ಸತ್ಯ ದರ್ಶನಕ್ಕೆ ಸಜ್ಜಾದ ಹುಬ್ಬಳ್ಳಿಯ ಮೂರು ಸಾವಿರ ಮಠ; ತೀವ್ರ ಕುತೂಹಲ ಮೂಡಿಸಿದ ಗುರು-ಶಿಷ್ಯರ ನಡುವಿನ ಜಟಾಪಟಿ

ಹುಬ್ಬಳ್ಳಿಯ ಮೂರು ಸಾವಿರ ಮಠದ ಉತ್ತರಾಧಿಕಾರಿ ನೇಮಕ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಹಾಲಿ ಪೀಠಾಧ್ಯಕ್ಷ ಮೂಜಗು ಸ್ವಾಮೀಜಿ ಮತ್ತು ದಿಂಗಾಲೇಶ್ವರ ಸ್ವಾಮೀಜಿಗಳ ಹಗ್ಗಜಗ್ಗಾಟ ತಾರಕಕ್ಕೇರಿದೆ. ಮಠದಲ್ಲಿ ನೀ ಕೊಡೆ ನಾ ಬಿಡೆ ಎನ್ನುವ ವಾತಾವರಣ ಸೃಷ್ಟಿಯಾಗಿದೆ. ನಾಳೆ ನಡೆಯುವ ಸತ್ಯದರ್ಶನ ಕಾರ್ಯಕ್ರಮ ತೀವ್ರ ಕುತೂಹಲ ಕೆರಳಿಸಿದೆ.

news18-kannada
Updated:February 22, 2020, 8:09 PM IST
ಸತ್ಯ ದರ್ಶನಕ್ಕೆ ಸಜ್ಜಾದ ಹುಬ್ಬಳ್ಳಿಯ ಮೂರು ಸಾವಿರ ಮಠ; ತೀವ್ರ ಕುತೂಹಲ ಮೂಡಿಸಿದ ಗುರು-ಶಿಷ್ಯರ ನಡುವಿನ ಜಟಾಪಟಿ
ಮೂಜಗು ಸ್ವಾಮೀಜಿ ಮತ್ತು ದಿಂಗಾಲೇಶ್ವರ ಸ್ವಾಮೀಜಿ.
  • Share this:
ಹುಬ್ಬಳ್ಳಿ: ಹುಬ್ಬಳ್ಳಿಯ ಮೂರು ಸಾವಿರ ಮಠದ ಉತ್ತರಾಧಿಕಾರಿ ಯಾರು ಎನ್ನುವ ವಿಚಾರ ಈಗಾಗಲೇ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸಿದೆ. ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ತಾನೇ ಉತ್ತರಾಧಿಕಾರಿ ಎಂದು ಹೇಳಿದ್ದಾರೆ. ಈ ಕುರಿತು ದಾಖಲೆಗಳ ಸಹಿತ ಸಾಬೀತು ಪಡಿಸುವುದಾಗಿ ಘೋಷಿಸಿದ್ದಾರೆ. ಮಠದ ಆವರಣದಲ್ಲಿ ನಾಳೆ ಸತ್ಯದರ್ಶನ ಹೆಸರಲ್ಲಿ ಭಕ್ತರ ಸಭೆ ಕರೆದಿದ್ದಾರೆ. ತಮ್ಮ ವಿರುದ್ದ ಯಾರಾದರೂ ಆರೋಪಿಸುವುದಿದ್ದರೆ ಬಹಿರಂಗವಾಗಿ ದಾಖಲೆಗಳ ಸಮೇತ ಬರಲಿ ಎಂದು ಸವಾಲು ಹಾಕಿದ್ದಾರೆ.

ಹಾಲಿ ಪೀಠಾಧ್ಯಕ್ಷ ಮೂಜಗು ಸ್ವಾಮೀಜಿಗಳು ತಮ್ಮನ್ನು 2014ರಲ್ಲಿ ಉತ್ತರಾಧಿಕಾರಿಯಾಗಿ ನೇಮಿಸಿಕೊಂಡಿದ್ದಾರೆ. ಘೋಷಣಾ ಪತ್ರಕ್ಕೆ ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ, ಪ್ರಭಾಕರ್ ಕೋರೆ, ಬಸವರಾಜ್ ಹೊರಟ್ಟಿ, ಸಿ.ಎಂ. ಉದಾಸಿ, ಶಂಕ್ರಣ್ಣ ಮುನವಳ್ಳಿ ಸೇರಿದಂತೆ ವೀರಶೈವ ಲಿಂಗಾಯತ ಸಮಾಜದ 52 ಪ್ರಮುಖರು ಹಾಗೂ ಮಠಾಧೀಶರು ಸಹಿ ಹಾಕಿದ್ದಾರೆ. ಹೀಗಾಗಿ ತನ್ನನ್ನು ಉತ್ತರಾಧಿಕಾರಿ ಎಂದು ಒಪ್ಪಿ ಮಠಕ್ಕೆ ಬರಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ನಾಳೆ ಬೆಳಗ್ಗೆ ಹುಬ್ಬಳ್ಳಿಯ ನೆಹರು ಮೈದಾನದಿಂದ ಮೂರು ಸಾವಿರ ಮಠದವರೆಗೆ ಬೃಹತ್‌ ಮೆರವಣಿಗೆ ನಡೆಯಲಿದೆ. ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ಮೂರು ಸಾವಿರ ಮಠಕ್ಕೆ ತೆರಳಿ ಕರ್ತೃ ಗದ್ದುಗೆಯ ಸಮ್ಮುಖದಲ್ಲಿ ಬಹಿರಂಗ ಸತ್ಯದರ್ಶನ ಸಭೆ ನಡೆಸಲಾಗುವುದು ಎಂದು ದಿಂಗಾಲೇಶ್ವರರು ಸ್ಪಷ್ಟಪಡಿಸಿದ್ದಾರೆ. ಈ ಸಭೆಗೆ ಹಾಲಿ ಪೀಠಾಧ್ಯಕ್ಷ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ವಿರೋಧ ವ್ಯಕ್ತಪಡಿಸಿದ್ದಾರೆ. ಮೌನ ಮುರಿದಿರುವ ಮೂಜಗು ಸ್ವಾಮೀಜಿಗಳು, ಸತ್ಯದರ್ಶನ ಸಭೆಯನ್ನು ಕೈಬಿಡುವುದು ಸೂಕ್ತ ಎಂದಿದ್ದಾರೆ. ಮಠದಲ್ಲಿ ನಾನಾ, ನೀನಾ ಎಂಬಂತ ವಾತಾವರಣ ಸೃಷ್ಟಿಯಾಗಿದೆ. ಈಗ ಎರಡೂ ಕಡೆಯವರು ಮೌನವಾಗಿ ಇರುವುದು ಒಳಿತು. ಇದು ಭಕ್ತರಲ್ಲಿ ನನ್ನ ಮನವಿ. ಯಾರು ಕೂಡ ಸದ್ಯಕ್ಕೆ ಉತ್ತರಾಧಿಕಾರಿ ನೇಮಕ ವಿಚಾರದಲ್ಲಿ ಮಾತನಾಡಬೇಡಿ. ಪರ ವಿರೋಧದ ಚರ್ಚೆ ಮಾಡುವವರು ಸ್ವಲ್ಪ ದಿನದ ಮಟ್ಟಿಗೆ ಎಲ್ಲ ವಿಚಾರಗಳನ್ನು ಕೈಬಿಡಬೇಕು. ನಾನು ದೈಹಿಕವಾಗಿ,‌ ಮಾನಸಿಕವಾಗಿ ಸದೃಢನಾಗಿದ್ದೇನೆ. ಉತ್ತರಾಧಿಕಾರಿ ನೇಮಕ ವಿಚಾರ ಕೋರ್ಟ್‌ನಲ್ಲಿದೆ. ಹೀಗಾಗಿ ಉತ್ತರಾಧಿಕಾರಿ ವಿಚಾರದಲ್ಲಿ ಸದ್ಯಕ್ಕೆ ಏನನ್ನೂ ಹೇಳ ಬಯಸುವುದಿಲ್ಲ. ದಿಂಗಾಲೇಶ್ವರರು ಸ್ವಲ್ಪ ಸಮಯಾವಕಾಶ ತೆಗೆದುಕೊಂಡು ಕಾಯುವುದು ಒಳಿತು ಎಂದವರು ಹೇಳಿದ್ದಾರೆ.

ಖಾವಿ ರಾಜಕೀಯ- ಬಹಿರಂಗ ಸವಾಲು

ಆದರೆ ದಿಂಗಾಲೇಶ್ವರ ಸ್ವಾಮೀಜಿ ಸತ್ಯದರ್ಶನ ಸಭೆ ನಡೆಸಿಯೇ ತೀರುವುದಾಗಿ ಪಟ್ಟುಹಿಡಿದಿದ್ದಾರೆ. ಸತ್ಯದರ್ಶನ ಸಭೆ ಯಶಸ್ವಿಯಾಗಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಭೆ ನಡೆಸದಂತೆ ತಡೆಯಲು ಖಾವಿಧಾರಿಗಳೇ ಪ್ರಭಾವ ಬೀರುತ್ತಿದ್ದು, ಯಾರಿಂದಲೂ ಸತ್ಯದರ್ಶನ ನಿಲ್ಲಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಸತ್ಯದರ್ಶನ ಸಭೆಗೆ ಬೆಳಗ್ಗೆ 10:30ಕ್ಕೆ ಚಾಲನೆ ದೊರೆಯಲಿದೆ. ನೆಹರೂ ಮೈದಾನದಿಂದ ಮೆರವಣಿಗೆ ಮೂಲಕ ತೆರಳಿ ಮೂರುಸಾವಿರ ಮಠವನ್ನು ಪ್ರವೇಶಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು‌ ಸಭೆಗೆ ಆಗಮಿಸಬೇಕು. ಗೃಹ ಇಲಾಖೆಯನ್ನು ಸಂಪರ್ಕಿಸಿದ್ದು, ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಸಭೆ ಯಶಸ್ವಿಯಾಗುತ್ತೆ ಅಂತಾ ಹೇಳಿದ್ದಾರೆ. ಕುಹಕಿಗಳು ಅಚಾತುರ್ಯ ಮಾಡಬಾರದು ಅಂತ ಭದ್ರತೆ ಕೇಳಿದ್ದೇವೆ. ನಮ್ಮನ್ನು ಮಠಕ್ಕೆ ಹೋಗದಂತೆ ತಡೆಯುವ ಹಕ್ಕು ಯಾರಿಗೂ ಇಲ್ಲ. ಅಂದಾಜು 10- 15ಸಾವಿರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಗಲಾಟೆ, ದೊಂಬಿ ನಡೆಯಲ್ಲ. ಭಕ್ತರ ಸಭೆಯಾದ್ದರಿಂದ‌ ನಿಷೇದಾಜ್ಞೆ ಜಾರಿ ಮಾಡುವ ಅವಶ್ಯಕತೆ ಇಲ್ಲ. ಸಭೆ ನಡೆಸಲು ಪೊಲೀಸ್ ಇಲಾಖೆಯಿಂದ ಮೌಖಿಕ ಒಪ್ಪಿಗೆ ಸಿಕ್ಕಿದೆ. ಸಭೆಗೆ ಅನುಮತಿ ಕೊಡದಂತೆ ಪೊಲೀಸ್ ಇಲಾಖೆಯ ಮೇಲೆ ಕಾಣದ ಖಾವಿಧಾರಿಗಳು ಒತ್ತಡ ಹೇರುತ್ತಿದ್ದಾರೆ‌. ಇದಕ್ಕೆ ಪೊಲೀಸ್‌ ಇಲಾಖೆ ಮಣೆ ಹಾಕಬಾರದು. ಭಕ್ತರನ್ನು ಮಠ ಪ್ರವೇಶಿಸದಂತೆ ತಡೆದರೆ ಸಮಾಜವನ್ನು ರೊಚ್ಚಿಗೆ ಎಬ್ಬಿಸಿದಂತಾಗುತ್ತೆ ಎಂದವರು ಹೇಳಿದ್ದಾರೆ.

ಇದನ್ನು ಓದಿ: ಮೂರು ಸಾವಿರ ಮಠದಲ್ಲಿ ಉತ್ತರಾಧಿಕಾರಿ ನೇಮಕ ಕಗ್ಗಂಟು- ದಿಂಗಾಲೇಶ್ವರ ಸ್ವಾಮೀಜಿ ಭೇಟಿ ನಿರಾಕರಿಸಿದ ಮೂಜಗು ಸ್ವಾಮೀಜಿಬಂಡವಾಳ ಬಯಲಿಗೆ ತರಲು ತಯಾರಾದ ದಿಂಗಾಲೇಶ್ವರರು

ದಿಂಗಾಲೇಶ್ವರರು ಮೂರು ಸಾವಿರ ಮಠದ ಉತ್ತರಾಧಿಕಾರಿಯಾಗಿ ನೇಮಕವಾದರೆ ಕೆಲವರ ಬಂಡವಾಳ ಬಯಲಾಗುತ್ತೆ ಎನ್ನುವ ಗುಸುಗುಸು ಶುರುವಾಗಿದೆ. ಇದಕ್ಕೆ ಪೂರಕ ಎನ್ನುವಂತೆ ನಾಳೆ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಲು ದಿಂಗಾಲೇಶ್ವರರು ಸಿದ್ಧತೆ ಮಾಡಿಕೊಂಡಿದ್ದಾರೆ. ಮಠದ ಆಸ್ತಿಯನ್ನು ದುರುಪಯೋಗ ಮಾಡಿಕೊಂಡವರು, ಕಬಳಿಸಿದವರ ಕುರಿತು ಸತ್ಯದರ್ಶನ ಸಭೆಯಲ್ಲಿ ಮಾಹಿತಿ ನೀಡುವುದಾಗಿ ದಿಂಗಾಲೇಶ್ವರರು ತಿಳಿಸಿದ್ದಾರೆ.

ಹೀಗಾಗಿ ನಾಳಿನ ಸಭೆ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಲಿದೆ ಎನ್ನಲಾಗುತ್ತಿದೆ. ಮೆರವಣಿಗೆ ಮತ್ತು ಸಭೆಗೆ ಪೊಲೀಸ್ ಇಲಾಖೆಯಿಂದ ಅಧಿಕೃತ ಅನುಮತಿ ದೊರೆತಿಲ್ಲ. ಆದರೆ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಮಠದ ಸುತ್ತ ವ್ಯಾಪಕ ಪೊಲೀಸ್ ಬಂದೋಬಸ್ತ್‌ ಮಾಡಲಾಗಿದೆ. ಉತ್ತರಾಧಿಕಾರಿ ವಿವಾದ ಬಗೆಹರಿಯುತ್ತಾ ಇಲ್ಲವೇ ಮತ್ತಷ್ಟು ಕಗ್ಗಂಟಾಗುತ್ತಾ ಎನ್ನುವುದಕ್ಕೆ ನಾಳೆ ಉತ್ತರ ಸಿಗಲಿದೆ.
First published: February 22, 2020, 8:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading