ರಸ್ತೆ ಕಾಮಗಾರಿ ವಿಚಾರದಲ್ಲಿ ಹಾಸನ ಸಂಸದ ಮತ್ತು ಶಾಸಕರ ನಡುವೆ ವಾಕ್ಸಮರ

ಪ್ರೀತಂ ಗೌಡ- ಪ್ರಜ್ವಲ್​ ರೇವಣ್ಣ

ಪ್ರೀತಂ ಗೌಡ- ಪ್ರಜ್ವಲ್​ ರೇವಣ್ಣ

ಸಂಸದರ ಈ ಆಕ್ರೋಶಭರಿತ ಮಾತಿಗೆ ನಯವಾಗಿಯೇ ತಿರುಗೇಟು ನೀಡಿರುವ ಬಿಜೆಪಿ ಶಾಸಕ ಪ್ರೀತಮ್​ ಗೌಡ,  ರಾಜಕೀಯ ಭಿನ್ನಾಭಿಪ್ರಾಯ ಇದ್ದರೂ ಸಂಸದರ ಮೇಲೆ ನನ್ನ ಕಾಳಜಿ ಇದೆ.  ಸಂಸದರು ಯಾವುದೇ ಗುಂಡಿ ಇರುವ ರಸ್ತೆಯಲ್ಲಿ ಓಡಾಡಬಾರದು ಎಂದು  ಅವರ ಮನೆ ಮುಂದೆ ಗುಂಡಿ ಮುಚ್ಚಿದ್ದೇವೆ.

  • Share this:

ಹಾಸನ (ನ.13): ತಮ್ಮ ಮನೆ ಮುಂದೆ ಇದ್ದ ಉತ್ತಮ ರಸ್ತೆಯನ್ನು ಕಿತ್ತು, ಮತ್ತೆ ರಸ್ತೆ ಕಾಮಗಾರಿ ಆರಂಭಿಸಿದ ಕುರಿತು ಸಂಸದ ಪ್ರಜ್ವಲ್​ ರೇವಣ್ಣ ನಗರಸಭೆ ವಿರುದ್ಧ ಹರಿಹಾಯ್ದಿದ್ದರು. ಈ ವಿಚಾರ ಈಗ ಸಂಸದ ಮತ್ತು ಬಿಜೆಪಿ ಶಾಸಕ ಪ್ರೀತಂಗೌಡ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ನಗರದ ಸಂಸದರ ನಿವಾಸದ ಸುಮಾರು 30 ಮೀಟರ್ ರಸ್ತೆ ಅಗೆದು ಕಾಮಗಾರಿ ನಡೆಸಲಾಗುತ್ತಿದೆ. ಉತ್ತಮ ರಸ್ತೆಯನ್ನು ಕಿತ್ತು ಮತ್ತೆ ಕಾಮಗಾರಿ ನಡೆಸುವ ಅವಶ್ಯಕತೆ ಏನಿತ್ತು ಎಂದು ಸಂಸದರು ಪ್ರಶ್ನಿಸಿದ್ದಾರೆ, ಅಲ್ಲದೇ, ಇದಕ್ಕೆ ಉತ್ತರಿಸದಿದ್ದರೆ, ಸ್ಥಳದಲ್ಲೇ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ. ಈ  ಸಂಬಂಧ ಈಗಾಗಲೇ ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಮತ್ತು ನಗರಸಭೆ ಆಯುಕ್ತ ಕೃಷ್ಣಮೂರ್ತಿರನ್ನ ತರಾಟೆ ತೆಗೆದುಕೊಂಡರು. ಒಂದು ವೇಳೆ ನಿಮಗೆ ಉತ್ತಮ ರಸ್ತೆ ನಿರ್ಮಿಸಬೇಕು ಎಂದರೆ ಇಡೀ‌ ನಗರದಾದ್ಯಂತ ಗುಂಡಿ ಬಿದ್ದಿದ್ದು, ರಸ್ತೆಯೆಲ್ಲಾ ಹಾಳಾಗಿದೆ. ಕಾಮಗಾರಿ ಮಾಡಿದರೆ ಗುಣಮಟ್ಟದ ಕಾಮಗಾರಿ ಮಾಡಿ ಎಂದು ಒತ್ತಾಯಿಸಿದರು.


ನಗರದಲ್ಲಿರುವ ಗುಂಡಿಗಳನ್ನು ಮುಚ್ಚಬೇಕು ಎಂದು ಟೆಂಡರ್​ ಕರೆದಿದ್ದಾರೆ. ಆದರೆ ಕೇವಲ 30 ಮೀಟರ್ ಕಾಮಗಾರಿ ಮಾಡಲು ಇವರಿಗೆ ಯಾರು ಅನುಮತಿ ಕೊಡಲಾಗಿದೆ. ಈ ಮೂಲಕ ಅಧಿಕಾರಿಗಳು ದುಡ್ಡು ಹೊಡೆಯುವ ದಂಧೆಗೆ ಮುಂದಾಗಿದ್ದಾರೆ ಎಂದು ಕಿಡಿಕಾರಿದರು.


ಇದನ್ನು ಓದಿ: ಬಿಹಾರ ಸರ್ಕಾರ ರಚನೆ ಬಳಿಕ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ನಾಯಕರ ಜತೆ ಚರ್ಚೆ; ಸಿಎಂ ಬಿಎಸ್​ ಯಡಿಯೂರಪ್ಪ


ಸಂಸದರ ಈ ಆಕ್ರೋಶಭರಿತ ಮಾತಿಗೆ ನಯವಾಗಿಯೇ ತಿರುಗೇಟು ನೀಡಿರುವ ಬಿಜೆಪಿ ಶಾಸಕ ಪ್ರೀತಮ್​ ಗೌಡ,  ರಾಜಕೀಯ ಭಿನ್ನಾಭಿಪ್ರಾಯ ಇದ್ದರೂ ಸಂಸದರ ಮೇಲೆ ನನ್ನ ಕಾಳಜಿ ಇದೆ.  ಸಂಸದರು ಯಾವುದೇ ಗುಂಡಿ ಇರುವ ರಸ್ತೆಯಲ್ಲಿ ಓಡಾಡಬಾರದು ಎಂದು  ಅವರ ಮನೆ ಮುಂದೆ ಗುಂಡಿ ಮುಚ್ಚಿದ್ದೇವೆ. ಚೆನ್ನಾಗಿರುವ ರಸ್ತೆಯನ್ನು ಒಡೆದು ಕೆಲಸ ಮಾಡಿಲ್ಲ, ಮುಂದಿನ ದಿನಗಳಲ್ಲಿ ಎಲ್ಲ ಗುಂಡಿಗಳನ್ನು ಮುಚ್ಚಲಾಗುವುದು ಅವರ ಮನೆಯ ಮುಂದಿನ ರಸ್ತೆ ಸರಿಯಾದರೆ ಅವರು ಖುಷಿ ಪಡಬೇಕು ಇದರಲ್ಲಿ ಆತಂಕ ಪಡುವಂಥದ್ದು ಏನಿದೆ ಎಂದು ಸ್ಪಷ್ಟನೆ ನೀಡಿದರು.


ಯಾರು ನಮ್ಮ ನಾಯಕರು, ಜನಪ್ರತಿನಿಧಿಗಳು ಇರುತ್ತಾರೋ ಅವರ ಮನೆ ಮುಂದೆ ಸರಿ ಪಡಿಸಿದ್ದೇವೆ.  ಶಾಸಕನಾಗಿ ನಮ್ಮ‌ ಮನೆಯ ಮುಂದಿನ ರಸ್ತೆಯನ್ನೇ ಸರಿಪಡಿಸಿಲ್ಲ. ಅವರ ಮನೆ ಮುಂದಿನ ರಸ್ತೆಗೆ ಪ್ರಾಮುಖ್ಯತೆ ನೀಡಿದ್ದೇವೆ ಎಂದರು.


ಕ್ಷೇತ್ರದಲ್ಲಿ ಸಂಸದರು ಮತ್ತು ಶಾಸಕರ ನಡುವೆ ಈ ರೀತಿಯ ವಾಕ್ಸಮರಗಳು ಮೊದಲೆನು ಅಲ್ಲ. ಈ ಹಿಂದೆ ಲಾಕ್​ ಡೌನ್ ಸಮಯದಲ್ಲಿ ಬಾರ್ ತೆರೆದಿರುವ ವಿಚಾರಕ್ಕೂ ಕೂಡ  ಯುವ ರಾಜಕಾರಣಿಗಳ ನಡುವೆ ವಾದ-ವಿವಾದ ನಡೆದಿತ್ತು.


(ವರದಿ : ಅಶೋಕ್​ ಕುಮಾರ್​ ಬಿ)

Published by:Seema R
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು