ಗ್ರಾಮಸ್ಥರ ನೆಮ್ಮದಿ ಕೆಡಿಸಿರುವ ಕಲ್ಲು ಕ್ವಾರಿಗಳು ; ಟಿಪ್ಪರ್‌ಗಳ ಅಬ್ಬರಕ್ಕೆ ರೋಸಿ ಹೋದ ರೈತರು

ಟಿಪ್ಪರ್‌ಗಳ ಸಂಚಾರದಿಂದ ಉಂಟಾಗುವ ದೂಳು ಗ್ರಾಮವನ್ನೆಲ್ಲ ಆವರಿಸಿ ಜನರಿಗೆ ಉಸಿರಾಟದ ತೊಂದರೆಯಾಗುತ್ತಿದೆ. ತೋಟ ಮತ್ತು ಹೊಲಗಳಲ್ಲಿ ಬೆಳೆದ ಬೆಳೆಗಳೂ ಸಂಪೂರ್ಣ ಧೂಳುಮಯವಾಗುತ್ತಿವೆ.

ಕಲ್ಲು ಕ್ವಾರಿ

ಕಲ್ಲು ಕ್ವಾರಿ

  • Share this:
ಹುಬ್ಬಳ್ಳಿ(ಫೆ.08) :  ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಎಮ್ಮೆಟ್ಟಿ ಗ್ರಾಮಸ್ಥರು ಕಲ್ಲು ಗಣಿಗಾರಿಕೆಯಿಂದ ಕಂಗಾಲಾಗಿದ್ದಾರೆ. ಗ್ರಾಮದ ಹೊರ ಭಾಗದಲ್ಲಿ ಹತ್ತಕ್ಕೂ ಹೆಚ್ಚು ಕಲ್ಲು ಕ್ವಾರಿಗಳಿದ್ದು, ಮಷಿನ್‌ಗಳ ಆರ್ಭಟಕ್ಕೆ ರೈತರು ರೋಸಿ ಹೋಗಿದ್ದಾರೆ.

ಪ್ರತಿನಿತ್ಯ ಕ್ವಾರಿಯಲ್ಲಿ ಕಲ್ಲುಗಳನ್ನು ಬ್ಲಾಸ್ಟ್‌ ಮಾಡಲಾಗುತ್ತಿದೆ. ಸ್ಪೋಟದ ತೀವ್ರತೆಗೆ ಗ್ರಾಮದ ಬಹುತೇಕ ಮನೆಗಳು ಬಿರುಕು ಬಿಟ್ಟಿವೆ. ಹಳೆಯ ಮನೆಗಳ ಗೋಡೆಗಳು ಕುಸಿದು ಬಿದ್ದಿವೆ. ಇತ್ತೀಚೆಗೆ ಕಟ್ಟಲಾದ ಮನೆಗಳ ಗೋಡೆಗಳು ಕೂಡ ಬಾಯ್ಬಿಟ್ಟಿವೆ. ಸ್ಪೋಟವಾಗುತ್ತಿದ್ದಂತೆ ಜನರು ಬೆಚ್ಚಿ ಬೀಳುತ್ತಿದ್ದಾರೆ. ಮನೆಗಳು ಧರೆಗೆ ಅಪ್ಪಳಿಸುತ್ತವೆಯೋ ಎನ್ನುವ ಆತಂಕ ಗ್ರಾಮಸ್ಥರಲ್ಲಿದೆ.

ರಾತ್ರಿಯಿಡೀ ಕಲ್ಲು ಕ್ವಾರಿಗಳನ್ನು ನಡೆಸಲಾಗುತ್ತಿದೆ. ಯಂತ್ರಗಳ ಕರ್ಕಶ ಶಬ್ದಕ್ಕೆ ರೈತ ಕುಟುಂಬಗಳ ನೆಮ್ಮದಿ ಹಾಳಾಗಿದೆ. ಹಗಲೆಲ್ಲ ಹೊಲಗಳಲ್ಲಿ ದುಡಿಯುವ ರೈತಾಪಿ ವರ್ಗ ರಾತ್ರಿಯಿಡೀ ನಿದ್ದೆಗೆಡಬೇಕಾದ ದುಸ್ಥಿತಿ ಇದೆ. ಬೆಳಗಾದರೆ ಬೃಹತ್‌ ಪ್ರಮಾಣದ ಟಿಪ್ಪರ್‌ಗಳು ಗ್ರಾಮದ ಮೂಲಕ ಓಡಾಡುತ್ತವೆ. ಇದರಿಂದ ಶಾಲೆಗೆ ಮಕ್ಕಳನ್ನು ಕಳಿಸಲು ಭಯಪಡುವ ಪರಿಸ್ಥಿತಿಯಿದೆ.

ಟಿಪ್ಪರ್‌ಗಳ ಸಂಚಾರದಿಂದ ಉಂಟಾಗುವ ದೂಳು ಗ್ರಾಮವನ್ನೆಲ್ಲ ಆವರಿಸಿ ಜನರಿಗೆ ಉಸಿರಾಟದ ತೊಂದರೆಯಾಗುತ್ತಿದೆ. ತೋಟ ಮತ್ತು ಹೊಲಗಳಲ್ಲಿ ಬೆಳೆದ ಬೆಳೆಗಳೂ ಸಂಪೂರ್ಣ ದೂಳುಮಯವಾಗುತ್ತಿವೆ. ಪ್ರತಿನಿತ್ಯ 50ರಿಂದ 70 ಬೃಹತ್‌ ಟಿಪ್ಪರ್‌ಗಳು ಓವರ್‌ಲೋಡ್‌ ತುಂಬಿಕೊಂಡು ಓಡಾಡುತ್ತಿವೆ. ರಸ್ತೆಗಳು ಕೂಡ ಹದಗೆಟ್ಟು ಹೋಗಿವೆ.

ಪ್ರಭಾವಿಗಳ ಒತ್ತಡಕ್ಕೆ ಅನ್ನದಾತರು ಹೈರಾಣ

ಕಲ್ಲು ಕ್ರಶರ್‌ಗಳ ಮಾಲಿಕರು ಪ್ರಭಾವಿಗಳಾಗಿದ್ದು ದಬ್ಬಾಳಿಕೆ ಮಾಡುತ್ತಿದ್ದಾರೆ. ಈ ಕುರಿತು ಕಲಘಟಗಿ ತಹಶೀಲ್ದಾರ್‌ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಎಮ್ಮೆಟ್ಟಿ ಗ್ರಾಮಸ್ಥರ ಆರೋಪ ಮಾಡುತ್ತಿದ್ದಾರೆ.

ಇದನ್ನೂ ಓದಿ : ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ - ಬೇರೆ ಭಾಷೆ ವಿಷಯದಲ್ಲಿ ನಾವು ಕಠಿಣವಾಗಿಯೇ ಇರಬೇಕು; ಸಿದ್ಧರಾಮಯ್ಯ

ರೋಸಿಹೋಗಿರುವ ಗ್ರಾಮಸ್ಥರು ಟಿಪ್ಪರ್‌ಗಳನ್ನು ತಡೆದು ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲ್ಲು ಕ್ವಾರಿಗಳಿಂದ ಆಗುತ್ತಿರುವ ತೊಂದರೆ ಸರಿಪಡಿಸಿ. ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿ ಕೊಡುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸುತ್ತಿದ್ದಾರೆ.
First published: