HDK vs Sumalatha - ಕೆಆರ್​ಎಸ್ ಡ್ಯಾಂ ಗೇಟಿಗೆ ಮಲಗಿಸಿದ್ರೆ ಬಿಗಿಯಾಗುತ್ತೆ ಎಂದ ಹೆಚ್​ಡಿಕೆಗೆ ಸುಮಲತಾ ಅಂಬರೀಶ್ ತಿರುಗೇಟು

ಕೆಆರ್​ಎಸ್ ಡ್ಯಾಮ್ ಬಿರುಕುಬಿಟ್ಟಿದೆ ಎಂದು ಸುಮಲತಾ ಅಂಬರೀಶ್ ಹೇಳಿಕೆಗಳಿಗೆ ಪ್ರತಿಕ್ರಿಯಿಸುತ್ತಾ ಕುಮಾರಸ್ವಾಮಿ ಅವರು, ಇವರನ್ನು ಡ್ಯಾಮ್ ಗೇಟಿಗೆ ನಿಲ್ಲಿಸಿದರೆ ಬಿಗಿಯಾಗುತ್ತೆ ಎಂದಿದ್ದಾರೆ. ಇದಕ್ಕೆ ಸುಮಲತಾ ಖಾರವಾಗಿ ತಿರುಗೇಟು ಕೊಟ್ಟಿದ್ಧಾರೆ.

ಕುಮಾರಸ್ವಾಮಿ, ಸುಮಲತಾ ಅಂಬರೀಶ್

ಕುಮಾರಸ್ವಾಮಿ, ಸುಮಲತಾ ಅಂಬರೀಶ್

  • Share this:
    ಬೆಂಗಳೂರು(ಜುಲೈ 05): ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಧ್ಯೆ ಮತ್ತೆ ವಾಗ್ಯುದ್ಧ ನಡೆದಿದೆ. ಕೆಆರ್​ಎಸ್ ಡ್ಯಾಮ್ ಬಿರುಕು ಬಿಟ್ಟಿದೆ ಎಂದು ಧ್ವನಿ ಎತ್ತುತ್ತಿರುವ ಸುಮಲತಾ ಅಂಬರೀಷ್ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ಕೆಆರ್​ಎಸ್ ಡ್ಯಾಮ್ ಬಾಗಿಲಿಗೆ ಅವರನ್ನ ಮಲಗಿಸಿಬಿಟ್ಟರೆ ಬಿಗಿಯಾಗಿ ಬಿಡುತ್ತೆ ಎಂದು ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಸುಮಲತಾ ಅಂಬರೀಶ್, ಒಬ್ಬ ಮಾಜಿ ಮುಖ್ಯಮಂತ್ರಿಯಾದವರು ಮಹಿಳೆಯರ ಬಗ್ಗೆ ಹೀಗೆ ತುಚ್ಛವಾಗಿ ಮಾತನಾಡುವುದು ಶೋಭೆ ತರುವುದಿಲ್ಲ. ಕಳೆದ ಚುನಾವಣೆಯಲ್ಲಿ ಆದ ಅನುಭವದ ಪಾಠವನ್ನು ಇವರು ಕಲಿತಿಲ್ಲ ಎಂದು ಎಚ್ಚರಿಸಿದ್ದಾರೆ.

    ಕುಮಾರಸ್ವಾಮಿ ಹೇಳಿದ್ದೇನು?: ಕೃಷ್ಣರಾಜ ಸಾಗರ ಅಣೆಕಟ್ಟನ್ನು ಇವರೇ (ಸುಮಲತಾ ಅಂಬರೀಶ್) ರಕ್ಷಣೆ ಮಾಡುತ್ತಾರಂತಲ್ಲ. ಬಹುಶಃ ಇವರನ್ನೇ ಕೆಆರ್​ಎಸ್ ಡ್ಯಾಮ್ ಗೇಟ್​ಗೆ ಮಲಗಿಸಿಬಿಟ್ಟರೆ ಬಿಗಿಯಾಗಿಬಿಡುತ್ತೆ ಅನ್ಸುತ್ತೆ. ಕೇವಲ ಯಾರದ್ದೋ ವೈಯಕ್ತಿಕ ದ್ವೇಷಕ್ಕೆ ಹೇಳಿಕೆ ಕೊಡೋದು ಬಹಳ ದಿನ ನಡೆಯುವುದಿಲ್ಲ ಎಂದು ಹೆಚ್ ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.

    ಮಂಡ್ಯ ಜಿಲ್ಲೆಗೆ ಇವರಂತಹ ಸಂಸದರು ಹಿಂದೆಯೂ ಬಂದಿಲ್ಲ, ಮುಂದೆಯೂ ಬರೋದಿಲ್ಲ. ಯಾವುದೋ ಅನುಕಂಪದ ಮೇಲೆ ಇವರು ಸಂಸದೆಯಾಗಿ ಬಂದಿದ್ದಾರೆ. ಜನರ ಋಣ ತೀರಿಸುವ ಕೆಲಸ ಮಾಡಬೇಕು. ಪದೇ ಪದೇ ಇಂತಹ ಅವಕಾಶಗಳು ಸಿಗೋದಿಲ್ಲ. ಇವರಿಗೆ ಈ ಅವಕಾಶ ಸಿಗುತ್ತದೆ. ಅದನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡು ಜನರಿಗೆ ಉಪಯೋಗವಾಗುವ ಕೆಲಸ ಮಾಡಲಿ. ಇಲ್ಲವಾದಲ್ಲಿ ಮುಂದೆ ಜನರು ಅವರಿಗೆ ಸರಿಯಾಗಿ ಪಾಠ ಕಲಿಸಲಿದ್ಧಾರೆ ಎಂದು ಮಾಜಿ ಸಿಎಂ ಎಚ್ಚರಿಸಿದ್ಧಾರೆ.

    ಇದನ್ನೂ ಓದಿ: Stan Swamy - ವೆಂಟಿಲೇಟರ್​ನಲ್ಲಿ ಸ್ಟಾನ್ ಸ್ವಾಮಿ; ಮಹಾ ಸರ್ಕಾರಕ್ಕೆ ಮಾನವ ಹಕ್ಕು ಆಯೋಗ ನೋಟೀಸ್

    ಕುಮಾರಸ್ವಾಮಿ ಹೇಳಿಕೆ ಬಂದ ಬೆನ್ನಲ್ಲೇ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸುಮಲತಾ ಅಂಬರೀಶ್, ಮಾಜಿ ಸಿಎಂ ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾರೆ. ನಾನು ಯಾರ ಮೇಲೆಯೂ ವೈಯಕ್ತಿವಾಗಿ ಆರೋಪ ಮಾಡಿಲ್ಲ. ಕೆಆರ್​ಎಸ್ ಸುತ್ತಮುತ್ತ ಅಕ್ರಮ ಗಣಿಗಾರಿಕೆಗಳು ನಡೆಯುತ್ತಿರುವುದನ್ನು ಅಲ್ಲಿನ ರೈತರೇ ನನ್ನ ಮುಂದೆ ಹೇಳಿದ್ದಾರೆ. ಈ ವಿಚಾರವನ್ನು ನಾನು ಸಂಸತ್​ನಲ್ಲಿ ಪ್ರಸ್ತಾಪಿಸಿ ಧ್ವನಿ ಎತ್ತಿದ್ದೇನೆ. ಗಣಿಗಾರಿಕೆ ಸಚಿವ ಮುರುಗೇಶ್ ನಿರಾಣಿ ಅವರನ್ನ ಕರೆಸಿ ಖುದ್ದಾಗಿ ಅಕ್ರಮ ಗಣಿಗಾರಿಕೆಗಳನ್ನ ತೋರಿಸಿದ್ಧೇನೆ. ಇಂಥ ಒಂದು ಗಣಿಗಾರಿಕೆಗೆ ನೂರು ಕೋಟಿ ದಂಡ ಹಾಕಲಾಗಿದೆ. ಒಂದು ವೇಳೆ ಎಲ್ಲಾ ಅಕ್ರಮ ಗಣಿಗಾರಿಕೆಗಳ ವಿರುದ್ಧ ಕ್ರಮ ಕೈಗೊಂಡರೆ ಸರ್ಕಾರಕ್ಕೆ ಸಾವಿರಾರು ಕೋಟಿ ಆದಾಯ ಸಿಗುತ್ತದೆ ಎಂದು ಅಂಬರೀಶ್ ಅವರ ಪತ್ನಿಯೂ ಆದ ಸುಮಲತಾ ಸ್ಪಷ್ಟಪಡಿಸಿದ್ದಾರೆ.

    ಇನ್ನು, ಕೆಆರ್​ಎಸ್ ಡ್ಯಾಂ ಗೇಟ್​ಗೆ ತಮ್ಮನ್ನು ನಿಲ್ಲಿಸಿದರೆ ಬಿಗಿಯಾಗುತ್ತದೆ ಎಂಬ ಹೆಚ್​ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸುಮಲತಾ, ಒಬ್ಬ ಮಾಜಿ ಮುಖ್ಯಮಂತ್ರಿಯಾದವರು ಮಹಿಳೆ ಬಗ್ಗೆ ವೈಯಕ್ತಿಕವಾಗಿ ಈ ರೀತಿ ಮಾತನಾಡುವುದು ಶೋಭೆ ತರುವುದಿಲ್ಲ. ಅವರ ಹೇಳಿಕೆಗಳು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಇವರ ಹೇಳಿಕೆಗಳಿಂದ ಜನರಿಗೆ ನೋವಾಗುತ್ತದೆ ಎಂಬುದನ್ನು ಪಾಪ ಇವರು ಅರ್ಥ ಮಾಡಿಕೊಂಡಿಲ್ಲ ಎನಿಸುತ್ತದೆ ಎಂದು ವ್ಯಂಗ್ಯ ಮಾಡಿದ್ದಾರೆ.

    ಇದನ್ನೂ ಓದಿ: Karnataka Unlock 3.0: ಇಂದಿನಿಂದ ರಾಜ್ಯ ಫುಲ್​ ಅನ್​ಲಾಕ್​: ಸಡಿಲಿಕೆ ಕೇವಲ 14 ದಿನ ಮಾತ್ರ

    ಇನ್ನು, ಮಂಡ್ಯದ ಮೈಶುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಬೇಕೆಂದು ಒತ್ತಾಯಿಸುವುದರಲ್ಲಿ ತಮ್ಮ ಸ್ವಾರ್ಥ ಇದೆ ಎಂಬ ಆರೋಪವನ್ನು ಸುಮಲತಾ ಇದೇ ವೇಳೆ ತಳ್ಳಿಹಾಕಿದ್ದಾರೆ. ಮೈಶುಗರ್ ಅನ್ನು ಖಾಸಗೀಕರಣ ಮಾಡಬೇಕು ಅಂತ ನಾನ್ಯಾವತ್ತೂ ಹೇಳಲ್ಲ. ಕಾರ್ಖಾನೆಯನ್ನು ಸರ್ಕಾರವೇ ನಡೆಸಲಿ ಅಥವಾ ಖಾಸಗಿಯವರಿಗಾದರೂ ವಹಿಸಲಿ, ಆದರೆ, ಕಾರ್ಖಾನ್ ಮತ್ತೆ ಕಾರ್ಯನಿರ್ವಹಿಸುವಂತಾಗಬೇಕು ಎಂಬುದು ನನ್ನ ಉದ್ದೇಶ. ಸರ್ಕಾರಕ್ಕೆ ನಡೆಸಲು ಆಗುವುದಿಲ್ಲ ಎಂದರೆ ಆಲ್ಪರ್ನೇಟ್ ವ್ಯವಸ್ಥೆ ಮಾಡಿ ಎನ್ನುವುದು ನನ್ನ ವಾದ ಎಂದು ಸುಮಲತಾ ಅಂಬರೀಶ್ ಸ್ಪಷ್ಟನೆ ನೀಡಿದ್ಧಾರೆ.
    Published by:Vijayasarthy SN
    First published: