• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಚೆಕ್ ಪೋಸ್ಟ್ ಮೂಲಕ ರಾಜ್ಯ ಪ್ರವೇಶಕ್ಕೆ ಲಂಚ ; ತಮಿಳುನಾಡು ಪೊಲೀಸರ ಲಂಚಾವತಾರ ಬಯಲು

ಚೆಕ್ ಪೋಸ್ಟ್ ಮೂಲಕ ರಾಜ್ಯ ಪ್ರವೇಶಕ್ಕೆ ಲಂಚ ; ತಮಿಳುನಾಡು ಪೊಲೀಸರ ಲಂಚಾವತಾರ ಬಯಲು

ಲಂಚ ತೆಗೆದುಕೊಳ್ಳುತ್ತಿರುವ ಪೊಲೀಸರು

ಲಂಚ ತೆಗೆದುಕೊಳ್ಳುತ್ತಿರುವ ಪೊಲೀಸರು

ತಮಿಳುನಾಡು ಪೊಲೀಸರ ಲಂಚಬಾಕತನಕ್ಕೆ ಬೇಸತ್ತ ವ್ಯಕ್ತಿಯೊರ್ವ ರಾಜ್ಯದ ಗಡಿ ದಾಟಲು ತಮಿಳುನಾಡು ಪೊಲೀಸರು ಹಣ ವಸೂಲಿ ಮಾಡುವ ದೃಶ್ಯಗಳನ್ನು ಮೊಬೈಲ್​​ನಲ್ಲಿ ಸೆರೆ ಹಿಡಿದು ವೈರಲ್ ಮಾಡಿದ್ದಾನೆ.

  • Share this:

ಆನೇಕಲ್(ಆಗಸ್ಟ್​. 23): ಕೊರೋನಾ ವೈರಸ್​ ತಡೆಗಟ್ಟಲು ರಾಜ್ಯ ಸರ್ಕಾರ ಹತ್ತು ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಅದರಲ್ಲೂ ತಮಿಳುನಾಡಿನಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಅಂತರ ರಾಜ್ಯ ಗಡಿ ಚೆಕ್ ಪೋಸ್ಟ್​​​ಗಳಲ್ಲಿ ಹದ್ದಿನ ಕಣ್ಣಿಡಲಾಗಿದೆ. ಆದರೆ, ತಮಿಳುನಾಡು ಪೊಲೀಸರು ಮಾತ್ರ ಗಡಿ ಚೆಕ್ ಪೋಸ್ಟ್​ಗಳಲ್ಲಿ ಹಣ ಪಡೆದು ರಾಜರೋಷವಾಗಿ ರಾಜ್ಯ ಪ್ರವೇಶಕ್ಕೆ ಅನುವು ಮಾಡಿಕೊಡುತ್ತಿರುವ ದಂಧೆ ಸದ್ದಿಲ್ಲದೆ ನಡೆಯುತ್ತಿದ್ದು, ಇದೀಗ ತಮಿಳುನಾಡು ಪೊಲೀಸರ ಲಂಚಾವತಾರ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. 


ಬೆಂಗಳೂರು ಹೊರವಲಯ ಆನೇಕಲ್ ಗಡಿ ತಾಲೂಕು ಆಗಿದ್ದು, ತಮಿಳುನಾಡು ಗಡಿಗೆ ಹೊಂದಿಕೊಂಡಂತೆ ಇದೆ. ಜೊತೆಗೆ ಹೊಸೂರು, ತಳಿ ಮತ್ತು ಬಾಗಲೂರು ಅಂತರ ರಾಜ್ಯ ಗಡಿಗಳನ್ನು ಹಂಚಿಕೊಂಡಿದೆ. ಕೊರೋನಾ ಹಾವಳಿ ನಿಯಂತ್ರಿಸುವ ಸಲುವಾಗಿ ಅತ್ತಿಬೆಲೆ, ಸರ್ಜಾಪುರ ಮತ್ತು ಸೋಲೂರು ಬಳಿ ರಾಜ್ಯದ ಅಧಿಕಾರಿಗಳು ಚೆಕ್ ಪೋಸ್ಟ್ ಸ್ಥಾಪಿಸಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ. ಅದರಲ್ಲೂ ಅತ್ತಿಬೆಲೆ ಚೆಕ್ ಪೋಸ್ಟ್​ನಲ್ಲಿ ತಾಲೂಕು ಆಡಳಿತ ಹದ್ದಿನ ಕಣ್ಣಿಟ್ಟಿದೆ. ಹಾಗಾಗಿ ತಮಿಳುನಾಡಿನಿಂದ ಅಕ್ರಮವಾಗಿ ರಾಜ್ಯ ಪ್ರವೇಶಕ್ಕೆ ಬ್ರೇಕ್ ಹಾಕಲಾಗಿದೆ.


ಅತ್ತ ತಮಿಳುನಾಡು ಪೊಲೀಸರು ಸಹ ಹೊಸೂರಿನ ಸಿಪ್ ಕಾಟ್, ತಳಿ ಬಳಿ ಚೆಕ್ ಪೋಸ್ಟ್ ನಿರ್ಮಿಸಿದ್ದಾರೆ. ಆದರೆ, ಸಮರ್ಪಕವಾಗಿ ತಪಾಸಣೆ ನಡೆಸುತ್ತಿಲ್ಲ ಬದಲಿಗೆ ವ್ಯಕ್ತಿಯೊಬ್ಬರಿಗೆ ಇಂತಿಷ್ಟು ಹಣ ಪಡೆದು ರಾಜ್ಯ ಪ್ರವೇಶಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ತಮಿಳುನಾಡು ಪೊಲೀಸರ ಲಂಚಬಾಕತನಕ್ಕೆ ಬೇಸತ್ತ ವ್ಯಕ್ತಿಯೊರ್ವ ರಾಜ್ಯದ ಗಡಿ ದಾಟಲು ತಮಿಳುನಾಡು ಪೊಲೀಸರು ಹಣ ವಸೂಲಿ ಮಾಡುವ ದೃಶ್ಯಗಳನ್ನು ಮೊಬೈಲ್​​ನಲ್ಲಿ ಸೆರೆ ಹಿಡಿದು ವೈರಲ್ ಮಾಡಿದ್ದಾನೆ.


ಇದನ್ನೂ ಓದಿ : ಜೈಲಿನಲ್ಲಿದ್ದು ಬಂದ ಡಿಕೆಶಿಗೆ ಇನ್ನೊಬ್ಬರ ನೈತಿಕತೆ ಬಗ್ಗೆ ಮಾತನಾಡುವ ಅಧಿಕಾರವಿಲ್ಲ ; ಸಚಿವ ಜಗದೀಶ್ ಶೆಟ್ಟರ್ ವಾಗ್ದಾಳಿ


ತಮಿಳುನಾಡಿನ ಗುಮ್ಮಳಾಪುರ ತಳಿ, ಡೆಂಕಣಿಕೋಟೆ ಮುಂತಾದ ಕಡೆಗಳಿಂದ ರೈತರು ಬೆಳೆದ ಬೆಳೆಗಳನ್ನು ರೈತರು ರಾಜ್ಯದ ಗಡಿ ಪಟ್ಟಣಗಳಲ್ಲಿ ಮಾರಾಟ ಮಾಡುವುದು ಮಾಮೂಲು. ಜೊತೆಗೆ ಕೃಷಿ ಕಾರ್ಮಿಕರು ಸಹ ಗಡಿಯಂಚಿನ ಗ್ರಾಮಗಳಲ್ಲಿ ಕೂಲಿ ಕೆಲಸ ಮಾಡಲು ಹೋಗುವುದು ಸರ್ವೆ ಸಾಮಾನ್ಯ. ಆದರೆ,, ರಾಜ್ಯ ಪ್ರವೇಶಕ್ಕೆ ರಾಜ್ಯ ಸರ್ಕಾರ ಇ ಪಾಸ್ ಕಡ್ಡಾಯಗೊಳಿಸಿದೆ. ಇ ಪಾಸ್ ಇಲ್ಲದೆ ಇದ್ದರೆ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ತಮಿಳುನಾಡು ಪೊಲೀಸರು ಹಣ ಕೊಟ್ಟರೆ ಮಾತ್ರ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡುತ್ತಿದ್ದಾರೆ.


ತಮಿಳುನಾಡಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಈ ಹೊತ್ತಿನಲ್ಲಿ ತಮಿಳುನಾಡಿನಿಂದ ಕನಿಷ್ಠ ಥರ್ಮಲ್ ಸ್ಕ್ರೀನಿಂಗ್ ಸಹ ಮಾಡದೆ ಹಣ ಪಡೆದು ಒಳ ಬಿಡುತ್ತಿರುವುದು ರಾಜ್ಯಕ್ಕೆ ಕೊರೋನಾ ಕಂಠಕ ಮಾತ್ರ ತಪ್ಪಿದ್ದಲ್ಲ. ಹಾಗಾಗಿ ತಮಿಳುನಾಡು ಪೊಲೀಸ್ ಇಲಾಖೆ ಅಧಿಕಾರಿಗಳು ಚೆಕ್ ಪೋಸ್ಟ್​​ಗಳಲ್ಲಿ ಗಮನಹರಿಸಿ ಲಂಚಾವತಾರಕ್ಕೆ ಬ್ರೇಕ್ ಹಾಕಬೇಕಿದೆ.

Published by:G Hareeshkumar
First published: