HOME » NEWS » State » SUPREME COURT QUASHES PLEA OF H VISHWANATH QUESTIONING HC INTERIM ORDER ON MLA DISQUALIFICATION DBDEL SNVS

ಸಚಿವರಾಗುವ ವಿಶ್ವನಾಥ್ ಆಸೆ ಭಗ್ನ; ಹೈಕೋರ್ಟ್​ನ ‘ಅನರ್ಹತೆ’ ತೀರ್ಪು ಎತ್ತಿಹಿಡಿದ ಸುಪ್ರೀಂ

ವಿಧಾನಪರಿಷತ್​ಗೆ ನಾಮನಿರ್ದೇಶನಗೊಂಡು ಶಾಸಕರಾಗಿರುವ ವಿಶ್ವನಾಥ್ ಅವರು ಮಂತ್ರಿ ಆಗುವಂತಿಲ್ಲ ಎಂದು ಹೈಕೋರ್ಟ್ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಇದರೊಂದಿಗೆ ವಿಶ್ವನಾಥ್ ಅವರ ಮಂತ್ರಿಮಂಡಲ ಸೇರ್ಪಡೆ ಕನಸು ಭಗ್ನಗೊಂಡಿದೆ.

news18-kannada
Updated:January 28, 2021, 2:09 PM IST
ಸಚಿವರಾಗುವ ವಿಶ್ವನಾಥ್ ಆಸೆ ಭಗ್ನ; ಹೈಕೋರ್ಟ್​ನ ‘ಅನರ್ಹತೆ’ ತೀರ್ಪು ಎತ್ತಿಹಿಡಿದ ಸುಪ್ರೀಂ
ಹೆಚ್. ವಿಶ್ವನಾಥ್.
  • Share this:
ನವದೆಹಲಿ(ಜ. 28): ಶಾಸಕ ಸ್ಥಾನದಿಂದ ಅನರ್ಹಗೊಂಡ ಹೆಚ್ ವಿಶ್ವನಾಥ್ ನೇರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾದರೆ ಮಾತ್ರ ಸಚಿವರಾಗಬಹುದು ಎಂದು ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಹೆಚ್ ವಿಶ್ವನಾಥ್ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ಇಂದು ತಿರಸ್ಕರಿಸಿದೆ. ಇದರೊಂದಿಗೆ ಸಚಿವರಾಗುವ ಹೆಚ್ ವಿಶ್ವನಾಥ್ ಅವರ ಕನಸು ಭಗ್ನಗೊಂಡಿದೆ. ಈಗ ಅವರಿಗೆ ಮಂತ್ರಿಮಂಡಲ ಸೇರುವ ಕೊನೆಯ ಬಾಗಿಲೂ ಮುಚ್ಚಿದಂತಾಗಿದೆ.

ಮೈತ್ರಿ ಸರ್ಕಾರ ಇದ್ದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಂದ 17 ಶಾಸಕರು ರಾಜೀನಾಮೆ ನೀಡಿ ಬಿಎಸ್​ವೈ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣವಾಗಿದ್ದರು. ನಂತರ ಇವರನ್ನ ಸ್ಪೀಕರ್ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದರು. ಇವರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವವರೆಗೂ ಅನರ್ಹ ಶಾಸಕರಾಗಿಯೇ ಇರುತ್ತಾರೆ ಎಂದು ನ್ಯಾಯಾಲಯ ಕೂಡ ತೀರ್ಪು ನ ಈಡಿತ್ತು. ಅದಾದ ಬಳಿಕ ಹೆಚ್ ವಿಶ್ವನಾಥ್ ಸೇರಿ 13 ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧಿಸಿದರು. ಅವರ ಪೈಕಿ ಹುಣಸೂರು ಕ್ಷೇತ್ರದಲ್ಲಿ ವಿಶ್ವನಾಥ್ ಸೋಲಪ್ಪಿದರೆ, ಉಳಿದವರು ಗೆದ್ದರು. ನಂತರ ವಿಧಾನಪರಿಷತ್ ಚುನಾವಣೆಯಲ್ಲಿ ಆರ್ ಶಂಕರ್ ಅವರನ್ನ ನಿಲ್ಲಿಸಿ ಗೆಲ್ಲಿಸಲಾಯಿತು. ಮುನಿರತ್ನ ಕೂಡ ಉಪಚುನಾವಣೆಯಲ್ಲಿ ಗೆದ್ದರು. ಮಸ್ಕಿ ಕ್ಷೇತ್ರದ ಉಪಚುನಾವಣೆ ನಡೆಯಬೇಕಿದ್ದು, ಪ್ರತಾಪ್ ಗೌಡ ಪಾಟೀಲ್ ಅವರ ಹಣೆಬರಹ ನಿರ್ಧಾರವಾಗಬೇಕಿದೆ.

ಉಪಚುನಾವಣೆಗಳಲ್ಲಿ ಗೆದ್ದ ಬಹುತೇಕ ಅನರ್ಹ ಶಾಸಕರು ಮಂತ್ರಿಗಳಾಗಿದ್ದಾರೆ. ಹೆಚ್ ವಿಶ್ವನಾಥ್ ಅವರನ್ನ ಪರಿಷತ್​ಗೆ ನಾಮನಿರ್ದೇಶನ ಮಾಡಲಾಯಿತು. ಆದರೆ, ಅವರು ಮಂತ್ರಿ ಸ್ಥಾನಕ್ಕೆ ಯತ್ನಿಸುತ್ತಿರುವಂತೆಯೇ ರಾಜ್ಯ ಹೈಕೋರ್ಟ್​ನಲ್ಲಿ ಅವರ ವಿರುದ್ಧ ಖಾಸಗಿ ದೂರು ದಾಖಲಾಯಿತು. ಶಾಸಕ ಸ್ಥಾನದ ಅನರ್ಹತೆ ಇರುವ ವಿಶ್ವನಾಥ್ ಅವರು ಮಂತ್ರಿ ಆಗಲು ಸಾಧ್ಯವಿಲ್ಲ ಎಂದು ದೂರಿನಲ್ಲಿ ಹೇಳಲಾಯಿತು. ನವೆಂಬರ್ 30ರಂದ ನೀಡಿದ ತೀರ್ಪಿನಲ್ಲಿ ರಾಜ್ಯ ಹೈಕೋರ್ಟ್ ವಿಭಾಗೀಯ ಪೀಠವು ವಿಶ್ವನಾಥ್ ಮಂತ್ರಿ ಆಗಲು ಸಾಧ್ಯ ಇಲ್ಲ ಎಂದು ತೀರ್ಪು ನೀಡಿತು. ನಾಮನಿರ್ದೇಶನಗೊಂಡು ಶಾಸಕರಾದರೆ ಮಂತ್ರಿ ಆಗಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ಗೆದ್ದು ಶಾಸಕರಾದರೆ ಮಾತ್ರ ಮಂತ್ರಿ ಆಗಬಹುದು ಎಂದು ಕೋರ್ಟ್ ಆದೇಶ ನೀಡಿತು. ಈ ತೀರ್ಪನ್ನು ಪ್ರಶ್ನಿಸಿ ವಿಶ್ವನಾಥ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಸರ್ವೋಚ್ಚ ನ್ಯಾಯಾಲಯ ಕೂಡ ಹೈಕೋರ್ಟ್ ತೀರ್ಪನ್ನೇ ಎತ್ತಿಹಿಡಿದಿದೆ.

ಇದನ್ನೂ ಓದಿ: ಖಾಸಗಿ ಶಾಲೆಗಳ ಶುಲ್ಕ ನಿಗದಿ ವಿಚಾರ; ಜ. 31ರಂದು ಪ್ರತಿಭಟನೆಗೆ ಪೋಷಕರ ನಿರ್ಧಾರ

ಮೈತ್ರಿಪಾಳಯದಿಂದ ಬಿಜೆಪಿಗೆ ವಲಸೆ ಬಂದ 16 ಮಂದಿ ಪೈಕಿ 11 ಮಂದಿ ಸದ್ಯ ಸಂಪುಟದಲ್ಲಿದ್ದಾರೆ. ಹೆಚ್ ನಾಗೇಶ್ ಅವರು ಮಂತ್ರಿಯಾಗಿದ್ದರೂ ಸದ್ಯ ಸಂಪುಟದಿಂದ ಹೊರಗೆ ಬಂದಿದ್ದಾರೆ. ಹೆಚ್ ವಿಶ್ವನಾಥ್, ಮುನಿರತ್ನ, ಮಹೇಶ್ ಕುಮಟಳ್ಳಿ ಮತ್ತು ಪ್ರತಾಪ್ ಗೌಡ ಪಾಟೀಲ್ ಅವರಿಗೆ ಇನ್ನೂ ಮಂತ್ರಿಭಾಗ್ಯ ಸಿಕ್ಕಿಲ್ಲ. ಪ್ರತಾಪ್ ಗೌಡ ಪಾಟೀಲ್ ಅವರಿಗೆ ಇನ್ನೂ ಉಪಚುನಾವಣೆಯ ದಾರಿ ಇದೆ. ಮಹೇಶ್ ಕುಮಟಳ್ಳಿ ಮತ್ತು ಮುನಿರತ್ನಗೆ ಮುಂದಿನ ದಿನಗಳಲ್ಲಿ ಮಂತ್ರಿಮಂಡಲ ಸೇರ್ಪಡೆ ಮಾಡುವ ಭರವಸೆಯನ್ನ ಸಿಎಂ ನೀಡಿದ್ದಾರೆನ್ನಲಾಗಿದೆ. ಈಗ ವಿಶ್ವನಾಥ್ ಅವರೊಬ್ಬರಿಗೆ ಮಾತ್ರ ದಾರಿ ಮುಚ್ಚಿದಂತಾಗಿದೆ.

13 ಕ್ಷೇತ್ರಗಳ ಉಪಚುನಾವಣೆಯ ವೇಳೆ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸದಂತೆ ಯಡಿಯೂರಪ್ಪ ನೀಡಿದ ಸಲಹೆಯನ್ನ ವಿಶ್ವನಾಥ್ ಕೇಳಿದ್ದರೆ ಅವರನ್ನ ಶಿಕ್ಷಕರು ಅಥವಾ ಪದವೀಧರ ಕ್ಷೇತ್ರಗಳಲ್ಲಿ ಕಣಕ್ಕಿಳಿಸುವುದರ ಮೂಲಕವೋ ಅಥವಾ ಪರಿಷತ್ ಚುನಾವಣೆಯಲ್ಲಿ ಕಣಕ್ಕಿಳಿಸಿಯೋ ಶಾಸಕರನ್ನಾಗಿ ಮಾಡುವ ಸಾಧ್ಯತೆ ಇತ್ತು ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.

ಇದೇ ವೇಳೆ, ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಹೆಚ್ ವಿಶ್ವನಾಥ್ ಇದೀಗ ಮೌನಕ್ಕೆ ಶರಣಾಗಿದ್ಧಾರೆ. ಮಾಧ್ಯಮಗಳೊಂದಿಗೆ ಇನ್ನೂ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.ವರದಿ: ಧರಣೀಶ್ ಬೂಕನಕೆರೆ
Published by: Vijayasarthy SN
First published: January 28, 2021, 2:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories