’ಕೆಲಸ ಮಾಡದ ಪೌರ ಕಾರ್ಮಿಕರ ವಿರುದ್ಧ ಕಠಿಣ ಕ್ರಮ‘ - ದಾವಣಗೆರೆ ಮೇಯರ್​​​​ ಬಿ.ಜಿ ಅಜಯ್​​ ಕುಮಾರ್​​

ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೇಯರ್​​ ಅಜಯ್​​ ಕುಮಾರ್​, 45 ವಾರ್ಡ್‍ಗಳಲ್ಲೂ ಸಹ ಬೆಳಿಗ್ಗೆ 6 ರಿಂದ 11 ರವೆರೆಗೆ ಹಾಗೂ ಮಧ್ಯಾಹ್ನ 2 ರಿಂದ 5 ರವರೆಗೆ ಕೆಲಸ ನಿರ್ವಹಿಸಲು ಆದೇಶ ಹೊರಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

news18-kannada
Updated:September 16, 2020, 8:59 PM IST
’ಕೆಲಸ ಮಾಡದ ಪೌರ ಕಾರ್ಮಿಕರ ವಿರುದ್ಧ ಕಠಿಣ ಕ್ರಮ‘ - ದಾವಣಗೆರೆ ಮೇಯರ್​​​​ ಬಿ.ಜಿ ಅಜಯ್​​ ಕುಮಾರ್​​
ಮೇಯರ್​​ ಅಜಯ್​ ಕುಮಾರ್​​
  • Share this:
ದಾವಣಗೆರೆ(ಸೆ.16): ಅಭಿವೃದ್ಧಿ ದೃಷ್ಟಿಕೋನದಿಂದ ನಗರ ಸ್ವಚ್ಛ ಮಾಡುವ ಪಾಲಿಕೆಯ ಪೌರಕಾರ್ಮಿಕರು ಸರಿಯಾಗಿ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಮಹಾನಗರಪಾಲಿಕೆ ಮಹಾಪೌರರು ಬಿ.ಜಿ ಅಜಯ್ ಕುಮಾರ್ ಹೇಳಿದರು. ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 45 ವಾರ್ಡ್‍ಗಳಲ್ಲೂ ಸಹ ಬೆಳಿಗ್ಗೆ 6 ರಿಂದ 11 ರವೆರೆಗೆ ಹಾಗೂ ಮಧ್ಯಾಹ್ನ 2 ರಿಂದ 5 ರವರೆಗೆ ಕೆಲಸ ನಿರ್ವಹಿಸಲು ಆದೇಶ ಹೊರಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪಾಲಿಕೆಯ ವಿರೋಧ ಪಕ್ಷದ ನಾಯಕ ಎ. ನಾಗರಾಜ ಮಾತನಾಡಿ, ಭೌಗೋಳಿಕವಾಗಿ ಹೆಚ್ಚುವರಿ ಪೌರಕಾರ್ಮಿಕರ ಹುದ್ದೆ ತುಂಬಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಈಗಾಗಲೇ 317 ಖಾಯಂ ಹಾಗೂ 200 ಗುತ್ತಿಗೆ ಪೌರ ಕಾರ್ಮಿಕರಿದ್ದಾರೆ. ಮೊದಲು ಇವರಿಂದ ಸರಿಯಾಗಿ ಕೆಲಸ ಮಾಡಿಸಿ ಬಳಿಕ ತೀರ್ಮಾನ ಕೈಗೊಂಡು ಹೊಸದಾಗಿ ಪ್ರಸ್ತಾವನೆ ಸಲ್ಲಿಸಿ ಎಂದು ತಿಳಿಸಿದರು.

ಪಾಲಿಕೆ ಸದಸ್ಯರಾದ ಉದಯ್ ಮಾತನಾಡಿ, ಪೌರಕಾರ್ಮಿಕರು ಸರಿಯಗಿ ಕೆಲಸ ನಿರ್ವಹಿಸುತ್ತಿಲ್ಲ. ಸ್ವಚ್ಛತೆ ಬಗ್ಗೆ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಪೂರ್ತಿ ಪ್ರಮಾಣದಲ್ಲಿ ಪೌರ ಕಾರ್ಮಿಕರ ಕೆಲಸ ತೆಗೆದುಕೊಳ್ಳಿ. ಜೊತೆಗೆ ಹೊರ ಗುತ್ತಿಗೆಯ ದಫೇದಾರ್ ಅವರನ್ನು ಪೌರಕಾರ್ಮಿಕರನ್ನಾಗಿಸಿ ಕೆಲಸಕ್ಕೆ ನೇಮಿಸಿ ಎಂದರು.

ಇದಕ್ಕೆ ಮೇಯರ್ ಪ್ರತಿಕ್ರಿಯಿಸಿ, ಪೌರಕಾರ್ಮಿಕರು ಕೆಲಸಕ್ಕೆ ಬಾರದೆ ಸಂಬಳ ತೆಗೆದುಕೊಳ್ಳುತ್ತಿರುವ ಹಾಗೂ ಧಮ್ಕಿ ಹಾಕಿ ಹಾಜರಿ ಹಾಕಿಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ತರಹದ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಕಂಡು ಬಂದರೆ ವಜಾ ಮಾಡುವುದು ಶತಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ನಗರವನ್ನು ಸ್ವಚ್ಛವಾಗಿಡಲು ಪೌರ ಕಾರ್ಮಿಕರಿಗೆ ಸಮಯ ನಿಗದಿ ಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಮೈಸೂರು ಜಿಲ್ಲೆಯಂತೆ ದಾವಣಗೆರೆ ಜಿಲ್ಲೆಯನ್ನು ನಂಬರ್ ಒನ್ ಸ್ವಚ್ಛನಗರವಾಗಿಸಲು ಎಲ್ಲರೂ ಸಹಕರಿಸಬೇಕು. ಈ ಸಂಬಂಧ ಮುಂದಿನ ದಿನಗಳಲ್ಲಿ ನಗರದ ಸ್ವಚ್ಛತೆಯ ಸಲುವಾಗಿ ವಿಶೇಷ ಸಭೆ ನಡೆಸೋಣ ಎಂದು ತಿಳಿಸಿದರು.

ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಮಾತನಾಡಿ, ಪೌರ ಕಾರ್ಮಿಕರಿಗಾಗಿ ಬಯೋಮೆಟ್ರಿಕ್ ಅಳವಡಿಸಲಾಗಿದೆ. ದಫೇದಾರ್ ಆಗಿರುವವರನ್ನು ಪೌರ ಕಾರ್ಮಿಕರನ್ನಾಗಿ ಕೆಲಸ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ ಎಂದರು. ಮಹಾನಗರಪಾಲಿಕೆ ಸದಸ್ಯ ಲತೀಫ್ ಮಾತನಾಡಿ, ಪೌರಕಾರ್ಮಿಕರು ಸರಿಯಾಗಿ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಪಾಲಿಕೆ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು. ಇಲ್ಲದಿದ್ದಲ್ಲಿ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದರು.

ಈ ವೇಳೆ ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿ, ಈ ವಿಷಯವನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡು ಚರ್ಚೆ ನಡೆಸೋಣ ಎಂದರು. ನಂತರ ಮಾತಾಡಿದ ಮೇಯರ್, ಸರ್ಕಾರದ ನಿಯಮದಂತೆ ಅವಧಿ ಮುಗಿದಿರುವ ಮಳಿಗೆಗಳನ್ನು ಹಾಗು ಸುಸ್ಥಿತಿಯಲ್ಲಿರುವ ಮತ್ತು ದುರಸ್ತಿಯಲ್ಲಿರುವ ಮಳಿಗೆಗಳನ್ನು ಅಭಿವೃದ್ಧಿಗೊಳಿಸಿ ಮರು ಹರಾಜು ಮಾಡಲು ಸೂಚಿಸಿದರು. ಈ ವೇಳೆ ಸದಸ್ಯ ನಾಗರಾಜ್ ಮಾತನಾಡಿ, ಸುಮಾರು 20 ವರ್ಷದಿಂದ ಮಳಿಗೆಗಳ ಮೂಲಕ ಜೀವನ ಸಾಗಿಸಿಕೊಂಡು ಬಂದಿದ್ದಾರೆ.  ಮರು ಹರಾಜು ಮಾಡುವ ಮೂಲಕ ಗೊಂದಲ ಸೃಷ್ಟಿಸೋದು ಬೇಡ. ಅವರಿಗೆ ಪುನಃ ಅವಕಾಶ ನೀಡೋಣ. ಆದರೆ ಬಾಡಿಗೆ ಕಟ್ಟದವರ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಲಿ ಎಂದರು.

ಸದಸ್ಯ ಪ್ರಸನ್ನ ಕುಮಾರ್ ಮಾತನಾಡಿ, 2019-20 ನೇ ಸಾಲಿನಲ್ಲಿ ಕೇವಲ ಶೇ. 20 ರಷ್ಟು ಬಾಡಿಗೆ ವಸೂಲಿಯಾಗಿದೆ. 2.14 ಕೋಟಿ ಬಾಡಿಗೆ ಬರುವುದು ಬಾಕಿ ಇದೆ. ಮಳಿಗೆ ಬಾಡಿಗೆದಾರರರು ಸರಿಯಾಗಿ ಬಾಡಿಗೆ ಕಟ್ಟದೆ ಪಾಲಿಕೆಗೆ ನಷ್ಟವಾಗಿದೆ. 505 ಮಳಿಗೆಗಳಿದ್ದು, ಅದರಲ್ಲಿ ಇದೀಗ 340 ಮಳಿಗೆಗಳ ಕರಾರು ಮುಗಿದಿದೆ. ಈ ಹಿನ್ನೆಲೆಯಲ್ಲಿ ಮರು ಹರಾಜು ಮಾಡುವ ಮೂಲಕ ಹೊಸಬರಿಗೆ ಅವಕಾಶ ನೀಡೋಣ ಎಂದರು.

ಸದಸ್ಯ ಲತೀಫ್ ಪ್ರತಿಕ್ರಿಯಿಸಿ, ಮಳಿಗೆಗಳಲ್ಲಿ ಮೂಲ ಸೌಕರ್ಯವಿಲ್ಲ. ಶೆಟರ್ಸ್ ಕಿತ್ತು ಹೋಗಿವೆ. ಜೊತೆಗೆ ಕೊರೊನಾ ಹಿನ್ನೆಲೆಯಲ್ಲಿ ವ್ಯಾಪಾರ ಇಲ್ಲ ಹಾಗಾಗಿ ಈಗಿರುವವರಿಗೆ ಬಿಟ್ಟುಕೊಟ್ಟರೆ ಒಳ್ಳೆಯದು. ಸುಮ್ಮನೆ ಹರಾಜು ಮಾಡುವ ಮೂಲಕ ಗೊಂದಲಕ್ಕೆ ಎಡೆಮಾಡಿಕೊಡಬಾರದು ಎಂದ ಅವರು, ಕಂದಾಯ ವಂಚನೆಯಾಗುತ್ತಿದೆ. ಶ್ರೀಮಂತರು ಹಾಗೂ ಆರ್ಥಿಕವಾಗಿ ಸಬಲರಾಗಿದ್ದವರು ಕಂದಾಯ ಪಾವತಿಸುತ್ತಿಲ್ಲ ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ.ವೀರೇಶ್ ಮಾತನಾಡಿ, ಪ್ರಾಮಾಣಿಕವಾಗಿರುವವರಿಗೆ ಹಾಗೂ ಯಾರೂ ಸರಿಯಾಗಿ ಬಾಡಿಗೆ ಕಟ್ಟಿದ್ದಾರೋ ಅವರಿಗೆ ಮರು ಅವಕಾಶ ಮಾಡಿಕೊಡೋಣ ಎಂದರು.

ಸದಸ್ಯ ದೇವರಮನೆ ಶಿವಕುಮಾರ್ ಮಾತನಾಡಿ, ಪಾಲಿಕೆಗೆ ಆದಾಯ ಬರಬೇಕು. ಈ ಹಿನ್ನೆಲೆಯಲ್ಲಿ ಮಳಿಗೆ ಮರು ಹರಾಜು ಮಾಡುವುದು ಒಳಿತು. ಜೊತೆಗೆ ಕಂದಾಯ ವಸೂಲಿಯಿಂದ ನಗಾರಭಿವೃದ್ಧಿ ಮಾಡಬಹುದ್ದಾಗಿದ್ದು, ಅಧಿಕಾರಿಗಳು ಕೂಲಂಕಷವಾಗಿ ಕರ್ತವ್ಯ ನಿಭಾಯಿಸುವ ಮೂಲಕ ಕಂದಾಯ ವಸೂಲಿ ಮಾಡಲು ಮುಂದಾಗಬೇಕು ಎಂದರು. ಈ ವೇಳೆ ಮಹಾನಗರಪಾಲಿಕೆ ಆಯುಕ್ತರು ಮಾತನಾಡಿ, ಕಂದಾಯ ವಂಚನೆ ಆಗುತ್ತಿರುವ ಬಗ್ಗೆ ಈ ವರ್ಷ ಕಟ್ಟುನಿಟ್ಟಿನ ನಿರ್ಧಾರ ತೆಗೆದುಕೊಳ್ಳುವ ಮೂಲಕ ಕ್ರಮ ವಹಿಸಲಾಗಿದೆ. ಕಳೆದ ವರ್ಷ 13 ಕೋಟಿ ಕಂದಾಯ ವಸೂಲಿ ಮಾಡಲಾಗಿತ್ತು. ಆದರೆ ಈ ಬಾರಿ ಕೊರೊನಾ ಸಂದರ್ಭದಲ್ಲಿಯೂ ಸಹ ಆಗಸ್ಟ್ ಮಾಹೆಯವರೆಗೆ 21.58 ಕೋಟಿ ಹಣ ಕಂದಾಯ ವಸೂಲಿ ಮಾಡಲಾಗಿದ್ದು, ಅಧಿಕಾರಿಗಳು ಉತ್ತಮವಾಗಿ ತಮ್ಮ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸಭೆಗೆ ತಿಳಿಸಿದರು.

ದೇವರಮನೆ ಶಿವಕುಮಾರ್ ಮಾತನಾಡಿ, 22 ನೇ ವಾರ್ಡ್‍ನ ಯಲ್ಲಮ್ಮ ನಗರ ಬಡವರ ವಾರ್ಡ್ ಆಗಿದೆ. ಅಲ್ಲಿ ಅಡ್ಡಾಡಲು ಆಗುವುದಿಲ್ಲ. ನಾಟಿ ಮಾಡಿದರೆ ಭತ್ತ ಬೆಳೆಯಬಹುದು ಅಷ್ಟೊಂದು ಕೆಸರುಮಯವಾಗಿದೆ. ಇವತ್ತಿಗೂ ಅಧಿಕಾರಿಗಳು ಪರಿಶೀಲನೆ ನಡೆಸಿಲ್ಲ.  ಜೊತೆಗೆ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಕುಡಿಯುವ ನೀರು ಬಿಡುತ್ತಾರೆ. ಆ ವೇಳೆ ಎದ್ದು ನೀರು ಹಿಡಿಯಲು ಜನಸಾಮಾನ್ಯರಿಗೆ ಕಷ್ಟ ಸಾಧ್ಯವೆಂದರು.

ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ಈ ಬಗ್ಗೆ ಎಇಇ ವಿನಾಯಕ್ ಅವರಿಗೆ ತಿಳಿಸಿದ್ದೆ. ತೊಂದರೆ ಆಗುತ್ತಿರುವ ಬಗ್ಗ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದೆ ಎಂದ ಅವರು, ಈ ಬಗ್ಗೆ ಕ್ರಮ ವಹಿಸದ ಅಧಿಕಾರಿ ವಿರುದ್ಧ ಹರಿಹಾಯ್ದರು. ಸ್ಮಶಾನವು ದುಶ್ಚಟಗಳ ತಾಣ: ಪಾಲಿಕೆ ಸದಸ್ಯೆ ಆಶಾ ಮಾತನಾಡಿ, ಸ್ಮಶಾನಕ್ಕೆ ಹೋದಾಗ ಗುಂಡಿ ತೆಗೆಯಲು 4 ರಿಂದ 5 ಸಾವಿರ ಹಣ ಕೇಳುತ್ತಿದ್ದಾರೆ. ಈ ಬಗ್ಗೆ ಕ್ರಮ ವಹಿಸಬೇಕು ಎಂದರು. ಈ ವೇಳೆ ಸದಸ್ಯ ನಾಗರಾಜ ಮಾತನಾಡಿ, ಕಾಪೋರೇಶನ್ ವತಿಯಿಂದ ಒಂದು ದರ ನಿಗದಿಪಡಿಸಿ. ಅದಕ್ಕಾಗಿ ಒಂದು ಜೆಸಿಬಿ ಮೀಸಲಿಡಬೇಕು ಎಂದರು. ಈ ಸಂದರ್ಭದಲ್ಲಿ ಮೇಯರ್ ಪ್ರತಿಕ್ರಿಯಿಸಿ, ಮೊದಲಿನಿಂದಲೂ ಈ ವಿಷಯ ಗಮನಕ್ಕೆ ಬಂದಿದೆ. ರುದ್ರಭೂಮಿಗೆ ಈಗಾಗಲೇ 2 ಜೆಸಿಬಿ ಮೀಸಲಿಡಲಾಗಿದೆ. ರೂ.500 ನಿಗದಿಪಡಿಸಿದ್ದು, ಜೆಸಿಬಿ ಗುಂಡಿ ತೆಗೆದು, ಮುಚ್ಚುವ ಕೆಲಸ ಮಾಡಲಾಗುತದೆ ಎಂದ ಅವರು, ಸ್ಮಶಾನವು ದುಶ್ಚಟಗಳ ತಾಣವಾಗುತ್ತಿರುವ ಬಗ್ಗೆ ಕೆಳಿ ಬಂದಿದೆ. ಈ ಬಗ್ಗೆ ಕ್ರಮ ವಹಿಸುವ ಮೂಲಕ ಮೂಲ ಸೌಕರ್ಯ ಒದಗಿಸಲಾಗುವುದು ಎಂದು ತಿಳಿಸಿದರು.

ಸದಸ್ಯ ಶಿವು ಮಾತನಾಡಿ, ಪಾಲಿಕೆ ಲಿಪಿಕ ಸಿಬ್ಬಂದಿಗಳು 20 ವರ್ಷದಿಂದ ಇಲ್ಲಯೇ ಕೆಲಸ ಮಾಡುತ್ತಿರುವವರು ಪುಸ್ತಕದಲ್ಲಿ ಎಂಟ್ರಿ ಇಲ್ಲದಿರುವ ಮಾಹಿತಿಗೆ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಇದಕ್ಕೆ ಉತ್ತರಿಸಿದ ಮೇಯರ್, ಇ-ಆಸ್ತಿ ಮಾಡಲಾಗುತ್ತಿದೆ. ಕಂಪ್ಯೂಟರ್‍ಗಳಲ್ಲಿ ಡಾಟಾ ಎಂಟ್ರಿ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹಣ ಕೇಳುವ ಪ್ರಶ್ನೆಯೇ ಇಲ್ಲ. ಸರ್ಕಾರದ ಮೊತ್ತ ಪಾವತಿಸಿ ಖಾತೆ ತೆಗೆದುಕೊಳ್ಳಬಹದು ಎಂದ ಅವರು, 20 ವರ್ಷದಿಂದ ಇದ್ದವರನ್ನು ಬೇರೆ ಜಾಗಕ್ಕೆ ನೇಮಕ ಮಾಡಲಾಗುವುದು ಎಂದರು.

ಸದಸ್ಯ ಚಮನ್‍ಸಾಬ್ ಮಾತನಾಡಿ, ರೆವಿನ್ಯೂ ಶಾಖೆಯಿಂದ ಪಾಲಿಕೆಗೆ ಕೆಟ್ಟ ಹೆಸರು ಬರುತ್ತಿದೆ ಎಂದ ಅವರು, ಪಾಲಿಕೆಯಲ್ಲಿ ಆಡಳಿತ ದೃಷ್ಟಿಯಿಂದ ಅಂತರಿಕ ಬದಲಾವಣೆ ಮಾಡಿದರು ಸಹ ಕೆಲವರು ಬದಲಾವಣೆಯಾಗಿಲ್ಲ. ಇದು ಮೇಯರ್ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಲಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್,  3 ಜನರನ್ನು ಆಂತರಿಕ ಬದಲಾವಣೆ ಮಾಡಿದರು ಹೋಗಿಲ್ಲ ಎಂದು ಡಿಸಿ ಅವರಿಗೆ ಪತ್ರ ಬರೆಯಲಾಗಿದೆ ಎಂದರು. ಸದಸ್ಯ ನಾಗರಾಜ್ ಮಾತನಾಡಿ, 5 ವರ್ಷದಿಂದ ಪಾಲಿಕೆಯಲ್ಲಿ ಉಚಿತವಾಗಿ ವಾಲ್‍ಮ್ಯನ್‍ಗಳ ಸೇವೆ ಸಲ್ಲಿಸಿದ್ದಾರೆ. ಅವರ ಜೀವನಕ್ಕಾಗಿ ಏನಾದರೂ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಪಾಲಿಕೆಯಲ್ಲಿ ಅಟೆಂಡರ್‍ಗಳು ವಾಚ್‍ಮ್ಯಾನ್‍ಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದರ ಬದಲು ಒಬ್ಬ ವಾಚ್‍ಮ್ಯಾನ್ ನೇಮಕ ಮಾಡಿಕೊಳ್ಳಬಹುದೆಂದು ಪ್ರಶ್ನಿಸಿದ ಅವರು, ಜೆಟ್ಟಿಂಗ್ ಮೆಷಿನ್ ಕೆಟ್ಟು ಹೋಗಿವೆ ಇವುಗಳನ್ನು ದುರಸ್ತಿ ಮಾಡಿಸಬೇಕು ಎಂದರು.

ಇದನ್ನೂ ಓದಿ: ‘ಮೇಕೆದಾಟು ಯೋಜನೆಗೆ ಆಗ್ರಹಿಸಿ ರಾಮನಗರದಲ್ಲಿ ಸೆ.26ಕ್ಕೆ ಬೃಹತ್​​ ಹೋರಾಟ‘ - ವಾಟಾಳ್​​ ನಾಗರಾಜ್​​

ಮೇಯರ್ ಉತ್ತರಿಸಿ 27 ವಾಲ್‍ಮ್ಯಾನ್‍ಗಳಲ್ಲಿ 8 ಜನರು ಕೆಲಸ ಮಾಡುತ್ತಿಲ್ಲ. ಇನ್ನುಳಿದವರನ್ನು ಇಷ್ಟು ವರ್ಷ ಪಾಲಿಕೆಗೆ ಸೇವೆ ಸಲ್ಲಸಿದಕ್ಕಾಗಿ ಬೇರೆ ಇಲಾಖೆಗಳಲ್ಲಿ ಕೆಲಸ ಕೊಡಿಸುವ ವ್ಯವಸ್ಥೆ ಮಾಡಲಾಗುವುದು. ಜೊತೆಗೆ ಜೆಟ್ಟಿಂಗ್ ಮೆಷಿನ್ ಸರಿಪಡಿಸಲು ಕ್ರಮ ವಹಿಸಲಾಗುವುದು ಎಂದ ಅವರು, ಪದೇ ಪದೇ ಕಾರ್ಪೊರೇಟರ್‍ಗಳು ದೂರು ಮಾಡಿದರೆ ಕೆಲಸ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸುವ ಮೂಲಕ ತಮ್ಮ ಜವಾಬ್ದಾರಿ ಸರಿಯಾಗಿ ನಿರ್ವಹಿಸಬೇಕಿದೆ ಎಂದರು.   ಸಿದ್ದವೀರಪ್ಪ ಬಡಾವಣೆಯ ರಸ್ತೆ ಜಾಗ ಒತ್ತುವರಿಯ ಕುರಿತು ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಆಯುಕ್ತರು, ಈ ಬಗ್ಗೆ ಕೋರ್ಟ್‍ನಲ್ಲಿ ಕೇಸ್ ಇದ್ದು, ದೂಡಾದಿಂದ ಸಹ ವರದಿ ತರಿಸಿಕೊಳ್ಳಲಾಗಿದೆ. ಸದ್ಯದಲ್ಲಿಯೇ ಮಾಹಿತಿ ಒದಗಿಸಲಾಗುವುದು ಎಂದು ಉತ್ತರಿಸಿದರು.   ಸಭೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದ ರವೀಂದ್ರನಾಥ್, ಉಪ ಮೇಯರ್ ಸೌಮ್ಯ ನರೇಂದ್ರ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಮ್ಮ ಗೋಪಿನಾಯ್ಕ್, ಲೆಕ್ಕಪರಿಶೋಧನಾ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಮ್ಮ ಗಿರಿರಾಜ್, ಮಹಾನಗರಪಾಲಿಕೆಯ ಸದಸ್ಯರು ಹಾಗೂ ಅಧಿಕಾರಿಗಳು ಹಾಜರಿದ್ದರು.
Published by: Ganesh Nachikethu
First published: September 16, 2020, 8:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading