Lok Sabha Election Result 2019: ಗೌಡರ ಭದ್ರಕೋಟೆಯನ್ನೇ ಭೇದಿಸಿದ ಸುಮಲತಾ; ಮೊದಲ ಬಾರಿ ಸಂಸತ್​ ಪ್ರವೇಶಿಸಲಿರುವ ಅಂಬಿ​ ಮಡದಿ

Lok Sabha Election Result 2019: ಮಂಡ್ಯ ಜನರ ಮಾತು, ಪ್ರೀತಿಗೆ ಕಟ್ಟು ಬಿದ್ದು ನಾನು ಚುನಾವಣೆಗೆ ನಿಂತಿದ್ದೇನೆ ಹೊರತು ಸ್ವಾರ್ಥ ಉದ್ದೇಶ ನನಗಿಲ್ಲ ಎಂದಿದ್ದ ಸುಮಲತಾ ಕೈಯನ್ನು ಮಂಡು ಜನರು ಹಿಡಿದಿದ್ದಾರೆ. ಮಂಡ್ಯದ ಜನರು ವ್ಯಕ್ತಿಗಿಂತ ಪ್ರೀತಿ ವಿಶ್ವಾಸಕ್ಕೆ ಬೆಲೆ ಕೊಡುವವರು ಎಂಬುದನ್ನು ಸುಮಲತಾ ಗೆಲ್ಲಿಸುವ ಮೂಲಕ ಸಾಬೀತು ಮಾಡಿದ್ದಾರೆ

Seema.R | news18
Updated:May 23, 2019, 4:20 PM IST
Lok Sabha Election Result 2019: ಗೌಡರ ಭದ್ರಕೋಟೆಯನ್ನೇ ಭೇದಿಸಿದ ಸುಮಲತಾ; ಮೊದಲ ಬಾರಿ ಸಂಸತ್​ ಪ್ರವೇಶಿಸಲಿರುವ ಅಂಬಿ​ ಮಡದಿ
ಮಂಡ್ಯ ರಣರಂಗದಲ್ಲಿ ಗೆಲುವಿನ ನಗೆ ಬೀರಿದ ಸುಮಲತಾ
  • News18
  • Last Updated: May 23, 2019, 4:20 PM IST
  • Share this:
ಸಿಎಂ ಕುಮಾರಸ್ವಾಮಿ ಅವರ ಮಗ ನಿಖಿಲ್​ ಕುಮಾರಸ್ವಾಮಿ ಎದುರು ಸುಮಲತಾ ಅಂಬರೀಷ್​ ಗೆಲುವಿನ ನಗೆ ಬೀರಿದ್ದಾರೆ. ಮಂಡ್ಯದ ಜನರ ಮಾತಿಗೆ ಕಟ್ಟುಬಿದ್ದು ಚುನಾವಣೆಗೆ ಸ್ಪರ್ಧಿಸಿದ್ದ ಸುಮಲತಾರ ಕೈ ಬಿಡಲಿಲ್ಲ  ಸಕ್ಕರೆ ನಾಡಿನ ಜನ.

ಜೆಡಿಎಸ್​ ಭದ್ರಕೋಟೆಯಾಗಿದ್ದ ಮಂಡ್ಯದಲ್ಲಿ ಸುಮಲತಾ ಗೆಲುವು ಸುಲಭದ ಹಾದಿಯಾಗಿರಲಿಲ್ಲ. ಅಂಬರೀಷ್​ ಅಗಲಿಕೆಯ ಅನುಕಂಪದ ಅಲೆ ಹಾಗೂ ಜೆಡಿಎಸ್​ ನಾಯಕರ ವಾಗ್ದಾಳಿ, ಸಿನಿ ತಾರೆಯರ ವರ್ಚಸ್ಸು ಹಾಗೂ ಜೋಡೆತ್ತುಗಳ ಬಲ ಸುಮಲತಾ ಗೆಲುವಿಗೆ ಕಾರಣವಾಗಿದ್ದು ಸುಳ್ಳಲ್ಲ.ಚುನಾವಣೆಗೆ ಸ್ಪರ್ಧಿಸಿದ್ದ ಸುಮಲತಾರಿಗೆ ರಾಜಕೀಯದಲ್ಲಿ ಎದುರಾಗಿದ್ದು ಮುಳ್ಳಿನ ಹಾದಿ. ಅಂಬರೀಷ್​ ಪ್ರತಿನಿಧಿಸಿದ್ದ ಕಾಂಗ್ರೆಸ್​ ಪಕ್ಷದ ಬಾಗಿಲು ತಟ್ಟಿದ ಸುಮಲತಾರಿಗೆ ಆಗಿದ್ದು ಮಾತ್ರ ನಿರಾಶೆ. ಮೈತ್ರಿ ಧರ್ಮಕ್ಕೆ ಕಟ್ಟು ಬಿದ್ದ ನಾಯಕರು ಸುಮಲತಾ ಸ್ಪರ್ಧೆಗೆ ಅಡ್ಡಿಮಾಡಿದ್ದು ಸುಳ್ಳಲ್ಲ. ನಂಬಿದ ಕಾಂಗ್ರೆಸ್​ ಶಾಸಕರು ಕೈ ಬಿಟ್ಟಾಗ ಜನತೆಯ ನಿರ್ಣಯಕ್ಕೆ ಕಟ್ಟು ಬಿದ್ದ ಸುಮಲತಾ, ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಮೂಲಕ ಅಚ್ಚರಿ ಮೂಡಿಸಿದ್ದರು.

ಗಂಡನ ಅಗಲಿಗೆ ನೋವಿನಲ್ಲಿ... ರಾಜಕೀಯ ಸಂಬಂಧಿಗಳ ಕಟು ಟೀಕೆಯಲ್ಲಿ... ದೃಢವಾಗಿ ನಿಂತ ಗಟ್ಟಿಗಿತಿ ಸುಮಕ್ಕನಿಗೆ ಬೆಂಬಲವಾಗಿದ್ದು ದರ್ಶನ್​, ಯಶ್​, ಕನ್ನಡ ಸಿನಿರಂಗ ಮತ್ತು ಮಂಡ್ಯ ಜನರು.

ಜನರಿಗಿಂತ ಯಾರು ದೊಡ್ಡವರಿಲ್ಲ ಎಂದು ಚುನಾವಣೆಗೆ ಧುಮುಕಿದ ಸುಮಲತಾ ನಾಮಪತ್ರ ಸಲ್ಲಿಕೆದಿನದಿಂದಲೂ ವಿಘ್ನಗಳು ಎದುರಾಗಿದ್ದವು. ನಟರಾದ ಯಶ್​- ದರ್ಶನ್​ ಮಕ್ಕಳಾಗಿ ನಿಂತು ಸುಮಕ್ಕನ ಪರ ಎರಡು ತಿಂಗಳು ಕಾಲ ಬಿಡುವಿಲ್ಲದ ಪ್ರಚಾರ ನಡೆಸಿದ್ದರು.

ಹಳ್ಳಿ ಹಳ್ಳಿಗಳ ಪ್ರಚಾರ ಆರಂಭಿಸಿದ್ದ ಸುಮಗೆ ಇದ್ದ ಒಂದೇ ಕನಸು ಅಂಬರೀಷ್​ ಬಿಟ್ಟು ಹೋದ ಕನಸುಗಳನ್ನು ನನಸು ಮಾಡುವುದು. ಇದೇ ವಿಷಯವನ್ನು ಮುಂದಿಟ್ಟುಕೊಂಡು ಮಂಡ್ಯ ಜನರ ಬಳಿ ಸುಮಲತಾ ಒಂದು ಅವಕಾಶ ಕೋರಿದ್ದರು. ಜೋಡೆತ್ತುಗಳಂತೆ ಯಶ್​-ದರ್ಶನ್​ , ಸಿನಿ ಚಿತ್ರರಂಗ ಸುಮಾರ ಬೆನ್ನಿಗೆ ನಿಂತಿದ್ದರೂ, ಚುನಾವಣಾ ಕಣದಲ್ಲಿ ಅವರು ಎದುರಿಸಿದ ಟೀಕೆಗಳಿಗೆ ಕಡಿಮೆ ಇಲ್ಲ.

ಸುಮಲತಾ ಮಂಡ್ಯದವರಲ್ಲ... ಆಕೆ ನಾಯ್ಡು... ಗಂಡ ಸತ್ತು ಆರು ತಿಂಗಳಿಗೆ ಚುನಾವಣೆ ಬೇಕೆ... ಮಂಡ್ಯಕ್ಕೆ ಬಾರದ ಸಿನಿಮಾ ನಟಿ... ಗಂಡನ ಅಗಲಿಕೆ ಬಳಿಕ ಅಧಿಕಾರಕ್ಕೆ ದಾಹಕ್ಕಾಗಿ ಚುನಾವಣೆಗೆ ಬಂದಿದ್ದಾರೆ ಎಂಬ ಟೀಕೆಗಳು ಕೇಳಿ ಬಂದಿದ್ದವು.

ಅಷ್ಟೆ ಅಲ್ಲದೇ ದರ್ಶನ್​- ಯಶ್​ ವಿರುದ್ಧವೂ ಸ್ವತಃ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದರು. ಕ್ಷೇತ್ರದಲ್ಲಿ 8 ಜನ ಜೆಡಿಎಸ್​ ಶಾಸಕರಿರುವಾಗ ಗೆಲುವು ನಮ್ಮದೇ ಎಂದಿದ್ದ ಕುಮಾರಸ್ವಾಮಿ ಹಠಕ್ಕೆ ಬಿದ್ದು ಕ್ಷೇತ್ರದಲ್ಲಿ ಮಗನನ್ನು ಕಣಕ್ಕಿಳಿಸಿದರು. ಮೈತ್ರಿ ನಾಯಕರನ್ನು ಗಣನೆಗೆ ತೆಗೆದುಕೊಳ್ಳದೆ ಮುನ್ನುಗಿದ ಕುಮಾರಸ್ವಾಮಿಗೆ ಕ್ಷೇತ್ರದ ಶಾಸಕರೇ ಮಗ್ಗಲ ಮುಳ್ಳಾಗಿದ್ದು ಸುಳ್ಳಲ್ಲ. ಮೈತ್ರಿ ನಾಯಕರ ಒಳಬೇಗುದಿ ಸುಮಲತಾರ ಪರ ಕೆಲಸ ಮಾಡುವಂತೆ ಮಾಡಿತ್ತು.

ಇದನ್ನು ಓದಿ: LoKSabha Election Result 2019: ಅಸ್ತಿತ್ವಕ್ಕೆ ಬಂದ ಒಂದೇ ವರ್ಷದಲ್ಲಿ ಐಸಿಯುಗೆ ಬಂದ ಮೈತ್ರಿ ಸರಕಾರ; ಗೌಡರ ಸೋಲು ಮೈತ್ರಿಗೆ ತಂದಿತು ಆಪತ್ತು

ಸುಮಲತಾರಿಗೆ ಬಹಿರಂಗವಾಗಿ ಬೆಂಬಲ ನೀಡಿದ ಬಿಜೆಪಿ, ಯಾವುದೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿಲ್ಲ. ಅಲ್ಲದೇ ಬಿಜೆಪಿ ನಾಯಕ ಎಸ್.​ಎಂ. ಕೃಷ್ಣ ಸುಮಲತಾಗೆ ಬೆಂಬಲವಾಗಿ ನಿಂತರು. ಅಷ್ಟೇ ಅಲ್ಲ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಹ ಸುಮಾರಿಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ್ದರು.

ಕುಟುಂಬ ರಾಜಕಾರಣದ ಸಿಟ್ಟು, ಮಂಡ್ಯ ಸೊಸೆಗಾದ ಅವಮಾನ, ಕಾಂಗ್ರೆಸ್​ ನಾಯಕರ ಒಳಬೇಗುದಿಗಳು ನಿಖಿಲ್​ ಸೋಲಿಗೆ ಕಾರಣವಾಗುವುದರ ಜೊತೆಗೆ ಸುಮಲತಾರ ಮುಖದಲ್ಲಿ ಸಂತಸ ಮೂಡುವಂತೆ ಮಾಡಿತು.

ಜನರ ಮಾತಿಗೆ ಕಟ್ಟು ಬಿದ್ದು ನಾನು ಚುನಾವಣೆಗೆ ನಿಲ್ಲುವ  ನಿರ್ಣಯ ತೆಗೆದುಕೊಂಡೆ ಹೊರತು ಸ್ವಾರ್ಥ ಉದ್ದೇಶ ನನಗಿಲ್ಲ ಎಂದಿದ್ದ ಸುಮಲತಾ ಕೈಯನ್ನು ಮಂಡ್ಯ ಜನರು ಹಿಡಿದಿದ್ದಾರೆ. ಮಂಡ್ಯದ ಜನರು ವ್ಯಕ್ತಿಗಿಂತ ಪ್ರೀತಿ ವಿಶ್ವಾಸಕ್ಕೆ ಬೆಲೆ ಕೊಡುವವರು ಎಂದು ಸುಮಲತಾರನ್ನು ಗೆಲ್ಲಿಸುವ ಮೂಲಕ ಸಾಬೀತು ಮಾಡಿದ್ದಾರೆ.

First published:May 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading