• Home
  • »
  • News
  • »
  • state
  • »
  • Hubballi: ಕರ್ತವ್ಯ ಲೋಪ ಆರೋಪದ ಮೇಲೆ ಇನ್ಸ್​​ಪೆಕ್ಟರ್ ಅಮಾನತು; ಆದೇಶ ನೋಡಿ ಪಿಐ ಆಸ್ಪತ್ರೆ ಪಾಲು!

Hubballi: ಕರ್ತವ್ಯ ಲೋಪ ಆರೋಪದ ಮೇಲೆ ಇನ್ಸ್​​ಪೆಕ್ಟರ್ ಅಮಾನತು; ಆದೇಶ ನೋಡಿ ಪಿಐ ಆಸ್ಪತ್ರೆ ಪಾಲು!

ಪೊಲೀಸ್ ಇನ್ಸ್​​ಪೆಕ್ಟರ್ ಅಡಿವೆಪ್ಪ ಬನ್ನಿ

ಪೊಲೀಸ್ ಇನ್ಸ್​​ಪೆಕ್ಟರ್ ಅಡಿವೆಪ್ಪ ಬನ್ನಿ

ಕೊಲೆ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಮೊದಲು ವರ್ಗಾವಣೆಗೆ ಶಿಕ್ಷೆಗೆ ಗುರಿಯಾಗಿದ್ದ ಪಿಐ ಅಡಿವೆಪ್ಪ, ನಂತರ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ. ಒಂದರ ಮೇಲೆ ಮತ್ತೊಂದು ಆಘಾತ ತಾಳದೆ ಅಸ್ವಸ್ಥಗೊಂಡ ಅಡಿವೆಪ್ಪ ಆಸ್ಪತ್ರೆಗೆ ದಾಖಲಾಗಿದ್ದಾರೆ.

  • Share this:

ಹುಬ್ಬಳ್ಳಿ (ನ.15): ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸಂತೋಷ್ ಕೊಲೆ ಪ್ರಕರಣಕ್ಕೆ (Santhosh Murder Case) ಸಂಬಂಧಿಸಿ ವರ್ಗಾವಣೆ ಶಿಕ್ಷೆಗೆ ಗುರಿಯಾಗಿದ್ದ ಪಿಐ ಅಡಿವೆಪ್ಪ ಬನ್ನಿ, ಅಮಾನತು (Suspension) ಶಿಕ್ಷೆಗೂ ಗುರಿಯಾಗಿದ್ದಾರೆ. ಇದರಿಂದ ಆಘಾತಗೊಂಡು ಅಸ್ವಸ್ಥನಾಗಿದ್ದ ಪಿಐ ನನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಏನೋ ಮಾಡಲು ಹೋಗಿ ಏನೋ ಆದ ಸ್ಥಿತಿ ಹಿರಿಯ ಪೊಲೀಸ್ ಅಧಿಕಾರಿಗಳದ್ದಾಗಿದೆ. 


ಇನ್ಸ್​​ಪೆಕ್ಟರ್ ಅಡಿವೆಪ್ಪ ಬನ್ನಿ ಆರೋಗ್ಯದಲ್ಲಿ ಏರುಪೇರು


ಪೊಲೀಸ್ ಇನ್ಸ್​​ಪೆಕ್ಟರ್ ಅಡಿವೆಪ್ಪ ಬನ್ನಿ ಆರೋಗ್ಯದಲ್ಲಿ ಏರುಪೇರಾಗಿದೆ. ಅಸ್ವಸ್ಥ ಪಿಐ ಅಡಿವೆಪ್ಪ ಬಾಲಾಜಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಐಸಿಯುನಲ್ಲಿ ಅಡಿವೆಪ್ಪಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಬಾಲಾಜಿ ಆಸ್ಪತ್ರೆಗೆ ಪೊಲೀಸ್ ಕಮಿಷನರ್ ಲಾಭೂ ರಾಮ್ ಭೇಟಿ ನೀಡಿ ಪಿಐ ಅಡಿವೆಪ್ಪ ಆರೋಗ್ಯ ವಿಚಾರಿಸಿದ್ದಾರೆ. ಬಿಪಿ ಹೆಚ್ಚಾಗಿ ಅಸ್ವಸ್ಥಗೊಂಡಿದ್ದಾರೆಂಬ ಮಾಹಿತಿ ಸಿಕ್ಕಿದೆ. ಅಡಿವೆಪ್ಪಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.




ಪೊಲೀಸರ ಕ್ರಮಕ್ಕೆ ಆಕ್ರೋಶ


ನವೆಂಬರ್ 12 ರಂದು ಕಸಬಾಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂತೋಷ್ ಮುರಗೋಡ್ ಕೊಲೆಯಾಗಿತ್ತು. ಜಂಗ್ಲಿ ಪೇಟೆ ಸಂತೋಷ್ ಕೊಲೆ ಪ್ರಕರಣ ಖಂಡಿಸಿ ಸ್ಥಳೀಯ ನಿವಾಸಿಗಳು, ಕುಟುಂಬದ ಸದಸ್ಯರು ಪೊಲೀಸ್ ಠಾಣೆ ಎದುರು ಶವ ಇಟ್ಟು ಪ್ರತಿಭಟನೆ ಮಾಡಿದ್ದರು. ಆರೋಪಿಗೆ ಪೊಲೀಸರ ರಕ್ಷಣೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಶಾಸಕ ಪ್ರಸಾದ್ ಅಬ್ಬಯ ಸ್ವತಃ ಪ್ರತಿಭಟನೆಯಲ್ಲಿ ಭಾಗಿಯಾಗಿ, ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು.


ಚಾಕು ಇರಿದು ಬರ್ಬರವಾಗಿ ಕೊಲೆ


ಚಾಕು ಇರಿದು ಬರ್ಬರವಾಗಿ ಕೊಲೆ ಮಾಡಿದ್ದ ರೌಡಿ ಶೀಟರ್ ಶಿವಾನಂದ್ ಗೆ ಕಸಬಾ ಪೇಟೆ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಅದಕ್ಕೆ ಮುಖ್ಯ ಕಾರಣ ರೌಡಿ ಶೀಟರ್ ಶಿವಾನಂದ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡ್ತಿದ್ದ. ಅದೇ ಕುಮ್ಮಕ್ಕಿನಿಂದ ಆತ ಜನರ ಮೇಲೆ ದೌರ್ಜನ್ಯ ಎಸಗುತ್ತಿದ್ದ ಎನ್ನಲಾಗಿದೆ. ಪೆಟ್ರೋಲ್ ಕದಿಯುವುದು ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ. ಅವನನ್ನು ಹದ್ದುಬಸ್ತಿನಲ್ಲಿಡುವಂತೆ ಸ್ಥಳೀಯರು ಒತ್ತಾಯಿಸಿದ್ದರೂ ಕಸಬಾಪೇಟೆ ಪೊಲೀಸರು ತಲೆಕೆಡೆಸಿಕೊಂಡಿರಲಿಲ್ಲ.


ದೂರು ಕೊಟ್ರು ಕ್ರಮ ತೆಗೆದುಕೊಂಡಿಲ್ಲ


ಶಿವಾನಂದ ವಿರುದ್ದ ದೂರು ಕೊಟ್ರು ಕಸಬಾಪೇಟೆ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ ಎನ್ನುವ ಆರೋಪ ಕೇಳಿಬಂದಿತ್ತು. ಇದೇ ಹಿನ್ನೆಲೆಯಲ್ಲಿ ರವಿವಾರ ಸಂತೋಷ್ ಶವವನ್ನು ಠಾಣೆಯ ಬಳಿ ತಂದು ಸಂತೋಷ್ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಸ್ಥಳೀಯರೂ ಸಂತೋಷ್ ಕುಟುಂಬಕ್ಕೆ ಬೆಂಬಲವಾಗಿ ನಿಂತಿದ್ದರು.  ಕಸಬಾಪೇಟೆ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ಮಾಡಿದ್ರು. ಸಂತೋಷ್ ಮುರಗೋಡ ಶವ ಇಟ್ಟು ಪ್ರತಿಭಟನೆ ಮಾಡಿದ್ರು. ಸಂತೋಷ್ ಸಾವಿಗೆ ಕಸಬಾಪೇಟೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಅಂತ ಕಿಡಿಕಾರಿದ್ದರು.


ಅಡಿವೆಪ್ಪ ಬನ್ನಿ ಅಮಾನತು ಮಾಡಿ ಆದೇಶ


ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಆರೋಪದ ಮೇಲೆ ಪಿಐ ಅಡಿವೆಪ್ಪ ಬನ್ನಿ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆ ಬೆನ್ನಹಿಂದೆಯೇ ಕಸಬಾಪೇಟೆ ಪೊಲೀಸ್ ಇನ್ಸ್​ಪೆಕ್ಟರ್ ಅಡಿವೆಪ್ಪ ಬನ್ನಿ ಅಮಾನತು ಮಾಡಿ ಆದೇಶ ಹೊರಡಿಸಲಾಗಿತ್ತು. ಹುಬ್ಬಳ್ಳಿ ಧಾರವಾಡ ಪೊಲೀಸ್  ಕಮಿಷನರ್ ಲಾಭೂರಾಮ್ ಆದೇಶ ಹೊರಡಿಸಿದ್ದರು. ವರ್ಗಾವಣೆಯ ಬೆನ್ನ ಹಿಂದೆಯೇ ಅಮಾನತು ಆದೇಶ ಹೊರಡಿಸಿದ್ದರಿಂದ ಅಡಿವೆಪ್ಪ ಆಘಾತಕ್ಕೆ ತುತ್ತಾಗಿದ್ದ ಎನ್ನಲಾಗಿದೆ. ಹೈ ಬಿಪಿಯಾಗಿ ಆತ ಅಸ್ವಸ್ಥಗೊಂಡಿದ್ದ. ತಕ್ಷಣ ಆತನನ್ನು ಹುಬ್ಬಳ್ಳಿಯ ಬಾಲಾಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಇಲಾಖೆಯಿಂದಲೇ ಆತನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.


ಇದನ್ನೂ ಓದಿ: Education Department: ಮಕ್ಕಳನ್ನು ಶಾಲೆಗೆ ಸೇರಿಸಲು 6 ವರ್ಷ ಆಗಿರಲೇಬೇಕು; ಶಿಕ್ಷಣ ಇಲಾಖೆಯಿಂದ ಅಧಿಕೃತ ಆದೇಶ


ಏನೋ ಮಾಡಲು ಹೋಗಿ ಮತ್ತೇನೋ ಮಾಡಿದ ಸ್ಥಿತಿ ಹಿರಿಯ ಪೊಲೀಸರದ್ದಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಅಮಾನತು ಶಿಕ್ಷೆಗೆ ಗುರಿಯಾಗಿದ್ದ ಇನ್ಸ್​ಪೆಕ್ಟರ್ ರೊಬ್ಬರು ಹೃದಯಾಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಆ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ. ಅಡಿವೆಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಅಂತ ತಿಳಿದು ಬಂದಿದೆ.

Published by:ಪಾವನ ಎಚ್ ಎಸ್
First published: