ಮೈಸೂರು: ಬಿಜೆಪಿ ರಥಯಾತ್ರೆ ಮೇಲೆ ಕಲ್ಲು ತೂರಾಟ (Stone Pelting) ನಡೆದಿರುವ ಘಟನೆ ಮೈಸೂರಿನ (Mysuru) ವರುಣಾ ಕ್ಷೇತ್ರದಲ್ಲಿ ನಡೆದಿದ್ದು, ಸಿದ್ದರಾಮನಹುಂಡಿ (Siddaramana Hundi) ಗ್ರಾಮಕ್ಕೆ ಪ್ರಚಾರಕ್ಕೆ ತೆರಳಿದ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ವರುಣಾ ಕ್ಷೇತ್ರದ ಬಿಜೆಪಿ (BJP) ಅಭ್ಯರ್ಥಿ, ಸಚಿವ ಸೋಮಣ್ಣ (V Somanna) ಅವರೊಂದಿಗೆ ಸಂಸದ ಪ್ರತಾಪ್ ಸಿಂಹ (Pratap Simha) ಅವರು ಪ್ರಚಾರಕ್ಕಾಗಿ ಸಿದ್ದರಾಮನಹುಂಡಿಗೆ ತೆರಳಿದ್ದರು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಹೋದರ ಮನೆ ಎದುರು ಪ್ರಚಾರ ಯಾತ್ರೆ ತೆರಳುತ್ತಿದ್ದ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಲಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಸೋಮಣ್ಣ ಹಾಗೂ ಪ್ರತಾಪ್ ಸಿಂಹ ಸ್ವಲದರಲ್ಲೇ ಪಾರಾಗಿದ್ದು, ಓರ್ವ ಬಿಜೆಪಿ ಕಾರ್ಯಕರ್ತ (BJP Activist) ಗಾಯಗೊಂಡಿದ್ದಾನೆ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ (Hospital) ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ.
ಸಿದ್ದರಾಮನಹುಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬಿಜೆಪಿ ಕಾರ್ಯಕರ್ತ ನಾಗೇಶ್ ಎಂಬಾತ ಘಟನೆಯಲ್ಲಿ ಗಾಯಗೊಂಡಿದ್ದಾನೆ. ಘಟನೆ ಬಗ್ಗೆ ಮಾಹಿತಿ ನೀಡಿರುವ ಸ್ಥಳೀಯ ವ್ಯಕ್ತಿ, ಯುವಕನ ಮೊಣಕಾಲು ಹಾಗೂ ಕೈಗೆ ಗಂಭೀರ ಗಾಯವಾಗಿದೆ ಎಂದು ತಿಳಿಸಿದ್ದಾರೆ.
ಇನ್ನು, ವರುಣಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಘಟನೆ ನಡೆದಿಲ್ಲ. ಕಳೆದ ಕೆಲ ದಿನಗಳ ಹಿಂದೆಯೂ ಸೋಮಣ್ಣ ಪ್ರಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದ್ದರು ಎಂದು ಬಿಜೆಪಿ ಆರೋಪಿಸಿತ್ತು. ಅಂದು ಸಚಿವ ಸೋಮಣ್ಣ ಅವರ ಕಾರಿಗೆ ಮುತ್ತಿಗೆ ಹಾಕಿದ ಸಿದ್ದು ಬೆಂಬಲಿಗರು, ಸಿದ್ದರಾಮಯ್ಯ ಪರ ಘೋಷಣೆ ಕೂಗಿದ್ದರು. ಮೈಸೂರು ತಾಲೂಕಿನ ಭೂಗತಗಳ್ಳಿ ಗ್ರಾಮದಲ್ಲಿ ಘಟನೆ ನಡೆದಿತ್ತು.
ಈ ಬಗ್ಗೆ ಅಂದು ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ ಅವರು, ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರ ಚುನಾವಣಾ ಪ್ರಚಾರಕ್ಕೆ ಕೆಲವರು ಅಡ್ಡಿಪಡಿಸುತ್ತಿರುವುದು ವರದಿಯಾಗಿದೆ. ಇದನ್ನು ನಮ್ಮ ಪಕ್ಷದ ಕಾರ್ಯಕರ್ತರು ಇಲ್ಲವೇ ಬೇರೆಯವರು ಮಾಡಿದ್ದರೆ ಅದು ಸರಿ ಅಲ್ಲ. ಎಲ್ಲಾ ಅಭ್ಯರ್ಥಿಗಳಿಗೂ ಮುಕ್ತ ಪ್ರಚಾರಕ್ಕೆ ಅವಕಾಶ ಮಾಡಿಕೊಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಡೆಯುವ ಚುನಾವಣೆಯಲ್ಲಿ ಪ್ರತಿಯೊಬ್ಬ ಅಭ್ಯರ್ಥಿಗೂ ಪ್ರಚಾರ ಮಾಡಲು ಅವಕಾಶ ಇದೆ. ಅದಕ್ಕೆ ಅಡ್ಡಿ ಪಡಿಸಬಾರದು. ಅಂತಿಮವಾಗಿ ಮತದಾರರು ತಮ್ಮ ಆಯ್ಕೆಯನ್ನು ತಾವೇ ನಿರ್ಧರಿಸುತ್ತಾರೆ.
ಇಂದು ಕಲ್ಲು ತೂರಾಟದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವರು, ಯಾರೇ ಪ್ರಚಾರ ಮಾಡಲಿ ಯಾರು ಅಡ್ಡಿಪಡಿಸಬಾರದು ಎಂದು ಹೇಳಿದ್ದಾರೆ. ಅಲ್ಲದೆ ನನಗೆ ಕಲ್ಲು ತೂರಾಟ ನಡೆದ ಬಗ್ಗೆ ಮಾಹಿತಿ ಇಲ್ಲ, ಈ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ