ಬೆಂಗಳೂರಿನಲ್ಲಿ ಬೀದಿ ನಾಯಿ (Street Dogs) ಹಾವಳಿ ಮಾತ್ರ ನಿಲ್ಲುತ್ತಿಲ್ಲ. ನಿರ್ಜನ ಪ್ರದೇಶದಲ್ಲಿ ಒಬ್ಬೊಬ್ಬರೇ ತಿರುಗಾಡುವಾಗ ದಿಢೀರ್ ಎದುರಿಗೆ ಬರುವ ಬೀದಿನಾಯಿಗಳು ದಾಳಿ ಮಾಡುತ್ತಿವೆ. ಮಕ್ಕಳ (Children) ಮೇಲೆಯೂ ಬೀದಿನಾಯಿಗಳು ದಾಳಿ ನಡೆದಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಇದೀಗ ಬಿಬಿಎಂಪಿ (BBMP) ವ್ಯಾಪ್ತಿಯ ಲಕ್ಷ್ಮಿದೇವಿ ನಗರದಲ್ಲಿ ಎಂಟು ವರ್ಷದ ಬಾಲಕಿ ಮೇಲೆ ದಾಳಿ ನಡೆದಿದೆ. ಭಾನುವಾರ ರಾತ್ರಿ ತಂದೆ ಜೊತೆ ತೆರಳುತ್ತಿದ್ದ ಮಗು ಮೇಲೆ ದಾಳಿ ನಡೆದಿದೆ. ಮಗಳ ರಕ್ಷಣೆಗೆ ಮುಂದಾದ ತಂದೆಗೂ ನಾಯಿ ಕಚ್ಚಿದೆ. ದಾಳಿಯಲ್ಲಿ ಮಗುವಿನ ಕತ್ತು ಮತ್ತು ಮುಖದ ಭಾಗದಲ್ಲಿ ಗಾಯಗಳಾಗಿದ್ದು, ಹೊಲಿಗೆಗಳು ಬಿದ್ದಿವೆ.
ನೂರಿನ್ ಫಲಕ್ ನಾಯಿ ದಾಳಿಗೆ ಒಳಗಾದ ಬಾಲಕಿ. ಮಗುವಿನ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದೆ. ನೂರಿನ್ ಫಲಕ್ ತಂದೆ ಫಕ್ರುದ್ದೀನ್ ಸಹ ಆಂಟಿ ರೇಬಿಸ್ ಇಂಜೆಕ್ಷನ್ ಪಡೆದುಕೊಂಡಿದ್ದಾರೆ.
ಮಗಳ ರಕ್ಷಣೆಗೆ ಮುಂದಾದ ತಂದೆಗೂ ಕಚ್ಚಿದ ನಾಯಿ
ನಾಯಿ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಶಿಂಧೆ, ಭಾನುವಾರ ಲಕ್ಷ್ಮಿದೇವಿ ನಗರದಲ್ಲಿ ಫಕ್ರುದ್ದೀನ್ ಎಂಬವರು ಮಗಳ ಜೊತೆ ಹೋಗುತ್ತಿದ್ದರು. ಈ ವೇಳೆ ಮಗುವಿನ ಮೇಲೆ ನಾಯಿ ದಾಳಿಗೆ ಮುಂದಾದಾಗ ಫಕ್ರುದ್ದೀನ್ ಮಗಳ ರಕ್ಷಣೆಗೆ ಮುಂದಾಗಿದ್ದರು. ಈ ಸಮಯದಲ್ಲಿ ಅವರಿಗೂ ಸಹ ನಾಯಿ ಕಚ್ಚಿದೆ ಎಂದು ಹೇಳಿದ್ದಾರೆ.
10 ಸಾವಿರ ಪರಿಹಾರ, ಚಿಕಿತ್ಸಾ ವೆಚ್ಚ ಪಾವತಿ
ಮಗುವಿಗೆ ಕತ್ತು ಮತ್ತು ಮುಖದ ಭಾಗಕ್ಕೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆದುಕೊಂಡಿದ್ದಾರೆ. ಬಿಬಿಎಂಪಿ ಇಬ್ಬರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಪಾವತಿಸಲಿದೆ. ಪರಿಹಾರವಾಗಿ 10 ಸಾವಿರ ರೂಪಾಯಿ ನೀಡಲಾಗುವುದು ಎಂದು ಮಂಜುನಾಥ್ ಶಿಂಧೆ ಹೇಳಿದ್ದಾರೆ.
ಸ್ಥಳೀಯರು ಬೀದಿ ನಾಯಿಗಳಿಗೆ ಆಹಾರ ನೀಡುತ್ತಾರೆ. ದಾಳಿ ಬಳಿಕ ನಾಯಿಯನ್ನು ಅದರ ಮಾಲೀಕರು ಬೇರೆ ಸ್ಥಳದಲ್ಲಿ ಬಿಟ್ಟು ಬಂದಿರುವ ಸಾಧ್ಯತೆಗಳಿವೆ. ನಾಯಿಗೆ ಲಸಿಕೆ (Sterilised and Vaccinated) ಹಾಕಲಾಗಿದೆಯಾ ಇಲ್ಲ ಎಂಬುವುದು ಗೊತ್ತಿಲ್ಲ. ನಾವು ನಾಯಿಯನ್ನು ಹುಡುಕಲು ಸಾಧ್ಯವಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರಾಣಿ ಜನನ ನಿಯಂತ್ರಣ ಕಾರ್ಯಕ್ರಮದ ವಿಫಲತೆ
ಈ ಕುರಿತು ಪ್ರತಿಕ್ರಿಯಿಸಿರುವ ಪ್ರಾಣಿ ಕಲ್ಯಾಣ ಕಾರ್ಯಕರ್ತ ಸುಜಯ್ ಜಗದೀಶ್, ಬಿಬಿಎಂಪಿಯ ಪ್ರಾಣಿ ಜನನ ನಿಯಂತ್ರಣ ಕಾರ್ಯಕ್ರಮದ ವಿಫಲತೆಯೇ ಈ ಘಟನೆಗೆ ಕಾರಣ ಎಂದು ಆರೋಪಿಸಿದ್ದಾರೆ. ಆರ್ಆರ್ನಗರದ ಅನಿಮಲ್ ಬರ್ತ್ ಕಂಟ್ರೋಲ್ ಸೆಂಟರ್ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಮಾಹಿತಿಯನ್ನು ನೀಡಿದರು.
ಪ್ರಾಣಿ ಸಂತಾನ ನಿಯಂತ್ರಣ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರಬೇಕು. ಆದರೆ ಹಣಕಾಸಿನ ಕೊರತೆಯಿಂದ ಎನ್ಜಿಓಗಳು ಸಂತಾನ ನಿಯಂತ್ರಣ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿಲ್ಲ ಎಂದು ವರದಿಯಾಗಿದೆ.
8 ವರ್ಷದಿಂದ ಪರಿಹಾರ ಕೊಡ್ತಿದೆ BBMP
ಹೈಕೋರ್ಟ್ ನಿರ್ದೇಶನದ ಮೇರೆಗೆ ಕಳೆದ ಎಂಟು ವರ್ಷದಿಂದ ಬೀದಿ ನಾಯಿ ಕಡಿತಕ್ಕೆ ಬಿಬಿಎಂಪಿಯಿಂದ ಪರಿಹಾರ ನೀಡಲಾಗುತ್ತಿದೆ. ಬೀದಿ ನಾಯಿ ಕಡಿತಕ್ಕೆ ಪರಿಹಾರ ವಿತರಣೆಗೆ ಪಾಲಿಕೆ ಕಾನೂನು ಕೋಶದ ಮುಖ್ಯಸ್ಥರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ ಮಾನದಂಡ ರೂಪಿಸಿ ಪರಿಹಾರ ಮೊತ್ತ ನಿಗದಿ ಪಡಿಸಲಾಗಿದೆ.
ನಾಯಿ ಕಡಿತದಿಂದ ಪರಚಿದ ಗಾಯವಾದರೆ ಪ್ರತಿ ಗಾಯಕ್ಕೆ 2 ಸಾವಿರ, ಆಳವಾದ ಗಾಯವಾದ ಗಾಯಕ್ಕೆ ಸಾವಿರ, ಗಾಯಗಳ ಸಂಖ್ಯೆ ಹೆಚ್ಚಾಗಿದ್ದರೆ 10 ಸಾವಿರ ಪರಿಹಾರ ಹಾಗೂ ಬಿಬಿಎಂಪಿಯೇ ಚಿಕಿತ್ಸಾ ವೆಚ್ಚ ಭರಿಸುವುದು. ಒಂದು ವೇಳೆ ನಾಯಿ ಕಚ್ಚಿ ಮಕ್ಕಳು ಅಸುನೀಗಿದರೆ . 50 ಸಾವಿರ ಹಾಗೂ ವ್ಯಕ್ತಿ ಸಾವನಪ್ಪಿದರೆ. 1 ಲಕ್ಷ ಪರಿಹಾರ ನೀಡುವ ಬಗ್ಗೆ ಮಾರ್ಗಸೂಚಿ ರಚನೆ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರಿಗರೇ ಎಚ್ಚರ.. ಬೀದಿ ನಾಯಿಗಳ ಮೇಲೆ ಕಲ್ಲು ಎಸಿದ್ದೀರಿ ಜೋಕೆ..!
ಪರಿಹಾರದ ಮಾಹಿತಿ ಕೊರತೆ
ಸಾರ್ವಜನಿಕರಿಗೆ ನಾಯಿ ಕಡಿತಕ್ಕೆ ಬಿಬಿಎಂಪಿ ಪರಿಹಾರ ನೀಡಲಿದೆ ಎಂಬ ಮಾಹಿತಿಯೇ ಇಲ್ಲ. ಹಾಗಾಗಿ, ಹೆಚ್ಚಿನ ನಾಯಿ ಕಡಿತ ಪ್ರಕರಣ ದಾಖಲಾದರೂ ಪರಿಹಾರ ಪಡೆದವರ ಸಂಖ್ಯೆ ತೀರಾ ಕಡಿಮೆ ಇದೆ. ಪಾಲಿಕೆ ಅಧಿಕಾರಿಗಳು ನಾಯಿ ಕಡಿತಕ್ಕೆ ಪರಿಹಾರ ನೀಡಲಿದೆ ಎಂಬುದರ ಬಗ್ಗೆ ಜನ ಸಾಮಾನ್ಯರಿಗೆ ಮಾಹಿತಿ ನೀಡುವ ಕೆಲಸ ಮಾಡಬೇಕು. ಆದರೆ, ಆ ಕಾರ್ಯವನ್ನು ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ಪರಿಹಾರ ಹೀಗೆ ಪಡೆಯಿರಿ
ಬೀದಿ ನಾಯಿ ದಾಳಿಗೆ ಒಳಗಾದ ಸಂತ್ರಸ್ತರಿಗೆ ಮಾತ್ರ ಬಿಬಿಎಂಪಿ ಪರಿಹಾರ ನೀಡಲಿದೆ. ನಿರ್ದಿಷ್ಟಅರ್ಜಿ ನಮೂನೆಯನ್ನು ಭರ್ತಿ ಮಾಡಿ ಬಿಬಿಎಂಪಿ ಪಶುಪಾಲನಾ ವಿಭಾಗಕ್ಕೆ ಸಲ್ಲಿಸಬೇಕು.
ಅರ್ಜಿಯಲ್ಲಿ ಹೆಸರು, ವಯಸ್ಸು, ಫೋಟೋ, ವಿಳಾಸ, ನಾಯಿ ದಾಳಿ ನಡೆದ ಸ್ಥಳ, ವೈದ್ಯಕೀಯ ಚಿಕಿತ್ಸೆಯ ಸಂಪೂರ್ಣ ದಾಖಲೆಗಳ ವಿವರವನ್ನು ನಿಗದಿತ ಅವಧಿಯಲ್ಲಿ ನೀಡಬೇಕು.
ಬಳಿಕ ಪಶುಪಾಲನಾ ವಿಭಾಗದ ಅಧಿಕಾರಿಗಳು ಪರಿಶೀಲಿಸಿ ಪರಿಹಾರ ನೀಡಲಿದ್ದಾರೆ. ಅರ್ಜಿ ನಮೂನೆ ಬಿಬಿಎಂಪಿ ವೆಬ್ಸೈಟ್ನಲ್ಲಿ ಲಭ್ಯವಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ