ಚಾಮರಾಜನಗರ: ಕಾವೇರಿ (Cauvery River) ನದಿಯ ತಮಿಳುನಾಡು ಭಾಗದಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದ್ದು, ಇದು ಗುಂಡಿನ ಚಕಮಕಿ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ನದಿಗೆ ಹಾರಿದ ಬೇಟೆಗಾರನ (Hunter) ಶವ ಎಂದು ಗುರುತಿಸಲಾಗಿದೆ. ಕಾವೇರಿ ವನ್ಯಜೀವಿ ವಿಭಾಗದ ಪಾಲಾರ್ ಬಳಿ ತಮಿಳುನಾಡು ಬೇಟೆಗಾರರು ಅಕ್ರಮವಾಗಿ ಪ್ರವೇಶಿದ್ದರು. ಈ ವೇಳೆ ಕರ್ನಾಟಕ ಅರಣ್ಯ ಸಿಬ್ಬಂದಿ (Forest Department) ಮೇಲೆ ಗುಂಡು ಹಾರಿಸಿದ್ದರು ಎಂದು ವರದಿಯಾಗಿದೆ. ಗುಂಡಿನ ಚಕಮಕಿ ಘಟನೆ ಮೂರ್ನಾಲ್ಕು ಮಂದಿ ಬೇಟೆಗಾರರು ತೆಪ್ಪದಲ್ಲಿ (Boat) ಒಂದು ನಾಡಬಂದೂಕು ಹಾಗೂ ಇತರ ಪರಿಕರಗಳನ್ನು ಬಿಟ್ಟು ಕಾವೇರಿ ನದಿಗೆ ಹಾರಿ ಪರಾರಿಯಾಗಿದ್ದರು.
ಈಗ ಪತ್ತೆಯಾದ ಶವ ಬೇಟೆಗಾರನದ್ದು ಎಂದು ಹೇಳಲಾಗಿದ್ದು ತಮಿಳುನಾಡಿನ ಸೇಲಂ ಜಿಲ್ಲೆಯ ಕೊಳತ್ತೂರಿನ ಗೋವಿಂದಪಾಡಿಯ ಎಂ.ರಾಜಾ ಕರವಾಡಯ್ಯನವರ ಎಂದು ಗುರುತಿಸಲಾಗಿದೆ. ಶುಕ್ರವಾರ ನದಿಯಲ್ಲಿ ಶೇವ ತೇಲುತ್ತಾ ಮೇಲೆ ಬಂದ ಪ್ರಕರಣ ಬೆಳಕಿಗೆ ಬಂದಿದೆ. ಶವವನ್ನು ಸೇಲಂ ಪೊಲೀಸರು ಪತ್ತೆ ಮಾಡಿದ್ದಾರೆ.
ಅರಣ್ಯ ಪ್ರದೇಶಕ್ಕೆ ನಾಲ್ವರ ಪ್ರವೇಶ?
ಮರಣೋತ್ತರ ಪರೀಕ್ಷೆಯ ವರದಿಯ ನಂತರವೇ ಸಾವಿಗೆ ಕಾರಣವನ್ನು ಖಚಿತವಾಗಿ ಹೇಳಬಹುದು ಎಂದು ಸೇಲಂ ಪೊಲೀಸ್ ವರಿಷ್ಠಾಧಿಕಾರಿ ಆರ್ ಶಿವಕುಮಾರ್ ಹೇಳಿದ್ದಾರೆ. ಫೆಬ್ರವರಿ 14ರಂದು ಮೃತ ರಾಜಾ ಸೇರಿದಂತೆ ನಾಲ್ಕು ಜನರು ತಮಿಳುನಾಡು-ಕರ್ನಾಟಕ ಗಡಿಯಲ್ಲಿರುವ ಪಾಲಾರ್‌ನಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಈ ವೇಳೆ ನದಿ ದಡದ ಅರಣ್ಯ ಪ್ರದೇಶದಲ್ಲಿ ಬೇಟೆಗೆ ತೆರಳಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಬೇಟೆಗೆ ತೆರಳಿದ್ದ ವೇಳೆ ಕರ್ನಾಟಕ ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದಾರೆ. ಎಲ್ಲರೂ ನದಿಗೆ ಧುಮುಕಿ ಹಿಂದಿರುಗಿದ್ದಾರೆ. ಆದರೆ ರಾಜಾ ಮಾತ್ರ ಮನೆಗೆ ಬಂದಿರಲಿಲ್ಲ. ರಾಜಾ ಮನೆಗೆ ಹಿಂದಿರುಗದ ಹಿನ್ನೆಲೆ ಕುಟುಂಬಸ್ಥರು ಗುರುವಾರ ಮೆಟ್ಟೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಶುಕ್ರವಾರ ರಾಜಾ ಶವ ಪತ್ತೆಯಾಗಿದೆ ಎಂದು ಸೇಲಂನ ಪೊಲೀಸರು ತಿಳಿಸಿದ್ದಾರೆ.
ಇಂದು ಮರಣೋತ್ತರ ಶವ ಪರೀಕ್ಷೆ
ರಾಜಾ ಶವವನ್ನು ಸೇಲಂ ಆಸ್ಪತ್ರೆಗೆ ರವಾನಿಸಲಾಗಿದೆ. ನದಿಯಲ್ಲಿ ಮುಳುಗಿ ಸಾವು ಆಗಿದೆಯಾ ಅಥವಾ ಗುಂಡೇಟಿನಿಂದ ಮರಣ ಸಂಭವಿಸಿದೆಯಾ ಎಂಬ ವಿಷಯ ಮರಣೋತ್ತರ ಶವ ಪರೀಕ್ಷೆಯಲ್ಲಿ ಗೊತ್ತಾಗಲಿದೆ. ಪ್ರಕರಣ ಸಂಬಂಧ ಸೆಕ್ಷನ್ 174 ಅಡಿಯಲ್ಲಿ ದಾಖಲಾಗಿದೆ.
ಈರೋಡ್ ಪೊಲೀಸ್ ವರಿಷ್ಠಾಧಿಕಾರಿ ವಿ.ಶಶಿ ಮೋಹನ್ ಮಾತನಾಡಿ, ಮೃತದೇಹ ಕೊಳೆತಿರುವುದರಿಂದ ಸಾವು ಹೇಗಾಗಿದೆ ಎಂಬುವುದು ಗೊತ್ತಾಗಿಲ್ಲ. ನಾವು ಸಹ ಮರಣೋತ್ತರ ಶವಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.
ಪೊಲೀಸರೇ ಗುಂಡಿಕ್ಕಿ ಕೊಲೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಹಿನ್ನೆಲೆ ಕರ್ನಾಟಕ-ತಮಿಳುನಾಡಿನ ಗಡಿ ಭಾಗದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಗ್ರಾಮಸ್ಥರು ರಸ್ತೆಗೆ ಇಳಿದಿದ್ದರಿಂದ ಕೆಲ ಕಾಲ ವಾಹನ ಸಂಚಾರದಲ್ಲಿ ಅಸ್ತವ್ಯಸ್ತ ಆಗಿತ್ತು.
ಸದ್ಯ ತಮಿಳುನಾಡು-ಕರ್ನಾಟಕ ಗಡಿಯಲ್ಲಿನ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಎರಡು ರಾಜ್ಯಗಳ ನಡುವೆ ಸಂಚಾರ ಸುಗಮವಾಗಿದೆ.
ಈ ಹಿಂದೆಯೂ ಬೇಟೆಗೆ ಬಂದಿದ್ದ ರಾಜಾ?
ಮೃತ ರಾಜಾ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಸ್ನೇಹಿತ ಪಳನಿ ಎಂಬಾತ ಜೊತೆ ರಾಜಾ ಬೇಟೆಗೆ ಹೋಗಿದ್ದನು. ಈ ಸಂದರ್ಭದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಪಳನಿ ಸಾವನ್ನಪ್ಪಿದ್ದನು.
ಇದನ್ನೂ ಓದಿ: Belagavi Farmers: ಎಲೆಕೋಸು ದರ ಕುಸಿತ; ಕಷ್ಟಪಟ್ಟು ಬೆಳೆದ ಬೆಳೆಯನ್ನು ಕುರಿಗಳಿಗೆ ಬಿಟ್ಟ ಅನ್ನದಾತ
5 ಲಕ್ಷ ಪರಿಹಾರ ಘೋಷಣೆ
ತಮಿಳುನಾಡಿನ ಮೀನುಗಾರರ ಮೇಲೆ ಕರ್ನಾಟಕ ಅರಣ್ಯ ಇಲಾಖೆ ಗುಂಡು ಹಾರಿಸಿರುವುದನ್ನು ಖಂಡಿಸಿರುವ ಸಿಎಂ ಎಂಕೆ ಸ್ಟಾಲಿನ್, ರಾಜಾ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಿಪಿಐ ರಾಜ್ಯ ಕಾರ್ಯದರ್ಶಿ ಆರ್ ಮುತರಸನ್, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಮೃತನ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ