ಬೆಂಗಳೂರು: ವಂದೇ ಭಾರತ್ ರೈಲುಗಳ (Vande Bharat Train) ಮೇಲಿನ ಕಲ್ಲು ತೂರಾಟ (Stone Pelting) ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇದೀಗ ಮತ್ತೊಮ್ಮೆ ನಮ್ಮ ರಾಜ್ಯ ರಾಜಧಾನಿಯಲ್ಲಿ (Bengaluru) ವಂದೇ ಭಾರತ್ ರೈಲು ಮೇಲೆ ಕಲ್ಲು ತೂರಾಟ ಮಾಡಲಾಗಿದ್ದು, ಕಿಟಕಿಯ ಎರಡು ಗಾಜುಗಳಿಗೆ (Window Glass) ಹಾನಿಯಾಗಿದೆ. ಮೈಸೂರು-ಚೆನ್ನೈ ನಡುವೆ ಸಂಚರಿಸುವ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲಿನ (ರೈಲು ಗಾಡಿ ಸಂಖ್ಯೆ 20608) ಮೇಲೆ ದುಷ್ಕರ್ಮಿಗಳು ಕಲ್ಲಿನ ದಾಳಿ ನಡೆಸಿದ್ದಾರೆ. ಶನಿವಾರ ಬೆಂಗಳೂರಿನ ಕೆಆರ್ ಪುರಂ (KR Puram, Bengaluru) ಬಳಿ ಕಲ್ಲು ತೂರಾಟ ನಡೆದಿದ್ದು, ಎರಡು ಗಾಜುಗಳಿಗೆ ಹಾನಿಯುಂಟಾಗಿದೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಅಪಾಯುಂಟಾಗಿಲ್ಲ ಎಂದು ವರದಿಯಾಗಿದೆ. ಕೆಆರ್ ಪುರಂ ಮತ್ತು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಗಳ ನಡುವೆ ಕಲ್ಲು ತೂರಾಟ ನಡೆಸಲಾಗಿದೆ.
ರೈಲ್ವೆ ಸಂರಕ್ಷಣಾ ಪಡೆ (RPF) ನೈಋತ್ಯ ವಲಯದ ವಿಭಾಗದಲ್ಲಿ ಇದೇ ವರ್ಷ ಜನವರಿಯಲ್ಲಿ 21 ಮತ್ತು ಫೆಬ್ರವರಿಯಲ್ಲಿ 13 ಕಲ್ಲು ತೂರಾಟ ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಪ್ರಕರಣ ದಾಖಲಿಸಿಕೊಂಡಿರುವ ರೈಲು ಅಧಿಕಾರಿಗಳು ಕಲ್ಲು ತೂರಾಟದ ಬಗ್ಗೆ ತನಿಖೆ ಆರಂಭಿಸಿದೆ.
ಪ್ರಧಾನಿಗಳಿಂದ ರೈಲಿಗೆ ಚಾಲನೆ
ನವೆಂಬರ್ 11, 2022ರಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದರು. ಕೆಲ ದಿನಗಳ ಹಿಂದೆ ಕೇಂದ್ರ ರೈಲ್ವೆ ಸಚಿವರು (Union Railway Minister) ವಂದೇ ಭಾರತ್ ರೈಲು ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕೆಳಗೆ ಹೋಗುತ್ತಿರುವ ವಿಡಿಯೋ ತುಣಕನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಇನ್ನು ಮೈಸೂರು-ಚೆನ್ನೈ ನಡುವೆ ವಂದೇ ಭಾರತ್ ರೈಲು ಆರಂಭಗೊಂಡ ನಂತರ ರಾಜ್ಯದಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ವಂದೇ ಭಾರತ್ ರೈಲು ಸೇವೆಯ ಬಗ್ಗೆಯೂ ಸಾರ್ವಜನಿಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ವಂದೇ ಭಾರತ್ ರೈಲಿಗೆ ಸಂಸದರಿಂದ ಮನವಿ
ದೇಶದಲ್ಲಿ ವಂದೇ ಭಾರತ್ ರೈಲು ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿದ್ದಂತೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಈಗಾಗಲೇ ದೇಶದಲ್ಲಿ 10 ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳು ಪೂರ್ಣ ಸಾಮರ್ಥ್ಯದಲ್ಲಿ ಓಡುತ್ತಿವೆ.
ಇದೀಗ ತಮ್ಮ ರಾಜ್ಯಕ್ಕೆ ವಂದೇ ಭಾರತ್ ರೈಲುಗಳನ್ನು ನೀಡುವಂತೆ ರೈಲ್ವೆ ಇಲಾಖೆಗೆ 60 ಸಂಸದರು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಎನ್‌ಡಿಎಯೇತರ ಪಕ್ಷಗಳ 14 ಸಂಸದರು ಸೇರಿದಂತೆ ಒಟ್ಟು 60 ಸಂಸದರು ತಮ್ಮ ರಾಜ್ಯಗಳಲ್ಲಿ ವಂದೇ ಭಾರತ್ ಕಾರ್ಯಾಚರಣೆಯನ್ನು ಪ್ರಾರಂಭಿಸಲು ರೈಲ್ವೆಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Bengaluru Accident: ಬೈಕ್ಗೆ ಡಿಕ್ಕಿ ಹೊಡೆದು, ರಸ್ತೆ ಬದಿ ಮಲಗಿದ್ದ ವ್ಯಾಪಾರಿ ಮೇಲೆ ಹರಿದ ಕಾರ್; ಓರ್ವ ಸಾವು
ಪ್ರಹ್ಲಾದ್ ಜೋಶಿ ಅವರಿಂದಲೂ ಮನವಿ ಸಲ್ಲಿಕೆ
ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ (Union Minister Pralhad Joshi) ಧಾರವಾಡದಿಂದ ಬೆಂಗಳೂರಿಗೆ (Dharwad To Bengaluru) ವಂದೇ ಭಾರತ್ ರೈಲು ಮತ್ತು ಗ್ವಾಲಿಯರ್‌ಗೆ ರೈಲುಗಾಗಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಎಂ ಸಿಂಧಿಯಾ ಮನವಿ ಮಾಡಿದ್ದಾರೆ.
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 10 ವಂದೇ ಭಾರತ್ ರೈಲುಗಳಲ್ಲಿ, ಬಿಲಾಸ್‌ಪುರ-ನಾಗ್‌ಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ಈ ಹಣಕಾಸು ವರ್ಷದ ಜನವರಿವರೆಗೆ ಕಡಿಮೆ ಪ್ರಯಾಣಿಕರನ್ನು ಹೊಂದಿದೆ. ಆದರೆ ಮುಂಬೈ-ಗಾಂಧಿನಗರ ಮಾರ್ಗವು ಅತಿ ಹೆಚ್ಚು ಪ್ರಯಾಣಿಕರನ್ನು ಹೊಂದಿರುವ ಮಾರ್ಗ ಎಂದು ರೈಲ್ವೆ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ