ಆನೇಕಲ್(ಏ.17): ಆಹಾರಕ್ಕಾಗಿ ಕಾಡಿನಿಂದ ನಾಡಿಗೆ ಎಂಟ್ರಿ ಕೊಟ್ಟಿದ್ದ ಜಿಂಕೆಯೊಂದರ ಮೇಲೆ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿದ್ದು , ಗಂಭೀರವಾಗಿ ಗಾಯಗೊಂಡಿದ್ದ ಜಿಂಕೆ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ತೆಲಗರಹಳ್ಳಿ ಬಳಿ ಇಂದು ನಡೆದಿದೆ .
ಸುಮಾರು ಒಂದು ವರ್ಷ ಪ್ರಾಯದ ಜಿಂಕೆ ಇದಾಗಿದ್ದು, ಸಾಮಾನ್ಯವಾಗಿ ಬೇಸಿಗೆ ಸಂದರ್ಭದಲ್ಲಿ ಜಿಂಕೆಗಳು ಬನ್ನೇರುಘಟ್ಟ ಕಾಡಿನಿಂದ ಆಹಾರ ಅರಸುತ್ತಾ ಹಳ್ಳಿಗಳತ್ತ ದಾಂಗುಡಿಯಿಡುತ್ತವೆ. ನಿನ್ನೆ ರಾತ್ರಿ ಸಹ ಹಿಂಡಿನೊಂದಿಗೆ ಆಹಾರ ಅರಸುತ್ತಾ ಆಗಮಿಸಿದ್ದ ಜಿಂಕೆ ತನ್ನ ಬಳಗದೊಂದಿಗೆ ವಾಪಸ್ ಹೋಗದೇ ದಾರಿ ತಪ್ಪಿ ಬನ್ನೇರುಘಟ್ಟ ಕಾಡಿಗೆ ಸಮೀಪದಲ್ಲಿರುವ ತೆಲಗರಹಳ್ಳಿ ಗ್ರಾಮದತ್ತ ಬಂದಿದೆ. ಬೆಳಕಾಗುತ್ತಿದ್ದಂತೆ ಗ್ರಾಮದ ಸುತ್ತಮುತ್ತಲಿನ ತೋಟಗಳಿಗೆ ಆಹಾರ ಹುಡುಕುತ್ತಿದ್ದ ಜಿಂಕೆ ಮೇಲೆ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿವೆ.
ಇನ್ನೂ ಜಿಂಕೆಯನ್ನು ನಾಯಿಗಳು ಅಟ್ಟಾಡಿಸುತ್ತಿದ್ದನ್ನು ಕಂಡ ಸ್ಥಳೀಯರು ಬೀದಿ ನಾಯಿಗಳನ್ನು ಓಡಿಸಿ ಗಾಯಗೊಂಡಿದ್ದ ಜಿಂಕೆಯನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ . ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಗಾಯಗೊಂಡಿದ್ದ ಜಿಂಕೆಯನ್ನು ಆನೇಕಲ್ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ .
ಹಿರಿಯ ಹಸುವಿನ ಅಂತ್ಯ ಸಂಸ್ಕಾರ ವೇಳೆ ನಡೆಯಿತು ಅಚ್ಚರಿ; ಗೋವುಗಳ ಅಂತಃಕರಣ ಕಂಡು ಸ್ವಾಮೀಜಿಗಳೇ ಮೂಕರಾದರು!
ಆದ್ರೆ ಬೀದಿ ನಾಯಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಜಿಂಕೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ರೆಸ್ಕ್ಯೂ ಸೆಂಟರ್ ರವಾನಿಸುತ್ತಿದ್ದ ವೇಳೆ ಮಾರ್ಗಮಧ್ಯದಲ್ಲಿ ಜಿಂಕೆ ಸಾವನ್ನಪ್ಪಿದೆ ಎನ್ನಲಾಗಿದೆ .
ಇನ್ನೂ ಬೇಸಿಗೆ ಸಮಯದಲ್ಲಿ ಬನ್ನೇರುಘಟ್ಟ ಅರಣ್ಯದಿಂದ ಸಮೀಪದ ಹಳ್ಳಗಳತ್ತ ವನ್ಯಜೀವಿಗಳು ಆಹಾರ ಮತ್ತು ನೀರಿಗಾಗಿ ಬರುವುದು ಸರ್ವೆ ಸಾಮಾನ್ಯವಾಗಿದೆ. ರಾತ್ರಿ ವೇಳೆ ರೈತರ ಹೊಲ ಗದ್ದೆಗಳಿಗೆ ಬರುವ ವನ್ಯಜೀವಿಗಳು ಬೆಳಗಾಗುವುದರೊಳಗೆ ಮರಳಿ ಹೊರಟು ಹೋಗುತ್ತವೆ . ಆದ್ರೆ ಕೆಲವೊಮ್ಮೆ ದಾರಿ ತಪ್ಪಿ ಹಳ್ಳಿಗಳತ್ತ ಬರುವುದರಿಂದ ವಾಪಸ್ ಬರಲಾಗದೆ ಉಳಿದು ಬಿಡುತ್ತವೆ .
ಇಂತಹ ಸಂದರ್ಭದಲ್ಲಿ ನಾಯಿಗಳ ದಾಳಿ ಮತ್ತು ಮಾನವರು ಸಹ ಭೇಟೆಯಾಡುವ ಸಾಧ್ಯತೆ ಇರುತ್ತದೆ . ಹಾಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಬೇಸಿಗೆ ಸಮಯದಲ್ಲಿ ಕಾಡಿನಲ್ಲಿ ವನ್ಯಜೀವಿಗಳಿಗೆ ಕೆರೆಗಳನ್ನು ನಿರ್ಮಿಸಿ, ನೀರಿನ ಅಭಾವ ಸೃಷ್ಟಿಯಾಗದಂತೆ ಕ್ರಮ ವಹಿಸಬೇಕು. ಮಾತ್ರವಲ್ಲದೆ ಪ್ರಾಣಿಗಳಿಗೆ ಸಮರ್ಪಕವಾಗಿ ಮೇವು ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ವನ್ಯಜೀವಿಗಳು ಆಹಾರ ಅರಸುತ್ತಾ ನಾಡಿನತ್ತ ದಾಂಗುಡಿಯಿಡುವುದು ಮುಂದುವರಿಯುತ್ತದೆ.
ಇತ್ತೀಚೆಗೆ ಆಹಾರ ಅರಸುತ್ತಾ ನಾಡಿನತ್ತ ಬಂದಿದ್ದ ಚಿರತೆ ಮರಿಯೊಂದಕ್ಕೆ ಅಪರಿಚಿತ ವಾಹನ ಡಿಕ್ಕಿಯೊಡೆದು ಸಾವನ್ನಪ್ಪಿತ್ತು . ಕರಡಿಯೊಂದು ನಗರ ಪ್ರದೇಶಗಳತ್ತ ಬಂದು ಸಾರ್ವಜನಿಕರ ಮೇಲೆ ದಾಳಿ ಸಹ ನಡೆಸಿತ್ತು. ಹಾಗಾಗಿ ಕಾಡಿನಲ್ಲಿ ಅಗತ್ಯ ಮೇವು. ನೀರು ಪ್ರಾಣಿಗಳಿಗೆ ದೊರೆಯುವಂತೆ ಅರಣ್ಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಪ್ರಾಣಿ ಪ್ರಿಯರು ಒತ್ತಾಯಿಸಿದ್ದಾರೆ .
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ