ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಕಾಲೇಜು ಹುಡುಗಿಯರ (College Student) ಕೊಲೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಜನವರಿ 2ರಂದು ರಾಜಾನುಕುಂಟೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ (Rajankunte Presidency College) ಪ್ರೇಯಸಿಯನ್ನು ಕೊಂದಿದ್ದ ಪ್ರಿಯಕರ ಪ್ರಕರಣ ಮಾಸುವ ಮುನ್ನವೇ ನಿನ್ನೆ ಮತ್ತೆ ವಿದ್ಯಾರ್ಥಿಯೊಬ್ಬಳನ್ನು (Student) ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಕಾಲೇಜು ಮುಗಿಸಿ ಬರುತ್ತಿದ್ದ ಯುವತಿಯನ್ನು ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಸದ್ಯ ಈ ಪ್ರಕರಣದಲ್ಲಿ ಪೊಲೀಸರು (Bengaluru Police) ಆರೋಪಿ ಮಧುಚಂದ್ರನನ್ನು ಬಂಧಿಸಿದ್ದಾರೆ. ಅಲ್ಲದೇ ಆರೋಪಿ ಕೊಲೆ ಮಾಡಿದ ಬಳಿಕ ಆಂಧ್ರ ಪ್ರದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಏನಿದು ಪ್ರಕರಣ?
ದಿಬ್ಬೂರು ಗೇಟ್ ಬಳಿಯ ಶಾನಭೋಗನಹಳ್ಳಿಯ ಬಳಿ ವೆಂಕಟಾಚಲಯ್ಯ ಎಂಬುವರ 19 ವರ್ಷದ ಮಗಳು ರಾಶಿ ಎಂಬಾಕೆಯನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಯಲಹಂಕ ಡಿಗ್ರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದ ರಾಶಿ, ಕಾಲೇಜು ಮುಗಿಸಿದ ಬಳಿಕ ತೋಟದಲ್ಲಿ ಕಟ್ಟಿದ್ದ ಹಸುಗಳನ್ನು ಹೊಡೆದುಕೊಂಡು ಮನೆಗೆ ಹೋಗುವಾಗ ದ್ವಿಚಕ್ರ ವಾಹನದಲ್ಲಿ ಬಂದಿದ್ದ ದುಷ್ಕರ್ಮಿಗಳು ಕತ್ತನ್ನು ಸೀಳಿ ಕೊಲೆ ಮಾಡಿದ್ದರು. ಸ್ಥಳದಲ್ಲೇ ಯುವತಿ ರಾಶಿಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಇಬ್ಬರಿಗೂ ಪರಿಚಯವಿದ್ದು, ಆತ್ಮೀಯತೆ ಇತ್ತು!
ಪ್ರೆಸಿಡೆನ್ಸಿ ಕಾಲೇಜಿನಲ್ಲಿ ನಡೆದಿದ್ದ ಕೊಲೆ ಕೇಸ್ಗೆ ಪ್ರೀತಿ ನಿರಾಕರಣೆ ಕಾರಣ ಅನ್ನೋದು ಬಯಲಾಗಿತ್ತು. ಇದೀಗ ರಾಶಿ ಕೊಲೆಗೂ ಪ್ರೀತಿ ನಿರಾಕರಿಸಿದ್ದೆ ಕಾರಣ ಎಂಬ ಮಾಹಿತಿ ಲಭ್ಯವಾಗಿದೆ. ಹೌದು, ಕಳೆದ ಮೂರು ವರ್ಷಗಳಿಂದ ಕಾಲೇಜು ರಜಾ ದಿನಗಳಲ್ಲಿ ಸೀಬೆ ಹಣ್ಣು ತೋಟದಲ್ಲಿ ಯುವತಿ ಕೆಲಸಕ್ಕೆ ಹೋಗುತ್ತಿದ್ದಳಂತೆ. ಈ ವೇಳೆ ಆಗಾಗ ತೋಟಕ್ಕೆ ಸೀಬೆ ಹಣ್ಣು ಬಾಕ್ಸ್ ಗಳನ್ನ ತೆಗೆದುಕೊಂಡು ಹೋಗಲು ಆರೋಪಿ, ಮಧುಚಂದ್ರ ಟೆಂಪೋ ತರುತ್ತಿದ್ದನಂತೆ. ಈ ವೇಳೆ ಇಬ್ಬರಿಗೂ ಪರಿಚಯವಾಗಿದ್ದು, ಆತ್ಮೀಯತೆ ಇತ್ತು ಎನ್ನಲಾಗಿದೆ.
ಆರೋಪಿಗೆ ಈಗಾಗಲೇ ಮದುವೆಯಾಗಿ ಮಗು ಕೂಡ ಇದೆ
ಆದರೆ ಆರೋಪಿ ಮಧುಚಂದ್ರನಿಗೆ ಈಗಾಗಲೇ ಒಂದು ಮದುವೆಯಾಗಿದ್ದು, ಒಂದು ಮಗು ಸಹ ಇದೆಯಂತೆ. ಹೀಗಿದ್ದರೂ ಪ್ರೀತಿ ಮಾಡುವಂತೆ ಹಾಗೂ ತನ್ನ ಆಸೆಯಂತೆ ನಡೆದುಕೊಳ್ಳುವಂತೆ ಆರೋಪಿ ಒತ್ತಾಯ ಮಾಡುತ್ತಿದ್ದನಂತೆ. ಮದುವೆ ವಿಚಾರ ಹಾಗೂ ಆರೋಪಿ ವರ್ತನೆಯಿಂದ ಬೇಸತ್ತು ಯುವತಿ ಆತನಿಂದ ದೂರ ಇರಲು ಆರಂಭಿಸಿದ್ದಳಂತೆ. ಇದೇ ಕಾರಣಕ್ಕೆ ಕೋಪಗೊಂಡಿದ್ದ ಆರೋಪಿ, ನಿನ್ನೆ ತೋಟದಲ್ಲಿ ಅಡ್ಡ ಹಾಕಿ ಯುವತಿಯ ಕತ್ತುಕೊಯ್ದು ಪರಾರಿಯಾಗಿದ್ದ.
ಬೆಂಗಳೂರಿನಲ್ಲಿ ಕಾಲೇಜು ಯುವತಿಯರಿಗೆ ರಕ್ಷಣೆ ಇಲ್ವಾ?
ಸದ್ಯ ಮೃತದೇಹ ಯಲಹಂಕ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲು ಪೊಲೀಸರು ಮುಂದಾಗಿದ್ದಾರೆ. ಇತ್ತ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ರಾಜಾನುಕುಂಟೆ ಪೊಲೀಸರು, ಘಟನೆ ನಡೆದ ಕೆಲವೇ ಗಂಟೆಗಳನ್ನು ಆರೋಪಿಯನ್ನು ಬಂಧಿಸಿದ್ದಾರೆ.
ಇನ್ನು, ಆರೋಪಿ ಕೊಲೆ ಮಾಡಿದ ಬಳಿಕ ಆಂಧ್ರ ಪ್ರದೇಶಕ್ಕೆ ಎಸ್ಕೇಪ್ ಆಗಲು ಮುಂದಾಗಿದ್ದನಂತೆ. ಈ ಘಟನೆಯಿಂದ ಬೆಂಗಳೂರಿನಲ್ಲಿ ಕಾಲೇಜು ಹುಡುಗಿಯರಿಗೆ ರಕ್ಷಣೆ ಇಲ್ಲವೇ? ಅನ್ನೋ ಪ್ರಶ್ನೆ ಎದುರಾಗಿದೆ. ಅದರಲ್ಲೂ ರಾಜಾನುಕುಂಟೆ ಠಾಣಾ ವ್ಯಾಪ್ತಿಯಲ್ಲಿ 2 ವಾರಕ್ಕೆ 2 ಕೊಲೆ ನಡೆದಿರುವುದು ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಇದನ್ನೂ ಓದಿ: Gadag: ಶಿಕ್ಷಕನಿಂದ ವಿದ್ಯಾರ್ಥಿ ಕೊಲೆ ಕೇಸ್ಗೆ ಟ್ವಿಸ್ಟ್; ಹತ್ಯೆ ಹಿಂದೆ ತ್ರಿಕೋನ ಪ್ರೇಮಕಥೆ
ಯುವತಿ ಮನೆ ಬಳಿ ಈ ಹಿಂದೆಯೂ ಗಲಾಟೆ ಮಾಡಿದ್ದನಂತೆ
ಘಟನೆ ಕುರಿತಂತೆ ನ್ಯೂಸ್18 ಕನ್ನಡದೊಂದಿಗೆ ಮಾತನಾಡಿರುವ ಯುವತಿ ಸಹೋದರಿ ರಕ್ಷಿತಾ, ಆರೋಪಿ ನನ್ನ ತಂಗಿಗೆ ಪರಿಚಯವಿದ್ದ. ಆತನಿಗೆ ಈಗಾಗಲೇ ಮದುವೆಯಾಗಿದ್ದರೂ ರಾಶಿಯನ್ನು ಕೊಟ್ಟು ಮದುವೆ ಮಾಡುವಂತೆ ಮನೆ ಬಳಿ ಗಲಾಟೆ ಮಾಡಿದ್ದ. ನಿನ್ನೆ ನನ್ನ ತಂಗಿ ಕಾಲೇಜಿಗೆ ಹೋಗಿ ಬಂದ ಬಳಿಕ ಆರೋಪಿ ಕೃತ್ಯ ಎಸಗಿದ್ದಾನೆ.
ನನ್ನ ತಂಗಿಯ ಸಾವಿಗೆ ನ್ಯಾಯ ಸಿಗಬೇಕು. ನಮಗೆ ತಂದೆ ಇಲ್ಲ, ತಾಯಿಯೇ ನಮ್ಮನ್ನು ನೋಡಿಕೊಳ್ಳುತ್ತಿದ್ದರು. ಅವನು ಮನೆ ಬಳಿ ಬಂದಾಗ ಪೊಲೀಸರಿಗೆ ದೂರು ಕೊಟ್ಟರೆ ಏನಾಗುತ್ತೋ ಎಂಬ ಭಯದಿಂದ ಸುಮ್ಮನಾಗಿದ್ವಿ. ಆದರೆ ಈ ರೀತಿ ಮಾಡುತ್ತಾನೆ ಅಂತ ಅನ್ಕೊಂಡಿರ್ಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ