777 Charlie Movie: ಚಾರ್ಲಿಗೆ ಸಿಕ್ತು ತೆರಿಗೆ ವಿನಾಯಿತಿ! ಚಿತ್ರ ನೋಡಿ ಫಿದಾ ಆಗಿ ವಿನಾಯಿತಿ ಕೊಟ್ರಾ ಬೊಮ್ಮಾಯಿ?

ಜನ-ಮನ ಗೆದ್ದಿರೋ 777 ಚಾರ್ಲಿ ಚಿತ್ರಕ್ಕೆ ಇದೀಗ ರಾಜ್ಯ ಸರ್ಕಾರ ತೆರಿಗೆ ವಿನಾಯತಿ ನೀಡಿದೆ. ನಟ ಹಾಗೂ ನಿರ್ಮಾಪಕ ರಕ್ಷಿತ್​ ಶೆಟ್ಟಿ ಅವರು 777 ಚಾರ್ಲಿ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ರು

777 ಚಾರ್ಲಿ ಚಿತ್ರಕ್ಕೆ ತೆರಿಗೆ ವಿನಾಯಿತಿ

777 ಚಾರ್ಲಿ ಚಿತ್ರಕ್ಕೆ ತೆರಿಗೆ ವಿನಾಯಿತಿ

  • Share this:
ಬೆಂಗಳೂರು (ಜೂ 18): ನಟ ರಕ್ಷಿತ್​ ಶೆಟ್ಟಿ ಅಭಿನಯದ 777 ಚಾರ್ಲಿ (777 Charlie) ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣ್ತಿದೆ. ಜನ-ಮನ ಗೆದ್ದಿರೋ 777 ಚಾರ್ಲಿ ಚಿತ್ರಕ್ಕೆ ಇದೀಗ ರಾಜ್ಯ ಸರ್ಕಾರ ತೆರಿಗೆ ವಿನಾಯತಿ (Tax Exemption) ನೀಡಿದೆ. ನಟ ಹಾಗೂ ನಿರ್ಮಾಪಕ ರಕ್ಷಿತ್​ ಶೆಟ್ಟಿ (Rakshit Shetty) ಅವರು 777 ಚಾರ್ಲಿ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ರು. ಇದೀಗ ರಾಜ್ಯ ಸರ್ಕಾರ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ. ಈ ಹಿಂದೆ ಚಾರ್ಲಿ ಚಿತ್ರಕ್ಕೆ  ಶೇಕಡಾ 100ರಷ್ಟು ತೆರಿಗೆ ವಿನಾಯಿತಿ ನೀಡುವಂತೆ ರಕ್ಷಿತ್​ ಶೆಟ್ಟಿ ಮನವಿ ಮಾಡಿಕೊಂಡಿದ್ರು. ಈ ಚಿತ್ರಕ್ಕೆ ತೆರಿಗೆ ಮುಕ್ತಗೊಳಿಸಿದ್ರೆ ದೇಶದ ಇನ್ನಷ್ಟು ಜನರಿಗೆ ಈ ಸಂದೇಶವನ್ನು ಮುಟ್ಟಿಸುವಲ್ಲಿ ಸಹಕಾರಿಯಾಗುವುದರಿಂದ ಸೂಕ್ತ ಆದೇಶ ಹೊರಡಿಸುವಂತೆ ಮನವಿ ಮಾಡಿದ್ರು. 

ರಾಜ್ಯ ಸರ್ಕಾದಿಂದ ತೆರಿಗೆ ವಿನಾಯಿತಿ ಆದೇಶ

ತೆರಿಗೆ ವಿನಾಯಿತಿ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯದಾದ್ಯಂತ ಚಲನಚಿತ್ರ ಮಂದಿರಗಳು  ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಚಾರ್ಲಿ ಎಂಬ ಶೀರ್ಷಿಕೆಯುಳ್ಳ ಕನ್ನಡ ಚಲನಚಿತ್ರ ಪ್ರದರ್ಶನಗಳಿಗೆ ದಿನಾಂಕ: 19-06-2022 ರಿಂದ 6 ತಿಂಗಳ ಅವಧಿಗೆ ರಾಜ್ಯ ಸರಕು ಮತ್ತು ಸೇವಾ ತೆರಿಗೆ ( SGST) ಹಿಂಪಾವತಿ ಸೌಲಭ್ಯವನ್ನು ಈ ಕೆಳಕಂಡ ಷರತ್ತುಗಳೊಂದಿಗೆ ನೀಡಿರೋದಾಗಿ ಸರ್ಕಾರ ತಿಳಿಸಿದೆ.

ಟಿಕೆಟ್ ಮೇಲೆ ಎಸ್‌ಜಿಎಸ್‌ಟಿ ವಿಧಿಸುವಂತಿಲ್ಲ

ಪ್ರದರ್ಶಕರು ಸಿನೆಮಾ ಟಿಕೆಟ್ ಮೇಲೆ ಎಸ್‌ಜಿಎಸ್‌ಟಿ ವಿಧಿಸುವಂತಿಲ್ಲ ಮತ್ತು ಸಂಗ್ರಹಿಸುವಂತಿಲ್ಲ, ಎಸ್‌ಜಿಎಸ್‌ಟಿ ಮೊತ್ತವನ್ನು ಕಡಿತಗೊಳಿಸಿದ ದರದಲ್ಲಿಯೇ ಟಿಕೆಟ್‌ಗಳನ್ನು ಮಾರಾಟ ಮಾಡುವಂತೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: 777 Charlie Collection: 8ನೇ ದಿನವೂ ಮುಂದುವರೆದ ಚಾರ್ಲಿ ಅಬ್ಬರ, ಇದುವರೆಗೂ ಮಾಡಿದ ಕಲೆಕ್ಷನ್ ಎಷ್ಟು?

ಜೂನ್ 14ರಂದು ಸಿಎಂಗೆ ಪತ್ರ

ನಟ ರಕ್ಷಿತ್ ಶೆಟ್ಟಿ ಜೂನ್ 14ರಂದು ಸಿಎಂಗೆ ಪತ್ರ ಬರೆದು, “777 ಚಾರ್ಲಿ”ಗೆ ಶೇ.100ರಷ್ಟು ತೆರಿಗೆ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದರು. ಮನವಿ ಪತ್ರದಲ್ಲಿ ಇನ್‌ಬ್ರೀಡಿಂಗ್‌ನಿಂದಾಗಿ ಶ್ವಾನಗಳ ಸ್ವಾಸ್ಥ್ಯದ ಮೇಲಾಗುವ ಪರಿಣಾಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಪ್ರಾಣಿ ಹಿಂಸೆಯ ಸೂಕ್ಷ್ಮತೆಗಳನ್ನು ಎತ್ತಿಹಿಡಿಯುವ ಆಶಯ ಈ ಚಿತ್ರದ ಕಥಾಹಂದರದಲ್ಲಿ ಒಳಗೊಂಡಿದ್ದು, ಇದರ ಜೊತೆಗೆ ಈ ಚಿತ್ರವು ಬೀದಿ ನಾಯಿಗಳನ್ನು ದತ್ತು ಪಡೆಯುವುದರ ಬಗ್ಗೆ ಸಂದೇಶವನ್ನು ಸಾರುತ್ತದೆ ಎಂದು ವಿವರಿಸಿದ್ದರು.

ಜೂನ್​ 14 ರಂದು ಚಿತ್ರ ನೋಡಿದ್ದ ಬೊಮ್ಮಾಯಿ

ನಾಯಿ ಮತ್ತು ಮನುಷ್ಯ ಪ್ರೀತಿಯನ್ನು ಅನಾವರಣಗೊಳಿಸಿರುವ 777 ಚಾರ್ಲಿ ಕನ್ನಡ ಚಲನ ಚಿತ್ರವನ್ನು ಜೂನ್​ 14 ರಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿತ್ರ ವೀಕ್ಷಿಸಿದ್ರು ‘ತಮ್ಮ ಮನೆಯಲ್ಲಿದ್ದ ಪ್ರೀತಿಯ ನಾಯಿ ‘ ಸನ್ನಿ’ಯನ್ನು ನೆನಪಿಸಿಕೊಂಡು ಭಾವುಕರಾದರು. ದುಃಖ ತಡೆಯಲಾಗದೇ ಕಣ್ಣೀರು ಹಾಕಿದರು.

ಮನುಷ್ಯ ಮತ್ತು ನಾಯಿಯ ನಡುವಿನ ಪ್ರೀತಿ,  ಪರಿಶುದ್ಧ ಪ್ರೀತಿ

ಮನುಷ್ಯ ಮತ್ತು ನಾಯಿಯ ನಡುವಿನ ಪ್ರೀತಿ, ಯಾವುದೇ ಕಟ್ಟುಪಾಡಿಲ್ಲದ ಪ್ರೀತಿಗೆ ಉತ್ತಮ ಉದಾಹರಣೆ. ಅತ್ಯಂತ ಪರಿಶುದ್ಧ ಪ್ರೀತಿ ಇದು ಎಂದು ಮುಖ್ಯಮಂತ್ರಿಗಳು ಗದ್ಗದಿತರಾಗಿ ನುಡಿದರು. ನಾಯಕನಟ ರಕ್ಷಿತ ಶೆಟ್ಟಿ ಮನೋಜ್ಞ ವಾಗಿ ನಟಿಸಿದ್ದಾರೆ ಎಂದು ಹೇಳಿದ ಅವರು, ಈಗ ನಾನು ಮನೆಯಲ್ಲಿ ಹೆಣ್ಣುನಾಯಿ ಟಿಯಾ’ಳನ್ನು ಸಾಕುತ್ತಿರುವುದಾಗಿ ಅವರು ಹೇಳಿದ್ರು.

ಇದನ್ನೂ ಓದಿ: ಮೂರನೇ ದಿನವೂ ಮುಂದುವರಿದ ಚಾರ್ಲಿ ಅಬ್ಬರ, ಟಿಕೆಟ್​ ಸಿಗದೇ ಅಭಿಮಾನಿಗಳಿಗೆ ನಿರಾಸೆ

ತಜ್ಞರೊಂದಿಗೆ ಚರ್ಚೆಕ್ರಮ

ಬೀದಿನಾಯಿಗಳನ್ನು ಸೂಕ್ತ ರೀತಿಯಲ್ಲಿ ನೋಡಿಕೊಳ್ಳಲು ತಜ್ಞರೊಂದಿಗೆ ಚರ್ಚಿಸಿ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದರು. ನಾಯಿಗಳ ತರಬೇತಿ ನೀಡುವವರಿಗೆ ಪ್ರೋತ್ಸಾಹ ನೀಡುವ ವಿಶೇಷ ಕಾರ್ಯಕ್ರಮ ರೂಪಿಸುವ ಚಿಂತನೆ ಇದೆ. ಬೀದಿನಾಯಿಗಳನ್ನು ದತ್ತು ತೆಗೆದುಕೊಳ್ಳಬೇಕು. ಪ್ರಾಣಿಗಳನ್ನು ಹಿಂಸಿಸಬಾರರು. ಬೀದಿನಾಯಿಗಳನ್ನು ಹಾಗೂ ಇತರೆ ಪ್ರಾಣಿಗಳನ್ನು ರಕ್ಷಿಸಬೇಕು ಹಾಗೂ ಸಾಧ್ಯವಾದರೆ ದತ್ತು ಪಡೆಯಬೇಕು ಎಂದಿದ್ದರು
Published by:Pavana HS
First published: