ಹಾಸನ: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ (HD Deve Gowda) ಕುಟುಂಬದಿಂದ ಮತ್ತೊಬ್ಬರು ರಾಜಕೀಯಕ್ಕೆ ಅಧಿಕೃತವಾಗಿ ಪ್ರವೇಶ ಪಡೆದಿದ್ದಾರೆ. ದೇವೇಗೌಡರ ಮೊಮ್ಮಗ, ಎಚ್.ಡಿ.ರೇವಣ್ಣ (HD Revanna) ಪುತ್ರ ಸೂರಜ್ ರೇವಣ್ಣಗೆ (Suraj Revanna) ಜೆಡಿಎಸ್ (JDS) ಟಿಕೆಟ್ ಘೋಷಿಸಲಾಗಿದೆ. ಡಿ.10ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ (Council Election) ಹಾಸನದಿಂದ ಸೂರಜ್ ರೇವಣ್ಣ ಸ್ಪರ್ಧಿಸಲಿದ್ದಾರೆ. ಜೆಡಿಎಸ್ ನಿಂದ ಸೂರಜ್ ರೇವಣ್ಣಗೆ ಟಿಕೆಟ್ ನೀಡಿರುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಘೋಷಿಸಿದ್ದಾರೆ. ನಾಳೆ ಮಧ್ಯಾಹ್ನ 12 ರಿಂದ 12.30ರೊಳಗೆ ಸೂರಜ್ ರೇವಣ್ಣ ನಾಮಪತ್ರ ಸಲ್ಲಿಸಲಿದ್ದಾರೆ.
ಸೂರಜ್ ರೇವಣ್ಣ ಸ್ಪರ್ಧೆ ಫೈನಲ್
ಎರಡ್ಮೂರು ದಿನಗಳ ಹಿಂದೆ ಹಾಸನದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ರೇಸ್ನಲ್ಲಿ ತಾಯಿ ಭವಾನಿ ರೇವಣ್ಣ, ಪುತ್ರ ಸೂರಜ್ ರೇವಣ್ಣ ಇಬ್ಬರ ಹೆಸರೂ ಕೇಳಿ ಬಂದಿತ್ತು. ಅಂತಿಮವಾಗಿ ಸೂರಜ್ ರೇವಣ್ಣ ಅವರನ್ನು ಕಣಕ್ಕಿಳಿಸಲು ಇಂದು ಜೆಡಿಎಸ್ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ನಿರ್ಧರಿಸಲಾಗಿದೆ. ಎಂಪಿ ನಿವಾಸದಲ್ಲಿ ನಡೆದ ಶಾಸಕರು, ಸಂಸದರ ಸಭೆಯಲ್ಲಿ ಎಲ್ಲಾ ಶಾಸಕರು, ಮುಖಂಡರು ಒಮ್ಮತದ ಅಭಿಪ್ರಾಯದ ಮೇರೆಗೆ ಅಭ್ಯರ್ಥಿ ಘೋಷಣೆ ಮಾಡಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ತಿಳಿಸಿದ್ದಾರೆ.
ಮುಂದುವರೆದ ಕುಟುಂಬ ರಾಜಕಾರಣ
ಜೆಡಿಎಸ್ ವಿರುದ್ಧ ಕುಟುಂಬ ರಾಜಕಾರಣದ ಅಪಾದನೆ ಹಿಂದಿನಿಂದಲೂ ಕೇಳಿ ಬಂದಿದೆ. ದೇವೇಗೌರದ ಪುತ್ರರಾದ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ದಶಕಗಳಿಂದ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಎಚ್ಡಿಕೆ 2 ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಎಚ್ಡಿಕೆ ಪತ್ನಿ ಅನಿತಾ ಕುಮಾರಸ್ವಾಮಿ ಶಾಸಕಿಯಾಗಿದ್ದಾರೆ. ರೇವಣ್ಣ ಪತ್ನಿ ಭವಾನಿ ರೇವಣ್ಣ ಹಾಸನ ಜಿಲ್ಲಾ ಪಂಚಾಯಿತಿಯಲ್ಲಿ ಆಕ್ಟೀವ್ ಇದ್ದಾರೆ. ಎಚ್ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಮಂಡ್ಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ರೇವಣ್ಣ ಕಿರಿಯ ಪುತ್ರ ಪ್ರಜ್ವಲ್ ರೇವಣ್ಣಗಾಗಿ ದೇವೇಗೌಡರು ಹಾಸನ ಲೋಕಸಭಾ ಕ್ಷೇತ್ರ ಬಿಟ್ಟು ಕೊಟ್ಟಿದ್ದರು. ಹಾಸನದಿಂದ ಪ್ರಜ್ವಲ್ ರೇವಣ್ಣ ಸಂಸದರಾಗಿದ್ದಾರೆ. ಈಗ ರೇವಣ್ಣ ಹಿರಿಯ ಪುತ್ರ ಸೂರಜ್ ರೇವಣ್ಣ ಸಹ ರಾಜಕೀಯಕ್ಕೆ ಧುಮುಕ್ಕಿದ್ದಾರೆ.
ಅಪವಾದ ಬೇಡ ಎಂದಿದ್ದರು ದೇವೇಗೌಡರು
ಎರಡ್ಮೂರು ದಿನಗಳ ಹಿಂದೆ ನಡೆದ ಹಾಸನದ ಜೆಡಿಎಸ್ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಬಳಿಕ ಮಾತನಾಡಿದ ಎಚ್.ಡಿ.ದೇವೇಗೌಡ, ಹಾಸನ ಜಿಲ್ಲೆಯ ಪ್ರತಿ ತಾಲ್ಲೂಕಿಗೆ ಹೋಗಿ ಚುನಾಯಿತ ಸದಸ್ಯರೊಂದಿಗೆ ಸಭೆ ಮಾಡುತ್ತೇನೆ. ಜಿ.ಪಂ., ತಾ.ಪಂ. ಮಾಜಿ ಸದಸ್ಯರ ಜೊತೆಯೂ ಚರ್ಚಿಸುತ್ತೇನೆ. ಅನಂತರ ಅಭ್ಯರ್ಥಿ ಯಾರೆಂದು ತೀರ್ಮಾನ ತೆಗೆದುಕೊಳ್ಳುತ್ತೇನೆ. ಇಂದಿನ ಸಭೆಯಲ್ಲಿ ಕೆಲವರು ಭವಾನಿ ರೇವಣ್ಣ, ಸೂರಜ್ ಹೆಸರು ಹೇಳಿದ್ದಾರೆ. ಅಂತಿಮವಾಗಿ ನಮಗೆ ಯಾವುದೇ ಕೆಟ್ಟ ಹೆಸರು ಬರಬಾರದು. ಪಕ್ಷಕ್ಕೆ ದುಡಿದ ನೂರಾರು ಕಾರ್ಯಕರ್ತರಿದ್ದಾರೆ. ನಮ್ಮ ಮನೆಯಲ್ಲಿ ಯಾರನ್ನೂ ನಿಲ್ಲಿಸಲು ತೀರ್ಮಾನ ಮಾಡಿಲ್ಲ. ಯಾವುದೇ ಮನೆತನಕ್ಕೆ ಜೆಡಿಎಸ್ ಸೀಮಿತವಾದ ಪಕ್ಷವಲ್ಲ ಎಂದಿದ್ದರು.
ಇದನ್ನೂ ಓದಿ: ಬಿಜೆಪಿಯಲ್ಲಿರುವ ಗುರುವಿನ ಮಾತು ಮೀರದ ಡಿಕೆಶಿ, ಒಂದೇ ಕರೆಗೆ ನೀಡಿದ್ರು ಪರಿಷತ್ ಟಿಕೆಟ್
ಸಿಡಿದೆದ್ದಿದ್ದ ಶಾಸಕ ಶಿವಲಿಂಗೇಗೌಡ
ಇದೇ ಸಭೆಯಲ್ಲಿ ಅರಶೀಕೆರೆ ಶಾಸಕ ಶಿವಲಿಂಗೇಗೌಡ, ಪಕ್ಷ ವರಿಷ್ಠರ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು. ಈ ಸಭೆ ಬಗ್ಗೆ ನನಗೆ ಗೊತ್ತೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ನಾನು ದೇವೇಗೌಡರ ಸಮ್ಮುಖದಲ್ಲಿ ಶಾಸಕರು-ಸಂಸದರ ಸಭೆ ಎಂದುಕೊಂಡಿದ್ದೆ. ಹೀಗೆ ಸಭೆ ಅಂದಿದ್ರೆ ನಾನು ಬರ್ತಾನೆ ಇರ್ಲಿಲ್ಲ. ನೀವು ಏನಾದ್ರು ಅಂದುಕೊಳ್ಳಿ ನಾನು ನೇರವಾಗೇ ಹೇಳ್ತೀನಿ. ದೇವೇಗೌಡರ ಹಾಗೂ ಕುಮಾರಸ್ವಾಮಿ ಹೆಸರು ಹೇಳಿದಂತೆ ಓಡಿ ಬಂದು ಒತ್ತೋರು ಯಾರೂ ಇಲ್ಲ. ದೇವೇಗೌಡರ, ಕುಮಾರಸ್ವಾಮಿ ಹೆಸರು ಹೇಳಿದ ಕೂಡಲೆ ಓಟ್ ಬರಲ್ಲ ಎಂದು ನೇರವಾಗಿಯೇ ಹೇಳಿದ ಶಿವಲಿಂಗೇಗೌಡ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ