• Home
  • »
  • News
  • »
  • state
  • »
  • ವಾರ ಕಳೆದರೂ ಕಾಲೇಜಿಗೆ ಬರಲು ವಿದ್ಯಾರ್ಥಿಗಳ ಹಿಂದೇಟು: ತರಗತಿಗಳ ಖಾಲಿಖಾಲಿ

ವಾರ ಕಳೆದರೂ ಕಾಲೇಜಿಗೆ ಬರಲು ವಿದ್ಯಾರ್ಥಿಗಳ ಹಿಂದೇಟು: ತರಗತಿಗಳ ಖಾಲಿಖಾಲಿ

ತರಗತಿಯಲ್ಲಿ ವಿದ್ಯಾರ್ಥಿಗಳು

ತರಗತಿಯಲ್ಲಿ ವಿದ್ಯಾರ್ಥಿಗಳು

ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವ ಹಿನ್ನಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳ ಮೊಬೈಲ್​ ಫೋನ್ ಸಂಖ್ಯೆ ಸಂಗ್ರಹಿಸಿ ಪೋನ್ ಮೂಲಕ ಹಾಗೂ ವಾಟ್ಸಪ್ ಮೂಲಕ  ವಿದ್ಯಾರ್ಥಿಗಳನ್ನು, ಪೋಷಕರನ್ನು ಸಂಪರ್ಕಿಸುತ್ತಿದ್ದೇವೆ.

  • Share this:

ಚಾಮರಾಜನಗರ (ನ. 23):  ರಾಜ್ಯಾದ್ಯಂತ  ಪದವಿ ಕಾಲೇಜುಗಳು ಆರಂಭವಾಗಿ ಒಂದು ವಾರ ಕಳೆದರೂ  ಜಿಲ್ಲೆಯಲ್ಲಿ ವಿದ್ಯಾರ್ಥಿಗಳು  ಕಾಲೇಜಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ವಿದ್ಯಾರ್ಥಿಗಳಿಲ್ಲದೆ ಕಾಲೇಜುಗಳು ಬಣಗುಡುತ್ತಿವೆ. ತರಗತಿಗಳು ಖಾಲಿ ಖಾಲಿಯಾಗಿವೆ. ಜಿಲ್ಲೆಯಲ್ಲಿ ಎಂಟು ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಿಗದ್ದು 1122 ವಿದ್ಯಾರ್ಥಿಗಳಿದ್ದು ಕೇವಲ 20 ಮಂದಿ ವಿದ್ಯಾರ್ಥಿಗಳು ಮಾತ್ರ ಹಾಜರಾಗುತ್ತಿದ್ದಾರೆ. ಕೋವಿಡ್-19 ಹಿನ್ನಲೆಯಲ್ಲಿ ಕಳೆದ 8 ತಿಂಗಳಿಂದ ಮುಚ್ಚಿದ್ದ ಪದವಿ ಕಾಲೇಜುಗಳನ್ನು ಮುಂಜಾಗ್ರತಾ ಕ್ರಮಗಳೊಂದಿಗೆ  ನವೆಂಬರ್ 17ರಿಂದ ಆರಂಭಿಸಲಾಗಿದೆ. ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಕೋವಿಡ್ ಟೆಸ್ಟ್ ರಿಪೋರ್ಟ್ ಹಾಗು ಪೋಷಕರ ಒಪ್ಪಿಗೆ ಪತ್ರ ತರುವುದು ಕಡ್ಡಾಯವಾಗಿದೆ. ಆದರೆ ವಿದ್ಯಾರ್ಥಿಗಳು ಕೋವಿಡ್ ಟಸ್ಟ್ ಮಾಡಿಸಿಕೊಳ್ಳಲು ಹಿಂಜರಿಯುತ್ತಿದ್ದು ಕಾಲೇಜುಗಳಿಗೆ ಬರಲು ಮನಸ್ಸು ಮಾಡುತ್ತಿಲ್ಲ. ಕೋವಿಡ್ ಟೆಸ್ಟ್ ಮಾಡಿಸಲು ಮನೆಯಲ್ಲಿ ಪೋಷಕರು ಒಪ್ಪುತ್ತಿಲ್ಲ. ಬೇಕಾದರೆ ಅವರಿಂದ ಅನುಮತಿ ಪತ್ರ ತಂದುಕೊಡುತ್ತೇವೆ, ಕಾಲೇಜಿಗೆ ಬರಲು ಅವಕಾಶ ನೀಡಿ  ಎಂದು ವಿದ್ಯಾರ್ಥಿಗಳು  ಹೇಳುತ್ತಿದ್ದಾರೆ. ಆದರೆ ಸರ್ಕಾರದ ಆದೇಶ ಮೀರಿ ಹೀಗೆ ಅವಕಾಶ ನೀಡಲು ಸಾಧ್ಯವಾಗುವುದಿಲ್ಲ, ಕೋವಿಡ್ ಟೆಸ್ಟ್ ರಿಪೊರ್ಟ್  ಕಡ್ಯಾಯವಾಗಿ ತರಲೇಬೇಕು ಎನ್ನುತ್ತಾರೆ ಕಾಲೇಜುಗಳ ಪ್ರಾಂಶುಪಾಲರು.


ಜಿಲ್ಲೆಯ ಸರ್ಕಾರಿ ಕಾಲೇಜುಗಳಲ್ಲಿ ಶೇಕಡ 2 ರಷ್ಟು ಮಾತ್ರ ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. ಹೀಗೆ ಕಾಲೇಜಿಗೆ ಬರುವ ಒಂದಿಬ್ಬರು ವಿದ್ಯಾರ್ಥಿಗಳಿಗೆ ಅಧ್ಯಾಪಕರು ಪಾಠ  ಮಾಡುತ್ತಿದ್ದಾರೆ. ಉಳಿದವರಿಗೆ ಆನ್ ಲೈನ್ ತರಗತಿಗಳನ್ನು ಸಹ ಮುಂದುವರಿಸಲಾಗಿದೆ.


ಇದನ್ನು ಓದಿ: ತ್ರಿನೇತ್ರಾ ಕರ್ನಾಟಕದ ಮೊದಲ ತೃತೀಯ ಲಿಂಗಿ ವೈದ್ಯೆ; ಅವನು ಅವಳಾದ ಕಥೆ


ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವ ಹಿನ್ನಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳ ಮೊಬೈಲ್​ ಫೋನ್ ಸಂಖ್ಯೆ ಸಂಗ್ರಹಿಸಿ ಪೋನ್ ಮೂಲಕ ಹಾಗೂ ವಾಟ್ಸಪ್ ಮೂಲಕ  ವಿದ್ಯಾರ್ಥಿಗಳನ್ನು, ಪೋಷಕರನ್ನು ಸಂಪರ್ಕಿಸುತ್ತಿದ್ದೇವೆ.. ಅವರಿಗೆ ತಿಳುವಳಿಕೆ ನೀಡಿ ಧೈರ್ಯವಾಗಿ ಕಾಲೇಜಿಗೆ ಬರುವಂತೆ    ಆಹ್ವಾನ ನೀಡುತ್ತಿದ್ದೇವೆ. ಆದರೆ ವಿದ್ಯಾರ್ಥಿಗಳು ಕಾಲೇಜುಗಳಿಗೆ ಬರಲು ಮನಸ್ಸು ಮಾಡುತ್ತಿಲ್ಲ, ಆದಾಗ್ಯು ನಮ್ಮ ಪ್ರಯತ್ನ  ಮುಂದುವರಿಸಿದ್ದೇವೆ ಎನ್ನುತ್ತಾರೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಹೆಚ್.ಎಸ್. ಪ್ರೇಮಲತಾ.


ಈಗಾಗಲೇ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿರುವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳ ಬರುವಿಕೆಗೆ ಕಾಯುತ್ತಿದ್ದಾರೆ. ಅಲ್ಲದೆ, ಕಾಲೇಜುಗಳ ಕೊಠಡಿಗಳಿಗೆ ಸೋಂಕುನಿವಾರಕ ದ್ರಾವಣ ಸಿಂಪಡಿಸಲಾಗಿದೆ. ವಿದ್ಯಾರ್ಥಿಗಳಿಗೆ ನೀಡಲು ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಸೇರಿದಂತೆ ಎಲ್ಲಾ  ರೀತಿಯ ಸಿದ್ದತೆ ಮಾಡಿಕೊಂಡಿರುವ ಕಾಲೇಜುಗಳು ವಿದ್ಯಾರ್ಥಿಗಳಿಲ್ಲದೆ ಬಿಕೋ ಎನ್ನುತ್ತಿವೆ.


(ವರದಿ: ಎಸ್.ಎಂ.ನಂದೀಶ್ )

Published by:Seema R
First published: