ನಂಜನಗೂಡಿನಲ್ಲಿ ಹೆಚ್ಚಿದ ರಕ್ಕಸ ನಾಯಿಗಳ ಹಾವಳಿ: ಒಂದೇ ದಿನ 5 ಮಕ್ಕಳಿಗೆ ಕಡಿತ, ಪಟ್ಟಣದ ಆಸ್ಪತ್ರೆಯಲ್ಲಿಲ್ಲ ಚುಚ್ಚುಮದ್ದು

ನಂಜನಗೂಡಿನಲ್ಲಿ ಹೆಚ್ಚಾಗಿರುವ ಬೀದಿ ನಾಯಿ ಹಾವಳಿ ನಿಯಂತ್ರಿಸಲು ನಗರಸಭೆ ಅಥವಾ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ಇನ್ನಷ್ಟು ಮಕ್ಕಳು ಬೀದಿ ನಾಯಿಗಳಿಂದ ತೊಂದರೆಗೆ ಸಿಲುಕಲಿವೆ. ವಿಷಕಂಠನ ಬಳಿ ಕಷ್ಟ ಹೇಳಿಕೊಳ್ಳಲು ಬರುವ ಭಕ್ತರು ಸಹ ಬೀದಿ ನಾಯಿಗಳ ಆತಂಕದಲ್ಲೇ ದೇವಾಲಯಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೀದಿ ನಾಯಿ ದಾಳಿಗೆ ಗಾಯಗೊಂಡಿರುವ ಬಾಲಕಿ.

ಬೀದಿ ನಾಯಿ ದಾಳಿಗೆ ಗಾಯಗೊಂಡಿರುವ ಬಾಲಕಿ.

  • Share this:
ಮೈಸೂರಿನ ನಂಜನಗೂಡಿನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿಗಳ ಅಟ್ಟಹಾಸಕ್ಕೆ 5 ಮಕ್ಕಳು  ಗಾಯಗೊಂಡಿದ್ದಾರೆ. ಬೀದಿ ನಾಯಿ ಹಾವಳಿ ತಡೆಗಟ್ಟಲು ವಿಫಲವಾಗಿರುವ ನಗರಸಭೆ ವಿರುದ್ದ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಎಲ್ಲದಕ್ಕಿಂತ ಪ್ರಮುಖವಾಗಿ ನಾಯಿ ಕಚ್ಚಿದ್ದಕ್ಕೆ ನಂಜನಗೂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಚುಚ್ಚುಮದ್ದೆ ಇಲ್ಲವಾಗಿದೆ.

ಹೌದು, ಮೈಸೂರಿನ ದಕ್ಷಿಣ ಕಾಶಿ ಎಂದೇ ಪ್ರಸಿದ್ದಿಯಾಗಿರುವ ನಂಜನಗೂಡು ಶ್ರೀಕ್ಷೇತ್ರ ಧಾರ್ಮಿಕವಾಗಿ ಪುಣ್ಯ ಕ್ಷೇತ್ರ. ಅಂತಹ ಪುಣ್ಯ ಕ್ಷೇತ್ರದಲ್ಲಿ ಮನೆ ಕಟ್ಟಿಕೊಂಡು ಜೀವನ ಪೂರ್ತಿ ಪುಣ್ಯ ಪಡೆದುಕೊಳ್ಳುವ ಆಲೋಚನೆ ಕೆಲವರಲ್ಲಿ ಇರಬಹುದು. ಆದರೆ, ಇಲ್ಲಿನ ಜನರಿಗೆ ಪುಣ್ಯಕ್ಕಿಂತ ಆತಂಕವೇ ಹೆಚ್ಚಾಗಿದೆ.

ನಂಜನಗೂಡು ದೇವಾಲಯಕ್ಕೆ ಸಮೀಪದಲ್ಲೇ ನಂಜನಗೂಡು ಪಟ್ಟಣ ಬೆಳೆದಿದೆ. ಹೀಗಾಗಿ ಅಕ್ಕಪಕ್ಕದಲ್ಲಿ ಹೊಸ ಬಡಾವಣೆಗಳು ನಿರ್ಮಾಣವಾಗಿದ್ದು, ದೇವಾಲಯದಿಂದ ಕೊಂಚ ದೂರದಲ್ಲೇ ಇರುವ ವಿದ್ಯಾನಗರ ಅತ್ಯಂತ ಸುಸಜ್ಜಿತ ಬಡಾವಣೆಯಾಗಿದೆ. ಆದರೆ ಬಡಾವಣೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಕಳೆದ ಎರಡು ದಿನಗಳಿಂದ 5 ಮಕ್ಕಳ ಮೇಲೆ ನಾಯಿಗಳು ದಾಳಿ ನಡೆಸಿವೆ. ನಾಯಿ ದಾಳಿಯಿಂದ 5 ಮಕ್ಕಳಲ್ಲಿ ಒಂದು ಮಗುವಿಗೆ ಗಂಭೀರವಾಗಿ ಗಾಯಗೊಂಡಿದೆ.

ನಿನ್ನೆ 5 ಪುಟಾಣಿ ಬಾಲಕಿಯರು ವಿದ್ಯಾನಗರದ ಬೀದಿಯಲ್ಲಿ ಆಟವಾಡುತ್ತಿದ್ದರು. ರಸ್ತೆ ಪಕ್ಕದಲ್ಲಿ ಆಟವಾಡುತ್ತಿದ್ದಾಗ ಏಕಾಏಕಿ ಬಂದ ನಾಯೊಂದು ಮಕ್ಕಳ ಮೇಲೆ ಎರಗಿದೆ. ಪರಿಣಾಮ ನೋಡ ನೋಡುವಷ್ಟರಲ್ಲಿ 5 ಮಕ್ಕಳಿಗೆ ಕಚ್ಚಿದ ನಾಯಿ ಎಲ್ಲರನ್ನು ಗಂಭೀರವಾಗಿ ಗಾಯಗೊಳಿಸಿದೆ. ಘಟನೆ ನಂತರ ನಾಯಿಯನ್ನು ಹಿಡಿದು ಕೊಂದು ಹಾಕಿರುವ ಸ್ಥಳೀಯರು ಆ ನಾಯಿಗೆ ಹುಚ್ಚು ಹಿಡಿದಿತ್ತು ಎಂಬ ಆರೋಪ ಮಾಡಿದ್ದಾರೆ. ಘಟನೆಯಲ್ಲಿ ಪ್ರದೀಪ್ ಎಂಬುವರ ಪುತ್ರಿ 6 ವರ್ಷದ ವಿಧಿಶಾ ಕೆನ್ನೆ ಭಾಗಕ್ಕೆ ಗಂಭೀರ ಗಾಯವಾಗಿದ್ದು ವೈದ್ಯರು ಪ್ಲಾಸ್ಟಿಕ್ ಸರ್ಜರಿ ಮಾಡಬೇಕು ಎಂದು ಹೇಳಿದ್ದಾರೆ. ಅದೇ ರೀತಿ ಮಹದೇವನಾಯಕ್ ಎಂಬುವರ ಪುತ್ರಿ 8 ವರ್ಷದ ನಿವೇಧಿತ, ಯೋಗೇಶ್ ಎಂಬುವವರ ಪುತ್ರಿ 5 ವರ್ಷದ ಶ್ರಾವಣಿ, ಅಶೋಕ್ ಕುಮಾರ್ ಎಂಬುವರ ಪುತ್ರಿ 5 ವರ್ಷದ ಅರೋಹಿ ಹಾಗೂ ಚಂದನ್‌ಕುಮಾರ್ ಎಂಬುವರ ಪುತ್ರಿ 7 ವರ್ಷದ ಯೋಗಿತಾಗೆ ಗಾಯಗಳಾಗಿದ್ದು, ಎಲ್ಲ ಮಕ್ಕಳಿಗೂ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯಕ್ಕೆ ಮಕ್ಕಳು ಪ್ರಾಣಾಯದಿಂದ ಪಾರಾಗಿದ್ದಾರೆ.

ಬೀದಿ ನಾಯಿಗಳು ಇಷ್ಟೆಲ್ಲ ಹಾವಳಿ ಕೊಡುತ್ತಿದ್ದರೂ ಯಾರು ಸಹ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ನಗರಸಭೆ ಬೀದಿ ನಾಯಿ ನಿಯಂತ್ರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ಸ್ಥಳೀಯರು ನಾಯಿ ಹಾವಳಿ ಬಗ್ಗೆ ನೀಡಿರುವ ದೂರಿಗೂ ನಿರ್ಲಕ್ಷ್ಯ ತೋರಿದ್ದಾರೆ. ಮೊನ್ನೆ ಹಾಗೂ ನಿನ್ನೆ ಮಕ್ಕಳ ಮೇಲೆ ನಾಯಿಗಳ ದಾಳಿ ಘಟನೆ ನಂತರ ಚಿಕಿತ್ಸೆಗಾಗಿ ನಂಜನಗೂಡು ಆಸ್ಪತ್ರೆಗೆ ಭೇಟಿ ನೀಡಿದಾಗ ನಾಯಿ ಕಚ್ಚಿದ್ದಕ್ಕೆ ಮಕ್ಕಳಿಗೆ ಚಿಕಿತ್ಸೆ ನೀಡಲು ಚುಚ್ಚುಮದ್ದು ಇಟ್ಟುಕೊಳ್ಳದ ನಂಜನಗೂಡು ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಸಹ ನಿರ್ಲಕ್ಷ್ಯ ತೋರಿದ್ದಾರೆ. ನಾಯಿ ಕಚ್ಚಿರುವುದಕ್ಕೆ ಸದ್ಯಕ್ಕೆ ಚಿಕಿತ್ಸೆ ನೀಡಲು ಆಗೋದಿಲ್ಲ. ನೀವು ಬೇರೆಡೆಗೆ ಹೋಗಿ ಅಂತ ಸಲಹೆ ಕೊಟ್ಟಿದ್ದಾರೆ. ಕೊನೆಗೆ ಚುಚ್ಚು ಮದ್ದಿಗಾಗಿ ಮಕ್ಕಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆ ತಂದ ಪೋಷಕರು 5 ಮಕ್ಕಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ಇದನ್ನು ಓದಿ: ಜಯದೇವ ಆಸ್ಪತ್ರೆ ವೈದ್ಯರಿಂದ 40 ದಿನದ ಮಗುವಿಗೆ ಯಶಸ್ವಿ ಓಪನ್ ಹಾರ್ಟ್ ಸರ್ಜರಿ

ನಂಜನಗೂಡಿನಲ್ಲಿ ಹೆಚ್ಚಾಗಿರುವ ಬೀದಿ ನಾಯಿ ಹಾವಳಿ ನಿಯಂತ್ರಿಸಲು ನಗರಸಭೆ ಅಥವಾ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ಇನ್ನಷ್ಟು ಮಕ್ಕಳು ಬೀದಿ ನಾಯಿಗಳಿಂದ ತೊಂದರೆಗೆ ಸಿಲುಕಲಿವೆ. ವಿಷಕಂಠನ ಬಳಿ ಕಷ್ಟ ಹೇಳಿಕೊಳ್ಳಲು ಬರುವ ಭಕ್ತರು ಸಹ ಬೀದಿ ನಾಯಿಗಳ ಆತಂಕದಲ್ಲೇ ದೇವಾಲಯಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
First published: