ಬೆಂಗಳೂರು: ಮೈಸೂರು ಮೇಯರ್ ಆಯ್ಕೆ ವಿಚಾರವಾಗಿ ವರದಿ ನೀಡಲು ಎಐಸಿಸಿಯಿಂದ ವೀಕ್ಷಕರಾಗಿ ಮಧುಗೌಡ್ ಯಾಸ್ಕಿ ಅವರು ರಾಜ್ಯಕ್ಕೆ ಬಂದಿದ್ದಾರೆ. ಈ ವಿಚಾರವಾಗಿ ರಾಜ್ಯದ ಹಲವು ನಾಯಕರನ್ನು ಯಾಸ್ಕಿ ಅವರು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಜೆಡಿಎಸ್ ಮೈತ್ರಿಗೆ ಕಾರಣ ಎನ್ನಲಾಗುತ್ತಿರುವ ತನ್ವೀರ್ ಸೇಠ್ ಅವರು ಸಹ ಇಂದು ಯಾಸ್ಕಿ ಅವರನ್ನು ಭೇಟಿಯಾಗಿ ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ.
ಯಾಸ್ಕಿ ಅವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತನ್ವೀರ್ ಸೇಠ್ ಅವರು, ಮೈಸೂರು ಮೇಯರ್ ಆಯ್ಕೆ ವಿಷಯದಲ್ಲಿ ಯಾರ ಸೂಚನೆ ಹಾಗೂ ಆದೇಶದ ಮೇರೆಗೆ ನಿರ್ಧಾರ ಮಾಡಿದ್ದೀರಿ? ಎಂದು ಯಾಸ್ಕಿ ಅವರು ಕೇಳಿದರು. ಅದಕ್ಕೆ ನಾನು ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಅವರು ಕೊಟ್ಟಿದ್ದರು ಎಂದು ಹೇಳಿದ್ದೇನೆ. ನನಗೆ ಪಕ್ಷದಿಂದ ಯಾವ ನೋಟಿಸ್ ಕೊಟ್ಟಿಲ್ಲ, ಕೊಟ್ಟಾಗ ಉತ್ತರಿಸುತ್ತೇನೆ. ಉತ್ತರಿಸುವ ಜವಾಬ್ದಾರಿ ನನ್ನದು. ಪಕ್ಷದ ಕೆಲಸದಲ್ಲಿ ಯಾವ ಮುಜುಗರವೂ ಇಲ್ಲ. ಪಕ್ಷವೇ ನನ್ನ ಜೊತೆ ನಿಲ್ಲುವ ಭರವಸೆ ಇದೆ. ನಾನು ಯಾವುದೇ ತಪ್ಪು ಮಾಡಿಲ್ಲ. ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿದ್ದು ತಪ್ಪು. ಯಾರು ಕೂಗಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಭಾರ ಹೊರುವ ಶಕ್ತಿ ಇರುವುದರಿಂದ ನನಗೆ ಭಾರ ಹಾಕುತ್ತಿದ್ದಾರೆ. ರಾಯಚೂರಿನ ಪ್ರತಿಭಟನೆಗೆ ಪಕ್ಷ ಕ್ರಮ ಕೈಗೊಳ್ಳಲಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಟ್ಟಿದ್ದಕ್ಕೆ ಸಿಕ್ಕಿರುವ ಬಹುಮಾನ ಇದು ಎಂದು ಹೇಳಿದರು.
ಇದನ್ನು ಓದಿ: ಮೈಸೂರು ಮೇಯರ್ ಸ್ಥಾನ ಕಾಂಗ್ರೆಸ್ಗೆ ಸಿಗಬೇಕಿತ್ತು, ತನ್ನೀರ್ ಸೇಠ್ಗೆ ನೋಟಿಸ್ ಕೊಡಲಾಗಿದೆ; ಡಿಕೆಶಿ
ಬಳಿಕ ಕೆಪಿಸಿಸಿ ಕಚೇರಿಗೆ ಆಗಮಿಸಿದ ತನ್ವೀರ್ ಸೇಠ್ ಅವರು ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದರು. ಈ ವೇಳೆ ಮೈಸೂರು ಮೇಯರ್ ಚುನಾವಣೆ ವಿಚಾರ ಕುರಿತು ವರದಿ ನೀಡಿದರು. ಡಿಕೆಶಿ ಭೇಟಿ ಬಳಿಕ ಮತ್ತೆ ಸುದ್ದಿಗಾರರೊಂದಿಗೆ ಮಾತನಾಡಿದ ಸೇಠ್, ಎಐಸಿಸಿಯಿಂದ ಕಾರಣ ಕೇಳಿ ನೋಟಿಸ್ ಕೊಟ್ಟಿದ್ದಾರೆ. ಇದರ ಬಗ್ಗೆ ಕೆಪಿಸಿಸಿ ಅಧ್ಯಕ್ಷರ ಜೊತೆ ಸಮಾಲೋಚಿಸಿದ್ದೇನೆ. ಎಐಸಿಸಿ ಕಾರ್ಯದರ್ಶಿಗಳು ಪೂರ್ಣ ವಿವರಣೆ ಪಡೆಯಲು ಬಂದಿದ್ದಾರೆ. ಅವರಿಗೆ ನಾನು ಎಲ್ಲಾ ವಿವರಣೆ ಕೊಟ್ಟಿದ್ದೇನೆ. ಎಐಸಿಸಿ, ಕೆಪಿಸಿಸಿ ಶಿಸ್ತು ಸಮಿತಿಗೆ ನೊಟೀಸ್ ನೀಡಲು ಸೂಚನೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ನನಗೆ ನೊಟೀಸ್ ಕೊಟ್ಟಿದ್ದಾರೆ. ಅವರು ಕೇಳಿರುವ ಪ್ರಶ್ನೆಗಳಿಗೆ ಉತ್ತರ ಕೊಡುತ್ತೇನೆ. ಇದರ ಜೊತೆ ಇನ್ನಷ್ಟು ಕಾರಣಗಳನ್ನು ವಿವರಿಸುತ್ತೇನೆ. ಮೈತ್ರಿಯ ಕಾರಣ, ಫಲ, ನಷ್ಟದ ಬಗ್ಗೆಯೂ ವಿವರ ಕೊಡ್ತೇನೆ. ಎರಡು ಮೂರು ದಿನಗಳಲ್ಲಿ ನಾನು ಉತ್ತರ ಕೊಡ್ತೇನೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ