ಬೆಂಗಳೂರು: ಅನುದಾನ ತಾರತಮ್ಯದ ವಿಷಯವಾಗಿ ಇಂದು ವಿಧಾನಸಭೆಯಲ್ಲಿ (Assembly Session) ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಆಡಳಿತ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಈ ವಿಷಯವಾಗಿ ಮಾತು ಆರಂಭಿಸಿದ ಎಚ್.ಡಿ. ರೇವಣ್ಣ ಹಾಗೂ ಶಿವಲಿಂಗೇಗೌಡ ಅವರು ಬಿಜೆಪಿ ಈ ಸರ್ಕಾರ ಅನುದಾನ ತಡೆ ಹಿಡಿದಿದೆ, ಶಾಸಕರ ಕ್ಷೇತ್ರಗಳಿಗೆ ಸರ್ಕಾರ ಅನುದಾನ ಕೊಡುತ್ತಿಲ್ಲ ಎಂದು ಆರೋಪ ಮಾಡಿದರು. ಇದಕ್ಕೆ ಸಚಿವ ಮಾಧುಸ್ವಾಮಿ ಉತ್ತರ ಕೊಡುವ ವೇಳೆ ಮತ್ತಷ್ಟು ಆಕ್ರೋಶ ಹೊರಹಾಕಿದರು. ಶಾಸಕರ ಕ್ಷೇತ್ರಗಳಿಗೆ ಸರ್ಕಾರ ಅನುದಾನ ಕೊಡ್ತಿಲ್ಲ. ಸರ್ಕಾರ ಬರೀ ಲೂಟಿ ಮಾಡ್ತಿದೆ ಅಷ್ಟೇ. ಎರಡು ವರ್ಷಗಳಿಂದಲೂ ನಮಗೆ ಅನುದಾನ ಸಿಕ್ಕಿಲ್ಲ. ಅಧ್ಯಕ್ಷರೇ ನೀವು ಅನುದಾನ ಕೊಡಿಸಿ ಎಂದು ಕಿಡಿಕಾರಿದರು.
ನಿಯಮ 69 ರಡಿ ಚರ್ಚೆಗೆ ಉತ್ತರ ನೀಡಲು ಕಾನೂನು ಸಚಿವ ಮಾಧುಸ್ವಾಮಿ ಮುಂದಾದರು. ಈ ಸಂದರ್ಭದಲ್ಲಿ ಹೆಚ್.ಡಿ ರೇವಣ್ಣ ಆಕ್ಷೇಪ ವ್ಯಕ್ತಪಡಿಸಿ, ಹಣಕಾಸು ಮಂತ್ರಿಗಳು ಇಲ್ಲೆ ಇದ್ದಾರೆ. ಅವರೇ ಉತ್ತರ ಕೊಡಲಿ. ಮಾಜಿ ಸಿಎಂ ಹಾಗೂ ಹಾಲಿ ಸಿಎಂ ಭರವಸೆ ಕೊಟ್ಟಿದ್ದರು. ಹಾಗಾಗಿ ಅವರೇ ಉತ್ತರ ಕೊಡಲಿ. ಅನುದಾನ ಕೊಡಲ್ಲ ಅಂತಾದ್ರೂ ಹೇಳಲಿ. ನಾವು ಅದನ್ನ ಕೇಳಿಕೊಂಡು ಹೋಗುತ್ತೇವೆ. ಎಲ್ಲವೂ ಗೋವಿಂದ, ಗೋವಿಂದ ಎಂದು ಹೇಳಿದರು.
ನಾನು ಮಾತು ಶುರು ಮಾಡ್ತೇನೆ. ಪೂರ್ತಿ ಉತ್ತರ ಸಿಎಂ ಕೊಡುತ್ತಾರೆ ಎಂದ ಸಚಿವ ಮಾಧುಸ್ವಾಮಿ, ನೀವು ಎದೆ ಮುಟ್ಟುಕೊಂಡು ಹೇಳಿ. ನೀವು ಹಿಂದೆ ಅಧಿಕಾರದಲ್ಲಿ ಇದ್ದಾಗ ಇದೇ ರೀತಿ ಎಲ್ಲರಿಗೂ ಅನುದಾನ ಕೊಟ್ಟಿದ್ರಾ ಅಂತಾ..? 18-19ರಲ್ಲಿ ಬಿಜೆಪಿ ಶಾಸಕರು 106 ಜನ ಇದ್ರು. ಅವಾಗ 2986 ಕೋಟಿ ಕೊಟ್ಟಿದ್ದಿರಿ. ಅಂದರೆ ತಲಾ ಒಬ್ಬೊಬ್ಬರಿಗೆ 28 ಕೋಟಿ ರೂಪಾಯಿ. ಜೆಡಿಎಸ್ನಲ್ಲಿ 37 ಜನರ ಶಾಸಕರಿದ್ದರು. ಅವರಿಗೆ ನೀಡಿದ್ದು, 2974 ಕೋಟಿ,
ಅಂದರೆ ಒಬ್ಬೊಬ್ಬರಿ ತಲಾ 80 ಕೋಟಿ ಎಂದು ಹಿಂದಿನ ಮೈತ್ರಿ ಸರ್ಕಾರದಲ್ಲಿ ಬಿಡುಗಡೆಯಾಗಿದ್ದ ಅನುದಾನವನ್ನು ವಿವರಣೆ ನೀಡುವ ಮೂಲಕ ಜೆಡಿಎಸ್ ಸದಸ್ಯರಿಗೆ ತಿರುಗೇಟು ನೀಡಿದರು.
ಈ ವೇಳೆ ರೇವಣ್ಣ ಮಧ್ಯಪ್ರವೇಶ ಮಾಡಿದಾಗ, ರೇವಣ್ಣ ಏನ್ರೀ ಉತ್ತರ ಕೇಳ್ತಿರಿ ನಿಂತ್ಕೊಂಡು..? ನಮಗೆ ಏನು ಬೇರೆ ಕೆಲಸ ಇಲ್ವಾ..? ನಮಗೇ ಏನು ಎಂಎಲ್ಎಗಳು ಇಲ್ವಾ..? ಎಂಬ ಮಾಧುಸ್ವಾಮಿ ಹೇಳಿಕೆಗೆ ಜೆಡಿಎಸ್ ಸದಸ್ಯರ ಆಕ್ಷೇಪ ವ್ಯಕ್ತಪಡಿಸಿದರು. ಆಗ ಸದನದಲ್ಲಿ ಗದ್ದಲ ಏರ್ಪಟ್ಟಿತು. ಈ ವೇಳೆ ಮಾಧುಸ್ವಾಮಿ ಹಾಗೂ ಹೆಚ್ ಡಿ ರೇವಣ್ಣ ನಡುವೆ ವಾಗ್ವಾದ ನಡೆಯಿತು.
CRF ಗೆ ನೀವು ಎಷ್ಟು ದುಡ್ಡು ಕೊಟ್ಟಿದ್ರಿ..? ಅವತ್ತಿನ ನಿಮ್ ಬಜೆಟ್ ಪ್ರಾವೀಸನ್ ಎಷ್ಟಿತ್ತು..? 3 ಸಾವಿರ ಕೋಟಿ ದುಡ್ಡು ಇಟ್ಟುಕೊಂಡು, ಎಷ್ಟು ಕೊಟ್ಟಿದ್ರು ಎಂದು ಅವ್ರು ಕೇಳಬೇಕು. ಇವ್ರು ಮಾಡಿದ್ದೆಲ್ಲಾ ನಾವು ಬಾಚಾಕೋಕೆ ಇದ್ದೀವಾ..? ಏನ್ ಮಾಡಬೇಕು ಪಿಡಬ್ಲೂಡಿ ಇಲಾಖೆ..? ಎಂದು ಮಾಧುಸ್ವಾಮಿ ಹೇಳಿದಾಗ ಕಾನೂನು ಸಚಿವರು ಸ್ವಲ್ಪ ಹೀಲ್ಡ್ ಆಗಬೇಕು ಎಂದು ರೇವಣ್ಣ ಹೇಳಿದಾಗ ಮತ್ತೆ ಸಿಟ್ಟಾದ ಮಾಧುಸ್ವಾಮಿ, ಗವರ್ನಮೆಂಟ್ ಗೆ ಏನು ದುಡ್ಡು ಸುರಿಯುತ್ತಾ..? ರೇವಣ್ಣ ಏನು ಬೇಕಾದರೂ ಮಾಡಿದ್ರೆ ಆಗುತ್ತೆ ಅಂತಾ ಎಲ್ಲೆಲ್ಲಿ ಬೇಕೋ ಅಲ್ಲಿ ಮಕ್ಕಳು ಹುಟ್ಟಿಸಿ ಹೋಗ್ಬಿಟ್ರೆ ಅವ್ರಿಗೆಲ್ಲ ಹೆಸರು ಕಟ್ಟೋರು ಯಾರಾಪ್ಪ? ಅವರಿಗೆ ಆಮೇಲೆ ಆಸ್ತಿ ಹಂಚಿಕೊಡೋದು ಯಾರು..? ಎಂದು ಪ್ರಶ್ನಿಸಿದರು.
ಇದನ್ನು ಓದಿ: Explained: ಅಧಿಕೃತ ಲಸಿಕೆ ಪಡೆದವರು ಮಾತ್ರ ಅಮೆರಿಕಗೆ ಹೋಗಬಹುದು; ಭಾರತದಲ್ಲಿ ಯಾವ ವ್ಯಾಕ್ಸಿನ್ ಅನುಮೋದನೆ ಪಡೆದಿದೆ?
ಈ ವೇಳೆ ಸಿಆರ್ಎಫ್ ಫಂಡ್ ಬಗ್ಗೆ ದಾಖಲೆ ಇಡಿ. ನನ್ನಿಂದ ತಪ್ಪಾಗಿದ್ರೆ ಈ ಸದನದಲ್ಲಿ 5 ನಿಮಿಷನೂ ನಾನು ಇರಲ್ಲ ಎಂದು ಮಾಧುಸ್ವಾಮಿಗೆ ರೇವಣ್ಣ ತಿರುಗೇಟು ನೀಡಿದರು. ಯಾವುದೇ ಒಂದು ಜಿಲ್ಲೆಯಲ್ಲಿ ರಾಜಕಾರಣ ಮಾಡಬೇಕು ಯಾವುದೇ ಮಂತ್ರಿಗಳು ಇಲ್ಲಿ ಮಾಡ್ತಿಲ್ಲ. ಕಾಮಗಾರಿ ಟೆಂಡರ್ ಆಗಿದ್ದರ ಬಗ್ಗೆ ಬೇಕಿದ್ರೆ ದುಡ್ಡು ಕೊಡ್ತೇವೆ. ಅದು ಬಿಟ್ಟು ಟೆಂಡರ್ ಆಗದೆ ಇರುವ ಕಾಮಗಾರಿಗೆ ಎಲ್ಲಿಂದ ಅದಕ್ಕೆ ದುಡ್ಡು ಕೊಡೋದು..? ಹಣಕಾಸಿನ ಪರಿಸ್ಥಿತಿ ಹೇಗಿದೆ ಇವಾಗ ರಾಜ್ಯದಲ್ಲಿ..? ಎಂದು ಸಚಿವ ಮಾಧುಸ್ವಾಮಿ ಉತ್ತರ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ