• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Sumalatha Ambrish| ಅಂಬರೀಶ್ ಕಾಲದಲ್ಲಿ ಅಕ್ರಮ ನಡೆದಿದ್ದರೆ ದಾಖಲೆ ತನ್ನಿ; ಕುಮಾರಸ್ವಾಮಿಗೆ ಸಂಸದೆ ಸುಮಲತಾ ಸವಾಲು!

Sumalatha Ambrish| ಅಂಬರೀಶ್ ಕಾಲದಲ್ಲಿ ಅಕ್ರಮ ನಡೆದಿದ್ದರೆ ದಾಖಲೆ ತನ್ನಿ; ಕುಮಾರಸ್ವಾಮಿಗೆ ಸಂಸದೆ ಸುಮಲತಾ ಸವಾಲು!

ಕುಮಾರಸ್ವಾಮಿ, ಸುಮಲತಾ ಅಂಬರೀಶ್

ಕುಮಾರಸ್ವಾಮಿ, ಸುಮಲತಾ ಅಂಬರೀಶ್

ಅಂಬರೀಶ್ ಕಾಲದಲ್ಲಿ ಅಕ್ರಮ ನಡೆದಿದ್ದರೆ ಸುಮ್ಮನೆ ಮಾತನಾಡದೆ, ದಾಖಲೆ ತನ್ನಿ. ನಂತರ ಮಾತನಾಡಿ ಎಂದು ಕುಮಾರಸ್ವಾಮಿಗೆ ಸಂಸದೆ ಸುಮಲತಾ ಸವಾಲು ಹಾಕಿದ್ದಾರೆ.

  • Share this:

ಬೆಂಗಳೂರು (ಜುಲೈ 09); ಮಂಡ್ಯ ಲೋಕಸಭಾ ಚುನಾವಣೆಯಿಂದ ಈವರೆಗೆ ಸಂಸದೆ ಸುಮಲತಾ ಮತ್ತು ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ನಡುವಿನ ವಾಕ್ಸಮರ ಸದ್ಯಕ್ಕಂತು ನಿಲ್ಲುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಈ ಇಬ್ಬರೂ ನಾಯಕರು ಯಾವುದಾದರೊಂದು ವಿಚಾರಕ್ಕೆ ಆಗಿಂದಾಗ್ಗೆ ಟೀಕಾಪ್ರಾರ ನಡೆಸುವುದು ಸಾಮಾನ್ಯ. ಈ ಹಿಂದೆ ಕುಮಾರಸ್ವಾಮಿ ಅವರ ಬೆಂಬಲಿಗ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾಜಿ ಸಚಿವ ಅಂಬರೀಶ್​ ಕಾಲದಲ್ಲಿ ಅಕ್ರಮ ಗಣಿಗಾರಿಕೆ ಆರಂಭವಾಗಿತ್ತು ಎಂದು ಆರೋಪಿಸಿದ್ದರು. ಆದರೆ, ಈ ಆರೋಪಕ್ಕೆ ಇಂದು ತಿರುಗೇಟು ನೀಡಿರುವ ಸಂಸದೆ ಸುಮಲತಾ , "ಅಂಬರೀಶ್ ಕಾಲದಲ್ಲಿ ಅಕ್ರಮ ನಡೆದಿದ್ದರೆ ಸುಮ್ಮನೆ ಮಾತನಾಡದೆ, ದಾಖಲೆ ತನ್ನಿ. ನಂತರ ಮಾತನಾಡಿ" ಎಂದು ಸವಾಲು ಹಾಕಿದ್ದಾರೆ.


ಕೆಆರ್​ಎಸ್​ ಡ್ಯಾಂ ಮತ್ತು ಅಲ್ಲಿ ಸುತ್ತಲು ನಡೆಯುತ್ತಿರುವ ಗಣಿ ಕೆಲಸಕ್ಕೆ ಸಂಬಂಧಿಸಿದಂತೆ ಸುಮಲತಾ ಕಳೆದ ಹಲವು ದಿನಗಳಿಂದ ಮಾತನಾಡುತ್ತಿದ್ದಾರೆ. ಅಕ್ರಮ ಗಣಿ ಕೆಲಸದಿಂದ ಡ್ಯಾಂ ಬಿರುಕು ಬಿಟ್ಟಿದೆ ಎಂದು ಸುಮಲತಾ ಆರೋಪಿಸಿದ್ದರು. ಆದರೆ, ಇದಕ್ಕೆ ಉತ್ತರ ನೀಡಿದ್ದ ಕುಮಾರಸ್ವಾಮಿ "ಡ್ಯಾಂ ಬಿರುಕು ಬಿಟ್ಟಿದ್ದರೆ, ಸುಮಲತಾ ಅವರನ್ನೇ ಅಲ್ಲಿ ಮಲಗಿಸಿ ಎಂದು ಕೀಳು ದರ್ಜೆಯ ಅಪಹಾಸ್ಯ ಮಾಡಿ ಪೇಚಿಗೆ ಸಿಲುಕಿಸಿದ್ದರು. ಅಲ್ಲದೆ, ಅಂಬರೀಶ್ ಕಾಲದಲ್ಲೇ ಇಲ್ಲಿ ಅಕ್ರಮ ನಡೆದಿತ್ತು" ಎಂದು ಆರೋಪಿಸಿದ್ದರು.


ಅಲ್ಲದೆ, "ಎರಡು ವರ್ಷವಾದರೂ ಸಂಸದೆಯಾಗಿ ಸುಮಲತಾ ಏನೂ ಕೆಲಸ ಮಾಡಿಲ್ಲ. ಈಗ ಸುಮ್ಮನೆ ವಿವಾದ ಹುಟ್ಟುಹಾಕುತ್ತಿದ್ದಾರೆ. ಅವರ ಈ ವರ್ತನೆಗೆ ಜನರೇ ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.


ಕುಮಾರಸ್ವಾಮಿ ಅವರ ಈ ಆರೋಪಗಳಿಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಉತ್ತರ ನೀಡಿರುವ ಸುಮಲತಾ, "ಕುಮಾರಸ್ವಾಮಿ ಅವರ ಮಾತುಗಳೇ ಅವರ ಸಂಸ್ಕೃತಿಯನ್ನು ತೋರಿಸುತ್ತಿದೆ. ಇವರು ಸಿಎಂ ಆಗಿದ್ದ ಕಾಲದಲ್ಲೇ ನಾನು ಸೇರಿದಂತೆ ಅನೇಕ ನಾಯಕರ ಫೋನ್ ಟ್ಯಾಪ್ ಮಾಡಲಾಗಿತ್ತು. ಈಗ ನಾನು ಮಂಡ್ಯದ ಸುತ್ತಲಿನ ಅಕ್ರಮ ಗಣಿಗಾರಿಕೆ ಬಗ್ಗೆ ಮಾತನಾಡಿದರೆ, ಇವರಿಗೇನು ಕಷ್ಟ? ಅಕ್ರಮ ಗಣಿಗಾರಿಕೆಯಲ್ಲಿ ತಮ್ಮ ತಪ್ಪು ಇಲ್ಲದಿದ್ದರೆ ಕುಮಾರಸ್ವಾಮಿ ಏಕೆ ಇದಕ್ಕೆ ಪ್ರತಿಕ್ರಿಯೆ ಮಾಡಬೇಕು.


ಎಲ್ಲಾ ಅಕ್ರಮಗಳಲ್ಲೂ ಅವರಿಗೂ ಪಾಲಿದೆ ಅದೇ ಕಾರಣಕ್ಕೆ ಅಕ್ರಮ ಗಣಿಗಾರಿಕೆ ವಿರುದ್ಧದ ನನ್ನ ನಿಲುವಿಗೆ ಅವರು ತಕರಾರು ತೆಗೆಯುತ್ತಿದ್ದಾರೆ. ಅಲ್ಲದೆ, ಅಂಬರೀಶ್ ಕಾಲದಲ್ಲಿ ಅಕ್ರಮ ನಡೆದಿತ್ತು ಎಂದು ಹೇಳುತ್ತಿದ್ದಾರೆ. ಹಾಗೇನಾದರು ಅಂಬರೀಶ್ ಕಾಲದಲ್ಲಿ ಅಕ್ರಮ ನಡೆದಿದ್ದರೆ ಕುಮಾರಸ್ವಾಮಿಯವರು ದಯವಿಟ್ಟು ದಾಖಲೆ ತಂದು ಮಾತನಾಡಲಿ" ಎಂದು ಸುಮಲತಾ ಸವಾಲು ಹಾಕಿದ್ದಾರೆ.


ಅಂಬರೀಶ್ ಸ್ಮಾರಕ ವಿವಾದ:


ಇದೇ ಸಂದರ್ಭದಲ್ಲಿ ಅಂಬರೀಶ್​ ಸ್ಮಾರಕದ ಬಗ್ಗೆಯೂ ಮಾತನಾಡಿರುವ ಸುಮಲತಾ, "ಕುಮಾರಸ್ವಾಮಿಯವರು ಅಂಬರೀಶ್​ ಸ್ಮಾರಕವನ್ನು ನಿರ್ಮಿಸಲು ನಾನೇ ಅನುಮತಿ ನೀಡಿದ್ದು ಎಂದು ಹೇಳುತ್ತಾರೆ. ಆದರೆ, ಅಸಲಿಗೆ ಹಿರಿಯ ನಟ ದೊಡ್ಡಣ್ಣ ಅಂಬರೀಶ್ ಸ್ಮಾರಕಕ್ಕೆ ಮನವಿ ಸಲ್ಲಿಸಲು ಹೋದಾಗ, ಕುಮಾರಸ್ವಾಮಿಯವರು ಆ ಪೇಪರ್​ಗಳನ್ನು ದೊಡ್ಡಣ್ಣನವರ ಮುಖಕ್ಕೆ ಎಸೆದಿದ್ದರು. ಅಲ್ಲದೆ, ಅಂಬರೀಶ್ ಏನು ಸಾಧನೆ ಮಾಡಿದ್ದಾನೆ? ಆತನಿಗೇಕೆ ಸ್ಮಾರಕ ನಿರ್ಮಾಣ ಮಾಡಬೇಕು? ಎಂದು ಏಕವಚನದಲ್ಲಿ ಮಾತನಾಡಿದ್ದರು.


ಇದನ್ನೂ ಓದಿ: Covaxin Phase 3 Trial: ಕೋವಾಕ್ಸಿನ್ ಲಸಿಕೆಯ 3ನೇ ಹಂತದ ಪ್ರಯೋಗದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಡಬ್ಲ್ಯೂಎಚ್ಒ ಮುಖ್ಯವಿಜ್ಞಾನಿ


ಆದರೆ, ಈಗ ಅಂಬರೀಶ್ ಸ್ಮಾರಕದ ಬಗ್ಗೆ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಆದರೆ, ಈ ಹಿಂದೆ ರಾಜ್​ಕುಮಾರ್​ ಮತ್ತು ವಿಷ್ಣುವರ್ಧನ್ ಅವರು ತೀರಿಕೊಂಡಿದ್ದಾಗ ಆ ಸಂದರ್ಭದಲ್ಲಿ ಸಿಎಂ ಆಗಿದ್ದವರು ಮೃತ ನಟರ ಸ್ಮಾರಕಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಸಿಎಂ ಆಗಿ ಅದು ಅವರ ಕರ್ತವ್ಯ. ಅಂಬರೀಶ್ ಮೃತಪಟ್ಟಾಗ ಕುಮಾರಸ್ವಾಮಿ ಸಿಎಂ ಆಗಿದ್ದರು. ಹೀಗಾಗಿ ಸ್ಮಾರಕ ವಿಚಾರದಲ್ಲಿ ಅವರ ಹೆಚ್ಚುಗಾರಿಕೆ ಏನಿದೆ?" ಎಂದು ಸುಮಲತಾ ಪ್ರಶ್ನೆ ಮಾಡಿದ್ದಾರೆ.


ಇದನ್ನೂ ಓದಿ: ಕೆಆರ್​ಎಸ್​ ಡ್ಯಾಂ ಬಿರುಕು ವಿಚಾರ; ಕುಮಾರಸ್ವಾಮಿಗೆ ಸಪೋರ್ಟ್​ ಮಾಡಿ ಸುಮಲತಾಗೆ ಟಾಂಗ್ ಕೊಟ್ಟ ಪ್ರತಾಪ್ ಸಿಂಹ


ಸಂಸದ ಪ್ರತಾಪ ಸಿಂಹ ಜೆಡಿಎಸ್​ ಸೇರಿದ್ದು ಯಾವಾಗ?; ಸುಮಲತಾ ಪ್ರಶ್ನೆ 


"ಕೆಆರ್​ಎಸ್​ ಡ್ಯಾಂ ಬಿರುಕು ಬಿಟ್ಟಿಲ್ಲ ಎಂದು ಅಧಿಕಾರಿಗಳೇ ತಿಳಿಸಿದ್ದಾರೆ. ಅಂಥಹದರಲ್ಲಿ ಡ್ಯಾಂ ಬಿರುಕು ಬಿಟ್ಟಿದೆ ಅನ್ನೋದು ಸರಿಯಲ್ಲ" ಎಂದು ಪರೋಕ್ಷವಾಗಿ ಸಂಸದೆ ಸುಮಲತಾಗೆ ಅವರಿಗೆ ಪ್ರತಾಪ್ ಸಿಂಹ ಗುರುವಾರ ಟಾಂಗ್ ನೀಡಿದ್ದರು. ಅಲ್ಲದೆ, ಪರೋಕ್ಷವಾಗಿ ಕುಮಾರಸ್ವಾಮಿ ಪರ ಬ್ಯಾಟ್ ಬೀಸಿದ್ದರು.


ಇದಕ್ಕೂ ಇಂದು ತಕ್ಕ ಉತ್ತರ ನೀಡಿರುವ ಸಂಸದೆ ಸುಮಲತಾ, "ಪ್ರತಾಪ ಸಿಂಹ ತಾವು ಯಾವ ಕ್ಷೇತ್ರಕ್ಕೆ ಸಂಸದ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅವರ ಕಾರ್ಯವ್ಯಾಪ್ತಿ ಮೈಸೂರಿಗೆ ಸೀಮಿತವಾಗಿದ್ದರೆ ಉತ್ತಮ, ಇನ್ನೂ ಇವರು ಬಿಜೆಪಿ ಬಿಟ್ಟು ಜೆಡಿಎಸ್ ಯಾವಾಗ ಸೇರಿದರು ಎಂಬುದು ನಮಗೆ ತಿಳಿದಿಲ್ಲ" ಎಂದು ಕಿಡಿಕಾರಿದ್ದಾರೆ.

First published: