ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಬಾದಾಮಿ ಕ್ಷೇತ್ರದಿಂದಲೇ (Badami Constituency) ಸ್ಪರ್ಧಿಸುವಂತೆ ಅಭಿಮಾನಿಗಳು ಹಾಗೂ ಕೈ ಕಾರ್ಯಕರ್ತರ (Congress Activist) ಆಗ್ರಹಿಸಿದ್ದಾರೆ. ನೂರಾರು ಕ್ರೂಸರ್ ವಾಹನಗಳಲ್ಲಿ ಬಾದಾಮಿಯಿಂದ ಸಿದ್ದರಾಮಯ್ಯ ಅಭಿಮಾನಿಗಳು ಬೆಂಗಳೂರಿಗೆ (Bengaluru) ತೆರಳಿದ್ದಾರೆ. ಸುಮಾರು 300ಕ್ಕೂ ಹೆಚ್ಚು ಕ್ರೂಸರ್ ವಾಹನಗಳಲ್ಲಿ ಆಗಮನಿಸಿರೋ ಸಿದ್ದರಾಮಯ್ಯ ಅಭಿಮಾನಿಗಳು (Siddaramaiah Fans), ಬೆಂಗಳೂರಿನ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿ, ಬಾದಾಮಿಯಿಂದಲೇ ಸ್ಪರ್ಧಿಸಿ ಎಂದು ಒತ್ತಡ ಹಾಕಲಿದ್ದಾರೆ. ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧೆಗೆ ಒಪ್ಪದಿದ್ರೆ ಅವರ ಮನೆ ಎದುರೇ ಧರಣಿ ಕೂಡಲು ಅಭಿಮಾನಿಗಳು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇತ್ತ ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಇಲ್ಲಿಯ ಸ್ಥಳೀಯ ನಾಯಕರು ಸಹ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕಿದ್ದಾರೆ. ಆದರೆ ಸಿದ್ದರಾಮಯ್ಯ ಮಾತ್ರ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡೋದಾಗಿ ಘೋಷಣೆ ಮಾಡಿದ್ದಾರೆ.
ವರುಣಾ ಕ್ಷೇತ್ರದಿಂದಲೂ ಒತ್ತಡ
ಬಾದಾಮಿ ಮತ್ತು ವರುಣಾ ಕ್ಷೇತ್ರದಿಂದ ಒತ್ತಡ ಹೆಚ್ಚಾದ ಹಿನ್ನೆಲೆ ಹೈಕಮಾಂಡ್ ಸೂಚಿಸಿದ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವೆ ಎಂದು ಹೇಳುತ್ತಿದ್ದಾರೆ. ಸದ್ಯ ವರುಣಾ ಕ್ಷೇತ್ರದ ಶಾಸಕ, ಪುತ್ರ ಯತೀಂದ್ರ ಸಿದ್ದರಾಮಯ್ಯ ತಂದೆಗಾಗಿ ಕ್ಷೇತ್ರ ಬಿಟ್ಟುಕೊಡಲು ಸಿದ್ಧ ಎಂದು ಹೇಳಿದ್ದಾರೆ.
300ಕ್ಕೂ ಅಧಿಕ ಒತ್ತಡ
ಬಾದಾಮಿ ಕ್ಷೇತ್ರದಿಂದ ತಡ ರಾತ್ರಿ ನೂರಾರು ಕ್ರೂಸರ್ ವಾಹನಗಳ ಮೂಲಕ ಬೆಂಗಳೂರಿಗೆ ಸಿದ್ದರಾಮಯ್ಯ ಅಭಿಮಾನಿಗಳು ಆಗಮಿಸಿದ್ದಾರೆ. ಸಿದ್ದರಾಮಯ್ಯ ನಿವಾಸಕ್ಕೆ ತೆರಳಿ ಕ್ಷೇತ್ರ ಬಿಡದಂತೆ ಮನವಿ ಮಾಡಿಕೊಳ್ಳಲಿದ್ದಾರೆ. ಬಾದಾಮಿ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯ್ತಿಯಿಂದ ಜನರು ಬೆಂಗಳೂರಿಗೆ ಬಂದಿಳಿದಿದ್ದಾರೆ.
ಬಾದಾಮಿ ಕ್ಷೇತ್ರದ ಹಂಸನೂರ ಜಿಲ್ಲಾ ಪಂಚಾಯತ್ ವ್ಯಾಪ್ತಿಯಿಂದ ಸುಮಾರು 40 ಕ್ರೂಸರ್ ವಾಹನ, ಕಟಗೇರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಿಂದ ಸುಮಾರು 40, ನಂದಿಕೇಶ್ವರ ಜಿ.ಪಂ ವ್ಯಾಪ್ತಿಯಲ್ಲಿ ಸುಮಾರು 40, ಮುಷ್ಟಿಗೇರಿ ಜಿ.ಪಂ ವ್ಯಾಪ್ತಿಯಲ್ಲಿ ಸುಮಾರು 40, ನೀಲಗುಂದ ಜಿ.ಪಂ ವ್ಯಾಪ್ತಿಯಲ್ಲಿ ಸುಮಾರು 40, ಜಾಲಿಹಾಳ ಜಿ.ಪಂ ವ್ಯಾಪ್ತಿಯಲ್ಲಿ ಸುಮಾರು 50 ಹಾಗೂ ಬಾದಾಮಿ, ಗುಳೇದಗುಡ್ಡ, ಕೆರೂರ ನಗರಗಳಿಂದ 100ಕ್ಕೂ ಅಧಿಕ ವಾಹನಗಳಲ್ಲಿ ಕಾರ್ಯಕರ್ತರು ರಾಜಧಾನಿಗ ಬಂದಿದ್ದಾರೆ.
ಕೋಲಾರದಲ್ಲಿ ಆಪರೇಷನ್ ಕಾಂಗ್ರೆಸ್
ಸೋಮವಾರ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸ್ಥಳೀಯ ಮುಖಂಡರು ಕಾಂಗ್ರೆಸ್ ಸೇರ್ಪಡೆಗೊಂಡರು. ಕೋಲಾರದ ನಂದಿನಿ ಪ್ಯಾಲೇಸ್ನಲ್ಲಿ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ತೊರೆದು ಹಲವರು ಕಾಂಗ್ರೆಸ್ ಬಾವುಟ ಹಿಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಿಮ್ಮೆಲ್ಲರ ಆಶೀರ್ವಾದದೊಂದಿಗೆ ನಾನು ಕೋಲಾರ ಶಾಸಕನಾದ್ರೆ ಅಭಿವೃದ್ಧಿ ಮಾಡುತ್ತೇನೆ. ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ಶ್ರಮಿಸುವೆ ಎಂದು ಹೇಳುವ ಮೂಲಕ ಕೋಲಾರದಿಂದಲೇ ಸ್ಪರ್ಧೆ ಎಂಬುದನ್ನು ಖಚಿತಪಡಿಸಿದರು.
ಯಾರ ಮನೆಯನ್ನೂ ಹಾಳು ಮಾಡಿಲ್ಲ
ನನ್ನನ್ನು ಭೇಟಿ ಆಗಲು ಯಾರ ಸಹಾಯ ಬೇಕಿಲ್ಲ. ನೇರವಾಗಿ ಬಂದು ನನ್ನನ್ನು ಭೇಟಿ ಮಾಡಬಹುದು. ನನ್ನದು ತೆರೆದ ಪುಸ್ತಕ. ನಾನು ಯಾರ ಮನೆಯನ್ನೂ ಹಾಳು, ಲೂಟಿ ಮಾಡಲ್ಲ. ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲ. ಯಾರಾದ್ರು ಒಬ್ಬ ಗುತ್ತಿಗೆದಾರ ನಾನು ಲಂಚ ತೆಗೆದುಕೊಂಡ ಆರೋಪ ಮಾಡಿದ್ರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: Praveen Nettar: ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗೆ SDPI ಟಿಕೆಟ್; ಮಗನನ್ನ ಕೊಂದ ಪಾಪಿಗೆ ಟಿಕೆಟ್ ಬೇಡ ಎಂದ ಪೋಷಕರು
ಜೆಡಿಎಸ್ ಬಗ್ಗೆ ವ್ಯಂಗ್ಯ
ಒಂದು ಹಂತದ ಪ್ರಜಾಧ್ವನಿ ಯಾತ್ರೆ ಮುಗಿಸಿ, 2ನೇ ಹಂತದ ಯಾತ್ರೆ ಮಾಡುತ್ತಿದ್ದೇವೆ. ಪ್ರಜಾಧ್ವನಿಗೆ ಎಲ್ಲಡೆ ಜನಸಾಗರ ಸೇರುತ್ತಿದೆ. ಪೂರ್ವದಲ್ಲಿ ಸೂರ್ಯ ಹುಟ್ಟುವುದೆಷ್ಟು ಸತ್ಯವೋ, ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಅಷ್ಟೆ ಸತ್ಯ. ಜೆಡಿಎಸ್ ಏಳೆಂಟು ಜಿಲ್ಲೆಯಿಂದ 15 ಸೀಟು ಗೆದ್ದರೆ ಹೆಚ್ಚು. ಆದರೂ ಕೂಡ ಜೆಡಿಎಸ್ ನಾವು 123 ಸೀಟು ಬರ್ತೀವಿ ಎಂದು ಹೇಳ್ತಿದ್ದಾರೆಂದು ವ್ಯಂಗ್ಯ ಮಾಡಿದರು.
ಕಾರ್ಯಕ್ರಮದಲ್ಲಿ MLC ಅನಿಲ್ ಕುಮಾರ್, ನಸೀರ್ ಅಹ್ಮದ್, ಶಾಸಕರಾದ ನಂಜೇಗೌಡ, ಕೃಷ್ಣಬೈರೇಗೌಡ, ಎಸ್.ಎನ್ ನಾರಾಯಣಸ್ವಾಮಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಯಣ ಸೇರಿದಂತೆ ಅನೇಕ ಮುಖಂಡರು ಸಿದ್ದರಾಮಯ್ಯ ಅವರಿಗೆ ಸಾಥ್ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ