ಮಹದಾಯಿ ಯೋಜನೆ ಕಾಮಗಾರಿ ಸದ್ಯಕ್ಕೆ ಆರಂಭಿಸದಂತೆ ಕರ್ನಾಟಕಕ್ಕೆ ಸುಪ್ರೀಂ ಸೂಚನೆ

2014ರ ಮಧ್ಯಂತರ ಆದೇಶದಲ್ಲಿ ನೀಡಿರುವ ನಿರ್ದೇಶನ ಪಾಲಿಸಬೇಕು. ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಬೇಕು.  ಪರಿಸರ ಮತ್ತು ಅರಣ್ಯ ಇಲಾಖೆ ಅನುಮತಿ ಪಡೆಯಬೇಕು. ಇದಲ್ಲದೆ ಡಿಪಿಆರ್​ಗೆ ಒಪ್ಪಿಗೆ ಪಡೆದುಕೊಳ್ಳಬೇಕು. ಪರಿಸರ ಮೌಲ್ಯಮಾಪನ ವರದಿ ಮಾಡಿಸಿ ಒಪ್ಪಿಗೆ ಪಡೆಯಬೇಕು ಎಂದು ಸುಪ್ರೀಂ ಆದೇಶಿಸಿತು.

ಸುಪ್ರೀಂ ಕೋರ್ಟ್​​

ಸುಪ್ರೀಂ ಕೋರ್ಟ್​​

 • Share this:
  ನವದೆಹಲಿ(ಮಾ.02): ಮಹಾದಾಯಿ ನದಿ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲು ಕರ್ನಾಟಕಕ್ಕೆ ಕೈಗೆ ಬಂದ ತುತ್ತು ಬಾಯಿಗೆ ತಲುಪಲು ಇನ್ನೂ ಸಾಧ್ಯವಾಗುತ್ತಿಲ್ಲ. ಮಹದಾಯಿ ಯೋಜನೆಯನ್ನು ತತ್​ಕ್ಷಣವೇ ಆರಂಭಿಸಬೇಡಿ ಎಂದು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೊರ್ಟ್ ಸೂಚಿಸಿದೆ.


  ಮಹದಾಯಿ ಪ್ರಕರಣದಲ್ಲಿ ಕರ್ನಾಟಕದ ಯೋಜನೆಯನ್ನು ಆಕ್ಷೇಪಿಸಿ ಗೋವಾ ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆಯನ್ನು ನ್ಯಾ‌.ಚಂದ್ರಚೂಡ್, ನ್ಯಾ.‌ಅಜಯ್ ರಸ್ಟೋಗಿ ದ್ವಿಸದಸ್ಯ ಪೀಠವು ನಡೆಸಿತು. "2014ರ ಮಧ್ಯಂತರ ಆದೇಶದಲ್ಲಿ ನೀಡಿರುವ ನಿರ್ದೇಶನ ಪಾಲಿಸಬೇಕು. ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಬೇಕು.  ಪರಿಸರ ಮತ್ತು ಅರಣ್ಯ ಇಲಾಖೆ ಅನುಮತಿ ಪಡೆಯಬೇಕು. ಇದಲ್ಲದೆ ಡಿಪಿಆರ್​ಗೆ ಒಪ್ಪಿಗೆ ಪಡೆದುಕೊಳ್ಳಬೇಕು. ಪರಿಸರ ಮೌಲ್ಯಮಾಪನ ವರದಿ ಮಾಡಿಸಿ ಒಪ್ಪಿಗೆ ಪಡೆಯಬೇಕು," ಎಂದು ಸುಪ್ರೀಂ ಆದೇಶಿಸಿತು.

  ಮಹದಾಯಿ ನದಿ ನೀರು ಹಂಚಿಕೆ ವಿವಾದ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆ ವಿರುದ್ಧ ಗೋವಾ ಸರ್ಕಾರ ಮತ್ತೆ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿತ್ತು.  ಗೋವಾ ಸರ್ಕಾರದ ಪರ ಮುಕುಲ್ ರೋಹ್ಟಗಿ ವಾದ ಮಂಡಿಸಿದರು. ಕರ್ನಾಟಕದ ಯೋಜನೆಗಳಿಗೆ ಅನುಮತಿ ನೀಡದಂತೆ ಗೋವಾ ಆಕ್ಷೇಪ ವ್ಯಕ್ತಪಡಿಸಿತು. "ಮಹದಾಯಿ ಟ್ರಿಬ್ಯುನಲ್ ತೀರ್ಪು ನೀಡಿದೆ. ಆದರೆ ಇನ್ನೂ ಸ್ಪಷ್ಟೀಕರಣ ನೀಡಬೇಕಿದೆ. ಎಲ್ಲಾ ರಾಜ್ಯಗಳು ಸ್ಪಷ್ಟೀಕರಣ ಕೇಳಿವೆ. ಈ ನಡುವೆ ಕೇಂದ್ರ ಅಧಿಸೂಚನೆ ಹೊರಡಿಸಿದೆ. ಹಾಗಂತ ಯೋಜನೆ ಆರಂಭಿಸಲು ಸಾಧ್ಯವಿಲ್ಲ. ಕರ್ನಾಟಕ ನೆಲದಲ್ಲಿ ಯೋಜನೆ ಸಾಧ್ಯವಿಲ್ಲ," ಎಂದರು.

  ಮಹದಾಯಿ ಹೋರಾಟಕ್ಕೆ ಮಣಿದ ಕೇಂದ್ರ; ಯೋಜನೆಗೆ ಪರಿಸರ ಇಲಾಖೆ ಒಪ್ಪಿಗೆ

  ಮುಂದುವರೆದ ಅವರು, "ಯಡಿಯೂರಪ್ಪ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಬೇಕು. ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕು.  ಮಹದಾಯಿ ನದಿ ಪಾತ್ರದ 5 ಪಕ್ಷಿಧಾಮಗಳಿಗೆ ಧಕ್ಕೆ ಆಗಬಾರದು. ಕರ್ನಾಟಕದ ಪಕ್ಷಿಧಾಮಗಳಿಗೂ ಧಕ್ಕೆ ಆಗಬಾರದು. ಪ್ರಕರಣ ಇತ್ಯರ್ಥ ಆಗುವರೆಗೆ ಯೋಜನೆ ಆರಂಭಿಸಬಾರದು. ಯೋಜನೆ ಪ್ರಾರಂಭಿಸುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ಧಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಯೋಜನೆ ಆರಂಭಿಸದಂತೆ ಕರ್ನಾಟಕಕ್ಕೆ ಸೂಚನೆ ನೀಡಿ," ಎಂದು ಗೋವಾ ಪರ ವಕೀಲರು ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ನ್ಯಾಯಮೂರ್ತಿಗಳು, ಮಾಧ್ಯಮಗಳ ವರದಿಯನ್ನು ಗಂಭೀರವಾಗಿ ಪರಿಗಣಿಸಬೇಡಿ ಎಂದು ತಿಳಿಹೇಳಿದರು.

  ಮಹದಾಯಿ ವಿಚಾರದಲ್ಲಿ ಕರ್ನಾಟಕ ಮೇಲೆ ಗೋವಾ ಕ್ಯಾತೆ ತೆಗೆಯುತ್ತಿರುವುದು ಹೊಸದಲ್ಲ. ಗೋವಾದಿಂದಾಗಿಯೇ ಕರ್ನಾಟಕ ಮಹದಾಯಿ ಯೋಜನೆ ಕಾಮಗಾರಿ ಪ್ರಾರಂಭಿಸಲು ಸಾಧ್ಯವಾಗುತ್ತಿಲ್ಲ. ಕುಡಿಯುವ ನೀರಿನ ಯೋಜನೆ ಪ್ರಾರಂಭಕ್ಕೆ ಅಡ್ಡಿ ಇಲ್ಲ ಎಂದು ಕೇಂದ್ರ ಇಲಾಖೆಯೇ ಹೇಳಿದೆ. ಫೆ. 20ರ ಅಧಿಸೂಚನೆಗೂ ಒಪ್ಪಿಗೆ ನೀಡಿದ್ದ ಗೋವಾ ಈಗ ಯೋಜನೆಗಳಿಗೆ ಅನುಮತಿ ನೀಡಬಾರದೆಂದು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದೆ.

  ಮಹದಾಯಿ ನದಿ ನೀರು ಹಂಚಿಕೆ ವಿಚಾರ; ಕೊನೆಗೂ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ
  First published: