ಉತ್ತರ ಕರ್ನಾಟಕದಲ್ಲಿ ಮತ್ತೆ ಭಾರೀ ಮಳೆ: ಸಂತ್ರಸ್ತರ ರಕ್ಷಣೆಗೆ ಅಗತ್ಯಬಿದ್ದರೆ ಎನ್​​ಡಿಆರ್​​ಎಫ್​​ ನಿಯೋಜಿಸಿ; ಡಿಸಿಗಳಿಗೆ ಸಿಎಂ ಸೂಚನೆ

ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ನೀವು ಮಳೆಯಾಗುತ್ತಿರುವ ಪ್ರದೇಶಗಳಿಗೆ ತೆರಳಬೇಕು. ಅಲ್ಲಿನ ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಬೇಕು- ಡಿಸಿಗಳಿಗೆ ಸಿಎಂ ಸೂಚನೆ

news18-kannada
Updated:October 22, 2019, 12:49 PM IST
ಉತ್ತರ ಕರ್ನಾಟಕದಲ್ಲಿ ಮತ್ತೆ ಭಾರೀ ಮಳೆ: ಸಂತ್ರಸ್ತರ ರಕ್ಷಣೆಗೆ ಅಗತ್ಯಬಿದ್ದರೆ ಎನ್​​ಡಿಆರ್​​ಎಫ್​​ ನಿಯೋಜಿಸಿ; ಡಿಸಿಗಳಿಗೆ ಸಿಎಂ ಸೂಚನೆ
ಯಡಿಯೂರಪ್ಪ
  • Share this:
ಬೆಂಗಳೂರು(ಅ.22): ಉತ್ತರ ಕರ್ನಾಟಕದ ಭಾಗದಲ್ಲಿ ಮತ್ತೆ ಭಾರೀ ಮಳೆಯಾಗುತ್ತಿದೆ. ಬೆಳಗಾವಿ, ಗದಗ, ಬಾಗಲಕೋಟೆ, ವಿಜಯಪುರದ ಭಾಗದಲ್ಲಿ ಧಾರಾಕಾರ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ಅಲ್ಲದೇ ರಾತ್ರಿಯಿಡೀ ಸುರಿದ ಮಳೆಗೆ ಎಷ್ಟೋ ಗ್ರಾಮಗಳು ಮುಳುಗಡೆಯಾಗಿವೆ. ಇನ್ನೂ ಮೂರು ದಿನಗಳ ಕಾಲ ಈ ಭಾಗದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಹಾಗಾಗಿ ಮುಂಜಾಗ್ರತೆ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

"ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ನೀವು ಮಳೆಯಾಗುತ್ತಿರುವ ಪ್ರದೇಶಗಳಿಗೆ ತೆರಳಬೇಕು. ಅಲ್ಲಿನ ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಬೇಕು. ಕಾಳಜಿ ಕೇಂದ್ರದಲ್ಲಿ ಅಗತ್ಯ ಸೌಕರ್ಯ ಒದಗಿಸಬೇಕು. ಮಳೆಯಿಂದ ಅನಾಹುತಗಳ ತಡೆಗೆ ಕಟ್ಟೆಚ್ಚರ ವಹಿಸಬೇಕು. ಅಗತ್ಯತೆ ಇರುವ ಪ್ರದೇಶಗಳಲ್ಲಿ ಎನ್​​ಡಿಆರ್​​ಎಫ್​ ನಿಯೋಜಿಸಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ಸಮಸ್ಯೆಯಾಗಬಾರದು" ಎಂದು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸಿಎಂ ಫರ್ಮಾನು ಹೊರಡಿಸಿದ್ದಾರೆ.

ಮೂರು ತಿಂಗಳ ಹಿಂದೆ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದಲ್ಲಿ ಸುರಿದ ಭಾರೀ ಮಳೆಯಿಂದ ಕೃಷ್ಣಾ ನದಿಯ ತಟದ ಊರುಗಳಲ್ಲಿ ಪ್ರವಾಹ ಉಂಟಾಗಿತ್ತು. ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿ, ವಿಜಯಪುರ ಭಾಗದಲ್ಲಿ ಜನರು ಜಮೀನು, ಮನೆ ಕಳೆದುಕೊಂಡಿದ್ದರು. ಪ್ರವಾಹ ಪೀಡಿತರಿಗೆ ಸರ್ಕಾರದಿಂದ ಸರಿಯಾದ ಸಮಯದಲ್ಲಿ ಪರಿಹಾರ ಸಿಗದೆ ಜನರು ಪರದಾಡಿದ್ದರು. ಇನ್ನೇನು ಪರಿಸ್ಥಿತಿ ಸುಧಾರಿಸುತ್ತಿದೆ ಎನ್ನುವಷ್ಟರಲ್ಲಿ ಮತ್ತೆ ಮಳೆಯ ಅಬ್ಬರ ಶುರುವಾಗಿದೆ. ರಾಜ್ಯದಲ್ಲಿ ಇನ್ನೂ 3ರಿಂದ 4 ದಿನ ಮಳೆ ಮುಂದುವರೆಯುವ ಸಾಧ್ಯತೆಯಿದೆ. ಮುಂಜಾಗ್ರತಾ ಕ್ರಮವಾಗಿ 15 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ.

ಮಲಪ್ರಭಾ ನದಿಯಲ್ಲಿ ಹೆಚ್ಚಾದ ಪ್ರವಾಹದಿಂದ ಬಾದಾಮಿಯ 40 ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನನದಿ ತೀರದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಶಿವಯೋಗ ಮಂದಿರ ಬಳಿ ಸೇತುವೆ ಮುಳುಗಡೆಯಾಗಿದ್ದು, 10ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಇದರಿಂದಾಗಿ ಮಲಪ್ರಭಾ ನದಿ ತೀರದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಚೊಳಚಗುಡ್ಡ ಸೇತುವೆ ಜಲಾವೃತವಾಗಿ ಸಂಚಾರ ಬಂದ್ ಆಗಿದೆ. ಗದಗ-ಬಾಗಲಕೋಟೆ ಸಂಪರ್ಕಿಸೋ ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮುಳುಗಡೆಯಾಗಿದೆ. ಇದರಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ಇದನ್ನೂ ಓದಿ: ಮಲಪ್ರಭಾ ತೀರದಲ್ಲಿ ಹೈ ಅಲರ್ಟ್​; ಬದಾಮಿಯ ನೆರೆಪೀಡಿತ ಪ್ರದೇಶಗಳಿಗೆ ಇಂದು ಸಿದ್ದರಾಮಯ್ಯ ಭೇಟಿ

ಮಲಪ್ರಭಾ ನದಿಯಿಂದ ಏಕಾಏಕಿ ನೀರು ಬಿಡುಗಡೆ ಮಾಡಿರುವುದರಿಂದ ಸವದತ್ತಿ, ರಾಮದುರ್ಗ ತಾಲೂಕಿನಲ್ಲಿ ಪ್ರವಾಹ ಸ್ಥಿತಿ ಎದುರಾಗಿದೆ. ನೀರು ಬಿಟ್ಟ ಮೇಲೆ ಊರು ಖಾಲಿ ಮಾಡಿ ಅಂತಾರೆ. ರಾತ್ರಿ ವೇಳೆ ನಾವು ಮನೆ ಖಾಲಿ ಮಾಡೋದು ಹೇಗೆ? ಎಂದು ಹಿರೇ ಹಂಪಿಹೋಳಿ, ಚಿಕ್ಕ ಹಂಪಿಹೋಳಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರವಾಹ ಹೊಡೆತಕ್ಕೆ ಸಿಕ್ಕಿ ಇನ್ನೂ ಚೇತರಿಸಿಕೊಳ್ಳುತ್ತಿದ್ದೇವೆ. ಮತ್ತೆ ಪರಿಹಾರ ಕೇಂದ್ರ ಸೇರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮಲಪ್ರಭಾ ಡ್ಯಾಂ ಅಧಿಕಾರಿ, ಜಿಲ್ಲಾಡಳಿತ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕೊಡಗಿನಲ್ಲಿ ಭಾರೀ ಮಳೆಯಿಂದಾಗಿ ಮತ್ತೆ ಭೂಕುಸಿತದ ಆತಂಕ ಶುರುವಾಗಿದೆ. ಮಂಗಳೂರು-ಮಡಿಕೇರಿ ರಸ್ತೆಯ ಜೋಡುಪಾಲ ಬಳಿಯೂ ಭೂಕುಸಿತವಾಗಿದೆ. ಭಾಗಮಂಡಲ, ತಲಕಾವೇರಿ ಮತ್ತು ಬ್ರಹ್ಮಗಿರಿ ಬೆಟ್ಟಪ್ರದೇಶಗಳಲ್ಲಿ ಧಾರಕಾರ ಮಳೆ ಸುರಿಯುತ್ತಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ತುಂಬಿ ಹರಿಯುತ್ತಿದೆ.-----------
First published:October 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ