Sushma Swaraj: ಕರ್ನಾಟಕದೊಂದಿಗೆ ಸುಷ್ಮಾ ಸ್ವರಾಜ್ ನಂಟು; ರೆಡ್ಡಿ ಬ್ರದರ್ಸ್ ರಾಜಕೀಯ ಪ್ರವೇಶಕ್ಕೆ ಕಾರಣರಾಗಿದ್ದ ‘ಅಮ್ಮ’

ಬಿಜೆಪಿಯ ಹೆಸರೇ ಕೇಳದ ಕಾಂಗ್ರೆಸ್ ಭದ್ರಕೋಟೆ ಬಳ್ಳಾರಿಯಲ್ಲಿ 1999ರಲ್ಲಿ ಸೋನಿಯಾ ಎದುರಾಗಿ ಸ್ಪರ್ಧಿಸಿ ಸುಷ್ಮಾ ಸ್ವರಾಜ್ ವೀರೋಚಿತ ಸೋಲನುಭವಿಸಿದ್ದರು. ಆದರೆ, ಅವರ ಪ್ರಯತ್ನದ ಫಲವಾಗಿ ರಾಜ್ಯದಲ್ಲಿ ಬಿಜೆಪಿಗೆ ಒಳ್ಳೆಯ ಬುನಾದಿ ಸಿಕ್ಕಿದ್ದಂತೂ ಹೌದು.

Vijayasarthy SN | news18
Updated:August 7, 2019, 11:31 AM IST
Sushma Swaraj: ಕರ್ನಾಟಕದೊಂದಿಗೆ ಸುಷ್ಮಾ ಸ್ವರಾಜ್ ನಂಟು; ರೆಡ್ಡಿ ಬ್ರದರ್ಸ್ ರಾಜಕೀಯ ಪ್ರವೇಶಕ್ಕೆ ಕಾರಣರಾಗಿದ್ದ ‘ಅಮ್ಮ’
1999ರಲ್ಲಿ ಬಳ್ಳಾರಿಯಲ್ಲಿ ಭಾಷಣ ಮಾಡಿದ ಸುಷ್ಮಾ ಸ್ವರಾಜ್
  • News18
  • Last Updated: August 7, 2019, 11:31 AM IST
  • Share this:
ಬಳ್ಳಾರಿ(ಆ. 07): ಸುಷ್ಮಾ ಸ್ವರಾಜ್ ಅವರಿಗೂ ಕರ್ನಾಟಕಕ್ಕೂ ವಿಶಿಷ್ಟ ನಂಟಿತ್ತು. 1999ರಲ್ಲಿ ಆಗಿನ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅವರ ಎದುರಾಗಿ ನಿಲ್ಲಲು ರಾಜ್ಯಕ್ಕೆ ಎಂಟ್ರಿ ಕೊಟ್ಟಿದ್ದರು ಸುಷ್ಮಾ ಸ್ವರಾಜ್. ಆಗಿನಿಂದ ಕರ್ನಾಟಕ ರಾಜಕಾರಣಿಗಳ ಜೊತೆ, ಅದರಲ್ಲೂ ಬಳ್ಳಾರಿ ರಾಜಕೀಯದೊಂದಿಗೆ ಸುಷ್ಮಾ ಅವರ ಬಾಂಧವ್ಯ ಬೆಳೆದಿತ್ತು. ಬಳ್ಳಾರಿಯಲ್ಲಿ ರೆಡ್ಡಿ ಬ್ರದರ್ಸ್ ಪಾಲಿಗೆ ಸುಷ್ಮಾ ಸ್ವರಾಜ್ ‘ಅಮ್ಮ’ಳಾಗಿಬಿಡುವಷ್ಟು ಮಟ್ಟಕ್ಕೆ ಅವರ ಸಂಬಂಧ ಬೆಸೆದಿತ್ತು. ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಸರ್ಕಾರ ರಚನೆ ಮಾಡುವ ಮಟ್ಟಕ್ಕೆ ಹೋಗಿದ್ದರ ಹಿಂದೆ ಸುಷ್ಮಾ ಸ್ವರಾಜ್ ಅವರ ಪಾತ್ರವೂ ಇದೆ ಎಂದರೆ ಅತಿಶಯೋಕ್ತಿ ಇಲ್ಲ.

ಬಳ್ಳಾರಿಯ ಆ 1999ರ ಚುನಾವಣೆಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಸುಷ್ಮಾ ಸ್ವರಾಜ್ ಗೆಲ್ಲಲಾಗಲಿಲ್ಲ. ಆದರೆ, ಬಿಜೆಪಿಯ ಗಂಧವೇ ಇಲ್ಲದ ಬಳ್ಳಾರಿಯಲ್ಲಿ ಸುಷ್ಮಾ ಸ್ವರಾಜ್ ವೀರೋಚಿತ ಸೋಲನುಭವಿಸಿದ್ದರು. ಚುನಾವಣೆಯಲ್ಲಿ ಸೋತರೂ ಬಳ್ಳಾರಿ ಜನರ ಮನ ಗೆದ್ದರು. ಬಳ್ಳಾರಿಗೆ ಆಗಮಿಸಿದ ಕೆಲವೇ ದಿನಗಳಲ್ಲಿ ಅವರು ಕನ್ನಡ ಕಲಿತು ಕನ್ನಡದಲ್ಲೇ ಭಾಷಣ ಮಾಡುವಷ್ಟರ ಮಟ್ಟಕ್ಕೆ ಅವರಲ್ಲಿ ಕರುನಾಡಿನ ಬಗ್ಗೆ ಬದ್ಧತೆ ಇತ್ತು. ಬಳ್ಳಾರಿಯಲ್ಲಿ ಕಮಲ ಅರಳಲು ಅವರು ಕಾರಣೀಕರ್ತರಾಗಿದ್ದರು. ಬಳ್ಳಾರಿ ಚುನಾವಣೆಯನ್ನು ಬಹಳ ಗಂಭೀರವಾಗಿ ಸ್ವೀಕರಿಸಿದ್ದ ಸುಷ್ಮಾ ಸ್ವರಾಜ್ ಅವರು ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರನ್ನು ರಾಜಕೀಯಕ್ಕೆ ಕರೆತಂದು ಆ ಮೂಲಕ ಬಿಜೆಪಿಗೆ ಬುನಾದಿ ಹಾಕಿದರು.

ಇದನ್ನೂ ಓದಿ: ಅಪ್ಪಟ ರಾಪ್ಟ್ರೀಯವಾದಿ, ಕಾಂಗ್ರೆಸ್ ವಿರೋಧಿ ಹಾಗೂ ರೆಬೆಲ್ ನಾಯಕಿ; 1970-2019 ಸುಷ್ಮಾ ಸ್ವರಾಜ್ ಸವೆಸಿದ ರಾಜಕೀಯ ಹೋರಾಟದ ಹಾದಿ!

ಸುಷ್ಮಾ ಸ್ವರಾಜ್ ಅವರು ಗಣಿ ಉದ್ಯಮದಲ್ಲಿ ನಿರತರಾಗಿದ್ದ ರೆಡ್ಡಿ ಬ್ರದರ್ಸ್ ಅವರ ಹಣಬಲ ಮತ್ತು ಜನಪ್ರಿಯತೆಯನ್ನು ಬಳಸಿಕೊಂಡು ಬಳ್ಳಾರಿಯಲ್ಲಿ ಬಿಜೆಪಿ ಸಂಘಟನೆಯನ್ನು ಕಟ್ಟಿದರು. ಸುಷ್ಮಾ ಅವರು ಹಾಕಿಕೊಟ್ಟ ಆವತ್ತಿನ ಬುನಾದಿ ಹಾಗೂ ಬಿಜೆಪಿ ಪಾಳಯಕ್ಕೆ ರೆಡ್ಡಿ ಸಹೋದರರು ಮಾಡಿದ ಪ್ರವೇಶವು ಮುಂದೆ ಬಿಜೆಪಿಯ ಸರ್ಕಾರ ರಚನೆಯಲ್ಲಿ ಮುಖ್ಯ ಪಾತ್ರ ವಹಿಸಿತ್ತು.

ಬಳ್ಳಾರಿ ಚುನಾವಣೆಯಲ್ಲಿ ಸೋಲನುಭವಿಸಿದರೂ ಸುಷ್ಮಾ ಸ್ವರಾಜ್ ಅವರು 13 ವರ್ಷಗಳವರೆಗೂ ಬಳ್ಳಾರಿಯನ್ನು ಮರೆಯಲಿಲ್ಲ. ಇಲ್ಲಿ ಪ್ರತೀ ವರ್ಷ ಬಂದು ಹಬ್ಬ ಆಚರಣೆ, ವಿವಾಹ ಮಹೋತ್ಸವ ಇತ್ಯಾದಿ ಕಾರ್ಯಕ್ರಮಗಳಿಗೆ ಬಂದು ಭಾಗವಹಿಸುತ್ತಿದ್ದರು.

ಮಂಗಳವಾರ ರಾತ್ರಿ ಸುಷ್ಮಾ ಅವರು ನಿಧನರಾದಾಗ ಶ್ರೀರಾಮುಲು ಅಕ್ಷರಶಃ ಕಣ್ಣೀರಿಟ್ಟಿದ್ದರು. ಶ್ರೀರಾಮುಲು ಮತ್ತು ರೆಡ್ಡಿ ಸಹೋದರರು ಈಗಲೂ ಕೂಡ ಸುಷ್ಮಾ ಸ್ವರಾಜ್ ಅವರನ್ನು ತಮ್ಮ ‘ಅಮ್ಮ’ ಎಂದೇ ಆರಾಧಿಸುತ್ತಾರೆ. ತಾನು ಈ ಮಟ್ಟಕ್ಕೆ ಬೆಳೆಯಲು ಸುಷ್ಮಾ ಹಾಗೂ ಅವರ ಆಶೀರ್ವಾದವೇ ಕಾರಣ ಎಂದು ಶ್ರೀರಾಮುಲು ಹೇಳುತ್ತಾರೆ.

ಇದನ್ನೂ ಓದಿ: ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​​ ನಿಧನ; ಇಲ್ಲಿದೆ ಬಿಜೆಪಿ ಕಟ್ಟಾಳು ನಡೆದು ಬಂದ ಹಾದಿನಾವು ರಾಜಕಾರಣಿಗಳ ಮಕ್ಕಳಲ್ಲ. ನಾವು ರಾಜಕೀಯ ಪ್ರವೇಶಕ್ಕೆ ಸುಷ್ಮಾ ಸ್ವರಾಜ್ ಅವರೇ ಕಾರಣ. ನಮ್ಮ ಸೇವೆ ಸಮಾಜಕ್ಕೆ ಬಹಳಷ್ಟಿದೆ ಎಂದು ಅರಿವು ಮೂಡಿಸಿ ನಮ್ಮನ್ನು ರಾಜಕಾರಣಕ್ಕೆ ತಂದವರೇ ಅವರು. ಸಾಮಾನ್ಯ ಕುಟುಂಬದಲ್ಲಿ ಬೆಳೆದ ನಾವು ಇವತ್ತು ಅವರ ಆಶೀರ್ವಾದದಿಂದ ಈ ಮಟ್ಟಕ್ಕೆ ಬೆಳೆದಿದ್ದೇವೆ. ಅವರ ಪ್ರೀತಿ, ವಾತ್ಸಲ್ಯವನ್ನು ಉಸಿರು ಇರುವ ತನಕ ಮರೆಯುವ ಹಾಗಿಲ್ಲ ಎಂದು ಶ್ರೀರಾಮುಲು ಅವರು ತಮ್ಮ ಪ್ರೀತಿಯ ಅಮ್ಮನನ್ನು ಸ್ಮರಿಸುತ್ತಾರೆ.

ಇನ್ನು, ಸುಷ್ಮಾ ಸ್ವರಾಜ್ ಅವರನ್ನು ಬಳ್ಳಾರಿಯಲ್ಲಿ ಸ್ಪರ್ಧಿಸುವಂತೆ ಮನವೊಲಿಸಿದ್ದು ದಿವಂಗತ ಅನಂತಕುಮಾರ್. ಸುಷ್ಮಾ ಅವರು ಅನಂತಕುಮಾರ್ ಅವರನ್ನು ಸಹೋದರನೆಂದೇ ಸಂಬೋಧಿಸುತ್ತಿದ್ದರು. ಬಹಳ ವಾತ್ಸಲ್ಯಮಯಿ ಗುಣ ಹೊಂದಿದ್ದ ಸುಷ್ಮಾ ಅವರು ಎಂಥವರನ್ನೂ ಪ್ರೀತಿಯಿಂದ ಒಲಿಸಿಕೊಳ್ಳಬಲ್ಲಂತಹ ಛಾತಿ ಹೊಂದಿದ್ದರು.

ಇದನ್ನೂ ಓದಿ: ರೆಫ್ರಿಜರೇಟರ್​​ ಸರಿ ಇಲ್ಲ ಎಂದು ದೂರಿದ್ದ ಸಾಮಾನ್ಯನಿಗೂ ಉತ್ತರಿಸಿದ್ದ ಸುಷ್ಮಾ ಸ್ವರಾಜ್​!

2013ರವರೆಗೂ ಬಳ್ಳಾರಿಯ ರೆಡ್ಡಿ ಸಹೋದರರ ಜೊತೆ ಸುಷ್ಮಾ ಸ್ವರಾಜ್ ಅವಿನಾಭಾವ ಸಂಬಂಧ ಹೊಂದಿದ್ದರು. ಆದರೆ, ರೆಡ್ಡಿ ಸಹೋದರರ ಮೇಲೆ ಭ್ರಷ್ಟಾಚಾರದ ಕಳಂಕಗಳು ಮೆತ್ತಿಕೊಂಡ ಬಳಿಕ ಅವರು ಉದ್ದೇಶಪೂರ್ವಕವಾಗಿ ಅವರ ಜೊತೆ ಗುರುತಿಸಿಕೊಳ್ಳದೇ ದೂರ ಉಳಿದಿದ್ದರು. ಇದೇ ಕಾರಣಕ್ಕೆ ಅವರು 2013ರ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಚುನಾವಣೆ ಪ್ರಚಾರ ಮಾಡಲಿಲ್ಲ. ರೆಡ್ಡಿ ಸಹೋದರರನ್ನು ಭೇಟಿಯಾದರೂ ಆಪ್ತತೆ ತೋರುತ್ತಿರಲಿಲ್ಲ.

ನಿನ್ನೆ ಮಂಗಳವಾರ ರಾತ್ರಿ ಸುಷ್ಮಾ ಸ್ವರಾಜ್ ಅವರು ದೆಹಲಿಯಲ್ಲಿ ಹೃದಯಾಘಾತಗೊಂಡು ಮೃತಪಟ್ಟರು. ಕೆಲವಾರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇದೇ ಕಾರಣಕ್ಕೆ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. 2014ರ ಮೋದಿ ನೇತೃತ್ವದ ಸರ್ಕಾರದಲ್ಲಿ ವಿದೇಶಾಂಗ ಸಚಿವೆಯಾಗಿ ಅವರು ಮಾಡಿದ ಕಾರ್ಯ ಸಾಧನೆಗೆ ಪಕ್ಷಭೇದವಿಲ್ಲದೇ ಶ್ಲಾಘನೆ ವ್ಯಕ್ತವಾಗಿದ್ದವು.

(ವರದಿ: ಶರಣು ಹಂಪಿ)

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:August 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ