರದೆಂದು ಸಚಿವರು ಮನವಿ ಮಾಡಿದರು. ಶಿಕ್ಷಕ ಸಂಘಟನೆಗಳ ಪ್ರತಿನಿಧಿಯು ಸಚಿವರ ಮನವಿಗೆ ಸ್ಪಂದಿಸಿ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಯಾವುದೇ ಪ್ರತಿಭಟನೆ ಮಾಡುವುದಿಲ್ಲ ಎಂಬ ಭರವಸೆ ನೀಡಿದರು.

ವಿಧಾನಪರಿಷತ್ ಸಭಾಪತಿ ಬಸವರಾಜ ಎಚ್. ಹೊರಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಇಲಾಖೆಯ ಅಧಿಕಾರಿಗಳಾದ ಕುಮಾರ ನಾಯಕ್, ವಿ. ಅನ್ಬುಕುಮಾರ್, ಸ್ನೇಹಲ್  ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜಿ.ಆರ್. ಭಟ್, ರೂಪ್ಸಾ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
Published by:MAshok Kumar
First published: