ಪುತ್ತೂರು (ಫೆ. 16): ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಎಲ್ಲಾ ಸಂಸದರಿಗೆ ತಮ್ಮ ತಮ್ಮ ಕ್ಷೇತ್ರದ ಒಂದು ಗ್ರಾಮವನ್ನು ಆದರ್ಶ ಗ್ರಾಮವಾಗಿ ದತ್ತು ಪಡೆದು ಅಭಿವೃದ್ಧಿ ಮಾಡಿಸಲು ಸೂಚಿಸಿದ್ದರು. ಪ್ರಧಾನಿಯ ಆಶಯದಂತೆ ಕೆಲವು ಸಂಸದರು ತಮ್ಮ ಕೈಲಾದ ಮಟ್ಟದಲ್ಲಿ ದತ್ತು ಪಡೆದ ಗ್ರಾಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನೂ ಮಾಡಿದ್ದಾರೆ. ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಕೂಡಾ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಳ್ಪ ಎನ್ನುವ ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿಯ ಹಲವು ಪ್ರಯತ್ನಗಳನ್ನೇನೋ ಮಾಡಿದ್ದಾರೆ. ಆದರೆ, ಅವರ ಪ್ರಯತ್ನ ಬಳ್ಪ ಗ್ರಾಮದ ಪ್ರತೀ ಮನೆಯನ್ನೂ ತಲುಪಿಲ್ಲವೇ ಎನ್ನುವ ಸಂಶಯವೂ ಮೂಡಲಾರಂಭಿಸಿದೆ. ಪ್ರಧಾನಿ ಮೋದಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರತೀ ಹಳ್ಳಿ ಹಳ್ಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಪಣ ತೊಟ್ಟಿದ್ದರು. ಆದರೆ ದಕ್ಷಿಣಕನ್ನಡ ಲೋಕಸಭಾ ಸಂಸದರ ಆದರ್ಶ ಗ್ರಾಮದಲ್ಲೇ ಕುಟುಂಬವೊಂದು ಕಳೆದ 45 ವರ್ಷಗಳಿಂದ ವಿದ್ಯುತ್ ಸಂಪರ್ಕಕ್ಕಾಗಿ ಪರದಾಡುತ್ತಿದೆ.
ಗ್ರಾಮದ ಅರ್ಗುಡಿ ಕುಶಾಲಪ್ಪ ಗೌಡ ಎಂಬವರ ಮನೆಗೆ ವಿದ್ಯುತ್ ಸಂಪರ್ಕ ಇಲ್ಲದೆ ಇಂದಿಗೂ ಈ ಮನೆಯ ಮಕ್ಕಳು ಡೀಸೆಲ್ ಹಾಕಿರುವ ಚಿಮಣಿ ದೀಪದಲ್ಲೇ ವಿದ್ಯಾಭ್ಯಾಸವನ್ನು ಮಾಡುವ ದುಸ್ಥಿತಿ ಎದುರಾಗಿದೆ. ಬಳ್ಪದ ಅರ್ಗುಡಿ ಮನೆಯ ಕುಶಾಲಪ್ಪ ಗೌಡ ಹಾಗೂ ಹೆಂಡತಿ ಕಮಲ ಎಂಬವರು ತಮ್ಮ ಇಬ್ಬರು ಗಂಡು ಮಕ್ಕಳ ಜೊತೆಗೆ ವಾಸವಾಗಿದ್ದಾರೆ.ಇವರಲ್ಲಿ ಮೊದಲನೆ ಮಗ 10 ನೇ ತರಗತಿಯಲ್ಲಿ ಓದುತ್ತಿದ್ದರೆ ಎರಡನೇ ಮಗ 8ನೇ ತರಗತಿಯಲ್ಲಿ ಓದುತ್ತಿದ್ದಾನೆ.ಈ ಮಕ್ಕಳು ರಾತ್ರಿ ವೇಳೆ ಡೀಸೆಲ್ ಬಳಸಿ ಓದಬೇಕಾದ ಪರಿಸ್ಥಿತಿ ಎದುರಾಗಿದೆ. ಇವರಿಗೆ ತಿಂಗಳಿಗೆ ಆರು ಲೀಟರ್ ಡೀಸೆಲ್ ದೀಪ ಉರಿಸಲು ಬೇಕಾಗುತ್ತದೆ.ಇದು ಈ ಮಕ್ಕಳಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಡೀಸೆಲ್ ದೀಪದಿಂದ ಬರುವ ಹೊಗೆ ಮಕ್ಕಳ ಆರೋಗ್ಯದ ಮೇಲೂ ಇದು ಪರಿಣಾಮ ಬೀರುತ್ತಿದೆ.
ಈ ಮಧ್ಯೆ ಕೊರೋನ ಸಂದರ್ಭದಲ್ಲಿ ಮೊಬೈಲ್ ನಲ್ಲಿ ತರಗತಿ ನಡೆಯುತ್ತಿರುವಾಗ ಅದರ ಯಾವುದೇ ಸೌಲಭ್ಯಗಳು ಈ ವಿದ್ಯಾರ್ಥಿಗಳಿಗೆ ಸಿಗುತ್ತಿರಲಿಲ್ಲ.ಇದಕ್ಕೆಲ್ಲ ಮೂಲ ಕಾರಣ ಇವರ ಮನೆಗೆ ಒಂದು ವಿದ್ಯುತ್ ಸಂಪರ್ಕವನ್ನು ಕಲ್ಪಿಸದೇ ಇರುವುದಾಗಿದೆ.
ಕುಶಾಲಪ್ಪ ಗೌಡರು ತನ್ನ ಮಕ್ಕಳು ತನ್ನ ಹಾಗೆ ಕೂಲಿ ಕೆಲಸ ಮಾಡಿ ಜೀವನ ಮಾಡಬಾರದು ಎಂಬ ಉದ್ದೇಶದಿಂದ ಇಲಾಖೆಯಿಂದ ಇಲಾಖೆ ಗಳಿಗೆ ತನ್ನ ಮನೆಯ ವಿದ್ಯುತ್ ಸಮಸ್ಯೆ ಹೇಳಿಕೊಂಡು ಸುಮಾರು 15 ಸಲ ಮನವಿ ಮಾಡಿದ್ದಾರೆ. ಆದರೂ ಫಲ ಮಾತ್ರ ಇನ್ನೂ ಶೂನ್ಯ.ಈ ನಡುವೆ ವಿದ್ಯುತ್ ಮೀಟರ್ ಬಂದಿದೆಯೆಂದು ವ್ಯಕ್ತಿಯೊಬ್ಬ ಕುಶಾಲಪ್ಪ ಗೌಡರ ಬಳಿಯಿಂದ ವಿದ್ಯುತ್ ಮೀಟರ್ ಗೆಂದು 1200 ದೋಚಿಕೊಂಡು ಹೋಗಿದ್ದಾನೆ.
ಇದನ್ನು ಓದಿ: ಮದುವೆ ದಿನಗಳನ್ನು ಮೆಲುಕು ಹಾಕಿದ ಕಾಂಗ್ರೆಸ್ ನಾಯಕಿ; 24 ವರ್ಷದ ಹಿಂದಿನ ಫೋಟೋ ಹಂಚಿಕೊಂಡ ಪ್ರಿಯಾಂಕಾ ಗಾಂಧಿ
ಇಲ್ಲಿ ಕುಶಾಲಪ್ಪ ಗೌಡರ ಮನೆಯ ನಾಲ್ಕು ಬದಿಗಳಲ್ಲಿ ಅಕ್ಕಪಕ್ಕ ಇತರ ವ್ಯಕ್ತಿಗಳ ಭೂಮಿ ಇದ್ದು,ಇದರಲ್ಲಿ ಅಡಿಕೆ ತೋಟ ಇದೆ. ಇವರು ತಮ್ಮ ಜಾಗದಲ್ಲಿ ವಿದ್ಯುತ್ ವೈರ್ ಎಳೆಯಲು ಅವಕಾಶವನ್ನು ನಿರಾಕರಿಸುತ್ತಿರುವುದೇ ಸಮಸ್ಯೆಗೆ ಕಾರಣವಾಗಿದೆ. ಕೇವಲ ನಾಲ್ಕು ಕಂಬಗಳನ್ನು ಹಾಕಿ ಕುಶಾಲಪ್ಪ ಗೌಡರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಿದ್ದರೂ, ಜನಪ್ರತಿನಿಧಿ, ಅಧಿಕಾರಿಗಳ ಬೇಜಾವಾಬ್ದಾರಿಯಿಂದಾಗಿ ಈ ಮನೆ ಸಂಸದರ ಆದರ್ಶ ಗ್ರಾಮದಲ್ಲೇ ಈ ಮನೆ ಮಾತ್ರ ಆದರ್ಶವಾಗುವ ಅದೃಷ್ಟವಿಲ್ಲದೆ ಚಡಪಡಿಸುತ್ತಿದೆ.
10 ತರಗತಿಯಲ್ಲಿ ಓದುತ್ತಿರುವ ಮನೆಯ ಹಿರಿಯ ಮಗ ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಬರೆಯಲಿದ್ದಾನೆ. ಆದರೆ ಸರಿಯಾದ ಬೆಳಕಿನ ವ್ಯವಸ್ಥೆಯಿಲ್ಲದ ಕಾರಣ ಕತ್ತಲಲ್ಲೆ ಕಲಿಯಬೇಕಾದ ಸ್ಥಿತಿಯಿದೆ. ಸಂಪರ್ಕಕ್ಕಾಗಿ ಈ ಮನೆಯಲ್ಲಿ ಮೂಬೈಲ್ ವ್ಯವಸ್ಥೆಯಿದ್ದರೂ, ಬ್ಯಾಟರಿ ಚಾರ್ಚ್ ಮಾಡಿಸಿಕೊಳು ಮನೆ ಮಂದಿ ಪಕ್ಕದ ಮನೆಗೆ ಕೈ ಚಾಚಬೇಕಾದ ಅಸಹಾಯಕತೆಯಲ್ಲಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಈ ವಿದ್ಯಾರ್ಥಿ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಜೊತೆಗೆ ಇವರ ಬಾಳಿಗೆ ಬೆಳಕಾಗಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ