ಚಾಮರಾಜನಗರ (ಸೆ.24): ವಿಷ ಪ್ರಸಾದ ದುರಂತದ ಹಿನ್ನಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಬಂದ್ ಆಗಿರುವ ಚಾಮರಾಜನಗರ ಜಿಲ್ಲೆ ಸುಳ್ವಾಡಿಯ ಕಿಚ್ ಗುತ್ ಮಾರಮ್ಮ ದೇವಸ್ಥಾನ ಅಕ್ಟೋಬರ್ 20 ಕ್ಕೆ ಮತ್ತೆ ತೆರೆಯಲಿದೆ. ದೇವಾಲಯದಲ್ಲಿ ನಡೆದಿರುವ ಘಟನೆಯ ಪರಿಹಾರಕ್ಕಾಗಿ ಶಾಸ್ತ್ರ ಸಂಪ್ರದಾಯದಂತೆ ಪ್ರಾಯಶ್ಚಿತ್ತಾದಿ ಪೂಜಾ-ಹೋಮ ಮುಂತಾದ ಧಾರ್ಮಿಕ ಕಾರ್ಯಗಳನ್ನು ನಡೆಸಿ ಅಕ್ಟೋಬರ್ 20 ರಿಂದ ದೇವಾಲಯವನ್ನು ಭಕ್ತರ ಹಾಗೂ ಸಾರ್ವಜನಿಕರ ದರ್ಶನಕ್ಕಾಗಿ ತೆರೆಯಲಾಗುವುದು ಎಂದು ಮುಜರಾಯಿ ಸಚಿವ ಶ್ರೀನಿವಾಪೂಜಾರಿ ವಿಧಾನಸಭಾ ಕಲಾಪದಲ್ಲಿ ತಿಳಿಸಿದ್ದಾರೆ.
ಹನೂರು ಶಾಸಕ ನರೇಂದ್ರರ ಪ್ರಶ್ನೆಗೆ ಉತ್ತರಿಸಿರುವ ಅವರು ಭಕ್ತರ ಬೇಡಿಕೆಯಂತೆ ದೇವಸ್ಥಾನ ತೆರೆಯಲು ಧಾರ್ಮಿಕ ದತ್ತಿ ಇಲಾಖೆಯ ಪ್ರಧಾನ ಆಗಮಿಕರು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ದೇವಾಲಯ ತೆರೆದು ಅಗತ್ಯ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ದೇವರ ದರ್ಶನಕ್ಕೆ ಮುಕ್ತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಸುಳ್ವಾಡಿ ಕಿಚ್ ಗುತ್ ಮಾರಮ್ಮ ದೇವಸ್ಥಾನದ ಆಡಳಿತ ಚುಕ್ಕಾಣಿ ಹಿಡಿಯುವ ಹುನ್ನಾರಕ್ಕೆ 17 ಮಂದಿ ಬಲಿಯಾಗಿದ್ದರು. 120ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದರು. ಸಾಲೂರು ಮಠದ ಇಮ್ಮಡಿ ಮಹದೇವಸ್ವಾಮಿ ಹಾಗೂ ಇತರ ಮೂವರು ಸೇರಿ ಪ್ರಸಾದದಲ್ಲಿ ವಿಷ ಬೆರೆಸಿ ದೊಡ್ಡ ದುರಂತಕ್ಕೆ ಕಾರಣವಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಮೇರೆಗೆ ಆರೋಪಿಗಳು ಜೈಲಿನಲ್ಲಿದ್ದು ನ್ಯಾಯಾಲಯದಲ್ಲಿ ಇನ್ನೂ ಸಹ ವಿಚಾರಣೆ ನಡೆಯುತ್ತಿದೆ.
ಬೇಡಿಕೆ ಈಡೇರುವ ಭರವಸೆಯೊಂದಿಗೆ ಒಂದೇ ದಿನಕ್ಕೆ ಪ್ರತಿಭಟನೆ ಹಿಂಪಡೆದ ಆಶಾ ಕಾರ್ಯಕರ್ತೆಯರು
ವಿಷ ಪ್ರಸಾದ ದುರಂತ ನಡೆದ 2018ರ ಡಿಸೆಂಬರ್ 14 ರಿಂದ ಕಿಚ್ ಗುತ್ ಮಾರಮ್ಮ ದೇವಸ್ಥಾನವನ್ನು ಮುಚ್ಚಲಾಗಿತ್ತು. ಕೆಲ ದಿನಗಳ ನಂತರ ಮುಜರಾಯಿ ಇಲಾಖೆಗೆ ವರ್ಗಾಯಿಸಿ ಬೀಗ ಜಡಿಯಲಾಗಿತ್ತು. ಹೀಗಾಗಿ ಪೂಜೆಯು ಸಹ ನಿಂತು ಹೋಗಿತ್ತು. ಆದರೂ ಭಕ್ತರು ಬೀಗ ಜಡಿದಿರುವ ದೇವಸ್ಥಾನದ ಹೊರಗೆ ಪೂಜೆ ಸಲ್ಲಿಸಿ ಹೋಗುತ್ತಿದ್ದರು.
ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶಿಕ್ಷಣ ಸಚಿವ 2019 ರ ನವೆಂಬರ್ 19 ರಂದು ಸುಳ್ವಾಡಿ ಮಾರಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ದೇವಾಲಯ ಮುಚ್ಚಿರುವುದರಿಂದ ತಮಗೆ ಅನೇಕ ಕಷ್ಟಕಾರ್ಪಣ್ಯಗಳು ಎದುರಾಗುತ್ತಿದ್ದು, ಹರಕೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಕೂಡಲೇ ದೇವಾಲಯ ತೆರೆಯುವಂತೆ ಭಕ್ತರು ಮನವಿ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ