ಬೆಳಗಾವಿ (ಸೆ. 24): ಕೇಂದ್ರ ಸಚಿವ, ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದ ಸುರೇಶ ಅಂಗಡಿ ಕೊರೊನಾ ಸೋಂಕಿನಿಂದ ಮೃತಪಟ್ಟಿರುವುದರಿಂದ ಇಡೀ ರಾಜ್ಯಕ್ಕೆ ದೊಡ್ಡ ಆಘಾತ ಉಂಟಾಗಿದೆ. ಅವರ ಕುಟುಂಬಸ್ಥರು ಪಾರ್ಥಿವ ಶರೀರವನ್ನು ಬೆಳಗಾವಿಗೆ ತರುವ ಪ್ರಯತ್ನ ಮಾಡಿದರೂ ಅದು ವಿಫಲಗೊಂಡಿದೆ. ಸುರೇಶ್ ಅಂಗಡಿ ಅವರ ಪುತ್ರಿ, ಮೊಮ್ಮಗಳು ಸಹಿತ 7 ಜನ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಇನ್ನು, ಸುರೇಶ್ ಅಂಗಡಿ ಅವರ ವೃದ್ಧ ತಾಯಿಯ ರೋದನೆ ಮನೆಯಲ್ಲಿ ಮುಗಿಲು ಮುಟ್ಟಿದ್ದು, ಸಮಾಧಾನ ಪಡಿಸಲು ಸಂಬಂಧಿಕರು ಹರಸಾಹಸ ಪಡುತ್ತಿದ್ದಾರೆ.
ಸರಳ, ಸಜ್ಜನಿಕೆಗೆ ಹೆಸರಾಗಿದ್ದ ಕೇಂದ್ರ ಸಚಿವ ಸುರೇಶ ಅಂಗಡಿ ನಿನ್ನೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಸುದ್ದಿ ಕರ್ನಾಟಕ ರಾಜ್ಯ ಸೇರಿ ಕುಟುಂಬಸ್ಥರಿಗೆ ದೊಡ್ಡ ಶಾಕ್ ನೀಡಿದೆ. ಇನ್ನೂ ಕುಟುಂಬಸ್ಥರು ಪಾರ್ಥಿವ ಶರೀರವನ್ನು ಸ್ವಗ್ರಾಮ ಕೆ.ಕೆ. ಕೊಪ್ಪದಲ್ಲಿ ಅಂತ್ಯಕ್ರಿಯೆ ಮಾಡಬೇಕು ಎನ್ನುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಆದರೆ, ಇದಕ್ಕೆ ವೈದ್ಯರು ಒಪ್ಪದೆ ಇದ್ದಾಗ ಅನಿವಾರ್ಯವಾಗಿ ದೆಹಲಿಯಲ್ಲಿಯೇ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಿದ್ದಾರೆ.
ಬೆಳಗಾವಿಯಲ್ಲಿ ಉಳಿದಿದ್ದ ಸುರೇಶ ಅಂಗಡಿ ಮೊದಲ ಮಗಳು ಸ್ಪೂರ್ತಿ ಹಾಗೂ ಮೊಮ್ಮಗಳು ರಿಧಿಶಾ ಸೇರಿ 7 ಜನರ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಮುಂಬೈ ಮಾರ್ಗವಾಗಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಮಧ್ಯಾಹ್ನ 2 ಗಂಟೆಗೆ ದಹೆಲಿ ತಲುಪಲಿದ್ದು, ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕುಟುಂಬ ಸದಸ್ಯರ ಜತೆಗೆ ಓರ್ವ ಸ್ವಾಮೀಜಿಯನ್ನು ಸಹ ಧಾರ್ಮಿಕ ವಿಧಿವಿಧಾನ ನಡೆಸಲು ಕುಟುಂಬ ಸದಸ್ಯರು ಕರೆದುಕೊಂಡು ಹೋಗಿದ್ದಾರೆ. ಸುರೇಶ ಅಂಗಡಿ ಆಪ್ತ ಕಾರ್ಯದರ್ಶಿಯಾಗಿ ಕಳೆದ 4 ವರ್ಷಗಳಿಂದ ಸೇವೆ ಮಾಡಿದ್ದ ಬಾಳಯ್ಯ ಹಿರೇಮಠ ಅಂತಿಮ ವಿಧಿವಿಧಾನವನ್ನು ನಡೆಸಲಿದ್ದಾರೆ.
ಇದನ್ನೂ ಓದಿ: Suresh Angadi: ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನ; ಇಂದು ರಾಜ್ಯಾದ್ಯಂತ ಶೋಕಾಚರಣೆ
ಬೆಳಗಾವಿ ನಿವಾಸದಲ್ಲಿ ಸುರೇಶ ಅಂಗಡಿ ಅವರ ತಾಯಿ ಸೋಮವ್ವ ಅವರನ್ನು ಬಿಟ್ಟು ಹೋಗಲಾಗಿದ್ದು, ಸಂಬಂಧಿಕರು ತಾಯಿಯನ್ನು ಸಮಾಧಾನಪಡಿಸಲು ಹರಸಾಹಸ ಪಡುತ್ತಿದ್ದಾರೆ. ತಾಯಿ ಜತೆಗೆ ಅತ್ಯಂತ ನಿಕಟ ಸಂಪರ್ಕ ಹೊಂದಿದ್ದ ಸುರೇಶ ಅಂಗಡಿ ಯಾವುದೇ ಕೆಲಸ ಮಾಡುವ ಮೊದಲು ತಾಯಿಯ ಒಪ್ಪಿಗೆ ಪಡೆಯುತ್ತಿದ್ದರು. ಇನ್ನೂ ಮಗನ ಅಗಲಿಕೆಯ ದುಖಃ ತಾಯಿನ್ನು ಇನ್ನಿಲ್ಲದಂತೆ ಕಾಡುತ್ತಿದೆ.
ಈ ಬಗ್ಗೆ ಸುರೇಶ್ ಅಂಗಡಿ ಅವರ ಸಹೋದರ ಸಿ.ಸಿ. ಅಂಗಡಿ ಮಾತನಾಡಿ, ಸಹೋದರ ಸುರೇಶ ತಾಯಿಯ ಹೆಸರಿನಲ್ಲಿ ಪಿಯುಸಿ, ಪದವಿ ಕಾಲೇಜು ನಿರ್ಮಾಣ ಮಾಡಿದ್ದರು. ಬೆಳಗಾವಿಯಲ್ಲಿ ಇಂಜಿನಿಯರಿಂಗ್ ಕಾಲೇಜು ಕಟ್ಟಿದ್ದರು. ಇದರಿಂದ ನೂರಾರು ಬಡ ವಿದ್ಯಾರ್ಥಿಗಳಿಗೆ ಉಪಯೋಗವಾಗಿದೆ. ನಾವು ಸಹೋದರನ ಅಂತ್ಯಕ್ರಿಯೆಯನ್ನು ಕೆ ಕೆ ಕೊಪ್ಪದ ಕಾಲೇಜು ಆವರಣದಲ್ಲಿ ಮಾಡಬೇಕು ಎಂದು ಇಚ್ಛಿಸಿದ್ದೆವು. ಕೊರೊನಾ ಮಾರ್ಗ ಸೂಚಿಯ ಪ್ರಕಾರ ಪಾರ್ಥಿವ ಶರೀರ ನೀಡಿಲ್ಲ. ನಾವು ಕಾನೂನಿಗೆ ತಲೆ ಬಾಗುತ್ತೇವೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ