Suhas Yathiraj- ಎಂಜಿನಿಯರ್, ಐಎಎಸ್, ಒಲಿಂಪಿಕ್ ಪದಕ; ಹಾಸನದ ಲಾಳನಕೆರೆಯಿಂದ ಸುಹಾಸ್ ಯಶೋಗಾಥೆ

ಹಾಸನದ ಅರಸೀಕೆರೆಯ ಲಾಳನಕೆರೆಯಲ್ಲಿ (Lalanakere Village) ಜನಿಸಿದ ಸುಹಾಸ್ ಎಲ್ ಯತಿರಾಜ್ (Suhas L Yathiraj) ಅವರು ಅಂಗವೈಕಲ್ಯದ ಮಧ್ಯೆಯೂ ಜೀವನದ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಜಿಲ್ಲಾಧಿಕಾರಿಯಾಗಿ ಒತ್ತಡಗಳ ಮಧ್ಯೆಯೂ ಬ್ಯಾಡ್ಮಿಂಟನ್​​ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ಧಾರೆ.

ಸುಹಾಸ್ ಎಲ್ ಯತಿರಾಜ್

ಸುಹಾಸ್ ಎಲ್ ಯತಿರಾಜ್

  • Share this:
    ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಕರ್ನಾಟಕದ ಸುಹಾಸ್ ಎಲ್ ಯತಿರಾಜ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ಮಿಂಚು ಹರಿಸಿದ್ದಾರೆ. ಇವರು ಅನೇಕ ಸಾಧನೆ ಮತ್ತು ದಾಖಲೆಗಳ ಸರದಾರರೆನಿಸಿದ್ಧಾರೆ. ಹಾಸನದ ಅರಸೀಕೆರೆಯ ಲಾಳನಕೆರೆಯಿಂದ ಪ್ರಾರಂಭವಾಗುವ ಅವರ ಜೀವನ ಪ್ರಯಾಣ ಇಂದು ಉತ್ತರ ಪ್ರದೇಶದಲ್ಲಿ ಅತ್ಯುತ್ತಮ ಜಿಲ್ಲಾಧಿಕಾರಿ ಹಾಗೂ ಈಗ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆಲ್ಲುವವರೆಗೂ ಯಶೋಗಾಥೆಗೆ ನಿದರ್ಶನವಾಗಿದೆ. ಕಾಲಿನಲ್ಲಿ ತುಸು ಊನ ಇರುವ ವಿಶೇಷ ಚೇತನ ವ್ಯಕ್ತಿಯಾದ ಸುಹಾಸ್ ಅವರು ಅನೇಕ ಅಡೆತಡೆಗಳನ್ನ ನಿವಾರಿಸಿ ಅತ್ಯುನ್ನತ ಮಟ್ಟಕ್ಕೇರಿದ್ಧಾರೆ. “ಜೀವನದಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ. ಏನೇ ಆದರೂ ಛಲ ಬಿಡದಿರಿ. ಅಭದ್ರತೆಗಳನ್ನ ಹೋಗಲಾಡಿಸುವುದು ಅತೀ ಮುಖ್ಯ. ನಮ್ಮ ದೌರ್ಬಲ್ಯಗಳನ್ನ ಶಕ್ತಿಯಾಗಿ ಪರಿವರ್ತಿಸಲು ಪೋಷಕರ ಬೆಂಬಲ ಬಹಳ ಅಗತ್ಯ. ವಿವಿಧ ಕಾರ್ಯಗಳು ಹಾಗೂ ಗುರಿಗಳನ್ನ ಮುಟ್ಟುವ ಹಂಬಲ ಇದ್ದರೆ ಸಮಯದ ಸಮರ್ಪಕ ನಿರ್ವಹಣೆ ಮಾಡುವುದನ್ನ ಕಲಿಯಬೇಕು” ಎಂದು ಸುಹಾಸ್ ಯತಿರಾಜ್ ಹೇಳುತ್ತಾರೆ.

    ಹಾಸನದ ಅರಸೀಕೆರೆಯ ಲಾಳನಕೆರೆ ಗ್ರಾಮದಲ್ಲಿ 1983, ಜುಲೈ 2ರಂದು ಜನಸಿದ ಇವರ ತಂದೆ ತಾಯಿ ಯತಿರಾಜ್ ಮತ್ತು ಜಯಶ್ರೀ. ಇವರ ತಂದೆ ಯತಿರಾಜ್ ಅವರು ಸರ್ಕಾರೀ ಉದ್ಯೋಗಿಯಾದ್ದರಿಂದ ವಿವಿಧ ಕಡೆ ವರ್ಗಾವಣೆಯಾದ್ದರಿಂದ ಯತಿರಾಜ್ ವಿವಿಧ ಊರುಗಳಲ್ಲಿ ಓದಿ ಬೆಳೆದಿದ್ಧಾರೆ. ಹಾಸನದ ದುದ್ದ ಬಳಿಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವಾದರೆ, ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ಹೈಸ್ಕೂಲು, ಸುರತ್ಕಲ್​ನ ಎನ್​ಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಮಾಡಿದ್ದಾರೆ. ಎಂಜಿನಿಯರ್ ಆಗಿ 3 ವರ್ಷದ ಬಳಿಕ ಅವರು ಐಎಎಸ್ ಪರೀಕ್ಷೆ ಬರೆದು ಆಯ್ಕೆಯೂ ಆದರು. ಅವರು 2007ರ ಉತ್ತರ ಪ್ರದೇಶ ಕೇಡರ್​ನ ಐಎಎಸ್ ಅಧಿಕಾರಿಯಾಗಿದ್ದಾರೆ. ಸುಹಾಸ್ ಅವರ ಪತ್ನಿ ರಿತು ಅವರೂ ಕೂಡ ಸಿವಿಲ್ ಸೇವೆಯಲ್ಲಿದ್ಧಾರೆ. ಕುತೂಹಲವೆಂದರೆ ರಿತು ಅವರು 2019ರ ಮಿಸಸ್ ಇಂಡಿಯಾ ಸ್ಪರ್ಧೆಯಲ್ಲಿ ಮಿಸಸ್ ಯುಪಿಯಾಗಿ ಆಯ್ಕೆಯಾಗಿದ್ದರು. ಚುನಾವಣೆಯಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಇವರು ಮಾಡಿದ ಶ್ರದ್ಧಾಪೂರ್ವಕ ಕಾರ್ಯಕ್ಕೆ ಉ.ಪ್ರ. ಸರ್ಕಾರ ಸನ್ಮಾನಿಸಿದೆ.

    ಇದನ್ನೂ ಓದಿ: Schools Open- ನಾಳೆಯಿಂದ 6-8ನೇ ತರಗತಿ ಆರಂಭ; 1ನೇ ತರಗತಿ ಪ್ರಾರಂಭಕ್ಕೂ ಒತ್ತಾಯ

    ಸುಹಾಸ್ ಲಾಳನಕೆರೆ ಯತಿರಾಜ್ ಅವರ ಜೀವನ ಸಾಧನೆ:
    * ಉತ್ತರ ಪ್ರದೇಶ ಕೇಡರ್​ನ 2007ರ ಬ್ಯಾಚ್ ಐಎಎಸ್ ಅಧಿಕಾರಿಯಾದ ಅವರು ಸದ್ಯ ಗೌತಮ್ ಬುದ್ಧ ನಗರದಲ್ಲಿ (ನೋಯ್ಡಾ) ಅವರು ಜಿಲ್ಲಾಧಿಕಾರಿಯಾಗಿದ್ದಾರೆ (District Magistrate). ಸೋನಭದ್ರ, ಹಥ್ರಾಸ್, ಮಹಾರಾಜ್​ಗಂಜ್, ಮಥುರಾ, ಆಗ್ರಾ, ಪ್ರಯಾಗ್​ರಾಜ್(ಅಲಹಾಬಾದ್), ಅಜಂಗಡ್ ಮತ್ತು ಜೌನ್​ಪುರ್ ನಗರದಲ್ಲೂ ಅವರು ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
    * ಐಎಎಸ್ ಅಧಿಕಾರಿಯಾದ ಮೊದಲ ವಿಶೇಷ ಚೇತನ ವ್ಯಕ್ತಿ ಅವರು.
    * 2016ರಲ್ಲಿ ಏಷ್ಯನ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದರು. ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗೆದ್ದ ಭಾರತದ ಮೊದಲ ಐಎಎಸ್ ಅಧಿಕಾರಿ ಅವರು.
    * ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಮೊದಲ ಐಎಎಸ್ ಅಧಿಕಾರಿ
    * 2016ರಲ್ಲಿ ಉತ್ತರ ಪ್ರದೇಶ ರಾಜ್ಯದ ಅತ್ಯುಚ್ಚ ನಾಗರಿಕ ಪ್ರಶಸ್ತಿ ಯಶ್ ಭಾರತಿ ಅವರಿಗೆ ದೊರಕಿದೆ.
    * ಕ್ರೀಡೆ ಮತ್ತು ಉದ್ಯೋಗ ಎರಡರಲ್ಲೂ ಇವರ ಸಾಧನೆಗೆ ಬಹಳಷ್ಟು ಪ್ರಶಸ್ತಿ, ಗೌರವಗಳು ಬಂದಿವೆ.

    ಪ್ಯಾರಾ ಬ್ಯಾಡ್ಮಿಂಟನ್​ನಲ್ಲಿ ಸುಹಾಸ್ ಗಳಿಸಿದ ಚಿನ್ನದ ಪದಕಗಳು:
    * 2016ರಲ್ಲಿ ಚೀನಾದ ಬೀಜಿಂಗ್​ನಲ್ಲಿ ನಡೆದ ಏಷ್ಯಾ ಚಾಂಪಿಯನ್​ಶಿಪ್​ನ ಪ್ಯಾರಾ ಬ್ಯಾಡ್ಮಿಂಟನ್​ನಲ್ಲಿ ಚಿನ್ನ
    * 2017ರಲ್ಲಿ ಬಿಎಂಡಬ್ಲ್ಯೂ ಟರ್ಕಿಶ್ ಓಪನ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್​ನಲ್ಲಿ ಪುರುಷರ ಸಿಂಗಲ್ಸ್ ಮತ್ತು ಡಬಲ್ಸ್ ನಲ್ಲಿ ಎರಡು ಚಿನ್ನ
    * 2018ರಲ್ಲಿ ವಾರಾಣಸಿಯಲ್ಲಿ ನಡೆದ ರಾಷ್ಟ್ರೀಯ ಪ್ಯಾರಾ-ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್​ನಲ್ಲಿ ಚಿನ್ನ
    * 2019ರಲ್ಲಿ ಬಿಎಂಡಬ್ಲ್ಯೂ ಟರ್ಕಿಶ್ ಓಪನ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್​ನಲ್ಲಿ ಚಿನ್ನ
    Published by:Vijayasarthy SN
    First published: