• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಹೊಸೂರಿನಲ್ಲಿ ಮುತ್ತೂಟ್​ ಫೈನಾನ್ಸ್​​ ಖಜಾನೆಗೆ ಕನ್ನ ಹಾಕಿದ್ದ 6 ಆರೋಪಿಗಳು ಅಂದರ್; 24 ಗಂಟೆಯಲ್ಲಿ ಸೆರೆ

ಹೊಸೂರಿನಲ್ಲಿ ಮುತ್ತೂಟ್​ ಫೈನಾನ್ಸ್​​ ಖಜಾನೆಗೆ ಕನ್ನ ಹಾಕಿದ್ದ 6 ಆರೋಪಿಗಳು ಅಂದರ್; 24 ಗಂಟೆಯಲ್ಲಿ ಸೆರೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಜಿಪಿಎಸ್ ಲೊಕೇಷನ್ ಆಧರಿಸಿ ಹಿಂಬಾಲಿಸಿ ಹೊರಟ ಪೊಲೀಸರಿಗೆ ಹೈದರಾಬಾದ್ ಸಿಟಿಯಿಂದ 20 ಕಿ.ಮಿ ದೂರದಲ್ಲಿ ಲೊಕೇಷನ್ ಪತ್ತೆಯಾಗುತ್ತದೆ. ಸುಮಾರು 30 ಜನರ ಪೊಲೀಸ್ ತಂಡ ಮುಂಜಾನೆ 5 ಗಂಟೆ ಸುಮಾರಿಗೆ ಜಿಪಿಎಸ್ ತೋರಿಸುತ್ತಿರುವ ಲೊಕೇಷನ್​​ ತಲುಪಿ ಪರಿಶೀಲನೆ ನಡೆಸಿದಾಗ ಸಮೀಪವೇ ನಿಂತಿದ್ದ ಕಂಟೇನರ್ ವಾಹನದತ್ತ ಸಂಕೇತಗಳು ಸೂಚಿಸುತ್ತವೆ.

ಮುಂದೆ ಓದಿ ...
  • Share this:

ಆನೇಕಲ್(ಜ.23): ಅವರು ಅಂದುಕೊಂಡಂತೆ ಕೋಟಿ ಬೆಲೆಬಾಳುವ ಚಿನ್ನಕ್ಕೆ ಕನ್ನ ಹಾಕಿದ್ದರು. ಪೊಲೀಸರ ದಿಕ್ಕು ತಪ್ಪಿಸಿ ಗಡಿಯನ್ನೂ ಸಹ ದಾಟಿ ಶರವೇಗದಲ್ಲಿ ಸಾಗುತ್ತಿದ್ದರು. ಆದ್ರೆ ಖದೀಮರು ಬಿಟ್ಟು ಹೋಗಿದ್ದ ಆ ಒಂದು ಸಣ್ಣ ಸುಳಿವು ಪೊಲೀಸರಿಗೆ ವರದಾನವಾಗಿತ್ತು. ಮುತ್ತಿನ ನಗರಿಗೆ ಮುತ್ತಿಕ್ಕುವ ಮೊದಲೇ ಮಾರ್ಗ ಮಧ್ಯೆ ಖಜಾನೆ ಜೊತೆ ಖದೀಮರಿಗೂ ಕೈಕೋಳ ತೊಡಿಸುವಲ್ಲಿ ತಮಿಳುನಾಡು ಪೊಲೀಸರು ಯಶಸ್ವಿಯಾಗಿದ್ದಾರೆ.


ಹೌದು, ಆರೋಪಿಗಳು ತಮಿಳುನಾಡಿನ ಹೊಸೂರಿನ ಬಾಗಲೂರು ರಸ್ತೆಯ ಮುತ್ತೂಟ್ ಫೈನಾನ್ಸ್ ಖಜಾನೆಯನ್ನು ಸಿನಿಮೀಯ ರೀತಿಯಲ್ಲಿ ಖಾಲಿ ಮಾಡಿ ಮುತ್ತಿನ ನಗರಿ ಹೈದರಾಬಾದ್​​ನತ್ತ ಮುಖ ಮಾಡಿದ್ದರು. ಆ ಆರು ಮಂದಿ ದರೋಡೆಕೋರರನ್ನು ಮಾಲು ಸಮೇತ 24 ಗಂಟೆ ಒಳಗೆ ಬಂಧಿಸುವಲ್ಲಿ ತಮಿಳುನಾಡು ಪೊಲೀಸರು ಯಶಸ್ವಿಯಾಗಿದ್ದಾರೆ.


ಇನ್ನು, ಬಂಧಿತ ಆರು ಮಂದಿ ಆರೋಪಿಗಳು ಮಧ್ಯಪ್ರದೇಶ ಮೂಲದವರಾಗಿದ್ದು, ಆರೋಪಿಗಳ ಬಳಿ ಕದ್ದಿದ್ದ ಚಿನ್ನಾಭರಣ, ಆರು ದೇಶೀಯ ಪಿಸ್ತೂಲ್, ಎರಡು ಮಚ್ಚು ಮತ್ತು ಪ್ರಯಾಣಕ್ಕೆ ಬಳಸಿದ್ದ ಕಂಟೇನರ್ ಲಾರಿಯನ್ನು ತಮಿಳುನಾಡು ಪೊಲೀಸರ ಜಫ್ತಿ ಮಾಡಿಕೊಂಡಿದ್ದಾರೆ.


ಬಂಧಿತ ಆರೋಪಿಗಳು ನಿನ್ನೆ ಬೆಳಗ್ಗೆ 9 ಗಂಟೆ ಸುಮಾರಿಗೆ ಹೊಸೂರಿನ ಬಾಗಲೂರು ರಸ್ತೆಯಲ್ಲಿರುವ ಮುತ್ತೂಟ್ ಫೈನಾನ್ಸ್ ಶಾಖೆಗೆ ನುಗ್ಗಿ ಗನ್ ತೋರಿಸಿ, ಹಲ್ಲೆ ನಡೆಸಿ ಕೈಕಾಲು ಕಟ್ಟಿ ಹಾಕಿ ಬೆದರಿಸಿ ಬರೋಬ್ಬರಿ 7.4 ಕೋಟಿ ಮೌಲ್ಯದ 25 ಕೆ ಜಿ ಚಿನ್ನಾಭರಣ ಮತ್ತು 96 ಸಾವಿರ ನಗದು ಜೊತೆಗೆ ಶಾಖೆಯ ಮ್ಯಾನೇಜರ್ ಮೊಬೈಲ್ ಕಸಿದು ಪರಾರಿಯಾಗಿದ್ದರು. ಮುತ್ತೂಟ್ ಫೈನಾನ್ಸ್ ಶಾಖೆಗೆ ಹಣ ತರಲು ಹೋದ ಸ್ನೇಹಿತ ಎಷ್ಟೊತ್ತಾದರೂ ವಾಪಸ್ ಬರಲಿಲ್ಲ ಎಂದು ಸ್ನೇಹಿತನನ್ನು ಹುಡುಕಿಕೊಂಡು ಸ್ಥಳೀಯರೊಬ್ಬರು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.


ವಿಚಾರ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕಾಗಮಿಸಿದ ಹೊಸೂರು ಮತ್ತು ಬಾಗಲೂರು ಪೊಲೀಸರು ಸ್ಥಳ ಪರಿಶೀಲನೆಗೆ ಇಳಿದಿದ್ದರು. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದರು. ಮೊದಲು ದುಷ್ಕರ್ಮಿಗಳ ಪತ್ತೆಗಾಗಿ ಘಟನಾ ಸ್ಥಳದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ ಪೊಲೀಸರಿಗೆ ಆರೋಪಿಗಳ ಚಹರೆ ಮತ್ತು ಕೃತ್ಯಕ್ಕೆ ಬಳಸಿದ್ದ ಬೈಕ್ ನಂಬರ್ ಪತ್ತೆಯಾಗಿತ್ತು.


ಬಳಿಕ ಮುತ್ತೂಟ್ ಫೈನಾನ್ಸ್ ಶಾಖೆ ಮ್ಯಾನೇಜರ್ ಮೊಬೈಲ್ ಟವರ್ ಲೊಕೇಷನ್ ಟ್ಯ್ರಾಕ್ ಮಾಡಲಾಗಿ ಆನೇಕಲ್ ಸಮೀಪದ ಭಕ್ತಿಪುರ ಗ್ರಾಮದ ಬಳಿ ಮೊಬೈಲ್ ಪತ್ತೆಯಾಗಿತ್ತು. ಮೂರನೆಯದಾಗಿ ಚಿನ್ನಾಭರಣಕ್ಕೆ ಅಳವಡಿಸಿದ್ದ ಜಿಪಿಎಸ್ ಡಿವೈಸ್ ಟ್ರ್ಯಾಕ್​ ಮಾಡಿದ  ವೇಳೆ ಆರೋಪಿಗಳು ಹೈದರಾಬಾದ್​​ನತ್ತ ಪ್ರಯಾಣಿಸುತ್ತಿರುವುದು ಜಿಪಿಎಸ್ ಟ್ರ್ಯಾಕಿಂಗ್ ವೇಳೆ ಪತ್ತೆಯಾಗಿದೆ.


ಅನ್ನದಾತರ ಹಠಕ್ಕೆ ಮಣಿದ ಪೊಲೀಸರು; ಗಣರಾಜ್ಯೋತ್ಸವದಂದು ರೈತರು ದೆಹಲಿಯಲ್ಲಿ ಟ್ರ್ಯಾಕ್ಟರ್​ ಮೆರವಣಿಗೆ ಮಾಡಲು ಒಪ್ಪಿಗೆ


ಕೂಡಲೇ ಅಲರ್ಟ್ ಆದ ತಮಿಳುನಾಡು ಪೊಲೀಸರು ಒಂದು ತಂಡವನ್ನು ಮೊಬೈಲ್ ಟವರ್ ಆಧರಿಸಿ ಬೆಂಗಳೂರಿನತ್ತ ಕಳುಹಿಸಿದ್ದಾರೆ. ಎರಡು ತಂಡಗಳನ್ನು ಹೈದರಾಬಾದ್​​ನತ್ತ ರವಾನಿಸಿದ್ದಾರೆ. ಜಿಪಿಎಸ್ ಲೊಕೇಷನ್ ಆಧರಿಸಿ ಹಿಂಬಾಲಿಸಿ ಹೊರಟ ಪೊಲೀಸರಿಗೆ ಹೈದರಾಬಾದ್ ಸಿಟಿಯಿಂದ 20 ಕಿ.ಮಿ ದೂರದಲ್ಲಿ ಲೊಕೇಷನ್ ಪತ್ತೆಯಾಗುತ್ತದೆ. ಸುಮಾರು 30 ಜನರ ಪೊಲೀಸ್ ತಂಡ ಮುಂಜಾನೆ 5 ಗಂಟೆ ಸುಮಾರಿಗೆ ಜಿಪಿಎಸ್ ತೋರಿಸುತ್ತಿರುವ ಲೊಕೇಷನ್​​ ತಲುಪಿ ಪರಿಶೀಲನೆ ನಡೆಸಿದಾಗ ಸಮೀಪವೇ ನಿಂತಿದ್ದ ಕಂಟೇನರ್ ವಾಹನದತ್ತ ಸಂಕೇತಗಳು ಸೂಚಿಸುತ್ತವೆ.


ಕಂಟೇನರ್ ಸುತ್ತವರಿದು ಪರಿಶೀಲನೆ ನಡೆಸಿದಾಗ ಆರೋಪಿಗಳು‌ ನಿದ್ರೆಗೆ ಜಾರಿರುತ್ತಾರೆ. ವಾಹನದ ಕ್ಯಾಬಿನ್​ನಲ್ಲಿ ನಿದ್ರಿಸುತ್ತಿದ್ದ ಇಬ್ಬರನ್ನು ಬಂಧಿಸಿದ ಪೊಲೀಸರು ಕಂಟೇನರ್ ಒಳಗಿದ್ದ ಉಳಿದ ನಾಲ್ವರನ್ನು ಆರೋಪಿಗಳ ನೆರವಿನಿಂದ ಎಚ್ಚರಗೊಳಿಸಿ ಖೆಡ್ಡಾಗೆ ಬೀಳಿಸಿಕೊಂಡಿದ್ದಾರೆ. ಬಳಿಕ ಪೊಲೀಸ್ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಕದ್ದಿದ್ದ  25  ಕೆ ಜಿ ಚಿನ್ನಾಭರಣವನ್ನು ಒಪ್ಪಿಸಿದ್ದು, ಬಂಧಿತರಿಂದ ಆರು ಕಂಟ್ರಿ ಮೇಡ್ ಪಿಸ್ತೂಲ್ ಮತ್ತು ಎರಡು ಮಚ್ಚುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಮಿಳುನಾಡು ಪೊಲೀಸ್ ಮೂಲಗಳು ತಿಳಿಸಿವೆ.


ಒಟ್ಟಿನಲ್ಲಿ ತಮಿಳುನಾಡಿನಾದ್ಯಂತ ಸಂಚಲನ ಮೂಡಿಸಿದ್ದ ಹೊಸೂರು ಮುತ್ತೂಟ್ ಫೈನಾನ್ಸ್ ಶಾಖೆ ಚಿನ್ನ ಕನ್ನ ಪ್ರಕರಣ ಕತ್ತಲಾಗಿ ಬೆಳಗಾಗುವುದರೊಳಗೆ ಸುಖಾಂತ್ಯ ಕಂಡಿದೆ. ಕಳುವಾಗಿದ್ದ 25 ಕೆ ಜಿ ಚಿನ್ನ ಪತ್ತೆಯಾಗಿರುವುದು ಗ್ರಾಹಕರು ನಿಟ್ಟುಸಿರು ಬಿಡುವಂತೆ ಮಾಡಿದೆ. ಜೊತೆಗೆ ತಮಿಳುನಾಡು ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ತಮಿಳುನಾಡು ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಸಹ ಅಭಿನಂಧನೆ ಸಲ್ಲಿಸಿದ್ದಾರೆ.

Published by:Latha CG
First published: