HOME » NEWS » State » SURESH ANGADI FUNERAL TO BE DONE IN DELHI SNVS

Suresh Angadi Funeral – ದೆಹಲಿಯಲ್ಲಿ ಇಂದು ಸಂಜೆ ಸುರೇಶ್ ಅಂಗಡಿ ಅಂತ್ಯಕ್ರಿಯೆ

ಕೊರೋನಾಗೆ ಬಲಿಯಾಗಿರುವ ಸುರೇಶ್ ಅಂಗಡಿ ಅವರ ಮೃತದೇಹವನ್ನು ಕೋವಿಡ್ ಶಿಷ್ಟಾಚಾರದ ಕಾರಣಕ್ಕೆ ದೆಹಲಿಯಿಂದ ಬೆಳಗಾವಿಗೆ ಕಳುಹಿಸಲು ಕೇಂದ್ರ ಒಪ್ಪಲಿಲ್ಲ. ಈ ಹಿನ್ನೆಲೆಯಲ್ಲಿ ದೆಹಲಿಯ ಲಿಂಗಾಯತ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯುತ್ತಿದೆ.

news18-kannada
Updated:September 24, 2020, 8:16 AM IST
Suresh Angadi Funeral – ದೆಹಲಿಯಲ್ಲಿ ಇಂದು ಸಂಜೆ ಸುರೇಶ್ ಅಂಗಡಿ ಅಂತ್ಯಕ್ರಿಯೆ
ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ್ ಅಂಗಡಿ.
  • Share this:
ಬೆಂಗಳೂರು(ಸೆ. 24): ಕೋವಿಡ್​ಗೆ ನಿನ್ನೆ ಬಲಿಯಾಗಿದ್ದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ದೆಹಲಿಯಲ್ಲೇ ನಡೆಯುವುದು ನಿಶ್ಚಿತವಾಗಿದೆ. ಕೋವಿಡ್ ಶಿಷ್ಟಾಚಾರದ ಕಾರಣಕ್ಕೆ ದೆಹಲಿಯಿಂದ ಬೆಳಗಾವಿಗೆ ಅವರನ್ನು ಕರೆದೊಯ್ಯಲು ಕೇಂದ್ರ ಸರ್ಕಾರ ಒಪ್ಪದ ಹಿನ್ನೆಲೆಯಲ್ಲಿ ದೆಹಲಿಯಲ್ಲೇ ಕಾರ್ಯ ನಡೆಯಲಿದೆ. ದೆಹಲಿಯ ದ್ವಾರಕಾ ಸೆಕ್ಟರ್4ರಲ್ಲಿರುವ ಲಿಂಗಾಯತ ರುದ್ರಭೂಮಿಯಲ್ಲಿ ಲಿಂಗಾಯತ ವಿಧಿವಿಧಾನಗಳಿಂದ ಇಂದು ಸಂಜೆ 4:30ಕ್ಕೆ ಅಂತ್ಯಕ್ರಿಯೆ ನಡೆಸಲು ಕುಟುಂಬ ವರ್ಗ ನಿರ್ಧರಿಸಿದೆ. ಹತ್ತಿರದ ಸಂಬಂಧಿಗಳನ್ನ ದೆಹಲಿಗೆ ಕರೆಸಿಕೊಳ್ಳಲಾಗುತ್ತಿದೆ. ಸುರೇಶ್ ಅಂಗಡಿ ಅವರ ಪತ್ನಿ ಈಗಾಗಲೇ ದೆಹಲಿಯಲ್ಲೇ ಇದ್ದಾರೆ. ಪತ್ನಿ ಜೊತೆಗೆ ಅವರ ಒಬ್ಬ ಮಗಳು ಹಾಗೂ ಇಬ್ಬರು ಅಳಿಯಂದಿರು ಕೂಡ ದೆಹಲಿಯಲ್ಲೇ ಇದ್ದಾರೆ. ಬೆಳಗಾವಿಯಲ್ಲಿರುವ ಅವರ ಹಿರಿಯ ಮಗಳೂ ಸ್ಫೂರ್ತಿ ಹಾಗೂ ಇಬ್ಬರು ಸಂಬಂಧಿಕರು ಇಂದು ಬೆಳಗ್ಗೆ ವಿಮಾನದ ಮೂಲಕ ದೆಹಲಿಗೆ ತೆರಳುತ್ತಿದ್ದಾರೆ.

ಕೋವಿಡ್ ಸೋಂಕಿನಿಂದ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ 65 ವರ್ಷದ ಸುರೇಶ್ ಅಂಗಡಿ ನಿನ್ನೆ ರಾತ್ರಿ 8ಕ್ಕೆ ಶಿವೈಕ್ಯರಾಗಿದ್ದಾರೆ. ತಾಯಿ, ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಅವರು ಅಗಲಿದ್ದಾರೆ. ಅವರಿಗೆ ನಾಲ್ವರು ಸಹೋದರರೂ ಇದ್ದಾರೆ. ಸಚಿವ ಜಗದೀಶ್ ಶೆಟ್ಟರ್ ಮತ್ತು ಸುರೇಶ್ ಅಂಗಡಿ ಬೀಗರಾಗಿದ್ದಾರೆ. ಅಂಗಡಿ ತಮ್ಮ ಮಗಳನ್ನ ಶೆಟ್ಟರ್ ಮಗನಿಗೆ ಕೊಟ್ಟು ಮದುವೆ ಮಾಡಿಸಿದ್ದಾರೆ. ಇನ್ನು, ಸಂಸತ್​ನಲ್ಲಿ ಮುಂಗಾರು ಅಧಿವೇಶನದ ವೇಳೆ ನಡೆಸಿದ ಪರೀಕ್ಷೆಯಲ್ಲಿ ಅವರಿಗೆ ಸೋಂಕು ಇರುವುದು ದೃಢಪಟ್ಟು ಅವರನ್ನ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಕೊನೆಗೆ ಬದುಕುಳಿಯಲಿಲ್ಲ. ಕೋವಿಡ್​ಗೆ ಬಲಿಯಾದ ಕೇಂದ್ರ ಸಂಪುಟದ ಮೊದಲ ಸಚಿವ ಅವರಾಗಿದ್ದಾರೆ. ಇತ್ತೀಚೆಗೆ ಮೃತಪಟ್ಟಿದ್ದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೂ ಕೊರೋನಾ ಸೋಂಕು ಇತ್ತು. ದೇಶಾದ್ಯಂತ ಹಲವು ಶಾಸಕರು ಮತ್ತು ಸಂಸದರು ಕೋವಿಡ್​​ಗೆ ಬಲಿಯಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಒಬ್ಬ ಸಚಿವೆ ಕೂಡ ಸೋಂಕಿನಿಂದ ಅಸುನೀಗಿದ್ದರು.

ಇದನ್ನೂ ಓದಿ: Suresh Angadi : ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ಸಂತಾಪ ಸೂಚಿಸಿದ ರಾಜಕೀಯ ನಾಯಕರು

ಇದೇ ವೇಳೆ, ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ ಆರಿಸಿಬಂದಿದ್ದ ಸುರೇಶ್ ಅಂಗಡಿ ಅವರು ರಾಜ್ಯ ಖಾತೆಯ ಕೇಂದ್ರ ರೈಲ್ವೆ ಸಚಿವರಾಗಿದ್ದರು. ಅವರಿಗೆ ಗೌರವವಾಗಿ ಇಂದು ಕರ್ನಾಟಕದಾದ್ಯಂತ ಶೋಕಾಚರಣೆ ನಡೆಸಲಾಗುತ್ತಿದೆ. ರಾಷ್ಟ್ರಧ್ವಜ ಹಾರಾಡುವ ಎಲ್ಲಾ ಕಟ್ಟಡಗಳಲ್ಲೂ ಇಂದು ಅರ್ಧಮಟ್ಟದಲ್ಲಿ ಮಾತ್ರ ಬಾವುಟ ಹಾರಿಸಲು ಸೂಚಿಸಲಾಗಿದೆ. ಇವತ್ತು ದಿನವಿಡೀ ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ. ದೆಹಲಿಯಲ್ಲೂ ಶೋಕಾಚರಣೆ ನಡೆಸಲಾಗುತ್ತಿದ್ದು, ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ರಾಷ್ಟ್ರಧ್ವಜವನ್ನು ಅರ್ಧ ಎತ್ತರದಲ್ಲಿ ಹಾರಿಸುವಂತೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ.

ಇತ್ತ ಬೆಳಗಾವಿಯ ಸಂಪಿಗೆ ನಗರದಲ್ಲಿರುವ ಸುರೇಶ್ ಅಂಗಡಿ ಅವರ ನಿವಾಸದಲ್ಲಿ ನಿನ್ನೆ ರಾತ್ರಿ ನೀರವ ಮೌನ ನೆಲಸಿತ್ತು. ತಾಯಿ ಸೋಮವ್ವ, ಮಗಳು ಡಾ. ಸ್ಫೂರ್ತಿ ಪಾಟೀಲ, ಸಹೋದರ ಚಂದ್ರಪ್ಪ, ಮೊಮ್ಮಗಳು ರಿದ್ಧಿಶಾ, ಆಪ್ತ ಶ್ರೀಕಾಂತ್, ಪಿಎ ರಂಗನಾಥ್, ರಾಜು ಜೋಷಿ ಸೇರಿ ಸಮೀಪದ ಬಂಧು ಬಾಂಧವರ ಆಕ್ರಂದನ ಕಂಡುಬಂತು. ಸುರೇಶ್ ಅಂಗಡಿ ಅವರ ಅಭಿಮಾನಿಗಳು ಬೆಳಗಾವಿಗೆ ತೆರಳಿ ಗೌರವ ಸೂಚಿಸುತ್ತಿದ್ದಾರೆ.
Published by: Vijayasarthy SN
First published: September 24, 2020, 7:42 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading