ಕೆರೆಗೆ ಜೀವ ತುಂಬಲು ಕೇವಲ 30 ದಿನದಲ್ಲಿ 9 ಲಕ್ಷ ರೂ. ದೇಣಿಗೆ ಸಂಗ್ರಹಿಸಿದ ಪುಟಾಣಿ ಮಕ್ಕಳ ಸಾಹಸಗಾಥೆ

ಹೌದು ಮಕ್ಕಳಿಂದಲೇ ದೇಣಿಗೆ ಸಂಗ್ರಹಿಸಿ ಅಂದುಕೊಂಡಂತೆ ಕೆರೆಯೊಂದನ್ನು ಪುನಶ್ಚೇತನಗೊಳಿಸಿದ್ದು, ತಾವು ಅಭಿವೃದ್ಧಿ ಮಾಡಿದ ಕೆರೆ ಕಥೆ ಹೇಳಲು ವಿಶ್ವಸಂಸ್ಥೆಗೆ ಹೊರಟಿದ್ದಾರೆ. ಅಷ್ಟಕ್ಕು ಅತೀ ಕಿರಿಯ ವಯಸ್ಸಿನಲ್ಲಿ ಭಾರತದ ಪ್ರತಿನಿಧಿಗಳಾಗಿ ವಿಶ್ವದ ಅತ್ಯುನ್ನತ ವೇದಿಕೆಯಲ್ಲಿ ಕೆರೆಯ ಕಥೆಯ ಬಗ್ಗೆ ಮಾತನಾಡಲಿರುವ ಸಂರಕ್ಷಕರು ಯಾರು ಅಂತೀರಾ ಈ ಕಥೆ ಓದಿ.

news18-kannada
Updated:January 21, 2020, 7:26 PM IST
ಕೆರೆಗೆ ಜೀವ ತುಂಬಲು ಕೇವಲ 30 ದಿನದಲ್ಲಿ 9 ಲಕ್ಷ ರೂ. ದೇಣಿಗೆ ಸಂಗ್ರಹಿಸಿದ ಪುಟಾಣಿ ಮಕ್ಕಳ ಸಾಹಸಗಾಥೆ
ಕೆರೆಗೆ ಜೀವ ತುಂಬಿದ ಮಕ್ಕಳು
  • Share this:
ಬೆಂಗಳೂರು(ಜ.21): ಅವರು ತಮ್ಮ ಶಾಲಾ ಸಹಪಾಠಿಗಳೊಂದಿಗೆ ಕೆಲವೊಂದು ಅಭಿವೃದ್ಧಿ ಹೊಂದಿದ್ದ ಕೆರೆಗಳ ವೀಕ್ಷಣೆಗೆ ಹೋಗಿದ್ದರು. ಎಲ್ಲಾ ಮಕ್ಕಳು ಕೆರೆಯ ಸೊಬಗನ್ನು ಕಂಡು ಖುಷಿ ಪಟ್ಟು ಮರಳಿದ್ದರು. ಆದರೆ, ಆ ಮಕ್ಕಳು ಮಾತ್ರ ತಾವು ಕೂಡ ಯಾಕೆ ಕೆರೆಯೊಂದು ಪುನಶ್ಚೇತನಗೊಳಿಸಬಾರದು ಎಂದು ಚಿಂತಿಸಿದ್ದರು. ಮಕ್ಕಳ ಆಸೆಯಂತೆ ಅವರ ಕನಸಿಗೆ ಜೀವ ತುಂಬಿದ್ದು ಮಾತ್ರ ಕೆರೆ ಸಂರಕ್ಷಕ ಆನಂದ್. ಹೌದು ಮಕ್ಕಳಿಂದಲೇ ದೇಣಿಗೆ ಸಂಗ್ರಹಿಸಿ ಅಂದುಕೊಂಡಂತೆ ಕೆರೆಯೊಂದನ್ನು ಪುನಶ್ಚೇತನಗೊಳಿಸಿದ್ದು, ತಾವು ಅಭಿವೃದ್ಧಿ ಮಾಡಿದ ಕೆರೆ ಕಥೆ ಹೇಳಲು ವಿಶ್ವಸಂಸ್ಥೆಗೆ ಹೊರಟಿದ್ದಾರೆ. ಅಷ್ಟಕ್ಕು ಅತೀ ಕಿರಿಯ ವಯಸ್ಸಿನಲ್ಲಿ ಭಾರತದ ಪ್ರತಿನಿಧಿಗಳಾಗಿ ವಿಶ್ವದ ಅತ್ಯುನ್ನತ ವೇದಿಕೆಯಲ್ಲಿ ಕೆರೆಯ ಕಥೆಯ ಬಗ್ಗೆ ಮಾತನಾಡಲಿರುವ ಸಂರಕ್ಷಕರು ಯಾರು ಅಂತೀರಾ ಈ ಕಥೆ ಓದಿ.

ನಗರದ ವಿದ್ಯಾಶಿಲ್ಪ ಶಾಲೆಯ 8 ನೇ ತರಗತಿ ವಿದ್ಯಾರ್ಥಿಗಳಾದ ಯಥಾರ್ಥ್ ಮೂರ್ತಿ, ಮೈತ್ರಿ ಪಟೇಲ, ಮಿಸ್ಟಿ ಕೇವಲ್ ರಮಣಿ, ಇರಾ ಬೈಗುವಾರ್ ಮತ್ತು ಅನ್ನಿಕಾ ಶಾ ಅತಿ ಕಿರಿಯ ವಯಸ್ಸಿನಲ್ಲಿ ಕೆರೆಯನ್ನು ಪುನಶ್ಚೇತನಗೊಳಿಸಿದ ಅತಿ ಕಿರಿಯ ಕೆರೆ ಸಂರಕ್ಷಕರು. ಕಳೆದ ಹಲವು ದಿನಗಳ ಹಿಂದೆ ಶಾಲಾ ಸಹಪಾಠಿಗಳೊಂದಿಗೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಕ್ಯಾಲಸನಹಳ್ಳಿ ಕೆರೆ ವೀಕ್ಷಣೆಗೆ ಆಗಮಿಸಿದ್ದ ಇವರು ತಾವು ಕೂಡ ಕೆರೆ ಅಭಿವೃದ್ಧಿ ಮಾಡಬೇಕು ಎಂದು ಕೆರೆ ಸಂರಕ್ಷಕ ಆನಂದ್ ಬಳಿ ಹೇಳಿಕೊಂಡಿದ್ದಾರೆ. ಪರಿಸರ ಮತ್ತು ಕೆರೆಗಳ ಅಭಿವೃದ್ಧಿ ಬಗ್ಗೆ ಮಕ್ಕಳಲ್ಲಿನ ಆಸಕ್ತಿ ಕಂಡು ಕುಲುಮೆಪಾಳ್ಯದ ಯಾನೆ ಕೆರೆ ಅಭಿವೃದ್ಧಿ ಮಾಡಲು ನೀಲಿ ನಕ್ಷೆ ತಯಾರಾಗುತ್ತದೆ. ಅದರಂತೆ ಕೆರೆ ಅಭಿವೃದ್ಧಿಗೆ ಬೇಕಾದ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಮಾಡುವ ಮಕ್ಕಳು ಕೇವಲ 30 ದಿನಗಳಲ್ಲಿ 8 ಲಕ್ಷ 27 ಸಾವಿರ ದೇಣಿಗೆ ಸಂಗ್ರಹಿಸಿದ್ದು, ಕೇವಲ 23 ದಿನದಲ್ಲಿ ಸ್ಥಳೀಯವಾಗಿ ಮತ್ತು ಕೆರೆಯಲ್ಲಿ ಸಿಗುವ ಕಲ್ಲು ಮಣ್ಣನ್ನು ಬಳಸಿ ನೈಸರ್ಗಿಕವಾಗಿ ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸಲಾಗಿದೆ. ಮಕ್ಕಳ ಈ ಅಪರೂಪದ ಯಶೋಗಾಥೆಯನ್ನು ವಿಶ್ವಸಂಸ್ಥೆಯ ವಫುನಾ( ವಿಶ್ವಸಂಸ್ಥೆ ಜಾಗತಿಕ ಒಕ್ಕೂಟ) ಎದುರು ಮಾತನಾಡುತ್ತಿರುವುದು ಸಂತಸ ತಂದಿದೆ ಎಂದು ಕೆರೆ ಸಂರಕ್ಷಕ ಮತ್ತು ಮಕ್ಕಳ ಮಾರ್ಗದರ್ಶಕ ಆನಂದ್ ಮಲ್ಲಿಗೆವಾಡ್ ತಿಳಿಸಿದ್ದಾರೆ.

ಇನ್ನೂ ಶಾಲಾ ಪ್ರಾಜೆಕ್ಟ್​​ಗಾಗಿ ಕ್ಯಾಲಸನಹಳ್ಳಿ ಕೆರೆ ವೀಕ್ಷಣೆಗೆ ಸಹಪಾಠಿಗಳೊಂದಿಗೆ ಭೇಟಿ ನೀಡಿದ್ದ ವೇಳೆ ಕೇವಲ ಅಂಕ ಗಳಿಸಲು ಪ್ರಾಜೆಕ್ಟ್ ಮಾಡುವುದ್ದಕ್ಕಿಂತ ನೈಜವಾಗಿ ಕೆರೆ ಪುನಶ್ಚೇತನಗೊಳಿಬೇಕಿಸಿತು. ಈ ವಿಚಾರ ಸ್ನೇಹಿತರಿಗೆ ತಿಳಿಸಿದಾಗ ಬೆಂಬಲ ದೊರೆಯಿತು. ಮುಖ್ಯವಾಗಿ ಕೆರೆ ಸಂರಕ್ಷಕ ಆನಂದ್ ರವರ ಮಾರ್ಗದರ್ಶನದಲ್ಲಿ ಕೇವಲ 30 ದಿನಗಳಲ್ಲಿ ಕೆರೆ ಅಭಿವೃದ್ಧಿಗೆ ಅಗತ್ಯ ಸಂಪನ್ಮೂಲವನ್ನು ಪ್ಯೂಯಲ್ ಡ್ರೀಮ್ ಹೆಸರಿನಲ್ಲಿ ಸಂಬಂಧಿಕರು, ಸ್ನೇಹಿತರು ಮತ್ತು ಸಾರ್ವಜನಿಕರ ಬಳಿ ದೇಣಿಗೆ ಮೂಲಕ ಕ್ರೋಡೀಕರಿಸಿದ್ದು, ಇಂದಿರಾ ನಗರ ರೋಟರಿ ಕ್ಲಬ್ ನಮಗೆ ಹೆಚ್ಚು ನೆರವು ನೀಡಿದೆ. ಹಾಗಾಗಿ ಸುಮಾರು 5 ಎಕರೆ ವಿಸ್ತೀರ್ಣದ ಕುಲುಮೆಪಾಳ್ಯದ ಮಾನೆ ಕೆರೆಯನ್ನು ಪುನಶ್ಚೇತನಗೊಳಿಸಲಾಗಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಂತಿರುವ ಈ ಕೆರೆಯನ್ನು ನೈಸರ್ಗಿಕವಾಗಿ ಪುನಶ್ಚೇತನಗೊಳಿಸಲಾಗಿದ್ದು, ಇಲ್ಲಿಗೆ ನಿತ್ಯ ಬರುವ ಆನೆ, ಜಿಂಕೆ, ದನಗಳು ಸೇರಿದಂತೆ ಕಾಡು ಪ್ರಾಣಿ ಪಕ್ಷಿಗಳಿಗೆ ಹೇಳಿ ಮಾಡಿಸಿದ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ವಿಶೇಷವೆಂದರೆ ಕೆರೆ ಅಭಿವೃದ್ಧಿ ಕುರಿತು ಇದೇ ತಿಂಗಳು 29 ನೇ ತಾರೀಖಿನಂದು ವಿಶ್ವಸಂಸ್ಥೆಯ ವೇದಿಕೆಯಲ್ಲಿ ಭಾರತದ ಪ್ರತಿನಿಧಿಯಾಗಿ ವಿವರಣೆ ನೀಡಲಿದ್ದೆವೆ ಎಂದು ಕೆರೆ ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ‘ಕಾಂಗ್ರೆಸ್ ಹಿತದೃಷ್ಟಿಯಿಂದ ಸಾಧ್ಯವಾದಷ್ಟು ಬೇಗ ಕೆಪಿಸಿಸಿ ಅಧ್ಯಕ್ಷರ ನೇಮಕವಾಗಲಿ‘: ಮಾಜಿ ಸಂಸದ ಕೆ.ಎಚ್​​ ಮುನಿಯಪ್ಪ

ಅಂದಹಾಗೆ ಕುಲುಮೆಪಾಳ್ಯ ಕೆರೆ ಬಹುತೇಕ ಹೂಳು ತುಂಬಿಕೊಂಡು ಗಿಡಗಂಟಿಗಳಿಂದ ಮುಚ್ಚಿ ಹೋಗಿತ್ತು. ಇಲ್ಲಿ ಕೆರೆ ಎಂಬುದೇ ಕಾಣುತ್ತಿರಲಿಲ್ಲ. ಕೆರೆ ಸಂರಕ್ಷಕ ಆನಂದ್ ಮತ್ತು ವಿದ್ಯಾರ್ಥಿಗಳ ತಂಡ ಕೆರೆಯನ್ನು ನೈಸರ್ಗಿಕವಾಗಿ ಅತ್ಯಂತ ಅಚ್ಚುಕಟ್ಟಾಗಿ ಅಭಿವೃದ್ಧಿಪಡಿಸಿದ್ದಾರೆ. ಸಾರ್ವಜನಿಕರು ಅದ್ರಲ್ಲು ರಾಜಕಾರಣಿಗಳು ಮತ್ತು ಸರ್ಕಾರಗಳು ಪುಟ್ಟ ಮಕ್ಕಳನ್ನು ಮಾದರಿಯಾಗಿ ತೆಗೆದುಕೊಳ್ಳಬೇಕು. ಮಕ್ಕಳು ವಯಸ್ಸಿಗೆ ಮೀರಿದ ಸಾಧನೆ ಮಾಡಿದ್ದಾರೆ. ಅದರಲ್ಲೂ ಅವರ ಕೆರೆ ಅಭಿವೃದ್ಧಿ ವಿಚಾರ ವಿಶ್ವಸಂಸ್ಥೆಯಂತಹ ವೇದಿಕೆಯಲ್ಲಿ ವಿವರಣೆ ನೀಡುವಂತಹದ್ದು ಅತ್ಯಂತ ಸಂತಸದ ಸಂಗತಿ ಎಂದು ಮಕ್ಕಳ ಪರಿಸರ ಕಾಳಜಿಯನ್ನು ಸ್ಥಳೀಯ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮುನಿರಾಜು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ಒಟ್ನಲ್ಲಿ ಕೆರೆಗಳ ಪುನಶ್ಚೇತನ ಎನ್ನುವಂತಹ ಕೆಲಸಗಳನ್ನು ಮಾಡಲು ಆಳುವ ಸರ್ಕಾರಗಳು ವಿವಿಧ ನೆಪವೊಡ್ಡಿ ಹಿಂದೆ ಮುಂದೆ ನೋಡುತ್ತವೆ ಆದ್ರೆ ಕಲಿಕೆಯ ಜೊತೆಗೆ ಕೆರೆಗಳ ಪುನಶ್ಚೇತನದಂತಹ ಪರಿಸರಪರ ಕೆಲಸವನ್ನು ಯಶಸ್ವಿಯಾಗಿ ಮಾಡಿರುವ ಚಿಣ್ಣರ ಎದೆಗಾರಿಕೆ ಮೆಚ್ಚುವಂತಹದ್ದು, ಈ ಮಕ್ಕಳ ಪರಿಸರ ಉಳಿಸುವ ಕೆರೆ ಸಂರಕ್ಷಿಸುವ ಕಾರ್ಯ ಇತರರಿಗೆ ಮಾದರಿಯಾಗಲಿ ಎಂಬುದು ನಮ್ಮ ಆಶಯವಾಗಿದೆ.

(ವರದಿ: ಆದೂರು ಚಂದ್ರು)
First published:January 21, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ