ಬೆಳಗಾವಿ: ಇಂದು ಬೆಳಗಾವಿ ಅಧಿವೇಶನದಲ್ಲಿ (Belagavi Session) ಮಂಗಳೂರಿನ ಸುರತ್ಕಲ್ ನಿವಾಸಿ ಜಲೀಲ್ ಹತ್ಯೆ (Suratkal Case) ಪ್ರಕರಣವನ್ನು ವಿಪಕ್ಷ ಉಪ ನಾಯಕ ಯು.ಟಿ.ಖಾದರ್ (UT Khader) ಪ್ರಸ್ತಾಪ ಮಾಡಿದರು. ಅನಾವಶ್ಯಕ ಗಲಾಟೆಗೆ ಸರ್ಕಾರ ಕ್ರಮ ತಗೊಂಡಿದ್ರೆ, ಅಲ್ಲಿ ಒಂದು ಕೊಲೆ ಆಗುತ್ತಿರಲಿಲ್ಲ ಎಂದು ಸರ್ಕಾರದ (Government) ವಿರುದ್ಧ ಕಿಡಿಕಾರಿದರು. ಅನೈತಿಕ ಗೂಂಡಾಗಿರಿ ಮಾಡುವರನ್ನು ಬೆಳಗ್ಗೆ ಬಂಧಿಸಿ, ಸಂಜೆ ಬಿಡುಗಡೆ ಮಾಡುತ್ತಾರೆ. ಕೊಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಯು.ಟಿ.ಖಾದರ್ ಆಗ್ರಹಿಸಿದರು. ಜಲೀಲ್ ಹತ್ಯೆ ಬಗ್ಗೆ ಉನ್ನತ ತನಿಖೆ ಆಗಬೇಕು. ಅಲ್ಲದೇ ಕೊಲೆಯಾದ ವ್ಯಕ್ತಿಯ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಸರ್ಕಾರವನ್ನು ಯು.ಟಿ.ಖಾದರ್ ಒತ್ತಾಯಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕರಾವಳಿ ಭಾಗದಲ್ಲಿ ಭಜರಂಗದಳ ಕಾರ್ಯಕರ್ತರಿಂದ (Bhajarangadala Activist) ನೈತಿಕ ಪೊಲೀಸ್ಗಿರಿ (Moral Policing) ನಡೆಯುತ್ತಿದೆ. ಮಂಗಳೂರಲ್ಲಿ ಜಲೀಲ್ ಎಂಬುವನ ಕೊಲೆ ಆಗಿದೆ. ಅದು ಸಿಎಂ ಮಂಗಳೂರಿಗೆ ಹೋದಾಗಲೇ ಕೊಲೆ ಆಗಿದೆ. ಇದಕ್ಕೆ ಕೊನೆ ಯಾವಾಗ ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದರು.
ಸಿಎಂ ಪ್ರಚೋದನಾತ್ಮಕ ಹೇಳಿಕೆಯಿಂದ ಹತ್ಯೆ
ಸಿಎಂ ಪ್ರಚೋದನಾತ್ಮಕ ಹೇಳಿಕೆ ಕೊಟ್ಟಿರುತ್ತಾರೆ. ಸಹಜವಾಗಿಯೇ ಹೇಳಿಕೆ ಕೊಟ್ಟಾಗ ಅದಕ್ಕೆ ಪ್ರತಿರೋಧ ವ್ಯಕ್ತವಾಗುತ್ತದೆ. ಇದಕ್ಕೆ ಯಾಕೆ ಪ್ರೋತ್ಸಾಹ ಕೊಡಬೇಕು. ಒಂದು ಕಡೆ ಆದಾಗ ಸಿಎಂ ಪರಿಹಾರ ಕೊಡ್ತಾರೆ. ಮುಸಲ್ಮಾನರು ಕೊಲೆಯಾದರೆ ಯಾಕೆ ಪರಿಹಾರ ಕೊಡಲ್ಲ ಎಂದು ಸಿದ್ದರಾಮಯ್ಯ ಕೇಳಿದರು.
UAPA ಅಡಿ ಕೇಸ್ ದಾಖಲಿಸಲು ಒತ್ತಾಯ
ಯಾರಿಗೂ ನಾನು ಪರಿಹಾರ ಕೊಡಬೇಡಿ ಎಂತ ಹೇಳಲ್ಲ. ಆದರೆ ಮುಸ್ಲಿಂಮರಿಗೆ ಯಾಕೆ ಪರಿಹಾರ ಕೊಡಲ್ಲ ಎಂದು ಕೇಳುತ್ತಿದ್ದೇನೆ. ಜಲೀಲ್ ಹತ್ಯೆ ಸಂಬಂಧ UAPA ಅಡಿ ಕೇಸ್ ಹಾಕಿ, ಕಠಿಣ ಕ್ರಮ ತೆಗೆದುಕೊಳ್ಳಬೇಕು. ಕರಾವಳಿ ಪ್ರದೇಶದಲ್ಲಿ ಈ ಮಾದರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಿದೆ. ನೈತಿಕ ಪೊಲೀಸ್ಗಿರಿ ಹೆಸರಲ್ಲಿ ಕಾನೂನು ಕೈಗೆತ್ತಿಕೊಳ್ಳುವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸಿದ್ದರಾಮಯ್ಯ ಸರ್ಕಾವನ್ನು ಒತ್ತಾಯಿಸಿದರು.
ಕಾನೂನು ಸಚಿವ ಮಾಧುಸ್ವಾಮಿ ಉತ್ತರ
ಯು.ಟಿ.ಖಾದರ್ ಮತ್ತು ಸಿದ್ದರಾಮಯ್ಯ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಮಾಧುಸ್ವಾಮಿ, ನೈತಿಕ ಪೊಲೀಸ್ಗಿರಿ ಹೆಸರಲ್ಲಿ ಯಾರಿಗೂ ನಾವು ಅಧಿಕಾರ ಕೊಟ್ಟಿಲ್ಲ. ನಾವು ಯಾರಿಗೂ ಫ್ರೀ ಹ್ಯಾಂಡ್ ಕೊಟ್ಟಿಲ್ಲ. ಇಂತಹ ಘಟನೆ ನಡೆದಾಗ ರೆಗ್ಯುಲರ್ ಪೊಲೀಸರು ನೋಡ್ತಾರೆ. ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಗಮನಕ್ಕೆ ತರುತ್ತೇನೆ ಎಂದು ಉತ್ತರ ನೀಡಿದರು.
ಅಂಗಡಿ ಮಾಲೀಕನ ಬರ್ಬರ ಹತ್ಯೆ
ಮಂಗಳೂರಿನ ಸುರತ್ಕಲ್ನಲ್ಲಿ ಭೀಕರ ಕೊಲೆ ನಡೆದಿದೆ. ಅಂಗಡಿಯೊಂದರ ಮಾಲೀಕ ಅಬ್ದುಲ್ ಜಲೀಲ್ ಅಂಗಡಿ ಬಾಗಿಲು ಮುಚ್ಚಿ ಮನೆಗೆ ಹೋಗಬೇಕಿತ್ತು. ಆಗ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು, ಕ್ಷುಲ್ಲಕ ವಿಚಾರಕ್ಕೆ ತಗಾದೆ ತೆಗೆದಿದ್ದಾರೆ. ಮಾತಿಗೆ ಮಾತು ಬೆಳೆದು ಕಿಡಿಗೇಡಿಗಳು ಚಾಕುವಿನಿಂದ ಇರಿದು ಜಲೀಲ್ನನ್ನು ಹತ್ಯೆಗೈದ್ದಾರೆ.
ಇದನ್ನೂ ಓದಿ: Suratkal: ಜಲೀಲ್ ಹತ್ಯೆ ಕೇಸ್; ಶವವಿಟ್ಟು ಪ್ರತಿಭಟನೆ, ಕೊಲೆಗೆ ರಾಜಕೀಯ ಲಿಂಕ್!
ಕಾಂಗ್ರೆಸ್ ರಾಜಕೀಯ ಲಾಭ ಪಡೆಯಲು ಯತ್ನ
ಇನ್ನು ಸಿಎಂ ಬೊಮ್ಮಾಯಿ ಮಾತನಾಡಿದ್ದು, ಪೊಲೀಸರು ಸ್ವತಂತ್ರ್ಯವಾಗಿ ತನಿಖೆ ಮಾಡುತ್ತಾರೆ. ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದು, ಕಾಂಗ್ರೆಸ್ ಇಂತಹ ಕೃತ್ಯದಿಂದ ರಾಜಕೀಯ ಲಾಭ ಪಡೆಯಲು ಯತ್ನಿಸ್ತಿದೆ. ನಮ್ಮ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕ್ರಮಕೈಗೊಳ್ಳುತ್ತೆ ಅಂತ ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ