SC Verdict on Disqualified MLAs: ಅನರ್ಹತೆ ಖಾಯಂ, ಚುನಾವಣೆ ಸ್ಪರ್ಧೆಗೆ ಅವಕಾಶ; ಅನರ್ಹ ಶಾಸಕರು ಹೇಳಿದ್ದೇನು?

SC Verdict on Karnataka Disqualified MLAs: ಸುಪ್ರೀಂ ಕೋರ್ಟ್​​ನಲ್ಲಿ ಜಯ ಸಿಗಬಹುದು ಎನ್ನುವ ಆಸೆ ಹೊತ್ತಿದ್ದ ಅನರ್ಹ ಶಾಸಕರಿಗೆ ಪ್ರತಿ ಬಾರಿಯೂ ಹಿನ್ನಡೆ ಆಗುತ್ತಲೇ ಇತ್ತು. ಸ್ಪೀಕರ್​ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿ ಎರಡು ತಿಂಗಳಾದರೂ ಪ್ರಕರಣ ವಿಚಾರಣೆಗೆ ಬಂದಿರಲಿಲ್ಲ. ಈಗ ಕೊನೆಗೂ ತೀರ್ಪು ಹೊರ ಬಿದ್ದಿದೆ. 

Rajesh Duggumane | news18-kannada
Updated:November 13, 2019, 12:08 PM IST
SC Verdict on Disqualified MLAs: ಅನರ್ಹತೆ ಖಾಯಂ, ಚುನಾವಣೆ ಸ್ಪರ್ಧೆಗೆ ಅವಕಾಶ; ಅನರ್ಹ ಶಾಸಕರು ಹೇಳಿದ್ದೇನು?
ಅನರ್ಹ ಶಾಸಕರು
  • Share this:
ನವದೆಹಲಿ (ನ.12): ಕರ್ನಾಟಕದ 17 ಶಾಸಕರನ್ನು ಅನರ್ಹ ಮಾಡಿದ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ ಇಂದು ತೀರ್ಪು ನೀಡಿದೆ. ಮಾಜಿ ಸ್ಪೀಕರ್​ ಕೆ.ಆರ್​. ರಮೇಶ್​ ಕುಮಾರ್​ ನೀಡಿದ್ದ ಅನರ್ಹತೆ ಆದೇಶವನ್ನು ಕೋರ್ಟ್​ ಎತ್ತಿ ಹಿಡಿದಿದೆ. ಅದರ ಜತೆಜತೆಗೆ ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವನ್ನೂ ಸುಪ್ರೀಂ ಕೋರ್ಟ್​​ ನೀಡಿದೆ. ಈ ಮೂಲಕ ಸ್ಪೀಕರ್​ ಆದೇಶಕ್ಕೂ ಕೋರ್ಟ್​ ಮನ್ನಣೆ ನೀಡುತ್ತಲೇ, ಅನರ್ಹ ಶಾಸಕರ ಮನವಿಗೂ ಸ್ಪಂದಿಸಿದೆ.  

ನ್ಯಾ. ಎನ್.ವಿ. ರಮಣ, ನ್ಯಾ. ಸಂಜೀವ್ ಖನ್ನಾ, ನ್ಯಾ. ಕೃಷ್ಣ ಮುರಾರಿ ಅವರಿರುವ ತ್ರಿಸದಸ್ಯ ಪೀಠ ಪ್ರಕರಣದ ವಿಚಾರಣೆಯನ್ನು ಆಲಿಸಿ ಆದೇಶವನ್ನು ಕಾಯ್ದಿರಿಸಿತ್ತು. ಅದರಂತೆ ಇಂದು ಮುಂಜಾನೆ ಸರಿಯಾಗಿ 10.30ಕ್ಕೆ ತೀರ್ಪನ್ನು ನೀಡಿದೆ. "17 ಶಾಸಕರ ಅನರ್ಹತೆ ಎತ್ತಿ ಹಿಡಿದಿದ್ದೇವೆ. ಆದರೆ, ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುತ್ತಿದ್ದೇವೆ. 2023ರವರೆಗೂ ಚುನಾವಣೆಗೆ ಸ್ಪರ್ಧಿಸಲು ನಿರ್ಬಂಧ ಹೇರುವುದು ಸರಿಯಲ್ಲ," ಎಂದು ಕೋರ್ಟ್​ ಹೇಳಿದೆ.

15ನೇ ವಿಧಾನಸಭೆಯಲ್ಲಿ ಅನರ್ಹ ಶಾಸಕರು ಯಾವುದೇ ಅಧಿಕಾರವನ್ನು ಹೊಂದದಂತೆ ಸ್ಪೀಕರ್​ ಆದೇಶ ನೀಡಿದ್ದರು. ಅಂದರೆ 2023ರ ವಿಧಾನಸಭಾ ಚುನಾವಣೆಯವರೆಗೂ ಅನರ್ಹ ಶಾಸಕರು ಯಾವುದೇ ಚುನಾವಣಾ ಪ್ರಕ್ರಿಯೆಯಲ್ಲಿ ಸ್ಪರ್ಧಿಸುವಂತಿರಲಿಲ್ಲ. ಆದರೆ ಸುಪ್ರೀಂ ಕೋರ್ಟ್​ ಸ್ಪೀಕರ್ ಮಾಡಿದ್ದ ಈ ಆದೇಶವನ್ನು ತಿರಸ್ಕರಿಸಿದೆ. ಶಾಸಕರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಈಗ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದ್ದು, ಅನರ್ಹರಿಗೆ ಕೊಂಚ ರಿಲೀಫ್​ ಸಿಕ್ಕಿದೆ. ಡಿಸೆಂಬರ್​ 5ರಂದು ಉಪ ಚುನಾವಣೆ ನಡೆಯಲಿದ್ದು, ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್​ ನೀಡಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

ಅನರ್ಹರು ಹೇಳಿದ್ದೇನು?:ಕಾಂಗ್ರೆಸ್​-ಜೆಡಿಎಸ್​ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದ 17 ಶಾಸಕರು ರಾಜೀನಾಮೆ ನೀಡಿ ಮುಂಬೈ ಸೇರಿದ್ದರು. ಈ ಮೂಲಕ ಸರ್ಕಾರ ಪತನಕ್ಕೆ ಕಾರಣವಾಗಿದ್ದರು. ಇದಾದ ಬೆನ್ನಲ್ಲೇ ಶಾಸಕರು ನೀಡಿರುವ ರಾಜೀನಾಮೆ ಸಕಾರಣದಿಂದ ಕೂಡಿಲ್ಲ ಎಂಬ ಕಾರಣ ನೀಡಿ ಅಂದಿನ ಸ್ಪೀಕರ್ ರಮೇಶ್ ಕುಮಾರ್ ಕುಮಾರ್ 17 ಶಾಸಕರನ್ನು ಅನರ್ಹಗೊಳಿಸಿ ಜುಲೈ 28ರಂದು ಮಹತ್ವದ ಆದೇಶ ಹೊರಡಿಸಿದ್ದರು. ಇದರಿಂದ ವಿಚಲಿತರಾದ ಅನರ್ಹ ಶಾಸಕರು ಸ್ಪೀಕರ್ ಆದೇಶ ಪ್ರಶ್ನಿಸಿ ಆಗಸ್ಟ್​ 1ರಂದು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು.

ಸುಪ್ರೀಂ ಕೋರ್ಟ್​​ನಲ್ಲಿ ಜಯ ಸಿಗಬಹುದು ಎನ್ನುವ ಆಸೆ ಹೊತ್ತಿದ್ದ ಅನರ್ಹ ಶಾಸಕರಿಗೆ ಪ್ರತಿ ಬಾರಿಯೂ ಹಿನ್ನಡೆ ಆಗುತ್ತಲೇ ಇತ್ತು. ಸ್ಪೀಕರ್​ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿ ಎರಡು ತಿಂಗಳಾದರೂ ಪ್ರಕರಣ ವಿಚಾರಣೆಗೆ ಬಂದಿರಲಿಲ್ಲ. ಈಗ ಕೊನೆಗೂ ತೀರ್ಪು ಹೊರ ಬಿದ್ದಿದೆ, ಅನರ್ಹರಿಗೆ ಸ್ವಲ್ಪ ರಿಲೀಫ್​ ಸಿಕ್ಕಿದೆ.ಅನರ್ಹ ಶಾಸಕರು ಯಾರ್ಯಾರು?:

ಮೊದಲ ಹಂತದಲ್ಲಿ ಕಾಂಗ್ರೆಸ್​ನ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿಯ ಮಹೇಶ್ ಕುಮಠಹಳ್ಳಿ, ರಾಣೇಬೆನ್ನೂರು ಶಾಸಕ ಆರ್. ಶಂಕರ್ ಅವರನ್ನು ಅಂದಿನ ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು. ಇದಾದ ಬೆನ್ನಲ್ಲೇ ಮಸ್ಕಿ ಶಾಸಕ ಪ್ರತಾಪ ಗೌಡ ಪಾಟೀಲ್, ಯಶವಂತಪುರದ ಎಸ್.ಟಿ. ಸೋಮಶೇಖರ್, ಕೆ.ಆರ್​.ಪುರದ ಭೈರತಿ ಬಸವರಾಜು, ಯಲ್ಲಾಪುರದ ಶಿವರಾಮ್ ಹೆಬ್ಬಾರ್, ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್, ಆರ್​.ಆರ್​. ನಗರ ಶಾಸಕ ಮುನಿರತ್ನ, ಶಿವಾಜಿನಗರ ಶಾಸಕ ರೋಷನ್ ಬೇಗ್, ಚಿಕ್ಕಬಳ್ಳಾಪುರದ ಡಾ. ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್, ಮಹಾಲಕ್ಷ್ಮೀ ಲೇಔಟ್​ನ ಕೆ. ಗೋಪಾಲಯ್ಯ, ಕೆ.ಆರ್​. ಪೇಟೆಯ ನಾರಾಯಣಗೌಡ, ವಿಜಯನಗರದ ಆನಂದ್ ಸಿಂಗ್, ಹುಣಸೂರಿನ ಹೆಚ್. ವಿಶ್ವನಾಥ್, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಅನರ್ಹಗೊಳಿಸಿದ್ದರು.
First published:November 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ