2nd PUC Exam: ಹಿಜಾಬ್​ಗಾಗಿ ಪರೀಕ್ಷೆ ಬರೆಯದ ವಿದ್ಯಾರ್ಥಿನಿಯರು; ಇದರ ಹಿಂದೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕೈವಾಡವಿದೆ- ಸಚಿವ ನಾಗೇಶ್

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಿಜಾಬ್ ವಿದ್ಯಾರ್ಥಿನಿಯರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿರಬಹುದು. ಈ ಸಂಘಟನೆಯವರೇ ಮಕ್ಕಳ ಭವಿಷ್ಯವನ್ನು ಹಾಳು ಮಾಡಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಗಂಭೀರ ಆರೋಪ ಮಾಡಿದ್ದಾರೆ.

ಸಚಿವ ನಾಗೇಶ್​

ಸಚಿವ ನಾಗೇಶ್​

  • Share this:
ಬೆಂಗಳೂರು (ಏ 22): ಹೈಕೋರ್ಟ್ (High Court)​ ಹಾಗೂ ರಾಜ್ಯ ಸರ್ಕಾರದ ಆದೇಶದ ನಡುವೆಯೂ ಹಿಜಾಬ್ ಧರಿಸಿ ಉಡುಪಿ (Udupi) ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಆಗಮಿಸಿದ ಹಿಜಾಬ್ (Hijab) ಪರ  ಹೋರಾಟಗಾರ್ತಿ ಅಲಿಯಾ ಅಸಾದಿ ಮತ್ತು ರೇಷ್ಮಾ ಹಿಜಾಬ್​ ಧರಿಸಿಯೇ ಪರೀಕ್ಷೆ (Exam) ಬರೆಯಲು ಬಂದಿದ್ರು. ಇಬ್ಬರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯುವುದಾಗಿ ಪಟ್ಟು ಹಿಡಿದಿದ್ದಾರೆ.  ಆದ್ರೆ ಅಧಿಕಾರಿಗಳು ಅನುಮತಿ ನೀಡದ ಹಿನ್ನೆಲೆ ಪರೀಕ್ಷಾ ಕೇಂದ್ರದಿಂದ (Exam Center) ಹೊರಗೆ ಹೋಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (B.C Nagesh) ಅವರು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯವರೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.

ಮಕ್ಕಳ ಭವಿಷ್ಯವನ್ನು ಹಾಳು ಮಾಡಿದ್ದಾರೆ

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಿಜಾಬ್ ವಿದ್ಯಾರ್ಥಿನಿಯರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿರಬಹುದು. ಈ ಸಂಘಟನೆಯವರೇ ಮಕ್ಕಳ ಭವಿಷ್ಯವನ್ನು ಹಾಳು ಮಾಡಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಗಂಭೀರ ಆರೋಪ ಮಾಡಿದ್ದಾರೆ. ಹಿಜಾಬ್ ಪರ ಹೋರಾಡಿದ ಆರು ವಿದ್ಯಾರ್ಥಿಗಳ ಮನವೊಲಿಸಲು ನಾವು ಪ್ರಯತ್ನ ಮಾಡಿದ್ದೇವೆ. ಆದರೆ ನಾವು ಎಷ್ಟೇ ಪ್ರಯತ್ನಪಟ್ಟರೂ ವಿದ್ಯಾರ್ಥಿಗಳ ಮನ ಕರಗಿಲ್ಲ. ಹೀಗಾಗಿ ಅವರನ್ನು ಬೇರೆ ಸಂಘಟನೆಗಳು ಮನವೊಲಿಸಲು ಮುಂದಾಗಿರಬೇಕು. ಈ ವಿದ್ಯಾರ್ಥಿಗಳ ಹಿಂದೆ ಯಾರಿದ್ದಾರೆನ್ನುವುದೂ ಹೊರಬರುತ್ತಿದೆ.

ಹಿಜಾಬ್ ಪರ ನಿಂತ ವಿದ್ಯಾರ್ಥಿಗಳ ಬಗ್ಗೆ ಚಿಂತಿಸಿಲ್ಲ

ನಮಗೆ ಹಿಜಾಬ್ ಪರ ನಿಂತ ಆರು ವಿದ್ಯಾರ್ಥಿಗಳ ಬಗ್ಗೆ ನಾವು ಯೋಚಿಸುತ್ತಿಲ್ಲ. ಏಕೆಂದರೆ ಇಷ್ಟೇಲ್ಲಾ ಸಮಸ್ಯೆಗಳ ನಡುವೆ ಒಂದು ಲಕ್ಷ ಮುಸ್ಲಿಂ ಸಮುದಾಯದ ಮಕ್ಕಳು ಪರೀಕ್ಷೆಯನ್ನು ಬರೆಯುತ್ತಿದ್ದಾರೆ. ಅದರಲ್ಲಿ 82 ಸಾವಿರ ಜನ ವಿದ್ಯಾರ್ಥಿನಿಯರಿದ್ದಾರೆ. ಇದು ನಿಜಕ್ಕೂ ಸಂತೋಷದ ವಿಷಯ. ಇದರಲ್ಲಿ ಆರು ಜನ ಪರೀಕ್ಷೆ ಬರೆಯುವುದಿಲ್ಲ ಎಂಬುವುದಕ್ಕಿಂತ 82 ಸಾವಿರ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲು ಮುಂದಾಗಿದ್ದಾರೆನ್ನುವುದು ಮುಖ್ಯ. ಇವರನ್ನು ನಾವು ಪರಿಗಣನೆಗೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ:  Warrant to DK Shivakumar: ಕೊರೊನಾ ನಿಯಮ ಉಲ್ಲಂಘಿಸಿ ಪ್ರತಿಭಟನೆ; ಡಿಕೆ ಶಿವಕುಮಾರ್​ಗೆ ವಾರೆಂಟ್

ಹಿಜಾಬ್ ಮುಗಿದು ಹೋದಂತಹ ಸಮಸ್ಯೆ

ಮಾತ್ರವಲ್ಲದೇ ಸುಪ್ರೀಂ ಕೋರ್ಟ್ ಕೂಡ ಅವರ ವಾದಗಳಿಗೆ ಮನ್ನಣೆ ನೀಡಿಲ್ಲ. ಅಲ್ಲದೇ ಸರ್ಕಾರದ ನಿರ್ಧಾರಗಳು ಸರಿಯಾದ ರೀತಿಯಲ್ಲಿದೆ ಎಂದು ಹೈಕೋರ್ಟ್ ತಿಳಿಸಿದೆ. ಹಿಜಾಬ್ ಮುಗಿದು ಹೋದಂತಹ ಸಮಸ್ಯೆ ಎಂದರು. ಹಿಜಾಬ್ ಕೇವಲ ಭಾರತದಲ್ಲಿ ಮಾತ್ರ ಎದುರಿಸಲಾಗುತ್ತಿರುವ ಸಮಸ್ಯೆಯಲ್ಲ. ಪ್ರಪಂಚದ ಅನೇಕ ದೇಶಗಳಲ್ಲಿ ಇದೇ ರೀತಿ ಸಮಸ್ಯೆಗಳಿದ್ದು, ಎಲ್ಲಾ ದೇಶಗಳು ಧೈರ್ಯವಾಗಿ ಮುನ್ನುಗ್ಗುತ್ತಿದೆ ಎಂದು ಸಚಿವರು ತಿಳಿಸಿದರು.

ಹಿಜಾಬ್ ಮತ್ತು ಬುರ್ಕಾವನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಕೂಡ ಧರಿಸಬಾರದು ಎಂಬ ನಿರ್ಣಯಗಳನ್ನು ಅನೇಕ ದೇಶಗಳು ಕೈಗೊಳ್ಳಲಾಗಿದೆ. ದುಬೈ ಅಥವಾ ಸೌದಿಯಲ್ಲಿಯೋ ಈ ದೇಶದಲ್ಲಿ ಹಿಜಬ್ ಕಡ್ಡಾಯವಲ್ಲ ಎಂಬ ಬೋರ್ಡ್ ಕೂಡ ಹಾಕಲಾಗಿದೆ. ಇಷ್ಟರ ಮಟ್ಟಿಗೆ ಆ ಸಮಾಜದಲ್ಲಿ ಬದಲಾವಣೆಗಳಾಗುತ್ತಿದೆ ಎಂದು ಸಚಿವ ನಾಗೇಶ್ ತಿಳಿಸಿದರು.

ಇದನ್ನೂ ಓದಿ: Second PU Exam: ಪರೀಕ್ಷಾ ಕೇಂದ್ರದಿಂದ ಹೊರ ನಡೆದ ಹಿಜಾಬ್ ತೆಗೆಯಲು ಒಪ್ಪದ ಇಬ್ಬರು ವಿದ್ಯಾರ್ಥಿನಿಯರು

ಹಿಜಾಬ್ ತೆಗೆದಿಡಲು ಪ್ರತ್ಯೇಕ ಕೋಣೆಯ ವ್ಯವಸ್ಥೆ

ಪರೀಕ್ಷೆಗೆ ವಿದ್ಯಾರ್ಥಿನಿಯರು (Students) ಹಿಜಾಬ್ (Hijab) ಧರಿಸಿ ಹಾಜರಾಗುವಂತಿಲ್ಲ ಎಂದರು. SSLC ಪರೀಕ್ಷೆಯಂತೆ ಮಕ್ಕಳು ಪ್ರತ್ಯೇಕ ಕೊಠಡಿಗೆ ತೆರಳಿ ಹಿಜಾಬ್ ಅಥವಾ ಬುರ್ಕಾ (Burqua) ತೆಗೆದು ಪರೀಕ್ಷಾ ಕೊಠಡಿಗೆ ತೆರಳಬೇಕು. ಪರೀಕ್ಷಾ ಕೇಂದ್ರದಲ್ಲಿ (Exams Centre) ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆದಿಡಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ ಎಂದು ಬಿ.ಸಿ.ನಾಗೇಶ್ ಮೂರು ದಿನಗಳ ಹಿಂದೆಯೇ ಮಾಹಿತಿ ನೀಡಿದ್ದರು

ಪಿಯು ಪರೀಕ್ಷೆ ವೇಳೆ ಉಚಿತ ಪ್ರಯಾಣ

ಪಿಯು ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಸಾರಿಗೆ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಪ್ರಯಾಣದ ವೇಳೆ ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಬೇಕು. ಹಳ್ಳಿಯಿಂದ ಬರುವ ಮಕ್ಕಳಿಗೆ KSRTC ಇರಲಿದೆ. ಒಟ್ಟು 81 ಮೌಲ್ಯಮಾಪನ ಕೇಂದ್ರ ಇರಲಿದ್ದು. ಎಲ್ಲಾ ಕೇಂದ್ರಗಳಲ್ಲಿ ಸಿಸಿಟಿವಿ ಇರಲಿವೆ. ಪರೀಕ್ಷೆ ಮೌಲ್ಯಮಾಪನ ವೇಳೆ ಮೊಬೈಲ್‌ ನಿಷೇಧ ಮಾಡಲಾಗಿದೆ.  ಎಸ್ ಒಪಿ ಈಗಿನದೇ ಅನ್ವಯವಾಗಲಿದೆ. ಪರೀಕ್ಷಾ ಕೇಂದ್ರದ ಸುತ್ತ 144 ಸೆಕ್ಷನ್ ಇರಲಿದೆ . ಹೊಸದಾಗಿ ತುಮಕೂರು, ಹಾಸನ,ಬಳ್ಳಾರಿ ಜಿಲ್ಲೆಗಳಲ್ಲಿ ಮೌಲ್ಯಮಾಪನ ಕೇಂದ್ರ ತೆರೆಯಲಾಗಿದೆ.
Published by:Pavana HS
First published: