ಬೆಂಗಳೂರು (ಮೇ. 13): ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನಲೆ ಇಂದು ರಾಜ್ಯದ ಹಲವೆಡೆ ಇಂದು ಮಳೆ ಅಬ್ಬರ ಜೋರಾಗಿದೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ರಾಜ್ಯಗಳಲ್ಲಿ ಜೋರು ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಅರಬ್ಬಿ ಸಮುದ್ರದಲ್ಲಿ ತೌಕ್ತೆ ಚಂಡಮಾರುತದ ಪರಿಣಾಮದಿಂದಾಗಿ, ಮುಂದಿನ ಎರಡು ಮೂರು ದಿನಗಳು ಕರ್ನಾಟಕ, ಕೇರಳ, ಲಕ್ಷದ್ವೀಪ ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಸೂಚನೆ ನೀಡಿತ್ತು. ಅಲ್ಲದೇ ಕರಾವಳಿ ಪ್ರದೇಶದಲ್ಲಿ ಮೀನುಗಾರಿಕೆಗೆ ಇಳಿಯದಂತೆ ಸೂಚನೆ ನೀಡಲಾಗಿತ್ತು. ವಾಯುಭಾರ ಕುಸಿತದ ಪರಿಣಾಮವಾಗಿ ರಾಜಧಾನಿಯಲ್ಲಿ ನಿನ್ನೆ ಇಂದು ಸಂಜೆ ಭಾರೀ ಮಳೆಯಾಗಿದೆ.
ರಾಜಧಾನಿಯಲ್ಲಿ ಇಂದು ಕೂಡ 8ಗಂಟೆ ಮೇಲೆ ಗುಡುಗು -ಮಿಂಚು ಸಮೇತವಾಗಿ ವರುಣ ಅರ್ಭಟಿಸಿದ್ದಾನೆ. ಸುಮಾರು ಒಂದು ಗಂಟೆಗಳ ಕಾಲ ಸುರಿದ ಮಳೆಗೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಕಾರ್ಪೋರೇಷನ್, ಶಾಂತಿನಗರ, ವಿಲ್ಸನ್ ಗಾರ್ಡನ್, ಕೋರಮಂಗಲ, ಬಸವನಗುಡಿ, ಲಾಲ್ಬಾಗ್ ಸೇರಿದಂತೆ ನಗರದ ವಿವಿಧೆಡೆ ಭರ್ಜರಿ ಮಳೆಯಾಗಿದೆ.
ಶಿವಮೊಗ್ಗ, ಮೈಸೂರಿನಲ್ಲಿ ಕೂಡ ಸಂಜೆ ಭಾರೀ ಮಳೆಯಾಗಿದೆ. ಗುಡುಗು, ಮಿಂಚಿನಿಂದ ಕೂಡಿದ ಮಳೆ ಇಳೆಯನ್ನು ತಂಪಾಗಿಸಿದೆ. ವಿವಿಧೆಡೆ ತಗ್ಗುಪ್ರದೇಶದಲ್ಲಿ ನೀರು ನುಗ್ಗಿರುವ ವರದಿಯಾಗಿದೆ.
ಕೋಲಾರದಲ್ಲಿಯೂ ಬಿಸಿಲ ಬೇಗೆಯಲ್ಲಿದ್ದ ಧರೆಗೆ ಮಳೆರಾಯ ತಂಪೆರೆದಿದ್ದಾನೆ ಮಧ್ಯಾಹ್ನ ಸುಮಾರು ಒಂದು ಗಂಟೆಗಳ ಕಾಲ ಮಳೆಯಾಗಿದೆ. ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ಕೂಡ ಮಳೆ ಅಬ್ಬರಿಸಿದ್ದು, ಸಣ್ಣಪುಟ ಕಾಲುವೆಗಳು ಮತ್ತು ಚೆಕ್ಡ್ಯಾಂಗಳು ಜಲಾವೃತಗೊಂಡಿದೆ, ಸುಮಾರು ಒಂದು ಗಂಟೆಗಳ ಕಾಲ ಅಬ್ಬರಿಸಿದ ಮಳೆಯಿಂದಾಗಿ ಬೆಳೆಗಳು ನೀರು ಪಾಲಾಗಿವೆ ಎಂದು ರೈತರು ಅಳಲು ತೊಡಿಕೊಂಡಿದ್ದಾರೆ.
ಇದನ್ನು ಓದಿ: ಮನೆಯಲ್ಲಿಯೇ ಹಬ್ಬ ಆಚರಿಸಿ; ಸಾಮೂಹಿಕ ಪ್ರಾರ್ಥನೆ ಬೇಡ; ಕಮಲ್ ಪಂತ್ ಮನವಿ
ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 3 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಲೆನಾಡು, ಕರಾವಳಿ, ಉಡುಪಿ, ಕಾರ್ಕಳ, ಧರ್ಮಸ್ಥಳ, ಉತ್ತರ ಕನ್ನಡದ ಹಲವು ಭಾಗ ಮಳೆಯಾಗಿದೆ.
ಮೇ 16ರಂದು ಅರಬ್ಬಿ ಸಮುದ್ರದಲ್ಲಿ ಈ ವರ್ಷದ ಮೊದಲ ಚಂಡಮಾರುತ ಅಪ್ಪಳಿಸಲಿದ್ದು, ಇದಕ್ಕೆ ತೌಕ್ತೆ ಚಂಡಮಾರುತ ಎಂದು ಹೆಸರಿಡಲಾಗಿದೆ. ಕರ್ನಾಟಕ, ಕೇರಳ, ತಮಿಳುನಾಡು ಸೇರಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಚಂಡಮಾರುತ ಅಬ್ಬರಿಸಲಿದೆ. ಹೀಗಾಗಿ, ಮುಂದಿನ 1 ವಾರಗಳ ಕಾಲ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಮೇ 15ರಂದು ಮಹಾರಾಷ್ಟ್ರ ಮತ್ತು ಗೋವಾದಲ್ಲಿಯೂ ಚಂಡಮಾರುತ ಅಬ್ಬರ ಹೆಚ್ಚಾಗಲಿದೆ. ಕರ್ನಾಟಕದಲ್ಲಿ ಮೇ 16ರಂದು ಗಂಟೆಗೆ 40ರಿಂದ 50 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ, ಅನೇಕ ಜಿಲ್ಲೆಗಳಲ್ಲಿ ಇನ್ನು 3 ದಿನ ಹಳದಿ ಅಲರ್ಟ್ ಘೋಷಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ