ಸುತ್ತೂರು ಜಾತ್ರಾ ಮಹೋತ್ಸವದ 3ನೇ ದಿನದಂದು ಅದ್ದೂರಿ ರಥೋತ್ಸವ, ವಿವಿಧ ಜಾನಪದ ಕಲಾಪ್ರಕಾರಗಳ ಮೆರಗು

ಇವತ್ತು ಸರ್ವಧರ್ಮಗಳ ಗುರುಗಳ ಧಾರ್ಮಿಕ ಸಭೆ ನಡೆಯಿತು. ಒಂದೇ ವೇದಿಕೆಯಲ್ಲಿ ಸರ್ವಧರ್ಮಗಳ ಸಮನ್ವಯವಾಗಿತ್ತು. ಶ್ರವಣಬೆಳಗೊಳದ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿ ಸೇರಿದಂತೆ ಹಲವು ಧರ್ಮ ಗುರುಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ಧಾರೆ.

ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಕಂಗೊಳಿಸುತ್ತಿರುವ ಮೈಸೂರು

ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಕಂಗೊಳಿಸುತ್ತಿರುವ ಮೈಸೂರು

  • News18
  • Last Updated :
  • Share this:
ಮೈಸೂರು(ಜ. 23): ಸಾಂಸ್ಕೃತಿಕ ನಗರಿಯಲ್ಲಿ 2020ರ ಸಾಲಿನ ಸುತ್ತೂರು ಜಾತ್ರಾಮಹೋತ್ಸವ ಇಂದು 3ನೇ ದಿನಕ್ಕೆ ಕಾಲಿಟ್ಟಿದೆ. ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಹೆಸರಿನಲ್ಲಿ ನಡೆಯಲಿರುವ ಜಾತ್ರಾಮಹೋತ್ಸವದಲ್ಲಿ ವಿವಿಧ ಕಾರ್ಯಕ್ರಮಗಳು ನೆರವೇರುತ್ತಿವೆ. ನಂಜನಗೂಡು ತಾಲೂಕಿನ ಸುತ್ತೂರು ಕ್ಷೇತ್ರದಲ್ಲಿರುವ ಗದ್ದುಗೆ ಮಠದ ಆವರಣದಲ್ಲಿ ಜ. 21ರಂದು ಪ್ರಾರಂಭಗೊಂಡ ಈ ಜಾತ್ರಾಮಹೋತ್ಸವ ಜನವರಿ 26ರವರೆಗೆ ವಿಜೃಂಭಣೆಯಿಂದ ಜರುಗಲಿದೆ.

ಇಂದು ಮೂರನೇ ದಿನದಂದು ಶ್ರೀ ಶಿವರಾತ್ರಿ ಶಿವಯೋಗಿಗಳ ರಥೋತ್ಸವದಂದು ಶ್ರೀಗಳ ಉತ್ಸವ ಮೂರ್ತಿಯನ್ನು ಸರ್ವಾಲಂಕೃತ ರಥದಲ್ಲಿರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಸುತ್ತೂರು ಮಠಾಧೀಶ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು. ನಂದಿ ಧ್ವಜ, ವೀರಗಾಸೆ, ಡೊಳ್ಳು ಕುಣಿತ, ಪೂಜಾ ಕುಣಿತ, ಕಂಸಾಳೆ, ಗಾರುಡಿ ಗೊಂಬೆಗಳು ಸೇರಿದಂತೆ ಹತ್ತಾರು ಜನಪದ ಕಲಾಪ್ರಾಕಾರಗಳು ಇವತ್ತು ಮೆರಗು ನೀಡಿವೆ.

ಇವತ್ತು ಸರ್ವಧರ್ಮಗಳ ಗುರುಗಳ ಧಾರ್ಮಿಕ ಸಭೆ ನಡೆಯಿತು. ಒಂದೇ ವೇದಿಕೆಯಲ್ಲಿ ಸರ್ವಧರ್ಮಗಳ ಸಮನ್ವಯವಾಗಿತ್ತು. ಶ್ರವಣಬೆಳಗೊಳದ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿ ಸೇರಿದಂತೆ ಹಲವು ಧರ್ಮ ಗುರುಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ಧಾರೆ. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ಮಾಜಿ ಸಂಸದ ಧ್ರುವ ನಾರಾಯಣ, ಶಾಸಕರಾದ ಬಿ.ಸಿ. ಪಾಟೀಲ್, ಸೌಮ್ಯಾ ರೆಡ್ಡಿ ಮೊದಲಾದ ರಾಜಕೀಯ ನೇತಾರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ: ಮೌಢ್ಯ ವಿರೋಧಿ ಕಾಯ್ದೆ ಜಾರಿಗೊಳಿಸಿದ ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಅಭಿನಂದನೆ; ಬಿಜೆಪಿಗೆ ಈಗ ಜ್ಞಾನದೋಯವಾಗಿದೆ ಎಂದ ಮಾಜಿ ಸಿಎಂ

ಜಾತ್ರಾ ಮಹೋತ್ಸವಕ್ಕೆ ಸುಮಾರು 10 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಎಲ್ಲರಿಗೂ ಮೂಲಭೂತ ಸೌಕರ್ಯ ಒದಗಿಲಸಾಗಿದೆ. ಆರು ದಿನಗಳ ಕಾಲ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ರಥೋತ್ಸವ, ತೆಪ್ಪೋತ್ಸವ,ಕೊಂಡೋತ್ಸವ, ವಿಶೇಷ ಪೂಜಾ ಕೈಂಕರ್ಯದ ಜೊತೆ ವೈವಿಧ್ಯಮಯ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆ ಜರುಗಲಿವೆ. ರಂಗೋಲಿ, ಸೋಬಾನೆ ಪದ, ದೇಸಿ ಆಟಗಳ ಸ್ಪರ್ಧೆ, ದನಗಳ ಜಾತ್ರೆ, ಚಿತ್ರಕಲಾಸ್ಪರ್ಧೆ, ಕೃಷಿಮೇಳ, ವಸ್ತುಪ್ರದರ್ಶನ,ಕುಸ್ತಿ ಪಂದ್ಯಾವಳಿ ಜೊತೆ ಸಾಮೂಹಿಕ ವಿವಾಹ ಕಾರ್ಯಕ್ರವು ನೆರವೇರುತ್ತದೆ. ಈ ಎಲ್ಲ ಕಾರ್ಯಕ್ರಮಗಳು ಹಾಲಿ ಸುತ್ತೂರು ಪೀಠಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನೆರವೇರಲಿದೆ.

ಸುತ್ತೂರು ಜಾತ್ರಾಮಹೋತ್ಸವದಲ್ಲಿ ನಿನ್ನೆ ಸಾಮೂಹಿಕ ವಿವಾಹ ನೆರವೇರಿತು. 178 ಜೋಡಿಗಳು ಹೊಸಬಾಳಿಗೆ ಕಾಲಿಟ್ಟರು. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾದ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ, ಆರ್‌ಎಸ್‌ಎಸ್ ಮಹಾ ಜಂಟಿ ಕಾರ್ಯದರ್ಶಿ ಮುಕುಂದ್ ಭಾಗಿಯಾಗಿ ವಧೂ ವರರಿಗೆ ಆಶೀರ್ವಾದ ಮಾಡಿದರು. ಕಾರ್ಯಕ್ರಮದಲ್ಲಿ ವಧು ವರರಿಗೆ ಮಾಂಗಲ್ಯ ವಿತರಣೆ ಮಾಡಿದ ದೇವೇಗೌಡ, ವೀರೇಂದ್ರ ಹೆಗಡೆ, ಸುತ್ತೂರು ಶ್ರೀ ಹೊಸ ದಂಪತಿಗಳ ಹೊಸ ಜೀವನಕ್ಕೆ ಸಾಕ್ಷಿಯಾದರು. ಮದುವೆ ನಂತರ ಆರ್‌ಎಸ್ಎಸ್‌ ಮಹಾ ಜಂಟಿ ಕಾರ್ಯದರ್ಶಿ ಮುಕುಂದ್ ಅವರು ಪ್ರತಿಜ್ಞಾ ವಿಧಿ ಬೋಧಿಸಿ ಶುಭಹಾರೈಕೆ ನೀಡಿದರು. ಈ ವೇಳೆ ಮಾಜಿ ಸಚಿವ ಸಿ.ಎಸ್‌. ಪುಟ್ಟರಾಜು, ವಿಧಾನಪರಿಷತ್‌ ಸದಸ್ಯ ರಘು ಆಚಾರ್, ಕನಕಪುರದ ದೇಗುವ ಮಠದ ಮುಮ್ಮುಡಿ ನಿರ್ವಾಣ ಶ್ರೀಗಳು ಹಾಜರಿದ್ದರು.

ನಿನ್ನೆಯ ಸಾಮೂಹಿಕ ವಿವಾಹದಲ್ಲಿ ಪರಿಶಿಷ್ಠ ಪಂಗಡದ 11, ಪರಿಶಿಷ್ಠ ಜಾತಿಯ 106, ಹಿಂದುಳಿದ ವರ್ಗದ 33, ವೀರಶೈವರ 11, ಅಂತರಜಾತಿಯ 11, ಅಂಗವಿಕಲ 5, ತಮಿಳುನಾಡಿನ 2 ಹಾಗೂ 2 ವಿದಾವ  ಜೋಡಿಗಳು ಹೊಸಬಾಳಿಗೆ ಕಾಲಿಟ್ಟರು. ಸಾಮೂಹಿಕ ವಿವಾಹದ ಕುರಿತು ವೀರೇಂದ್ರ ಹೆಗ್ಗಡೆಯವರು ಮೆಚ್ಚುಗೆ ವ್ತಕ್ತಪಡಿಸಿದರು.

ಮದುವೆ ಅನ್ನೋದು ದೊಡ್ಡ ಜವಾಬ್ದಾರಿ. ಅದೆಷ್ಟೋ ಜನರು ಮದುವೆ ಮಾಡಿ ಸಾಲಗಾರರಾರುತ್ತಾರೆ. ಎಲ್ಲರೂ ಸರಳವಾಗಿ ಮದುವೆ ಆಗಿ ಹಣ ಉಳಿಸಿ. ನಿಮ್ಮ ಮದುವೆ ಈಗ ಅದ್ದರಿಯಾಗಿಯೇ ಆಗಿದೆ. ಮಾಜಿ ಪ್ರಧಾನಿಗಳು, ಖುಷಿಮುನಿಗಳು ಎಲ್ಲರೂ ನಿಮ್ಮ ಮದುವೆಗೆ ಸಾಕ್ಷಿಯಾಗಿದ್ದಾರೆ ಎಂದು ನವದಂಪತಿಗೆ ಶುಭಹಾರೈಸಿದರು. ಇನ್ನು, ಸಾಮೂಹಿಕ ವಿವಾಹದಲ್ಲಿ ಮದುವೆ ಆದ ನವಜೋಡಿಗಳು, “ನಮ್ಮ ಆಸೆಯಂತೆ ಮದುವೆ ಆಗಿದೆ. ನಮ್ಮ ಮದುವೆಗೆ ಮಾಜಿ ಪ್ರಧಾನಿ ಅವರೇ ಬಂದು ಆರ್ಶಿವಾದ ಮಾಡಿದ್ದಾರೆ. ಎಲ್ಲರು ಹೀಗೆ ಸರಳವಾಗಿ ಮದುವೆ ಆಗಿ” ಎಂದು ಸಂತಸ ವ್ಯಕ್ತಪಡಿಸುತ್ತಾರೆ. \

ಇದನ್ನೂ ಓದಿ: ಭದ್ರ ನದಿ ಸೇರುತ್ತಿದೆ ಮಾಂಸ ತ್ಯಾಜ್ಯ; ಮೊಸಳೆ ಭೀತಿಯಲ್ಲಿ ಚಿಕ್ಕಮಗಳೂರಿನ ಜನರು

ಇವೆಲ್ಲದರ ಜೊತೆ ಜಾತ್ರೆ ನಿನ್ನೆ ಎರಡನೇ ದಿನದಿಂದಲೇ ಕಳೆಗಟ್ಟಿದ್ದು ಲಕ್ಷಾಂತರ ಮಂದಿ ಆಗಮಿಸುತ್ತಿದ್ದಾರೆ. ಭಕ್ತಾದಿಗಳಿಗಾಗಿ ಮಹಾಪ್ರಸಾದ ವಿತರಣೆಯಾಗುತ್ತಿದ್ದು, ಸಿಹಿ ಪಂಗಲ್, ಉಪ್ಪಿಟ್ಟನ್ನ ಬೆಳಗಿನ ಪ್ರಸಾದವಾಗಿ, ಮಧ್ಯಾಹ್ನ ತರಕಾರಿ ಹುಳಿ, ಪಾಯಸ, ಬೂಂದಿ, ಅನ್ನ ಸಂಬಾರ್, ಮಜ್ಜಿಗೆ, ಉಪ್ಪಿನಕಾಯಿ ಹಾಗೂ ರಾತ್ರಿ ಅನ್ನಸಾಂಬಾರ್ ಪಾಯಿಸ ಹಾಗೂ ಒಂದು ಸಿಹಿಯನ್ನ ಪ್ರಸಾದದ ರೂಪದಲ್ಲಿ ನೀಡಲಾಗುತ್ತಿದೆ. ಇದಕ್ಕಾಗಿ 1500 ಕ್ವಿಂಟಾಲ್‌ ಅಕ್ಕಿಯ ಜತೆಗೆ ಗಂಗಾವತಿಯಿಂದ 1000 ಕ್ವಿಂಟಾಲ್‌ ಸೋನಾ ಮಸೂರಿ ಅಕ್ಕಿ. 15 ಲೀಟರ್‌ ಸಾಮರ್ಥ್ಯದ 1200 ಟಿನ್‌ ಅಡುಗೆ ಎಣ್ಣೆ, ಬೆಳಗಾವಿ ಜಿಲ್ಲೆ ಬನಹಟ್ಟಿಯಿಂದ 12 ಟನ್‌ ಬಕೆಟ್‌ ಬೆಲ್ಲ, 150 ಕ್ವಿಂಟಾಲ್‌ ತೊಗರಿಬೇಳೆ, 15 ಸಾವಿರ ತೆಂಗಿನ ಕಾಯಿ, 8 ಕ್ವಿಂಟಾಲ್‌ ಗೋಡಂಬಿ ದ್ರಾಕ್ಷಿಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ.

ಪ್ರತಿದಿನದ ಪ್ರಸಾದಕ್ಕಾಗಿ 6 ರಿಂದ 7 ಸಾವಿರ ಲೀಟರ್‌ ಹಾಲು, 25 ಸಾವಿರ ಲೀಟರ್‌ ಮೊಸರು, ಸಾಂಬಾರಿಗಾಗಿ ಪಾಂಡವಪುರ, ಗುಂಡ್ಲುಪೇಟೆ ಭಾಗಗಳಿಂದ ಭಕ್ತರು ತಂದು ಕೊಡುವ ತರಕಾರಿಯ ಜತೆಗೆ ಮೈಸೂರಿನ ಎಪಿಎಂಸಿಯಿಂದ ನಿತ್ಯ 2 ಲೋಡ್‌ ತರಕಾರಿ ಬಳಸಲಾಗುತ್ತಿದೆ.

ಮೈಸೂರಿನ ಪ್ರತಿಷ್ಠಿತ ಸುತ್ತೂರು ಜಾತ್ರೆ ಕಳೆಗಟ್ಟಿದ್ದು ಜಾತ್ರೆಯಲ್ಲಿ ಧಾರ್ಮಿಕ ಕಾರ್ಯಕ್ರಮದ ಜೊತೆ ಸಾಮಾಜಿಕ ಕಾರ್ಯಕ್ರಮಗಳು ನೆರವೇರುತ್ತಿರೋದು ಗಮನರ್ಹ ಸಂಗತಿಯಾಗಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: