ಸಿಎಂ ಭೇಟಿಗಾಗಿ ಕಬ್ಬು ಬೆಳೆಗಾರರಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ 80 ಕಿ.ಮೀ ಪಾದಯಾತ್ರೆ

ಹೊರ ಜಿಲ್ಲೆಗಳ ಕಬ್ಬನ್ನು 8-10 ತಿಂಗಳಿಗೆ ಕಟಾವು ಮಾಡುವುದರಿಂದ ಸಕ್ಕರೆ ಇಳುವರಿ ಕಡಿಮೆ ಬರುತ್ತದೆ.  ಅದೇ ಇಳುವರಿ ಆಧಾರದ ಮೇಲೆ ಚಾಮರಾಜನಗರ ಜಿಲ್ಲೆಯ ರೈತರ ಕಬ್ಬಿಗೂ  ಬೆಲೆ ನೀಡುವುದರಿಂದ  ನಮ್ಮ ರೈತರಿಗೆ ನಷ್ಟವಾಗುತ್ತಿದೆ ಎನ್ನುತ್ತಾರೆ ಜಿಲ್ಲಾ ಕಬ್ಬುಬೆಳೆಗಾರರ ಸಂಘದ ಸಂಚಾಲಕ ಭಾಗ್ಯರಾಜ್.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಾಮರಾಜನಗರ (ನ.21): ಚಾಮರಾಜನಗರ ಜಿಲ್ಲೆಯ ನೂರಾರು ರೈತರು  ನವೆಂಬರ್ 24 ರಂದು ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಜಿಲ್ಲೆಯ ಏಕೈಕ ಸಕ್ಕರೆ ಕಾರ್ಖಾನೆಯಾದ ಕೊಳ್ಳೇಗಾಲ ತಾಲೂಕು ಕುಂತೂರಿನಲ್ಲಿರುವ ಬಣ್ಣಾರಿ ಸಕ್ಕರೆ  ಕಾರ್ಖಾನೆಯಿಂದ  ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯುವುದು ಇದರ ಉದ್ದೇಶವಾಗಿದೆ.  ನವೆಂಬರ್ 25 ಹಾಗೂ 26  ರಂದು ಮುಖ್ಯಮಂತ್ರಿ ಯಡಿಯೂರಪ್ಪ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ  ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪಾದಯಾತ್ರೆ ಮೂಲಕ ತೆರಳಿ ಮುಖ್ಯಮಂತ್ರಿಗಳಿಗೆ ಕಬ್ಬುಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯ ಮಾಡಲು ರೈತರು ತೀರ್ಮಾನಿಸಿದ್ದಾರೆ.

ನವೆಂಬರ್ 24 ರಂದು ಬೆಳಿಗ್ಗೆ 10 ಗಂಟೆಗೆ ಕೊಳ್ಳೇಗಾಲದಿಂದ ಹೊರಟು 80 ಕಿಲೋ ಮೀಟರ್ ದೂರದಲ್ಲಿರುವ ಮಲೆಮಹದೇಶ್ವರ ಬೆಟ್ಟವನ್ನು ನವೆಂಬರ್ 25 ರಂದು ಸಂಜೆ ವೇಳೆಗೆ ತಲುಪಿ, ಅಂದು ಅಥವಾ ಮಾರನೇ ದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ನಿರ್ಧರಿಸಲಾಗಿದೆ ಎಂದು ರೈತ ಮುಖಂಡ ಕುಂತೂರು ನಂಜುಂಡಸ್ವಾಮಿ ನ್ಯೂಸ್ 18 ಗೆ ತಿಳಿಸಿದ್ದಾರೆ.

ಕುಂತೂರು ಬಣ್ಣಾರಿ ಸಕ್ಕರೆ ಕಾರ್ಖಾನೆ ಒಪ್ಪಿಗೆಯಾಗಿರುವ ಕಬ್ಬನ್ನು 16-17 ತಿಂಗಳಾದರೂ ಕಟಾವು ಮಾಡುತ್ತಿಲ್ಲ. ಇದರಿಂದ ಕಬ್ಬು ಒಣಗಿ ರೈತರು ನಷ್ಟ ಅನುಭವಿಸುವಂತಾಗಿದೆ. ಕಬ್ಬನ್ನು 12 ತಿಂಗಳ ಒಳಗೆ ಕಟಾವು ಮಾಡಬೇಕು,  ಕಳೆದ ವರ್ಷದ ಇಳುವರಿ  ಆಧಾರದ ಮೇಲಿನ ದರದಂತೆ ರೈತರಿಗೆ  12 ಕೋಟಿ 95 ಲಕ್ಷ ರೂಪಾಯಿ ಬಾಕಿಯನ್ನು ಇನ್ನೂ ಪಾವತಿಸಿಲ್ಲ ಎಂಬುದು ರೈತರ ಆರೋಪವಾಗಿದೆ.

ರಂಗರಾಜನ್ ವರದಿ ಪ್ರಕಾರ ಸಕ್ಕರೆ ಕಾರ್ಖಾನೆಯ ಉಪಉತ್ಪನ್ನಗಳ ಲಾಭಾಂಶದಲ್ಲಿ ರೈತರಿಗೆ  ಶೇಕಡಾ 70 ರಷ್ಟು ರೈತರಿಗೆ ಹಾಗು  ಸಕ್ಕರೆ ಕಾರ್ಖಾನೆಗೆ ಶೇಕಡಾ 30 ರಷ್ಟು ಲಾಭಾಂಶ ಹಂಚಿಕೆಯಾಗಬೇಕು. ಮೊಲಾಸೆಸ್, ಫ್ರೆಷ್ ಮಡ್,  ಕೋ ಜನರೇಷನ್ ಮೂಲಕ ಉತ್ಪಾದಿಸುವ ವಿದ್ಯುತ್ ನಿಂದ ಬರುವ ಲಾಭಾಂಶವನ್ನು ರೈತರಿಗೆ ನೀಡದೆ ವಂಚಿಸಲಾಗುತ್ತಿದೆ ಎಂದು ರೈತ ಮುಖಂಡ ನಂಜುಂಡಸ್ವಾಮಿ ಆರೋಪಿಸಿದ್ದಾರೆ.

ವಾಯುಪಡೆಯ ಫ್ಲೈಟ್​ ಲೆಫ್ಟಿನೆಂಟ್ ಜಗದೀಶ ಸುತಗಟ್ಟಿ ನಿಧನ; ಇಂದು ಹಾವೇರಿಯಲ್ಲಿ ಅಂತ್ಯಕ್ರಿಯೆ

ಚಾಮರಾಜನಗರ ಜಿಲ್ಲೆಯ ಕಬ್ಬು ಕಟಾವು ಮಾಡಲು ಮೊದಲ ಆದ್ಯತೆ ನೀಡಬೇಕು. ಆದರೆ ಕುಂತೂರು ಸಕ್ಕರೆ ಕಾರ್ಖಾನೆ ಹೊರ ಜಿಲ್ಲೆಗಳ ಕಬ್ಬನ್ನು ತಂದು ಅರೆಯುತ್ತಿದೆ. ಹೊರ ಜಿಲ್ಲೆಗಳ ಕಬ್ಬನ್ನು 8-10 ತಿಂಗಳಿಗೆ ಕಟಾವು ಮಾಡುವುದರಿಂದ ಸಕ್ಕರೆ ಇಳುವರಿ ಕಡಿಮೆ ಬರುತ್ತದೆ.  ಅದೇ ಇಳುವರಿ ಆಧಾರದ ಮೇಲೆ ಚಾಮರಾಜನಗರ ಜಿಲ್ಲೆಯ ರೈತರ ಕಬ್ಬಿಗೂ  ಬೆಲೆ ನೀಡುವುದರಿಂದ  ನಮ್ಮ ರೈತರಿಗೆ ನಷ್ಟವಾಗುತ್ತಿದೆ ಎನ್ನುತ್ತಾರೆ ಜಿಲ್ಲಾ ಕಬ್ಬುಬೆಳೆಗಾರರ ಸಂಘದ ಸಂಚಾಲಕ ಭಾಗ್ಯರಾಜ್.

ಸಕ್ಕರೆ ಇಳುವರಿ ಎಷ್ಟು ಬರುತ್ತದೆ ಎಂಬುದರ ಬಗ್ಗೆ ರೈತರಿಗೆ ಮಾಹಿತಿಯೇ ಇರುವುದಿಲ್ಲ, ಸಕ್ಕರೆ ಕಾರ್ಖಾನೆಯರು ತಮಗಿಷ್ಟ ಬಂದಂತೆ ಇಳುವರಿ ವರದಿ ನೀಡಿ ಬೆಲೆ ನಿಗದಿ ಮಾಡುವುದರಿಂದ ಉತ್ತಮ ದರದಿಂದ ನಮ್ಮ ಜಿಲ್ಲೆಯ ರೈತರು ವಂಚಿತರಾಗುತ್ತಿದ್ದಾರೆ. ಹಾಗಾಗಿ ಪಾರದರ್ಶಕವಾಗಿ ಸಕ್ಕರೆ ಇಳುವರಿ ಲೆಕ್ಕ ಹಾಕಲು ರೈತರಿಗೆ ಗೊತ್ತಾಗುವಂತೆ ತಾಂತ್ರಿಕ ಘಟಕವನ್ನು  ಕಾರ್ಖಾನೆ ಆವರಣದಲ್ಲೆ ಸ್ಥಾಪಿಸಬೇಕು ಎಂಬುದು ರೈತರ ಆಗ್ರಹವಾಗಿದೆ.

ಹಾಗಾಗಿ ಎಲ್ಲಾ  ಸಮಸ್ಯೆಗಳನ್ನು ಬಗೆಹರಿಸುವಂತೆ  ಮುಖ್ಯಮಂತ್ರಿಗಳನ್ನೇ ಭೇಟಿ ಮಾಡಿ ಒತ್ತಾಯಿಸುವ ಸಲುವಾಗಿ ಈ ಪಾದಯಾತ್ರೆ ಕೈಗೊಂಡಿದ್ದೇವೆ ಎಂದು ರೈತ  ಮುಖಂಡ ಕುಂತೂರು ನಂಜುಂಡಸ್ವಾಮಿ ತಿಳಿಸಿದ್ದಾರೆ.
Published by:Latha CG
First published: