ಮಂಡ್ಯದಲ್ಲಿ ಬೃಹತ್ ಸ್ವಾಭಿಮಾನ ಸಮಾವೇಶ; ಸ್ವಾಭಿಮಾನ ಬಿಡದೆ ಮತ ಹಾಕುವಂತೆ ಸುಮಲತಾ ಕರೆ

ನಾವು ಕಣ್ಣೀರಿಡುವುದಲ್ಲ, ಜನರ ಕಣ್ಣೀರು ಒರೆಸಲು ಬಂದಿದ್ದೇವೆ ಎಂದು ಹೇಳಿದ ಸುಮಲತಾ ಅಂಬರೀಷ್ ಅವರು ತಮ್ಮ ಪತಿಯ ಸಾವಿನ ಕ್ಷಣವನ್ನು ನೆನೆದು ಗದ್ಗದಿತರಾಗಿ ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.

news18
Updated:April 16, 2019, 6:59 PM IST
ಮಂಡ್ಯದಲ್ಲಿ ಬೃಹತ್ ಸ್ವಾಭಿಮಾನ ಸಮಾವೇಶ; ಸ್ವಾಭಿಮಾನ ಬಿಡದೆ ಮತ ಹಾಕುವಂತೆ ಸುಮಲತಾ ಕರೆ
ಮಂಡ್ಯ ಕ್ಷೇತ್ರದ ಜನರ ಮತ ಯಾಚಿಸುತ್ತಿರುವ ಸುಮಲತಾ
  • News18
  • Last Updated: April 16, 2019, 6:59 PM IST
  • Share this:
ಮಂಡ್ಯ(ಏ. 16): ಕಳೆದ ನಾಲ್ಕೈದು ವಾರಗಳಿಂದಲೂ ಇಡೀ ದೇಶದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಇವತ್ತು ಬಹಿರಂಗ ಪ್ರಚಾರ ಅಂತ್ಯವಾಗಿದೆ. ಜೆಡಿಎಸ್​ನ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ನೇರ ಹಣಾಹಣಿ ಕಾಣುತ್ತಿರುವ ಈ ಕ್ಷೇತ್ರದಲ್ಲಿ ಇವತ್ತು ಜೋಡೆತ್ತು, ಸ್ಪೇರ್ ಎತ್ತುಗಳು ಜೋರು ಸದ್ದು ಮಾಡಿದವು. ಸುಮಲತಾ ಅಂಬರೀಷ್ ಅವರು ಭಾವುಕರಾಗಿ ಮಂಡ್ಯದ ‘ಸ್ವಾಭಿಮಾನಿ’ಗಳಿಂದ ಭಿಕ್ಷೆ ಕೇಳುತ್ತಾ ಕಣ್ಣೀರಿಟ್ಟರು. ಮರಿ ಅಂಬರೀಷ್ ತಾನು ಅಭಿಷೇಕ್ ಅಂಬರಿಷ್ ಅಲ್ಲ, ಅಂಬರೀಷ್ ಗೌಡ ಎಂದು ಹೇಳಿ ಮಂಡ್ಯದ ನಿಜವಾದ ಗಂಡು ತಾನೆಂಬ ಸಂದೇಶ ರವಾನಿಸಲು ಯತ್ನಿಸಿದರು. ಸಾವಿರಾರು ಜನರು ಸೇರಿದ್ದ ಸ್ವಾಭಿಮಾನ ಸಮ್ಮಿಲನದಲ್ಲಿ ಅಭಿಷೇಕ್, ಯಶ್, ದರ್ಶನ್, ಸುಮಲತಾ ಮೊದಲಾದವರು ಮಾತನಾಡಿ ಮತ ಯಾಚಿಸಿದರು.

ಅಂಬರೀಷ್ ಅವರು ಕಂಡಿದ್ದ ಕನಸನ್ನು ಸಾಕಾರ ಮಾಡಲು ತನಗೆ ಅವಕಾಶ ಮಾಡಿಕೊಡಿ. ಹಲವು ಭರವಸೆಗಳನ್ನು ನೀಡಿ ಈ ಹಿಂದೆ ಹಲವು ಮಂಡ್ಯದ ಜನರಿಗೆ ಮೋಸ ಮಾಡಿದ್ಧಾರೆ. ತನಗೆ ಒಂದು ಬಾರಿ ಅವಕಾಶ ಕೊಟ್ಟು ನೋಡಿ. ನಿಮ್ಮ ಸ್ವಾಭಿಮಾನದ ಮತವನ್ನು ನನಗೆ ಹಾಕಿ ಎಂದು ಸುಮಲತಾ ಅಂಬರೀಷ್ ಅವರು ಮಂಡ್ಯ ಮತಕ್ಷೇತ್ರ ಜನರಲ್ಲಿ ಮನವಿ ಮಾಡಿದರು.

ಇದನ್ನೂ ಓದಿ: ನಮ್ಮನೆ ಹೆಣ್ಮಕ್ಕಳ ಬಗ್ಗೆ ಮಾತಾಡಿದ್ರೆ ರಕ್ತ ಕುದೀತದೆ- ಸ್ವಾಭಿಮಾನಿ ಸಮಾವೇಶದಲ್ಲಿ ಗುಡುಗಿದ ಯಶ್

ಅಂಬರೀಷ್ ಸಾವಿನ ನೋವಿನ ಛಾಯೆ ನನ್ನ ಮುಖದಲ್ಲಿ ಇಲ್ಲ ಅಂತಾರೆ. ನಾವು ಪಬ್ಲಿಕ್ ಸರ್ವೆಂಟ್ಸ್. ನಾವು ಕಣ್ಣೀರಿಡುವುದಲ್ಲ, ಜನರ ಕಣ್ಣೀರು ಒರೆಸಲು ಬಂದಿದ್ದೀವಿ. ಸಿನಿಮಾದಲ್ಲಿ ನಮ್ಮನ್ನು ಮಹಾರಾಜರಂತೆ ನೋಡಬಹುದು. ಆದರೆ, ರಾಜಕಾರಣದಲ್ಲಿ ನಾವು ನಿಮ್ಮ ಗುಲಾಮರು. ನಿಮ್ಮ ಸೇವೆ ಮಾಡುವುದು ನಮ್ಮ ಕರ್ತವ್ಯ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ತಮ್ಮ ರಾಜಕಾರಣದ ಧ್ಯೇಯವನ್ನು ಸ್ಪಷ್ಟಪಡಿಸಿದರು.

ಜನರು ಕಣ್ಣೀರು ಒರೆಸಲು ಬಂದಿದ್ದೇನೆಂದು ಹೇಳಿದ ಸುಮಲತಾ ಅವರು ಒಂದು ಹಂತದಲ್ಲಿ ಪತಿ ಅಂಬರೀಷ್ ಅವರ ಸಾವಿನ ಕ್ಷಣ ನೆನೆದು ಕಣ್ಣೀರು ಹಾಕುವಷ್ಟು ಭಾವುಕರಾಗಿಬಿಟ್ಟರು.

ಕಳೆದ ವರ್ಷದ ನವೆಂಬರ್ 24ರಂದು ಮಂಡ್ಯದಲ್ಲಾದ ಭೀಕರ ಬಸ್ ಅಪಘಾತದ ಸುದ್ದಿಯನ್ನು ಟಿವಿಯಲ್ಲಿ ನೋಡನೋಡುತ್ತಾ ಅಂಬರೀಷ್ ಅವರ ಎದೆಬಡಿತ ನಿಂತುಹೋಗಿತ್ತಂತೆ. ಆ ಸನ್ನಿವೇಶವನ್ನು ಮೆಲುಕು ಹಾಕುವಾಗ ಸುಮಲತಾ ಅಂಬರೀಷ್ ಅವರು ಭಾವುಕರಾಗಿ ಕಣ್ಣೀರಿಟ್ಟರು. ಅಂಬರೀಷ್ ಅವರು ಸತ್ತಾಗ ನೀವೆಲ್ಲಾ ಕಣ್ಣೀರಿಟ್ಟಿರಿ. ಪತ್ನಿಯಾಗಿ ನನಗೆ ಎಷ್ಟು ನೋವಾಗಿರಬೇಕು. ನಾನು ಕಣ್ಣೀರಾಕಿರೆ ಅದನ್ನು ಡ್ರಾಮಾ ಅಂತಾರೆ. ಅವರು ಮೈಕ್ ಮುಂದೆ ಬಂದು ಕಣ್ಣೀರು ಹಾಕಿದರೆ ಅದು ನಾಟಕ ಅಲ್ಲ. ಇದೆಂಥ ಆರೋಪ ಎಂದು ಸುಮಲತಾ ಅಂಬರೀಷ್ ವಿಷಾದಿಸಿದರು.

ಇದನ್ನೂ ಓದಿ: 'ನನ್ನಂಥ ಕಚಡಾ ನನ್ಮಗ ಇನ್ನೊಬ್ಬರಿಲ್ಲ, ನನಗೆ ಎರಡು ಮುಖ ಇದೆ'; ಚಾಲೆಂಜಿಂಗ್ ಸ್ಟಾರ್ ದರ್ಶನ್ಅಂಬರೀಷ್ ಅವರು ರಾಜಕಾರಣದ ಕಷ್ಟ ಬೇಕಿಲ್ಲ ಎಂದು ನಮ್ಮನ್ನು ಕಾಪಾಡಿಕೊಂಡು ಬಂದಿದ್ದರು. ಈ ನಾಲ್ಕು ವಾರದಲ್ಲಿ ರಾಜಕಾರಣ ಎಷ್ಟು ಕೆಟ್ಟದ್ದು ಎಂಬುದು ಗೊತ್ತಾಗಿದೆ. ನಾನು ರಾಜಕಾರಣಕ್ಕೆ ಬಂದಿರುವುದು ಮಂಡ್ಯ  ಜನರ ಪ್ರೀತಿಯ ಋಣ ತೀರಿಸಲು, ಅವರ ಸೇವೆ ಮಾಡಲು ಎಂದು ಸುಮಲತಾ ತಿಳಿಸಿದರು.

ಇದೇ ವೇಳೆ, ಪಕ್ಷದಿಂದ ಉಚ್ಛಾಟಿತರಾದರೂ ತನಗೆ ಬೆಂಬಲವಾಗಿ ನಿಂತಿರುವ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಸುಮಲತಾ ಅಂಬರೀಷ್ ವಿಶೇಷ ಕೃತಜ್ಞತೆ ಸಲ್ಲಿಸಿದರು. ಬೇಷರತ್ ಬೆಂಬಲ ನೀಡಿರುವ ಬಿಜೆಪಿಯವರಿಗೂ ಧನ್ಯವಾದ ಹೇಳಿದರು. ಮುಸ್ಲಿಮ್ ಬಾಂಧವರು, ರೈತ ಸಂಘಕ್ಕೂ ಕೃತಜ್ಞತೆ ಅರ್ಪಿಸಿದರು. ಸ್ವಾಭಿಮಾನಿ ಜೆಡಿಎಸ್ ಕಾರ್ಯಕರ್ತರೂ ತನಗೆ ಬೆಂಬಲ ನೀಡುತ್ತಿರುವುದು ತನಗೆ ಗೊತ್ತು ಎಂದು ಹೇಳಿ ಪಕ್ಷಾತೀತವಾಗಿ ಸುಮಲತಾ ಅವರು ಕೃತಜ್ಞತೆ ಸಲ್ಲಿಸಿದರು.

ಇದನ್ನೂ ಓದಿ: ಐಟಿ ದಾಳಿ ಮಾಡ್ತೀವಿ ಅಂತ ಬಂದು 2 ಅಕ್ಕಿ ಮೂಟೆ ಎತ್ತಿಕೊಂಡು ಹೋಗಿದ್ದಾರೆ; ಸಚಿವ ಎಚ್​.ಡಿ. ರೇವಣ್ಣ ಗಂಭೀರ ಆರೋಪ

ಸುಮಲತಾ ಅಂಬರೀಷ್ ಅವರ ಭಾಷಣಕ್ಕೂ ಮುನ್ನ ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಮೊನಚಾದ ಮಾತುಗಳಿಂದ ಜೆಡಿಎಸ್ ನಾಯಕರನ್ನು ತಿವಿದರು. ದಿವಂಗತ ಪುಟ್ಟಣ್ಣಯ್ಯ ಅವರ ಮಗ ದರ್ಶನ್ ಪುಟ್ಟಣ್ಣಯ್ಯ, ಹಿರಿಯ ನಟ ದೊಡ್ಡಣ್ಣ, ಸ್ಥಳೀಯ ಮುಖಂಡ ರವೀಂದ್ರ, ಕಾಂಗ್ರೆಸ್ ಮುಖಂಡ ಮುಜಾಫರ್ ಖಾನ್, ಉಚ್ಛಾಟಿತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಅವರೆಲ್ಲರೂ ಭಾಷಣ ಮಾಡಿದರು.

ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ ಅವರು ಮಾತನಾಡಿ, ಮಂಡ್ಯಕ್ಕೆ ತನ್ನ ಅಪ್ಪನ ಶವ ತೆಗೆದುಕೊಂಡು ಹೋಗಲು ನಾನೇ ಹೇಳಿದ್ದೆ ಎಂದು ತನ್ನ ತಂದೆ ಮೇಲೆ ಪ್ರಮಾಣ ಮಾಡಿ ತಿಳಿಸಿದರು. ಈ ಮೂಲಕ, ಅಂಬರೀಷ್ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರಲು ತಾನೇ ಕಾರಣ ಎಂದ ಕುಮಾರಸ್ವಾಮಿ ಅವರ ಹೇಳಿಕೆಗೆ ಅಭಿಷೇಕ್ ಅಂಬರಿಷ್ ತಿರುಗೇಟು ನೀಡಿದರು. ಹಾಗೆಯೇ, ತನ್ನ ಹೆಸರು ಅಭಿಷೇಕ್ ಅಂಬರೀಷ್ ಅಲ್ಲ, ಅಭಿಷೇಕ್ ಗೌಡ. ಇದು ಅಪ್ಪ ನನಗೆ ಇಟ್ಟ ಹೆಸರು ಎಂದು ಹೇಳುವ ಮೂಲಕ ಮಂಡ್ಯದ ನಿಜವಾದ ಮಣ್ಣಿನ ಮಗ ಎನ್ನುವ ಸಂದೇಶ ರವಾನಿಸಲು ಯತ್ನಿಸಿದರು.
First published: April 16, 2019, 6:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading