• Home
  • »
  • News
  • »
  • state
  • »
  • ಭರ್ಜರಿ ಭತ್ತ ಬೆಳೆದ ರೈತರಿಗೆ ಬೆಲೆ ಸಂಕಷ್ಟ ; ವಿದೇಶಗಳಿಗೆ ರಫ್ತಾಗುತ್ತಿದ್ದ ಭತ್ತಕ್ಕೂ ಕುತ್ತು

ಭರ್ಜರಿ ಭತ್ತ ಬೆಳೆದ ರೈತರಿಗೆ ಬೆಲೆ ಸಂಕಷ್ಟ ; ವಿದೇಶಗಳಿಗೆ ರಫ್ತಾಗುತ್ತಿದ್ದ ಭತ್ತಕ್ಕೂ ಕುತ್ತು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅರಬ್ ದೇಶಗಳಿಗೆ ಸೋನಾ ಮಸೂರಿ ಡಿಮ್ಯಾಂಡ್ ಇದ್ದರೂ ಬೇಡಿಕೆಗಿಂತ ಮಾಲು ಹೆಚ್ಚಿರುವುದರಿಂದ ಸಹಜವಾಗಿ ದರ ಕಡಿಮೆಯಾಗುತ್ತಿದೆ. ಇದರ ಜೊತೆಗೆ ಇರಾನ್- ಅಮೆರಿಕ ಯುದ್ದ ಭೀತಿಯಿಂದಾಗಿ ಇರಾನ್ ದೇಶದಲ್ಲಿ ಅಕ್ಕಿ ಸದ್ಯಕ್ಕೆ ರಫ್ತಾಗುತ್ತಿಲ್ಲ

  • Share this:

ಬಳ್ಳಾರಿ(ಜ.17) :  ಕಳೆದ ಮೂರು ವರ್ಷ ಬರಗಾಲದಿಂದ ತತ್ತರಿಸಿದ್ದ ರೈತರಿಗೆ ಈ ಬಾರಿ ದೇಶದ ಹಲೆವಡೆ ಉತ್ತಮ ಮಳೆಯಾಗಿದೆ. ಈ ವರ್ಷ ತುಂಗಭದ್ರ ಜಲಾಶಯ ತುಂಬಿ ಹರಿದ ಕಾರಣ ಜಲಾನಯನದ ಪ್ರದೇಶಗಳಲ್ಲಿ ರೈತರು ಭರಪೂರ ಭತ್ತ ಬೆಳೆದಿದ್ದಾರೆ. ಆದರೆ ಉತ್ತಮ ಬೆಳೆ ಬೆಳೆದರೂ ಭತ್ತಕ್ಕೆ ಸಮರ್ಪಕ ಬೆಲೆ ಸಿಗುತ್ತಿಲ್ಲ. ಇರಾನ್ ಯುದ್ಧದ ಭೀತಿ ಹಿನ್ನೆಲೆ ಪ್ರತಿವರ್ಷ ಅರಬ್ ಗೆ ದೇಶಗಳಿಗೆ ಹೆಚ್ಚು ರಫ್ತಾಗುತ್ತಿದ್ದ ಸೋನಾ ಮಸೂರಿ ಅಕ್ಕಿಯೂ ಈ ಬಾರಿ ಯಾರೂ ಕೇಳುತ್ತಿಲ್ಲ.

ಪ್ರತಿ ವರ್ಷ ತುಂಗಭದ್ರ ಜಲಾಶಯ ವ್ಯಾಪ್ತಿಯ ಭಾಗದ ಭತ್ತಕ್ಕೆ ಉತ್ತಮ‌ ಬೆಲೆ‌ ಸಿಗುತ್ತಿತ್ತು. ಆದರೆ ಮಳೆ, ಜಲಾಶಯದ ನೀರಿಲ್ಲದೆ ಫಸಲು ಕಡಿಮೆಯಾಗುತ್ತಿತ್ತು. ಆದರೆ ಈ ವರ್ಷ ಉತ್ತಮ‌ ಮಳೆ‌ ಹಿನ್ನೆಲೆ ರೈತರು ಭರ್ಜರಿ ಭತ್ತ ಬೆಳೆದಿದ್ದಾರೆ. ಆದರೆ, ಅದನ್ನು ಸ್ಥಳೀಯವಾಗಿ ಯಾರೂ ಕೇಳೋರಿಲ್ಲದಂತಾಗಿದೆ. ಇದೇ ರೀತಿ ದೇಶದ ಹಲೆವೆಡೆ ಉತ್ತಮ‌ ಮಳೆಯಾದ ಕಾರಣ ಬೆಳೆ ಚೆನ್ನಾಗಿ ದೊರೆಯುತ್ತಿದೆ. ಇದರಿಂದ ಪ್ರತಿವರ್ಷ ಭತ್ತದ ಕಣಜ ಪ್ರದೇಶಗಳಿಂದ ವಿದೇಶಗಳಿಗೆ ರಫ್ತಾಗುತ್ತಿದ್ದ ಗುಣಮಟ್ಟದ ಸೋನಾ ಮಸೂರಿ ಅಕ್ಕಿಯನ್ನೂ ಕಡಿಮೆ ದರಕ್ಕೆ ಕೇಳುತ್ತಿದ್ದಾರೆ.

ಅರಬ್ ದೇಶಗಳಿಗೆ ಸೋನಾ ಮಸೂರಿ ಡಿಮ್ಯಾಂಡ್ ಇದ್ದರೂ ಬೇಡಿಕೆಗಿಂತ ಮಾಲು ಹೆಚ್ಚಿರುವುದರಿಂದ ಸಹಜವಾಗಿ ದರ ಕಡಿಮೆಯಾಗುತ್ತಿದೆ. ಇದರ ಜೊತೆಗೆ ಇರಾನ್- ಅಮೆರಿಕ ಯುದ್ದ ಭೀತಿಯಿಂದಾಗಿ ಇರಾನ್ ದೇಶದಲ್ಲಿ ಅಕ್ಕಿ ಸದ್ಯಕ್ಕೆ ರಫ್ತಾಗುತ್ತಿಲ್ಲ. ಇದರಿಂದ ಸೋನಾ ಮಸೂರಿ ಬೆಳೆದ ರೈತರು ಬೆಳೆ ಇದ್ದರೂ ಉತ್ತಮ ಬೆಲೆ ಸಿಗದೆ ಕೈ ಕೈ ಹಿಸುಕಿಕೊಳ್ಳುತ್ತಿದ್ದರೆ. ವಿದೇಶಕ್ಕೆ ರಫ್ತು ಮಾಡುತ್ತಿದ್ದ ಚೆನ್ನೈ, ಹೈದ್ರಾಬಾದ್ ಹಾಗೂ ಬೆಂಗಳೂರು ಮಾರಾಟಗಾರರು ಕೇಳುತ್ತಿಲ್ಲವೆಂದು ಅಕ್ಕಿ ಮಾರಾಟ ಸಂಘ ರಾಜ್ಯ ಕಾರ್ಯದರ್ಶಿ ರಮೇಶ್ ಗೌಡ ಪ್ರತಿಕ್ರಿಯೆ ನೀಡುತ್ತಾರೆ.

ತುಂಗಭದ್ರ ಜಲಾಶಯ ಈ ಬಾರಿ ತುಂಬಿ ಹರಿದ ಪರಿಣಾಮ ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ನಿರೀಕ್ಷೆ ಮೀರಿ ಮೊದಲ ಭತ್ತದ ಫಸಲು ಬಂದಿದೆ. ಕಾಲುವೆ ಜೊತೆಗೆ ನದಿ ಪಾತ್ರದ ಬೆಳೆಗಾರರು ಈಗಾಗಲೇ ಎರಡನೇ ಬೆಳೆ ಬೆಳೆಯಲು ರೈತರು ಮುಂದಾಗಿದ್ದಾರೆ. ಇದರಿಂದ ಮಾರುಕಟ್ಟೆಗಳಲ್ಲಿ ಭತ್ತ ಬೆಳೆ ಹೆಚ್ಚು ಕಂಡುಬರುತ್ತಿದೆ.

ಈ ವರ್ಷ ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಸಮರ್ಪಕ ಬೆಲೆ ಸಿಗುತ್ತಿಲ್ಲ. ಇನ್ನು ಸರ್ಕಾರ ಭತ್ತಕ್ಕೆ ಬೆಂಬಲ ಬೆಲೆ ಘೋಷಿಸಿ ಖರೀದಿಸಲು ಮಾರುಕಟ್ಟೆಗಳಲ್ಲಿ ಖರೀದಿ ಕೇಂದ್ರ ತೆರೆದಿದೆ. ಸಾಮಾನ್ಯ ಕ್ವಿಂಟಾಲ್ ಭತ್ತಕ್ಕೆ 1815 ರೂಪಾಯಿ, ಎ ಗ್ರೇಡ್ ಭತ್ತಕ್ಕೆ 1835 ರೂಪಾಯಿ ರೀತಿ ಖರೀದಿಸುತ್ತಿದೆ. ಆದರೆ, ಇದಕ್ಕೆ ಹಲವು ತಕರಾರುಗಳಿವೆ. ಇದರಿಂದ ಭತ್ತ ಬೆಳೆದ ರೈತರು ಆಸುಪಾಸು ಇದೇ ದರಕ್ಕೆ ಇಲ್ಲವೆ ಇದಕ್ಕಿಂತ‌ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದಾರೆ‌.

ಇದನ್ನೂ ಓದಿ ; ಐಎಎಸ್ ಪರೀಕ್ಷೆ ಪಾಸಾಗಿ ಸಂದರ್ಶನಕ್ಕೆ ಆಯ್ಕೆಯಾದ ಗ್ರಾಮೀಣ ಪ್ರತಿಭೆ - ದರ್ಶನ್ ಸಾಧನೆಗೆ ಜನತೆ ಮೆಚ್ಚುಗೆ

ಈ ಬಾರಿ ದೇಶದ ಹರ್ಯಾಣ, ಪಂಜಾಬ್ ಸೇರಿದಂತೆ ದಕ್ಷಿಣ ಭಾರತದ ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ನಿರೀಕ್ಷೆ ಮೀರಿ ಭತ್ತ ಫಸಲು ದೊರೆಯುತ್ತಿದೆ. ಇದರಿಂದಾಗಿ ಪ್ರತಿವರುಷ ವಿದೇಶಕ್ಕೆ ರಫ್ತಾಗುತ್ತಿದ್ದ ರಾಜ್ಯದ ಅಕ್ಕಿಗೂ ಬೇಡಿಕೆಯಿಲ್ಲದೆ ಉತ್ತಮ ಬೆಲೆ ಸಿಗುತ್ತಿಲ್ಲ. ಇರಾನ್ ದೇಶಕ್ಕೆ ರಫ್ತು ಕಡಿಮೆಯಾಗಿದ್ದರಿಂದ ಲಾಭದ ನಿರೀಕ್ಷೆಯಲ್ಲಿದ್ದ ತುಂಗಭದ್ರ ಜಲಾನಯದ ರೈತರು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.

First published: